ಬರೆಯದೆ ಹಗುರಾಗುವ ಬಗೆ ನನಗರಿವಿಲ್ಲ,
ಹಾಗಂತ ಬರೆಯುವ ಬಗೆಯನ್ನೂ ನಾನರಿತಿಲ್ಲ/
ಅನ್ನಿಸಿದ್ದನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯ ಕೊಡುವ ಅಕ್ಷರ ಒಂದೇ ನನ್ನ ಅನುಗಾಲದ ಭರವಸೆ,
ಇಲ್ಲ ನನಗೆ ಇನ್ನೊಬ್ಬರು ಇದನ್ನ ಓದಿ ಮೆಚ್ಚಲಿ ಎನ್ನುವ ಚಿಲ್ಲರೆ ಆಸೆ//
ಹಾಡುವ ಹಕ್ಕಿಗೆಲ್ಲಿದೆ ಹಾಡಿನ ಹಂಗು?,
ಕುಣಿವ ನವಿಲಿಗೇನು ಕೆಂಬೂತಕ್ಕೂ ಇರದು ತಾಳದ ಗುಂಗು/
ಅನ್ನಿಸಿದಾಗ ಅಂದು ಬಿಡಬೇಕು ಭಾವನೆಗಳ ಅನಿರ್ದಿಷ್ಟಾವಧಿಗೆ ಮುಂದೂಡುವುದು ಸಲ್ಲ,
ನಾಳೆ ಮತ್ತೆ ಕಾಲ ಸಿಗುವುದೋ ಇಲ್ಲವೋ?
ಯಾವನು ಬಲ್ಲ?//
ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಸೋತ ಮನ ಬರೆದ ನಾಲ್ಕೆ ನಾಲ್ಕು ಸಾಲು,
ಓದಿದ ಎಲ್ಲರೂ ಅದನ್ನ ಕವಿತೆ ಎಂದರು ನನ್ನದೇನಿಲ್ಲ ಈ ಹಿಕಮತ್ತಿನಲ್ಲಿ ಪಾಲು/
ನಾನೊ ನನ್ನೊಳಗೆ ಅಂತರ್ಮುಖಿ,
ಹೊಗಳಿಕೆ ತೆಗಳಿಕೆಗಳೆರಡಕ್ಕೂ ಕಿವುಡ....
ಹೀಗಾಗಿಯೇ ನಿತ್ಯ ಸುಖಿ//
No comments:
Post a Comment