ತುಳುಗಾದೆ-೧೮
"ಕರಿನ ನೀರ್'ನ ಕಟ್ಟ ಇದ್ದಿ"
{ ಜೀವನ ತುಂಬಾ ಸರಳ ಅದನ್ನ ಸಂಕೀರ್ಣ ಮಾಡಿ ಸೌಹಾರ್ದವನ್ನ ಕೆದಡುವ ಕಾರ್ಯದಲ್ಲಿ ತೊಡಗುವವರಿಗೆ ಎಚ್ಚರಿಕೆ ನೀಡುತ್ತದೆ ಈ ಬೋಧಪೂರ್ಣ ಗಾದೆ. ಹರಿದು ಹೋದ ನೀರಿಗೆ ಅಣೆಕಟ್ಟಿನ ತಡೆ ಹಾಕಲಾಗದು. ಅನಂತರ ಅದು ಕುಡಿಯಲೋ ಇಲ್ಲವೆ ಕೃಷಿಗೋ ಬೇಕೆಂದರೂ ಒದಗಿಬರಲಾಅರದು. ಬರಿದಾದ ತೋಡನ್ನ ನೋಡಿ ಪರಿತಪಿಸಬಹುದಷ್ಟೆ. ಹರಿದು ಹಾಳಾದ ನೀರನ್ನ ಮತ್ತೆ ಹಿಂದೆ ತರುವುದಿರಲಿ, ಹಾಗೆ ಯೋಚಿಸುವುದೂ ಕೂಡ ಮೂರ್ಖತನ ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ.
ಯಾವಾಗಲೂ ಯೋಚಿಸಿ ನುಡಿಯಬೇಕು. ನುಡಿ ಇರಿಯುವಷ್ಟು ಆಳವಾಗಿ ಬಹುಷಃ ಇನ್ಯಾವುದೇ ಹರಿತ ಆಯುಧ ಮನಸನ್ನ ಘಾಸಿಗೊಳಿಸಲಾರದು ಎನ್ನುತ್ತದೆ ಗಾದೆಯ ಸಾರ.
ಯಾವುದೆ ಕ್ಷಣದಲ್ಲಿ ಕಳೆದು ಹೋದ ಮೌಲ್ಯವನ್ನ ಮತ್ತೆ ಅದೆ ಮಟ್ಟದಲ್ಲಿ ಗಳಿಸುವ ಅವಕಾಶ ಸಿಗುವುದು ಕಷ್ಟ. ಒಂದು ಕೋನದಿಂದ ವಿಶ್ಲೇಷಿಸುವ ಚಿಂತನೆಗಳು ತಪ್ಪಾಗಿರಲೂಬಹುದು. ಇನ್ನೊಬ್ಬರಿಗೆ ನೋವಿನ ಉಡುಗೊರೆ ಕೊಡುವ ಮುನ್ನ ಒಂದೊಮ್ಮೆ ಅದೆ ಫಲ ಅನಿರೀಕ್ಷಿತವಾಗಿ ನಮಗೆ ಒದಗಿ ಬಂದರೆ ನಮಗಾಗುವ ಸಂಕಟವನ್ನೊಮ್ಮೆ ಕಣ್ಣುಮುಚ್ಚಿ ಕಲ್ಪಿಸಿಕೊಂಡರೆ ನಮ್ಮ ನಡೆ ಹೆಚ್ಚು ಪ್ರಬುದ್ಧವಾಗಿರಬಲ್ಲದು. "ತಲೆಯಿಂದ ಇಳಿದ ನೀರು ಕಾಲು ಮುಟ್ಟಿಯಾಯಿತು" ಎನ್ನುವ ಮಲಯಾಳಿ ಗಾದೆ, "ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ" ಎನ್ನುವ ಕನ್ನಡದ ಗಾದೆ ಹೇಳುವ ವಿವೇಕವೂ ಇದೇನೆ.}
( ಕರಿನ ನೀರ್'ನ ಕಟ್ಟ ಇದ್ದಿ = ಹರಿದ ನೀರಿಗೆ ಕಟ್ಟೆಯಿಲ್ಲ.)
No comments:
Post a Comment