"ಬೆಚ್ಚ ಪರಮಾನ್ನೊಟು ಕೈ ಪೊತ್ತಾಯಿನ ಬಾಲೆ ಬೆಂಞ್'ಲಾ ಉರಿತ್ ಪರಂಡು"
{ ಮಗುವೊಂದಕ್ಕೆ ಸುಡುವ ಬೆಂಕಿ, ಕೊರೆವ ಮಂಜು ಹಾಗೂ ಕೊಚ್ಚಿ ಹೋಗುವ ನೀರಿನ ನಡುವಿನ ವ್ಯತ್ಯಾಸ ತಿಳಿದಿರುವುದಿಲ್ಲ. ಅನುಭವ ಹೀನತೆ ಹಾಗೂ ಮುಗ್ಧತೆ ಅದಕ್ಕೆ ಕಾರಣ. ಅದರ ಪಾಲಿಗೆ ಕೋಮಲ ಕಮಲವೂ, ಹರಿತ ಕತ್ತಿಯೂ ಒಂದೆ. ಆದರೆ ಇದೆಲ್ಲ ಅದರ ಮೂಲ ಗುಣದ ಪರಿಚಯವಾಗುವ ತನಕ ಮಾತ್ರ ಅನ್ನುವುದು ಗಮನಾರ್ಹ. ಒಮ್ಮೆ ಧಗಧಗ ಉರಿವ ಆಕರ್ಷಕ ಬಣ್ಣದ ಬೆಂಕಿ ಆಸೆಯಿಂದ ಮುಟ್ಟಲು ಹೋದಾಗ ಅದರ ಕೈ-ಮೈ ಸುಟ್ಟಿತೆಂದರೆ ಸಾಕು ಮಗು ಹುಷಾರಾಗುತ್ತದೆ. ಆದ ನೋವಿನಿಂದ ಕಲಿತ ಪಾಠ ಅದನ್ನ ಜಾಗರೂಕತೆಯಿಂದ ವರ್ತಿಸುವಂತೆ ಪ್ರೇರೇಪಿಸುತ್ತದೆ.
ಮಗುವೊಂದು ಅರಿಯದೆ ಬಿಸಿಬಿಸಿ ಪಾಯಸವನ್ನ ಕುಡಿಯಲು ಹೋಗಿ ಬಾಯಿ-ಗಂಟಲು ಸುಟ್ಟುಕೊಂಡು ಬಾಧೆ ಪಟ್ಟುಕೊಂಡಿತಂತೆ. ಅರಿಯದೆ ಆದ ಪ್ರಮಾದವದು. ಆದರೆ ಆ ಒಂದು ಅನುಭವ ಮಗುವನ್ನ ತಾನು ತಿನ್ನುವ ಎಲ್ಲಾ ತಿನಿಸುಗಳನ್ನೂ ಮೊದಲು ಬಾಯಿಂದ ಊದಿ, ಕೈಯಲ್ಲಿ ಅಲುಗಾಡಿಸುತ್ತಾ ಆರಿಸಿ ತಂಪಾಗಿಸಿಯೆ ತಿನ್ನುವ ಅಭ್ಯಾಸಕ್ಕೆ ಪಕ್ಕಾಗಿಸುತ್ತದೆ. ಇದು ಎಷ್ಟು ರೂಢಿಯಾಗುತ್ತದೆಯೆಂದರೆ ತಂಪಾದ ಹೆಪ್ಪುಗಟ್ಟಿದ ಮೊಸರನ್ನ ಕೊಟ್ಟರೂ ಮಗು ಅದೇ ಕ್ರಮದಲ್ಲಿ ಊದಿ-ಅಲುಗಿಸಿ ಆರಿಸಿ ಮೊಸರನ್ನ ಕುಡಿಯುತ್ತದೆ! ಏನು ಮಾಡುತ್ತೀರಿ? ಆದ ಅನುಭವದ ಫಲ!
ಅಂತೆಯೆ ಕೆಲಸವೊಂದರಲ್ಲಿ ಅನುಭವವಿಲ್ಲದೆ ಧುಮುಕಿ ಕೈ ಸುಟ್ಟುಕೊಂಡ ಮನುಷ್ಯರ ಪಾಡು ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ. ಹಾಗಾದವರಲ್ಲಿ ಸಾಹಸ ಪ್ರವೃತ್ತಿ ಸಹಜವಾಗಿ ಕುಂಟಿತವಾಗುತ್ತದೆ. ಸರಳವಾದ ಕೆಲಸವನ್ನೂ ಅವರು ಮಾಡುವಾಗ ಅಂಜಿ ಅಳುಕಿ ಮಂದಡಿಯಿಡುವ ಸ್ಥಿತಿಗೆ ತಲುಪಿರುತ್ತಾರೆ. ಅವರಿಗೆ ಹಗ್ಗವೂ ಹಾವೆನಿಸುವ ಹಾಗಾಗಿರುತ್ತದೆ ಎನ್ನುತ್ತದೆ ಈ ಗಾದೆ. ಬಿಸಿ ಹಾಲಿಗೆ ಹೆದರಿದ ಬೆಕ್ಕು ತಂಪಾದ ಹಾಲನ್ನೂ ಕುಡಿಯಲು ಪ್ರತಿಭಟಿಸಿ ಓಟ ಹೂಡುತ್ತಿದ್ದ ತೆನಾಲಿ ರಾಮಕೃಷ್ಣನ ಕಥೆ ಚಿಕ್ಕಂದಿನಲ್ಲಿ ಕೇಳಿದ್ದು ನೆನಪಾಗುತ್ತಿದೆ.}
( ಬೆಚ್ಚ ಪರಮಾನ್ನೊಟು ಕೈ ಪೊತ್ತಾಯಿನ ಬಾಲೆ ಬೆಂಞ್'ಲಾ ಉರಿತ್ ಪರಂಡು = ಬಿಸಿ ಪಾಯಸದಲ್ಲಿ ಕೈ ಸುಟ್ಟುಕೊಂಡ ಮಗು ಮೊಸರನ್ನೂ ಊದಿ ಕುಡಿಯಿತು!.)
No comments:
Post a Comment