"ಅರೆತ್ ಮೊರೆತ್ ಕೊರ್ಯರ ಮಾಂತೆರ್ಲಾ ಉಳ್ಳೆರ್, ಪರ್ಯರ ಮಾತ್ರ ಏರ್ಲಾ ಇದ್ಯರ್".
{ "ಆಟಿ ಅಮಾವಾಸ್ಯೆ" ಅಂದರೆ ಅಗೋಸ್ತು ತಿಂಗಳ ಅಮಾವಾಸ್ಯೆಯ ಕಾಲದಲ್ಲಿ ಪಾಲೆ ಮರದ ಕೆತ್ತೆಯನ್ನ ತೇಯ್ದು ತೆಗೆದ ರಸವನ್ನ ಖಡ್ಡಾಯವಾಗಿ ಸೇವಿಸುವ ಪದ್ದತಿ ತುಳುನಾಡಿನಲ್ಲಿದೆ. ವಿಪರೀತ ಮಳೆ ಹಾಗು ಸೆಖೆ ಎರಡೂ ವಾತಾವರಣವನ್ನ ಸಹಿಸುವ ಅನಿವಾರ್ಯತೆಯಿರುವ ಅಲ್ಲಿನವರಿಗೆ ತಮ್ಮ ಆರೋಗ್ಯವನ್ನ ಕೆಡದಂತೆ ಕಾಪಾಡಿಕೊಳ್ಳಲು ರುಚಿಯಲ್ಲಿ ಕಾರ್ಕೋಟಕ ಕಹಿಯಾಗಿರುವ ಆದರೆ ಆರೋಗ್ಯದ ಹಿತದೃಷ್ಟಿಯಿಂದ ಪರಿಪೂರ್ಣವಾಗಿರುವ ಮುಂಜಾಗ್ರತಾ ಮದ್ದಾದ ಈ ಬಿಳಿಬಣ್ಣದ ಕಷಾಯ ಕುಡಿಯುವ ರೂಢಿ ಅಲ್ಲಿನ ಸಂಸ್ಕೃತಿಯಲ್ಲಿ ಬೆಳೆದು ಬಂದಿರಬಹುದು.
ಈ ಕಷಾಯವನ್ನ ಕಂಡವರಿಗೆ ಕುಡಿಸಲು ಎಲ್ಲರೂ ಪೈಪೋಟಿಯ ಮೇಲೆ ಸಿದ್ಧರಿರುತ್ತರಾದರೂ, ಕುಡಿಯಲು ತಮ್ಮ ಸರದಿ ಬಂದಾಗ ಮೆಲ್ಲನೆ ಜಾರಿಕೊಳ್ಳುವ ಪ್ರಯತ್ನಕ್ಕಿಳಿಯುತ್ತಾರೆ! ಅದನ್ನೆ ಉದಾಹರಿಸಿ ಈ ಗಾದೆಯನ್ನ ರೂಪಿಸಿರುವ ಸಾಧ್ಯತೆಯಿದೆ.
ಕಹಿಮದ್ದನ್ನ ಅರೆಯಲು ತಯಾರು ಮಾಡಿಕೊಡಲು ಎಲ್ಲರೂ ತಯಾರಾಗಿರುತ್ತಾರೆ ಆದರೆ ಅದನ್ನ ಕುಡಿಯುವ ಸಂದರ್ಭ ಬಂದಾಗ ಮಾತ್ರ ಯಾರೂ ಇರುವುದಿಲ್ಲ ಎನ್ನುವುದು ಈ ಗಾದೆಯ ವಾಚ್ಯಾರ್ಥವಾಗಿದ್ದರೂ ವಾಸ್ತವವಾಗಿ ಸಮಸ್ಯೆಯ ಸುಳಿಗೆ ಸಿಲುಕಿದವರಿಗೆ ತಲೆಗೊಂದು ಸಲಹೆ ಕೊಡುವವರಿಗೆ ಬರವೇನಿಲ್ಲ, ಅದು ಕಾರ್ಯ ಸಾಧುವಲ್ಲದಿದ್ದರೂ ಇಂತಹ ಬಿಟ್ಟಿ ಉಪದೇಶಗಳನ್ನ ಅನುಸರಿಸಿ ಮುಗ್ಧರ್ಯಾರಾದರೂ ಕೈ ಸುಟ್ಟುಕೊಂಡರೆ ಆಗ ಸಲಹೆಯ ಮಹಾಪೂರವನ್ನ ಕೇಳದಿದ್ದರೂ ಕೊಟ್ಟಿದ್ದ ಪುಣ್ಯಾತ್ಮರೆಲ್ಲ ಹೇಳ ಹೆಸರಿಲ್ಲದೆ ಮಂಗ ಮಾಯವಾಗಿರುತ್ತಾರೆ ಎನ್ನುತ್ತದೆ ಈ ವಿವೇಕಪೂರ್ಣ ಗಾದೆ.}
No comments:
Post a Comment