ಬಾಡದ ಹೂಗಳೆಲ್ಲ ಚಿಟ್ಟೆ ಕಂಡ ಕನಸುಗಳಾಗಿ,
ಮೂಡದ ನಿರೀಕ್ಷೆ ಸೂರ್ಯರೆಲ್ಲ ಬಾನ ಮನದ ನವಿರು ಮುನಿಸುಗಳಾಗಿ.....
ಇಳೆಯ ತಬ್ಬಿದ ಇಬ್ಬನಿಯಂತಿವೆ/
ಜಾರುವ ತಾರೆಗಳೆಲ್ಲ ಭುವಿಯೆದೆಯ ಹಿತವಾಗಿ ತಾಗಿ,
ಕಟ್ಟಿದ ಮೋಡಗಳೂ ಸಹ ಮುಂದೊಮ್ಮೆ ಮಾಗಿ......
ಬರಡು ನೆಲದಲ್ಲೂ ನಿರೀಕ್ಷೆ ಹಸಿರ ಮತ್ತೆ ಹುಟ್ಟಿಸುವಂತಿವೆ//
ಕಲ್ಲಾಗಿ ಕಾದವಳು ಹಣ್ಣ ಹೊತ್ತು ದಾರಿ ನೋಡಿದವಳು ಕಡೆಗೂ ಅವನ ಕಂಡರು,
ಬಂದೆಯಾ ರಾಮನೆಂದರು/
ಯಮುನೆ ದಡದಲ್ಲಿ ಕಾದು ಕೂತವಳು ಕಾಲ ಮರೆತು ಸಭೆಯಲ್ಲಿ ಬೆತ್ತಳಾದವಳು,
ಇಬ್ಬರೂ ಕಡೆಯವರೆಗೂ ಕಾಯುತ್ತಲೇ ಇದ್ದರು.....
ಅವನು ಕಡೆಗೂ ಬರಲೇ ಇಲ್ಲ ಬಂದು ಅವರ ನಿರೀಕ್ಷೆಯಂತೆ ಕೂಡಲೇ ಇಲ್ಲ//
ಬಿಟ್ಟು ಬಂದ ಕಾಡ ನೆನೆದು ಇರುವ ನಾಡಿನಲ್ಲಿ ನಲುಗಿದಂತೆ ನಟಿಸುವೆ.....
ನಾನು ಮಾತ್ರ ಇಲ್ಲಿ ಎಲ್ಲಾ ಖುಷಿಗಳ ಸೂರೆ ಹೊಡೆಯುತ್ತಾ,
ಅದೆಲ್ಲೋ ಕಾನನದಂಚಿನ ಪ್ರಗತಿಯನ್ನ ನಖಶಿಖಾಂತ ದೊಡ್ಡ ದೊಂಡೆಯಲ್ಲಿ ಪ್ರತಿಭಟಿಸುವೆ/
ನನ್ನ ಹೋರಾಟದ ಹಾರಾಟಗಳೆಲ್ಲಾ ವಾಸ್ತವದಲ್ಲಿ ಬರಿ ತೋರಿಕೆ.....
ಇದಕ್ಕೆಲ್ಲ ಮೂಲ ಸದಾ ಪ್ರಚಾರಕ್ಕಾಗಿ ಹಪಹಪಿಸುವ ನನ್ನ ಒಳಮನದ ತುರಿಕೆ,
ಸೋತ ಪ್ರಕೃತಿಯೇನೂ ನನ್ನ ಸ್ವಂತವಲ್ಲ
ಹಳ್ಳಿಗಳು ಹಾಳಾದರೆ ಹಾಳಾಗಲಿ ಬಿಡಿ! ನನಗೇನು ಹೇಳಿ?
ಬೆಳೆದರೆ ಬೆಳೆಯಲಿ ಬಿಡಿ ಅಲ್ಲಿ ಕಂಡವರ ಸೂರಿನ ಮೇಲೆ ಎಳೆ ಗರಿಕೆ//
No comments:
Post a Comment