ಮಾತು ಮರೆತ ಮೇಲೆ ಮೌನವನ್ನಾದರೂ
ಗಟ್ಟಿಯಾಗಿ ಅಪ್ಪಿಕೊಳ್ಲಲೇ ಬೇಕಲ್ಲ?
ವರ್ಷಾನುಗಟ್ಟಲೆ ಜೊತೆಯಿದ್ದು ಅಂತರಂಗವನ್ನ
ಅರಿತ ಮೇಲೂ,
ತುಸುವಾದರೂ ನನ್ನ ಮೇಲೆ ನಂಬಿಕೆ ಅದೇಕೆ ಇಲ್ಲ?/
ಸೋತ ಕಾಲುಗಳ ಕಾಲದ ಕುದುರೆಯ
ಬೆತ್ತಲೆ ಬೆನ್ನೇರಿ,
ಮರೀಚಿಕೆಯಂತಹ ಕನಸುಗಳ ಹಾದಿಯದ್ದ
ಕಿರಿದುಗೊಳಿಸಿದ ದೃಷ್ಟಿಯ ಕಣ್ಣೂರಿ....
ಗುರಿ ತಪ್ಪಿ ಹಾಕುತ್ತಿರುವ ಪ್ರತಿ ಹೆಜ್ಜೆಗಳ ಹಿನ್ನೆಲೆಯಲ್ಲೂ
ನಿನ್ನ ನೆನಪುಗಳ ಗುಂಗಿದೆ//
ಗುರುತು ಬೇಡವೆಂದು ದೂರ ಓಡಿದಷ್ಟೂ
ಸಲ್ಲದ ಚಿನ್ಹೆಗಳನ್ನ ತಂದು ಒತ್ತುತ್ತಾರೆ,
ಎಲ್ಲಾ ನಿಶಾನಿಗಳನ್ನ ಎತ್ತಿ ಒಗೆದಿದ್ದರೂ ಸಹ
ಬಲ್ಲಿದರಂತೆ ಜಾತಿಯೊಂದರ ಮೊಹರನ್ನ ಬಂದು ಇತ್ತಿದ್ದಾರೆ....
ಅದೇನೋ ಅಂದರಪ್ಪ ಇದನು ಕಾನೇಶುಮಾರಿ!
ಜಾತಿ ಭೂತವ ಅದೆಂದೋ ಶಾಶ್ವತವಾಗಿ ಊರ ಗಡಿದಾಟಿಸಿ ಬಂದಿದ್ದರೂ ಮತ್ತೆ
ಈ ರೂಪದಲ್ಲಿ ಮನೆಗೆ ಬಂದು ಮರಳಿ ವಕ್ಕರಿಸಿತಲ್ಲ ಮತ್ತದೇ ಮಾರಿ!/
ವಿಶ್ವಮಾನವರಾಗುವುದೆಲ್ಲ ಬರಿ ಚಂದದ ಬೊಗಳೆ
ಬೆಳಗ್ಯೆ ಎದ್ದಲ್ಲಿಂದ ಸಂಜೆ ಬೀಳುವಲ್ಲಿಯವರೆಗೂ......
ಯಾವುದಾದರೊಂದು ಕರಾಳ ರೂಪದಲ್ಲಿ
ನಮ್ಮೆಲ್ಲರ ಕಾಡುತ್ತಲೆ ಇರುತ್ತದೆ ಈ ಜಾತಿಯ ರಗಳೆ,
ನಾಮ ಜುಟ್ಟು ಜನಿವಾರಗಳನ್ನ ಹೊತ್ತಿರಲೇಬೇಕಿಲ್ಲ
ಮನದ ತುಟಿಯಂಚಲ್ಲಿ ಅಲ್ಲಾ ಇಲ್ಲಾ ಏಸುವಿನ ಜಪದ ಮತ್ತಿರಲೇಬೇಕಿಲ್ಲ.....
ಸೈತಾನರು ಕಾಯುತ್ತಲೇ ಇರುತ್ತಾರೆ ಕೊನೆವರೆಗೆ
ತಪ್ಪಿಸಿ ಕೊಳ್ಳೋದು ಕಡು ಕಷ್ಟ ಈ ಜಾತಿಯತೆಯ ಅಂಗಿ ಬಲು ದೊಗಳೆ//
ಮನದ ಕಿಟಕಿಯ ಸದಾ
ತೆರೆದಿದ್ದರೆ ಸಾಕು,
ಇಲ್ಲಸಲ್ಲದ ಆದರ್ಶದ ನುಡಿಗಳ ದೇಶಾವರಿಯ ಧಾಟಿಯಲ್ಲಿ
ಅದ್ಯಾಕೆ ಆಡಿಕೊಂಡಿರಬೇಕು?/
ತೋರಿಕೆಯ ನಿತ್ಯ ಸ್ವತಂತ್ರ್ಯರ ಹಾವಳಿಯೆ ಜಗದಲ್ಲಿ ಬಹಳ
ಮೆಲ್ಲನೆ ನಿಮ್ಮ ಕುಲದ ನೆಲೆಯನರಿವತ್ತ
ಪರಿಚಯವಾಗುತ್ತಲೇ ಇಳಿಬಿಡುತ್ತಾರೆ ಮನಸೊಳಗೊಂದು ಗಾಳ,
ಹಾಗೆ ಕೇಳಿದ ಮಾತ್ರಕ್ಕೆ ತಪ್ಪು ಅವರದ್ದೂ ಅಲ್ಲ
ಹೆಡ್ಡರಂತೆ ಹೆತ್ತವರು ಅಂಟಿಸಿದ ಪಂಗಡ ನಾಮದ ಕಿರೀಟವನ್ನ.....
ಇನ್ನೂ ಹುಸಿ ಹೆಮ್ಮೆಯಿಂದ ಹೊತ್ತೇ ನಾವು ತಿರುಗುತ್ತಿದ್ದೀವಲ್ಲ?!//
No comments:
Post a Comment