Wednesday, December 17, 2014

ಇದು ಎಂದಿಗೂ ಮುಗಿಯದ ದಾಳಿ, ಇದರೊಂದಿಗೇ ಎಲ್ಲರೂ ಹೊಂದಿಕೊಂಡು ಬಾಳಿ........








ಪೇಷಾವರದ ಹೇಷಾರವ ನೆನ್ನೆ ಸಂಜೆ ಮುಗಿದಿದೆಯಂತೆ,
ಅಲ್ಲಿ ಅದಾದ ಮೇಲೆ ಕವಿದದ್ದು ಬರಿ ಮೂಕ ಎಳೆ ಮನಗಳ ನರಳಿಕೆಗಳಂತೆ,
ಒಟ್ಟು ಒಟ್ಟಾದದ್ದು ನೂರಾ ಮೂವತ್ತೆರಡು ಹೆಣಗಳ ಸಂತೆ!
ಆದರೆ ಅವುಗಳನ್ನ ಹೆತ್ತ ಮಾತೃ ಒಡಲಿಗೆ ಮಾತ್ರ
ಅವು ಶವಗಳು ಅಂತ ಅನ್ನಿಸುತ್ತಿಲ್ಲವಂತೆ/
ಹೀಗಂತ ಟಿವಿಯಲ್ಲೊಂದು ಸುದ್ದಿ ಮಾರುವ ಧ್ವನಿ
ಭಾವಪೂರ್ಣವಾಗಿ ಅತ್ಯುತ್ಸಾಹದಿಂದ ಊಳಿಡುತ್ತಿತ್ತು,
ಹಿನ್ನೆಲೆಯಲ್ಲಿ ಅದ್ಯಾವುದೋ ಅಮ್ಮ ಹಿಂದಿರುಗಿ ಬರಲಾಗದ ಶಾಲೆಗೆ ಹೋದ
ತನ್ನ ಎಳೆ ಕಂದನ ಶವವ ಅಪ್ಪಿ ಹಿಡಿದು ಕೊನೆ ಮೊದಲಿಲ್ಲದಂತೆ ಗೋಳಿಡುತ್ತಿತ್ತು//



ಉರಿವ ಮನೆಯಲ್ಲೂ ಗಳ ಹಿರಿಯುತ್ತಾ ಅಂದನೊಬ್ಬ
ನೇರ ಸಂದರ್ಶನದಲ್ಲಿ ಅದ್ಯಾವನೋ ಅಲ್ಲಿನ ಸೇನಾಧಿಕಾರಿ,
ಬೇರೆ ಇನ್ನೇನಲ್ಲ ನೋಡಿ ಇದು ನಿಮ್ಮವರ ಪಿತೂರಿ!/
ಅರ್ರರೆ ನೋವಿನ ಇಂಥಾ ಕ್ಷಣದಲ್ಲೂ ಸುಳ್ಳನ್ನಾಡಿ ಸುಖಿಸುವ
ವಿಕೃತಿ ಮೆರೆಯುವ ಎಂಥಾ ನರ ರಾಕ್ಷಸರೆಲ್ಲಾ ಈ ಭೂಮಿ ಮೇಲೆ ಇರುತ್ತಾರ್ರಿ?
ವೇದನೆಯ ಹೊತ್ತಲ್ಲೂ ದ್ವೇಷದ ಜ್ವಾಲೆಗೆ ಬಿಡದೆ ತುಪ್ಪ ಎರಿತಾರ್ರಿ!,
ಅರೆ ನಮಗೂನು ನಿಮ್ಮ ಅಯೋಗ್ಯತೆಯ ಅಸಲಿಯತ್ತು ಗೊತ್ತೂರಿ
ಆ ಬಿನ ಲಾಡೆನನ ಲಾಡಿ ನಿಮ್ಮ ಸೊಂಟಕ್ಕೆ ಬಿಡಲಾಗದಂತೆ ಬಿಗಿದಿತ್ತಲ್ರಿ?!//



ನಮ್ಮೂರೇನು ಭಾರಿ ಸುರಕ್ಷಿತ ಅಲ್ಲ ಬಿಡಿ,
ಇಲ್ಲೂ ಇದೇ ನೆಪ ಮಾಡಿಕೊಂಡು ಹಚ್ಚೋವ್ರಿದಾರೆ ಪಾಪದವರ ನಡುವೆ ಕಾದಾಟದ ಕಿಡಿ.
ತೀರ್ಥಹಳ್ಳಿಯಿಂದ ನವಡೆಳ್ಳಿಯವರೆಗೂ ಇದಾರೆ ಇಂತಾ ಕ್ರಿಮಿಗಳು
ಮನೆ ಮನ ಒಡೆದು ತಾವೆ ಇಟ್ಟ ಬೆಂಕಿಯಲ್ಲಿ ಚಳಿಕಾಯಿಸಿಕೊಳ್ಳುವ ಮಹಾ ಪರಾಕ್ರಮಿಗಳು/
ತೂತುತೂತು ಟೋಪಿ ಹಾಕಿಕೊಂಡವರೇನು ಅಸಲಲ್ಲ ನೋಡಿ,
ಡಿಸೆಂಬರ್ ಆರನ್ನ ಊರೆ ಮರೆತರೂ ಇವರು ಮಾತ್ರ ಬಿಡದೆ ಹಿಡುಕೊಂಡು ಅಂತಾರೆ
'ಎಲ್ಲಾದರೂ ಉಂಟೆ!' ನೀವ್ಯಾರೂ ಅದನ್ನ ಮರೀಬೇಡಿ!!
ಒಟ್ಟಿನಲ್ಲಿ ಶಾಂತಿ ನೆಮ್ಮದಿ ನಮಗ್ಯಾರಿಗೂ ನಸೀಬಿಲ್ಲ!
ಇಲ್ಲಿ ಪರ ಕೊಲ್ಲಲ್ ನಮ್ಮನ್ನ ನಾವೆ ನಂಬಿದ ಹರನೂ ಬಂದು ಕಾಯಲೊಲ್ಲ?!//

No comments:

Post a Comment