Thursday, February 14, 2013

ತುಳುಗಾದೆ-೧೫


"ಯಾನ್ ಉಪ್ಪು ತಿಂತುನಾತ್ ಈ ಉಣ್ಪು ತಿಂತುಜಾ" { ನಾನು ಉಪ್ಪು ತಿಂದಷ್ಟು ನೀನು ಅನ್ನ ತಿಂದಿಲ್ಲ! ಅನ್ನುವುದು ವಯಸ್ಸಾದ ಹಿರಿಯರು ಕಿರಿಯರ ಕೆಲಸಗಳಿಂದ ಬೇಸತ್ತಾಗ, ಅವರ ಉಢಾಫೆಯನ್ನ ಎದುರಿಸುವ ಸಂದರ್ಭ ಬಂದಾಗ ಸಿಟ್ಟಿನಿಂದ ಹೇಳುವ ಮಾತು. ಇದರರ್ಥ ನನ್ನ ಅನುಭವದ ಮುಂದೆ ನೀನು ಪುಟಗೋಸಿಗೆ ಸಮ ಎನ್ನುವ ಆಕ್ರೋಶ ಅಷ್ಟೆ. ಹಿರಿಯರನ್ನ ಗೌರವಿಸುವುದು, ಅವರ ಮಾತಿಗೆ ಶಾಂತವಾಗಿ ಕಿವಿಗೊಟ್ಟು ಒಂದು ವೇಳೆ ಅದು ಸ್ವೀಕಾರಾರ್ಹವಲ್ಲದಿದ್ದಲ್ಲಿ ಮೃದು ಮಾತುಗಳಲ್ಲಿ ಅದನ್ನ ಏಕೆ ಅದು ಸ್ವೀಕಾರಾರ್ಹವಲ್ಲ ಎಂಬುವುದನ್ನ ಹಿರಿಯರಿಗೆ ತೃಪ್ತಿಕರವಾಗಿ ವಿವರಿಸಿ ಅವರನ್ನ ತಮ್ಮ ಯೋಜನೆಗಳತ್ತ ಒಲಿಸಿಕೊಳ್ಲುವುದು ಕಿರಿಯರ ನಮ್ರತೆಯಾಗಬೇಕೆ ಹೊರತು ತಿರಸ್ಕಾರದಿಂದ ಅವರನ್ನ ಪಕ್ಕಕ್ಕೆ ಸರಿಸಿ ಅವರ ಅನುಭವವನ್ನ ಧಿಕ್ಕರಿಸಿ ತಾವು ಕಾಲ ಕಸವಾಗಿದ್ದೇವೆ ಎನ್ನುವ ಭಾವಕ್ಕೆ ಅವರನ್ನ ತಳ್ಳಿ, ನಾವು ಅವರನ್ನ ಅಸಂತೋಷಗೊಳಿಸಬಾರದು ಎನ್ನುವುದು ಈ ಗಾದೆಯ ಒಳಾರ್ಥ. ಒಂದು ರೀತಿಯಲ್ಲಿ ನೋಡಿದರೆ ಇದು ಗಾದೆ ಎನ್ನುವುದಕ್ಕಿಂತ ವ್ಯಂಗ್ಯ ಉಪಮೆ ಎನ್ನಲಡ್ಡಿಯಿಲ್ಲ. "ನಾನು ಹಾಲು ಕುಡಿದಷ್ಟು ನೀನು ನೀರು ಕುಡಿದಿಲ್ಲ" ಎನ್ನುವ ಕನ್ನಡದ ಗಾದೆಯೂ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳಲ್ಲಿ ಇದಕ್ಕೆ ಸಮಾನಾರ್ಥ ಸೂಚಿಸುವ ಅನೇಕ ಗಾದೆಗಳಿವೆ.} ( ಯಾನ್ ಉಪ್ಪು ತಿಂತುನಾತ್ ಈ ಉಣ್ಪು ತಿಂತುಜಾ = ನಾನು ಉಪ್ಪು ತಿಂದಷ್ಟು ನೀನು ಅನ್ನ ತಿಂದಿಲ್ಲ.)

No comments:

Post a Comment