ತನ್ನ ಕೂಗದ ಕರೆಗೆ ಹಿಂದಿರುಗಿ ನೋಡುವ ತವಕ,
ಎದೆಯಾಳದ ಕೆರೆಯಲ್ಲಿ ಮಾತು ನೂರಡಗಿದ್ದರೂ ಎರಡು
ತುಟಿಗಳು ಮಾತ್ರ ಏನೊಂದನ್ನೂ ಆಡದಂತಾಗಿ ಮೂಕ/
ಬತ್ತಿದ ಕನಸುಗಳೂ ಬತ್ತಲಾರದಂತೆ ಕಣ್ಣ ತುಂಬಿ ಕಾಡುವಾಗ,
ನಿಸ್ಸಂದೇಹವಾಗಿ ಆ ನಿಷ್ಕಲ್ಮಶ ಹೃದಯವನ್ನ
ಅದ್ಯಾರೋ ನಿರ್ದಯವಾಗಿ ಒಡೆದಿದ್ದಾರೆ ಎನ್ನಬಹುದು//
ಕಡಲಿನ ಒತ್ತಡಕ್ಕೆ ಬಸಿರಾಗಿ ಕಟ್ಟುವ ಹನಿ ಹನಿ ಮೋಡಕ್ಕೇನು ಗೊತ್ತು?
ಅದ್ಯಾವ ಚಿಪ್ಪಿನ ಎದೆ ಕವಾಟದಲ್ಲಿ ಬಿದ್ದು ತಾನಾದೇನೆಂದು ಮುತ್ತು?/
ಯಾವ ಕಂಠದ ಆಭರಣವಾಗಿ ಹೊಳೆಯೋದು ಯಾವತ್ತು?,
ಯಾರು ತನ್ನ ಬಯಸಿ ಕೊಂಡಾರೋ! ಯಾರ ಖಜಾನೆಯ ಸೇರಿ
ಪುನಃ ಕತ್ತಲಲ್ಲಿ ಬಂಧಿಯಾಗುವ ಆ ಹೊತ್ತು?//
ಬಾಳ ನಾಳೆ ಎಂದೂ ನಮ್ಮ ಕೈಯಲ್ಲಿರೋಲ್ಲ,
ಸವೆದ ನೆನ್ನೆಗಳೂ ಸಹ ನಮ್ಮ ಕೈಲಿರಲಿಲ್ಲ/
ಹೆಚ್ಚೆಂದರೆ ಏನೋ ಸ್ವಲ್ಪ ಸಹನೀಯವಾಗುವಂತೆ ಭವಿಷ್ಯವ ಯೋಜಿಸಬಹುದಷ್ಟೇ!,
ನಾವಂದುಕೊಂಡದ್ದೇ ಯಾವಾಗಲೂ ನಿಜವಾಗಬೇಕಿಲ್ಲ ಈ ಧಗಾಕೋರ ವಿಧಿಯ
ದರಿದ್ರ ಹಣೆಬರಹ ಎಂದಿಗೂ ಬರಿ ಇಷ್ಟೇ?!//
No comments:
Post a Comment