"ಮಂಕುತಿಮ್ಮನ ಕಗ್ಗ"
ಬರೆದಿರುವವರು; ದೇವನಹಳ್ಳಿ ವೆಂಕಟರಾಮಯ್ಯ ಗುಂಡಪ್ಪ,
ಪ್ರಕಾಶಕರು; ಕಾವ್ಯಾಲಯ,
ಪ್ರಕಟಣೆ; ೧೯೪೫ ( ಮೊದಲ ಆವೃತ್ತಿ.)
೨೦೧೨ ( ಹದಿನೆಂಟನೆಯ ಆವೃತ್ತಿ.),
ಕ್ರಯ; ಎಪ್ಪತೈದು ರೂಪಾಯಿ.
"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ.
ಬೆಲ್ಲ-ಸಕ್ಕರೆಯಾಗು ದೀನದುರ್ಬಲರಿಂಗೆ,
ಎಲ್ಲರೊಳಗೊಂದಾಗು ಮಂಕುತಿಮ್ಮ.
ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ,
ಕುದುರೆ ನೀನ್,ಅವನು ಪೇಳ್ದಂತೆ ಪಯಣಿಗರು.
ಮದುವೆಗೋ ಮಸಣಕೋ ಹೋಗೆಂದಕಡೆಗೋಡು,
ಪದಕುಸಿಯೆ ನೆಲವಿಹುದು ಮಂಕುತಿಮ್ಮ.
ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು,
ಚಂಡಚತುರೋಪಾಯದಿಂದಲೇನಹುದು.
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು,
ಅಂಡಲೆತವಿದೇಕೇನೋ ಮಂಕುತಿಮ್ಮ.
ತಿರುಗಿತಿರುಗಿ ತೊಳಲುವುದು ತಿರಿದನ್ನವುಣ್ಣುವುದು,
ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು.
ಮರಳಿ ಕೊರಗಾಡುವುದು ಕೆರಳುವುದು ನರಳುವುದು,
ಇರವಿದೇನೊಣರಗಳೆ? ಮಂಕುತಿಮ್ಮ.
ಧರೆಯ ಬದುಕೇನದರ ಗುರಿಯೇನು ಫಲವೇನು?
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ.
ತಿರುತಿರುಗಿ ಹೊಟ್ಟೆಹೊರಕೊಳುವ ಮೃಗಖಗಕ್ಕಿಂತ,
ನರನು ಸಾಧಿಪುದೇನು ಮಂಕುತಿಮ್ಮ?.
ಜಗದೀ ಜಗತ್ತ್ವವನು, ಮಯಾವಿಚಿತ್ರವನು
ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು,
ಮಿಗುವುದೇಂ ? ರೂಪಾಖ್ಯೆಯೊಂದುಮಿಲ್ಲದ ವಸ್ತು,
ಹೊಗಿಸಾ ಕಡೆಗೆ ಮತಿಯ ಮಂಕುತಿಮ್ಮ.
ನಿನ್ನ ಜೀವಿತವೆಲ್ಲ ನಿನ್ನ ಕೈಮಾಳ್ಕೆಯೇಂ?,
ಅನ್ಯಶಕ್ತಿಗಳೆನಿತೋ ಬೆರೆತಿರುವುವಲ್ಲಿ.
ಅನ್ನನೀಡುವರ್ ತಿಳಿವನೀವರ್ ಒಡನಾಡುವವರ್,
ನಿನ್ನ ಬಾಳ್ಗಿವರಿರರೆ ಮಂಕುತಿಮ್ಮ?"
- ಡಿ ವಿ ಗುಂಡಪ್ಪ.
ಮೂಲತಃ ಹವಿ ಹೃದಯದವರಾಗಿದ್ದ ಡಿ ವಿ ಗುಂಡಪ್ಪನವರದ್ದು ಕಾವ್ಯಾತ್ಮಕ ಶೈಲಿಯಲ್ಲಿ ತತ್ವ ತಿಳಿಸುವ ಹಂಬಲದಲ್ಲಿ ಹುಟ್ಟಿದ್ದೆ "ಮಂಕುತಿಮ್ಮನ ಕಗ್ಗ". ಅವರ ಸಾಹಿತ್ಯಿಕ ರಚನೆಗಳಲ್ಲಿಯೆ ಅದೊಂದು ಮೈಲಿಗಲ್ಲು. ತ್ರಿಪದಿಗಳಲ್ಲಿ ಬಾಳಿನ ಸತ್ವಗಳ ಸಾರವನ್ನ ಸರ್ವಜ್ಞ ಹಿಂದೆ ಹಿಡಿದುಕೊಟ್ಟಿದ್ದಂತೆ ಡಿವಿಜಿ ಇಲ್ಲಿ ಚತುಷ್ಪದಿಗಳಲ್ಲಿ ಅಷ್ಟೆ ಮೌಲಿಕವಾಗಿ ಬದುಕಿನ ಮೂಲಭೂತ ನೀತಿಗಳನ್ನ ಸಾದರ ಪಡಿಸಿದ್ದಾರೆ. ಹೆಚ್ಚು ದೊಡ್ಡದೊಡ್ಡ ಪದಗಳನ್ನ ತುರುಕಿಸದೆ. ಅನಗತ್ಯ ಪಾಂಡಿತ್ಯ ಪ್ರದರ್ಶನಕ್ಕಿಳಿಯದೆ ಸರಳ ಆಡುಭಾಷೆಯಲ್ಲಿ ಡಿವಿಜಿ ತಮ್ಮ ಮನದ ಮಾತುಗಳನ್ನ "ಮಂಕುತಿಮ್ಮ"ನ ಮೂಲಕ ಭಿಡೆಯಿಲ್ಲದೆ ಆಡಿಸಿದ್ದರೆ ಎನ್ನಬಹುದು. ಇಡಿ ಪುಸ್ತಕದಲ್ಲಿ ಅವರು ಹೇಳಿರುವ ಒಟ್ಟಾರೆ ಒಂಬೈನೂರಾ ನಲವತ್ತೈದು ಕಗ್ಗಗಳಲ್ಲಿ ಎಲ್ಲಾ ಧರ್ಮಗ್ರಂಥಗಳ ಸಾರವಿದೆ, ಎಲ್ಲಾ ಕಗ್ಗಗಳೂ ನಮ್ಮೆಲ್ಲಾ ಜೀವನದ ಏಳು ಬೀಳುಗಳ ಅನುಸಾರವಿದೆ.
ಆಧುನಿಕ ಬೆಂಗಳೂರಿನ ಶಿಲ್ಪಿಗಳಲ್ಲಿ ಒಬ್ಬರೆಂದು ಗುರುತಿಸಲಾಗುವ ಡಿವಿಜಿ ತಮ್ಮ ಪುಸ್ತಕ "ಮಂಕುತಿಮ್ಮನ ಕಗ್ಗ"ದ ಮೂಲಕ ಕಂಡವರಿಗಷ್ಟೆ ನೀತಿಬೋಧೆ ಮಾಡದೆ ತಾವೂ ಅದನ್ನ ಬಾಳಿ ಬದುಕಿದ ಸರಳ ಸಜ್ಜನರು. ಇಂದಿನ ಅರೆನೆರೆತ ಗಡ್ಡದ ತಲೆಮಾಸಿದ ಖಾದಿ ಛದ್ಮವೇಷದ ಜ್ಞಾನಪಿತ್ಥ ತಲೆಗೆ ಏರಿದ ಸಾಹಿತಿಗಳನ್ನ ಎಬಡರಂತೆ ಭೋಪರಾಕು ಹಾಕುತ್ತಾ ಬೆಂಬಲಿಸಿ ಮಾತನಾಡುವವರು ಮುಖ್ಯವಾಗಿ ಗಮನಿಸಬೇಕಾದ ಅಂಶವಿದು. ಅಧ್ಯಾತ್ಮದೆಡೆಗೆ ಅತೀವ ಒಲವಿದ್ದ ಡಿವಿಜಿ ತಮ್ಮ ಸಾಹಿತ್ಯಿಕ ರಚನೆಗಳಂತೆಯೆ ಬಸವನಗುಡಿಯ "ಗೋಖಲೆ ವಿಚಾರ ಸಂಸ್ಥೆ"ಯನ್ನ ತಮ್ಮ ಸಮಕಾಲೀನ ಸಮಾನ ಮನಸ್ಕರೊಂದಿಗೆ ಕಟ್ಟಿ ಬೆಳೆಸುವುದರ ಮೂಲಕ ತಮ್ಮ ಸಾಮಾಜಿಕ ಬದ್ಧತೆಯನ್ನೂ ಋಜುವಾತು ಪಡಿಸಿದ್ದಾರೆ. ಅವರ ಸಾಹಿತ್ಯಿಕ ಬಾಳ್ವೆಯನ್ನೆ ಗಮನಿಸಿದರೆ "ಮಂಕುತಿಮ್ಮನ ಕಗ್ಗ" ಹಾಗೂ ಅದರ ಮುಂದುವರೆದ ಭಾಗ "ಮರುಳ ಮುನಿಯನ ಕಗ್ಗ"ವೂ ಸೇರಿದಂತೆ ಹತ್ತು ಕಾವ್ಯ ಸಂಗ್ರಹವನ್ನ ಅವರು ಬರೆದಿದ್ದಾರೆ. ಒಟ್ಟು ಏಳು ಜೀವನ ಚರಿತ್ರೆಗಳನ್ನ, ನಾಲ್ಕು ಪ್ರಬಂಧ ಸಂಗ್ರಹಗಳನ್ನ ಅವರು ಬರೆದಿದ್ದಾರೆ. ಇವಿಷ್ಟೆ ಅಲ್ಲದೆ ಎರಡು ಬಾಲ ಸಾಹಿತ್ಯ ಪುಸ್ತಕಗಳು, ಐದು ನಾಟಕಗಳು, ನಾಲ್ಕು ಅದ್ಯಾತ್ಮಿಕ ಚಿಂತನೆಗಳು, ಆರು ಸಮಾಜಶಾಸ್ತ್ರ ಕುರಿತ ವಿಶ್ಲೇಷಣೆಯನ್ನೂ ಅವರು ಬರೆದಿದ್ದರೆ.
ಮೂಲತಃ ಪತ್ರಕರ್ತರಾಗಿದ್ದ ಡಿವಿಜಿ ಎರಡು ಪತ್ರಿಕೆಗಳನ್ನ ತಾವೆ ಆರಂಭಿಸಿದ್ದರು. ಇಂಗ್ಲಿಷ್ ಭಾಷೆಯಲ್ಲಿ ತಮ್ಮ ವೃತ್ತಿ ಬದುಕನ್ನ ಆರಂಭಿಸಿ ಅನಂತರ ಕನ್ನಡ ಪತ್ರಿಕೋದ್ಯಮಕ್ಕೆ ಹೊರಳಿದ್ದ ಚೇತನ ಅದು. ನೆನ್ನೆ ಮೊನ್ನೆ ತಾವಾಡಿದ ಮಾತುಗಳಿಗೆ ಕೃಅತಿಯಲ್ಲಿ ಬದ್ಧರಾಗದೆ ಸೋಗಲಾಡಿತನವನ್ನೆ ಹೇಸಗೆಟ್ಟ ಬಾಳು ಎಂದು ಭ್ರಮಿಸಿಕೊಂಡಿರುವ ಅಡ್ನಾಡಿ ಸಾಹಿತಿಗಳಿಗೆಲ್ಲ ಒಂದೊಂದು ಸ್ಮಾರಕಗಳು ಸರಕಾರಿ ಖರ್ಚಿನಲ್ಲಿ ಮೇಲೇಳುತ್ತಿರುವ ದಿನಗಳಲ್ಲಿ ಸರಕಾರಿ ಸಹಾಯವನ್ನ ಅದ್ಯಾವುದೇ ರೂಪದಲ್ಲಿ ಸಿಕ್ಕರೂ ನಯವಾಗಿ ನಿರಾಕರಿಸಿದ ಡಿವಿಜಿಯವರ ವ್ಯಕ್ತಿತ್ವ ಸರ್ವ ಮಾನ್ಯವಾದುದು. ಸರಕಾರಿ ಖಜಾನೆಯ ಖರ್ಚಿನಲ್ಲಿ ತಮ್ಮ ಹೆಣಕ್ಕೂ ಬೆಂಕಿ ಇಕ್ಕಿಸಿಕೊಳ್ಳುವ ಸುಖಕ್ಕೆ ಜೊಲ್ಲು ಸುರಿಸುವ ಮಂದಿಯನ್ನ ಮನಸೋ ಇಚ್ಛೆ ಹಾಡಿ ಹೊಗಳುವ ಮಡ್ದ ಮಂಡೆಗಳು ಒಮ್ಮೆ ಡಿವಿಜಿಯಂತವರನ್ನ ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. "ಪದ್ಮಭೂಷಣ" ಪುರಸ್ಕಾರವನ್ನ ಭಾರತ ಸರಕಾರದಿಂದ ಯೋಗ್ಯವಾಗಿಯೆ ಪಡೆದ ಡಿವಿಜಿಯವರಿಗೆ ಹೇಳಿಕೊಳ್ಳುವಂತಹ ಸಾಹಿತ್ಯಿಕ ಪಟ್ಟ ಪುರಸ್ಕಾರಗಳು ದಕ್ಕಲಿಲ್ಲ ಏಕೆಂದರೆ ಅವ್ರಿಗೆ ಸಾಹಿತ್ಯ ರಚನೆ ಹಾಗೂ ಸಮಾಜ ನಿರ್ಮಾಣದ ಪರಿಕಲ್ಪನೆ ಇತ್ತೇ ಹೊರತು ಲಾಬಿ ರಾಜಕೀಯ ಮಾಡುವ ದಳ್ಳಾಳಿ ವೃತ್ತಿಯದಲ್ಲ.
ಡಿವಿಜಿಯವರ ಮಗ ಸಸ್ಯ ವಿಜ್ಞಾನಿ ಬಿಜಿಎಲ್ ಸ್ವಾಮಿಯವರೂ ಸಹ ಸಾಹಿತಿಯಾಗಿ ಮುಂದಿನ ದಿನಗಳಲ್ಲಿ ಪ್ರಸಿದ್ಧರಾದವರು. ಹಳೆಗನ್ನಡದ ಪದಗಳು ಹಾಗೂ ಕಾವ್ಯಮಯಶೈಲಿಯಿಂದ ಕಗ್ಗ ಕಗ್ಗಂಟೆಂದು ಅನ್ನಿಸುವವರಿಗಾಗಿ ಡಿ ಆರ್ ವೆಂಕಟರಮಣನ್ ಸರಳ ಕನ್ನಡದಲ್ಲಿ "ಕಗ್ಗಕ್ಕೊಂದು ಕೈಪಿಡಿ" ಎನ್ನುವ ಕೃತಿಯನ್ನ ರಚಿಸಿದ್ದಾರೆ. ಆಸಕ್ತರು ಮೂಲ ಕಗ್ಗ ಹಾಗೂ ಅದರ ಅರ್ಥ ವಿವರಣೆಗಳನ್ನ ಆ ಪುಸ್ತಕದಲ್ಲಿ ಗಮನಿಸಬಹುದು. ಇನ್ನು ಲಹರಿ ಆಡಿಯೋ ಕಗ್ಗದ ಧ್ವನಿಸುರುಳಿಗಳನ್ನೂ ಹೊರತಂದಿದೆ.
No comments:
Post a Comment