ಕನಸುಗಳ ತೋಟದ ಮಾಲಿ ನಾನು,
ಅರಳಿದ ಹೂಗಳನ್ನ ಕೀಳುವ ಅಧಿಕಾರವಿಲ್ಲ....
ಇನ್ಯಾರ ಕಣ್ಣೂ ಅದರ ಮೇಲೆ ನಾನಿರುವಾಗ ಬೀಳುವಂತಿಲ್ಲ,
ನನಸಿನ ಲೋಕದ ಹಮಾಲಿಯೂ ಆಗಿಲ್ಲವೇನು?/
ಸಂಕಷ್ಟಗಳ ಮೂಟೆಯನ್ನ ನಿತ್ಯ ಹೊತ್ತೇ ಇದ್ದರೂ
ಬಾಗಿದ ಬೆನ್ನಿನಡಿಯಲ್ಲಿಯೆ ಕಿರು ನಗುವುದು ರೂಢಿಯಾಗಿದೆ
ಎಲ್ಲರ ಬದುಕಿನ ನೀತಿಯೂ ಇಷ್ಟೆ.....
ಇದಕ್ಕೆ ಹೊರತಲ್ಲ ನಾನೂನು//
ಈ ಭರವಸೆ ನಾಳಿನ ನಿರೀಕ್ಷೆಗಳಿವೆಲ್ಲ
ನಮಗೆ ನಾವೆ ನಿತ್ಯ ಕೊಟ್ಟುಕೊಳ್ಳುವ ನಿರಂತರ ಜಾಮೀನು,
ಕಹಿ ಮಾತ್ರೆ ಹೌದು ಜೀವನ
ಅದಕ್ಕೆ ತುಸುವಾದರೂ ಸರಿ೮ ಸೇರಿಸಿಕೊಳ್ಳಲೇಬೇಕು ಸಂತಸದ ಹನಿ ಜೇನು/
ಹೋಗಲೇ ಬೇಕು ಪ್ರತಿಯೊಬ್ಬರೂ
ಈ ಜಗವ ಶಾಶ್ವತವಾಗಿ ಒಂದು ದಿನ ತೊರೆದು
ಇದರಲ್ಲಿ ರಿಯಾಯತಿ ಯಾರಿಗಾದರೂ ಇದೆಯೇನು?,
ಇಂದು ಅವನು ನಾಳೆ ನೀನು
ಹಿಂದೆಯೆ ಒಂದಿನ ನಾನು//
ಅಂಗೈ ರೇಖೆಗಳ ನೋಡಿ ಒಬ್ಬರ ಅದೃಷ್ಟ ಅಳಿಯಲಾಗುವುದಿಲ್ಲ
ಕೈಯಿಲ್ಲದ ಹೆಳವರಿಗೂ ಒಳ್ಳೆಯ ಕಾಲ ಒಂದಿದ್ದೇ ಇರುತ್ತದೆ,
ಹಣೆಬರಹವ ನಂಬಿ ಎಂದೂ ವಿಧಿ ಮಣೆ ಹಾಕುವುದಿಲ್ಲ.....
ನೊಂದು ತಲೆಯ ಮೇಲೆ ಕೈಯಿಟ್ಟು ಕೂತವನಿಗೂ
ಸಂತಸದ ಕಾಲವೊಂದನ್ನ ತಪ್ಪದೆ ಹೊತ್ತು ತರುತ್ತದೆ/
ಕೆಲವು ಯೋಜನೆಗಳು ಮನದೊಳಗೆ ಖಚಿತವಿದ್ದರೆ ಸಾಕು
ಸೋತು ಸುಮ್ಮನೆ ಕೂರದೆ ಸಾಧನೆಯ
ಕಿರು ಹಾದಿಯೆಡೆ ಕೆಲವು ಹೆಜ್ಜೆ ಹಾಕಲೇಬೇಕು,
ಅದೃಷ್ಟ ಆಗ ತಗ್ಗಿಬಗ್ಗಿ
ನಮ್ಮ ವಿಳಾಸವನ್ನ ಮರೆಯದೆ ಹುಡುಕಿಕೊಂಡೆ ಬರುತ್ತದೆ//