
"ಬೊಡ್ಚಾಯಿನ ಪೊಣ್ಣನ್ ತೆರೋಟ್ ಒತ್ತಿಯರ್!"
{ ಒಂದು ದೃಷ್ಟಿಯಿಂದ ನೋಡಿದರೆ ಈ ಗಾದೆ ಕನಿಷ್ಠ ಇಂದಿನ ಮಟ್ಟಿಗಂತೂ ಅಪ್ರಸ್ತುತ! "ವೇದ ಸುಳ್ಲಾದರೂ, ತಾನು ಸುಳ್ಳಾಗುವುದಿಲ್ಲ" ಎನ್ನುವುದನ್ನ ಸಾಬೀತು ಮಾಡಲು ಇನ್ನೇನು ಕೆಲವೆ ವರ್ಷಗಳಲ್ಲಿ ಸಾರ್ವತ್ರಿಕವಾಗಿ ಇದು ಎಲ್ಲೆಡೆಯೂ ಚಾಲ್ತಿಗೆ ಬಂದರೆ ಆಶ್ಚರ್ಯವೇನಿಲ್ಲ. ಒಲ್ಲದ ಹೆಣ್ಣು ಆಂದರೆ ಇಷ್ಟವಾಗದ ಹುಡುಗಿಯನ್ನ ತೆರದಲ್ಲಿ ಚೌಕಾಸಿ ಮಾಡಿಕೊಂಡರು ಎಂದರೆ "ವರದಕ್ಷಿಣೆ"ಗೆ ತಮ್ಮನ್ನ ತಾವೆ ಮಾರಿಕೊಳ್ಳುವ ಇಂದಿನ ಹರೆಯದ ಹುಡುಗರಿಗೆ, ಹಣಕ್ಕೆ ಅವರನ್ನ ಹರಾಜು ಹಾಕುವ ಅವರ ಗುರು-ಹಿರಿಯರಿಗೆ ಬಹುಷಃ ಅರ್ಥವೂ ಆಗಲಾರದು.
ತುಳುನಾಡು ಮಾತೃ ಮೂಲದ ಸಂಪ್ರದಾಯದ ಮುಖ್ಯವಾಹಿನಿಯನ್ನ ಹೊಂದಿರುವಂತದ್ದು. ಇಲ್ಲಿನ ಮೂಲದ ಬ್ರಾಹ್ಮಣರಾದ ಸ್ಥಾನಿಕರು, ಶಿವಳ್ಳಿಯವರು, ಹೊರಗಿನಿಂದ ಬಂದು ನೆಲೆಯಾದ ಹವ್ಯಕರು, ಗೌಡ ಸಾರಸ್ವತರು, ಚಿತ್ಪಾವನರು, ಇವರನ್ನ ಅನುಕರಿಸುವ ಪದ್ಮಶಾಲಿಗಳು ( ಕಮ್ಮಾರರು ), ದೈವಜ್ಞರು ( ಚಿನ್ನದ ಕೆಲಸ ಮಾಡುವವರು ), ಆಚಾರಿಗಳು ( ಬಡಗಿಗಳು.) ಹಾಗೂ ಪ್ರೊಟೆಸ್ಟಂಟ್ ಕ್ರೈಸ್ತರು ಇವರೆಲ್ಲರ ಹೊರತು ಉಳಿದೆಲ್ಲ ಮಂದಿ ಜಾತಿ, ಮತ, ಧರ್ಮಾತೀತರಾಗಿ ಮಾತೃಮೂಲ ಕುಲ ವ್ಯವಸ್ಥೆಯನ್ನ ಅದರ್ ಮೌಖಿಕ ಕಾನೂನನ್ನ ಸಿಷ್ಠೆಯಿಂದ ಅನುಕರಿಸುತ್ತಾರೆ. ಇದರಲ್ಲಿ ಹಿಂದುಗಳಷ್ಟೆ ಅಲ್ಲದೆ ಜೈನರು, ನವಾಯತ ಮುಸಲ್ಮಾನರು, ಬ್ಯಾರಿ ಮುಸಲ್ಮಾನರು ಹಾಗೂ ಕ್ಯಾಥೋಲಿಕ್ ಕ್ರೈಸ್ತರೂ ಸೇರುತ್ತಾರೆ.
ಇವರ ಮನೆಯ ಆಡಳಿತಧಿಕಾರಿ ಗಂಡಸೆ ಆಗಿದ್ದರೂ ಆಡಳಿತದ ಮುದ್ರೆ ಹಾಗೂ ಹಕ್ಕು ಹೊಂದಿರುವವರು ಕುಟುಂಬದ ಹೆಂಗಸರು ಮತ್ತವರ ಅಸಂಖ್ಯ ಸಂತಾನ. ಇದನ್ನೆ ಕರುನಾಡಿಗರು "ಅಳಿಯ ಕಟ್ಟು ಸಂತಾನ"ದ ಹಕ್ಕು ಅಂತ ಕರೆದರು. ಈ ವ್ಯವಸ್ಥೆ ಸಶಕ್ತವಾಗಿ ಚಾಲ್ತಿಯಲ್ಲಿದ್ದಾಗ ಮದುವೆಯ ಹಂತದಲ್ಲಿ ಇಂದು ಆಚರಣೆಯಲ್ಲಿರುವ ವರದಕ್ಷಿಣೆಗೆ ತೀರಾ ವಿರುದ್ಧವಾದ "ವಧು ದಕ್ಷಿಣೆ" ಪದ್ಧತಿ ರೂಢಿಯಲ್ಲಿತ್ತು. ತಮ್ಮ ಮಗನಿಗೆ ಮಡದಿಯಾಗಿ ಹೆಣ್ಣನ್ನ ಬಯಸುವ ಗಂಡಿನ ಹೆತ್ತವರು "ತೆರ" ಅಂದರೆ ನಿಶ್ಚಿತ ವಧು ದಕ್ಷಿಣೆಯನ್ನ ಹೆಣ್ಣು ಹೆತ್ತವರಿಗೆ ಸಲ್ಲಿಸಿ ತಮ್ಮ ಹುಡುಗನ ಕನ್ಯಾ ಸೆರೆ(?) ಬಿಡಿಸಿಕೊಳ್ಳುವ ಅನಿವಾರ್ಯತೆಯಿತ್ತು! ಅಂತಹ ಪರಿಸ್ಥಿತಿಯಲ್ಲಿ ಮಳ್ಳೆಗಣ್ಣಾದ, ಉಬ್ಬುಹಲ್ಲಿನ, ಶ್ಯಾಮಲ ವರ್ಣದ ಸ್ವಲ್ಪ ಸುರೂಪಿಯಾಗಿಲ್ಲದ ಹುಡುಗಿಯನ್ನ ಒಪ್ಪಿಕೊಳ್ಳಲು ಮೀನ-ಮೇಷ ಎಣಿಸಿದ ಗಂಡಿನ ಕಡೆಯವರು ಕಡೆಗೆ ಅದನ್ನೆ ಮುಂದು ಮಾಡಿ ಹುಡುಗಿಯ ಮನೆಯವರು ಅಪೇಕ್ಷಿಸಿದ ತೆರದಲ್ಲಿ ಧಾರಾಳ ಚೌಕಾಸಿ ಮಾಡಿದರು ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ.
ಆದರೆ ಕ್ರಮೇಣ ಸಮಾಜದಲ್ಲಿ ಪುರುಷ ಪ್ರಾಧಾನ್ಯತೆ ಹೆಚ್ಚಿ ಹಣ್ಣು ಹೆತ್ತವರು ತಮ್ಮ ಶಕ್ತಿ ಮೀರಿದ ದುಬಾರಿ ವರದಕ್ಷಿಣೆಯನ್ನ ಪೀಕಿಯಾದರೂ ತಮ್ಮ ಬೆಳೆದು ನಿಂತ ಮಗಳನ್ನ ಧಾರೆಯೆರೆವ ಅನಿಷ್ಟದ ಪದ್ಧತಿ ತುಳುನಾಡಿನ "ಜನಿವಾರಧಾರಿ"ಗಳ ಮೇಲ್ಪಂಕ್ತಿಯನ್ನ ಮೀರಿ ಅಬ್ರಾಮ್ಹಣರ ವಲಯದಲ್ಲೂ ಕೃತಕವಾಗಿ ರೂಢಿಯಾಗಿ ರಾಜಾರೋಷವಾಗಿ ಆಚರಣೆಯಾಗುತ್ತಿದೆ. ಆದರೆ ದೇಶದಲ್ಲಿ ಈಗ ತಲೆದೊರುತ್ತಿರುವ ಆತಂಕಕಾರಿ ಪ್ರಮಾಣದ ಲಿಂಗಾನುಪಾತವನ್ನ ಗಮನಿಸಿ ಹೇಳುವುದಾದರೆ ಖಂಡಿತ ಮುಂದೊಮ್ಮೆ ಹೆಣ್ಣು ಹೆತ್ತವರಿಗೆ ಬೇಡಿಕೆ ಹೆಚ್ಚಿ "ತೆರ" ಪದ್ಧತಿ ಮೊದಲಿನಂತೆ ಚಾಲ್ತಿಗೆ ಬಂದರೂ ಅಚ್ಚರಿಯೇನೂ ಇಲ್ಲ.}
( ಬೊಡ್ಚಾಯಿನ ಪೊಣ್ಣನ್ ತೆರೋಟ್ ಒತ್ತಿಯರ್! = ಬೇಡವಾದ ಹೆಣ್ಣನ್ನ ವಧುದಕ್ಷಿಣೆಯಲ್ಲಿ ಒತ್ತಿದರು!.)
No comments:
Post a Comment