Wednesday, September 24, 2014

ಪುಸ್ತಕದೊಳಗೆ - ೪


"ಬೆಟ್ಟದ ಜೀವ"
ಲೇಖಕ; ಡಾ ಶಿವರಾಮ ಕಾರಂತ,
ಪ್ರಕಾಶಕರು; ಐಬಿಎಸ್,
ಪ್ರಕಟಣೆ; ೧೯೭೨,
ಕ್ರಯ; ರೂಪಾಯಿ ೮೦.
" ಗೋಪಾಲಯ್ಯನವರು 'ಕತ್ತಲಾಗುತ್ತಿದೆ, ನಾವು ಹೊರಡೋಣ' ಎಂದರು. ಹೊರಡುವ ಮೊದಲು 'ಸಾವಿತ್ರಿ ಬರುತ್ತಾಳೆಯೆ?' ಎಂದು ಕೇಳಿದರು. 'ಸಾವಿತ್ರಿ' ಎಂದ ಕ್ಷಣ ನಾರಾಯಣಯ್ಯನ ಐದು ವರ್ಷದ ಹೆಣ್ಣು ಮಗು, ಅವಳ ಪುಟ್ಟ ಅಣ್ಣ ಕೌಪೀನ ವೇಷಧಾರಿಗಳಾಗಿ ಹೊರಬಂದರು. 'ಅಜ್ಜ ನಮ್ಮನ್ನು ಬಿಟ್ಟು ಹೋಗುತ್ತಿದ್ದೆಯಲ್ಲವೆ?' ಎಂದಳು ಆಕೆ. 'ಹೊರಡುವವರಾಗಿದ್ದರೆ ಅಂಗಿ ಹಾಕಿಕೊಳ್ಳಲಿಲ್ಲ ಯಾಕೆ?' ಎಂದು ಕೇಳಿದರು ಅಜ್ಜ. ಆಗ ಮಕ್ಕಳ ತಾಯಿ 'ಹೊಸಬರನ್ನು ಕಂಡು ಅವು ಹೆದರಿಕೊಂಡು ಪಿಳಿಪಿಳಿ ನೋಡುತ್ತಾ ನಿಂತಿದ್ದವು, ತಾವಾಗಿ ಬರುತ್ತೇವೆ ಎನ್ನುವ ಧೈರ್ಯವಾಗಲಿಲ್ಲ' ಎಂದಳು.
ಅಷ್ಟರಲ್ಲಿ ಇಬ್ಬರು ಮಕ್ಕಳೂ ಒಳಕ್ಕೆ ಓಡಿಹೋಗಿ ಕ್ಷಣ ಮಾತ್ರದಲ್ಲಿ ಹೊರಗೆ ಬಂದರು. ಸಾವಿತ್ರಿ ತನ್ನ ನಡುವಿಗೆ ತುಣುಕು ಶೀರೆಯೊಂದನ್ನು ಬಿಗಿದುಕೊಂಡು ಬಂದಳು. ಅವಳ ಅಣ್ಣ ಸುಬ್ರಾಯನು ಒಂದು ಪಾದ್ರಿ ನಿಲುವಂಗಿಯನ್ನು ತೊಟ್ಟುಕೊಂಡು ಬಂದನು. ಹುಡುಗಿ ವಯ್ಯಾರ ಮಾಡುತ್ತಾ 'ನಡೆದು ಹೋಗುವುದಾದರೆ ನಾನು ಬರುವುದೇ ಇಲ್ಲ' ಎಂದಳು.'ಏತಕ್ಕೆ?' ಎಂದು ಕೇಳಿದರು ಅಜ್ಜ. 'ನನಗೆ ಮೊನ್ನೆ ಸುಮಾರು ದಿವಸದ ಮೊದಲು ಕಾಲಿಗೊಂದು ಮುಳ್ಳು ಚುಚ್ಚಿತ್ತು' ಎಂದಳು ಆಕೆ. 'ಅದು ಕಳೆದ ವರ್ಷ ಸುಬ್ರಮಣ್ಯ ಷಷ್ಠಿಯ ಸಮಯಕ್ಕೆ ಅಲ್ಲವೆ!' ಎಂದು ಕೇಳಿದರು ಅಜ್ಜ.
- ಡಾ ಶಿವರಾಮ ಕಾರಂತ.
ತಮ್ಮ ಅಸಾಧ್ಯ ವ್ಯಂಗ್ಯ ಹಾಗೂ ವಿಡಂಬನೆಗೆ ಹೆಸರುವಾಸಿಯಾದ ಶಿವರಾಮ ಕಾರಂತರು ಕಲಾ ಮಾಧ್ಯಮದಲ್ಲಿ ಆಡಿನಂತೆ ಬಾಳಿದವರು. ಕಲಾ ಪ್ರಕಾರಗಳಲ್ಲಿ ಬಹುತೇಕ ಅವರು ಬಾಯಿ ಹಾಕದ ಎಡೆಯೆ ಇರಲಿಕ್ಕಿಲ್ಲ. ಕಥೆ ಬರೆದರು, ಕಾದಂಬರಿ ಬರೆದರು, ಮಕ್ಕಳ ಸಾಹಿತ್ಯ ರಚಿಸಿದರು, ಸಿನೆಮಾ ನಿರ್ದೇಶಿಸಿದರು, ತಾವೆ ನಟಿಸಿದರು, ಕಾಲಿಗೆ ಸ್ವತಃ ಗೆಜ್ಜೆ ಕಟ್ಟಿಕೊಂಡು ಯಕ್ಷಗಾನದ ಬ್ಯಾಲೆ ಆಡಿದರು, ಕಾಲಿನಲ್ಲಿ ಚಕ್ರ ಮೊಳೆತವರಂತೆ ಊರೂರು ಅಲೆದು ಪ್ರವಾಸ ಸಾಹಿತ್ಯವನ್ನ ದಾಖಲಿಸಿದರು, ಮಕ್ಕಳಿಗಾಗಿ ಪ್ರಶ್ನೋತ್ತರದ ಅಂಕಣ ನಿಯಮಿತವಾಗಿ ಬರೆದರು, ಅಂತರ್ಜಾತಿ ವಿವಾಹ ಆದರು, ಮಾಡಿಸಿದರು ಕರೆದಲ್ಲಿ ಬಂದು ಭಿಡೆಯಿಲ್ಲದೆ ನಿಷ್ಠುರ ಭಾಷಣ ಕೊರೆದರು, ವಿಜ್ಞಾನದ ಬಗ್ಗೆ ತಲೆ ಕೆಡಿಸಿಕೊಂಡರು, ಪರಿಸರ ಹೋರಾಟಕ್ಕೆ ಧುಮುಕಿದರು ಕಡೆಗೆ ಚುನಾವಣೆಗೂ ನಿಂತು ಡಿಪಾಜಿಟ್ ಜಪ್ತು ಮಾಡಿಸಿಕೊಂಡರು! ಇಂತಿಪ್ಪ ಕಾರಂತರು ಬರೆದ ಸಾಹಿತ್ಯದಲ್ಲಿ ಒಬ್ಬ ಪ್ರಾಮಾಣಿಕ ಓದುಗನಾಗಿ ರಸದಷ್ಟು ಕಸವೂ ತುಂಬಿಕೊಂಡಿದೆ ಅನ್ನಿಸುತ್ತದೆ.
ಅವರ ಕೆಲವೆ ಕೆಲವು ಮೌಲಿಕ ಕೃತಿಗಳಲ್ಲಿ ಒಂದು "ಬೆಟ್ಟದ ಜೀವ". ಇದರಲ್ಲಿ ಅವರ ಅದ್ವಿತೀಯ ವ್ಯಂಗ್ಯ ಆದಷ್ಟು ಹಿಡಿತದಲ್ಲಿದ್ದು ಕೇವಲ ನೇರ ನಿರೂಪಣಾ ತಂತ್ರದ ಮೂಲಕ ಕಥೆ ಹೆಣೆಯಲಾಗಿದೆ. ತನ್ನ ಕಳೆದು ಹೋದ ದನವೊಂದನ್ನ ಹುಡುಕಿಕೊಂಡು ಕಾಟುಮೂಲೆಯೆಂಬ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷ್ಣಿಣದ ತುದಿಯನ್ನ ಹೋಗಿ ಸೇರುವ ಶಿವರಾಮಯ್ಯ ಈ ಕಾದಂಬರಿಯ ನಾಯಕ. ಕಾಡಿನೊಳಗೆ ಊರು ಬಿಟ್ಟು ಹೋದ ಮಗನ ಮರು ಆಗಮನವನ್ನೆ ಕಾದು ಕುಳಿತ ವೃದ್ಧ ಗೋಪಾಲಯ್ಯ ಹಾಗೂ ಶಂಕರಮ್ಮ ದಂಪತಿಗಳ ಅನಿರೀಕ್ಷಿತ ಅತಿಥಿ ಇವರಾಗುವ ಪ್ರಮೇಯ ಒದಗಿ ಬರುತ್ತದೆ. ಈ ಆತಿಥ್ಯ ನಾನಾ ಕಾರಣದಿಂದ ಸುದೀರ್ಘವಾಗಿ ಪರಿಣಮಿಸಿ ಶಿವರಾಮಯ್ಯನವರಿಗೆ ಕಾಡಿನ ದುರ್ಗಮ ಪರಿಸರದ ನಡುವೆ ಒಂದು ಭರವಸೆಯ ಬದುಕು ಗೋಚರಿಸುತ್ತದೆ. ಪ್ರಕೃತಿ ಹಾಗೂ ಕಾಲ ಒಡ್ಡುವ ಅನೇಕ ಸವಾಲುಗಳನ್ನ ಸಮಚಿತ್ತದಿಂದಲೆ ಎದುರಿಸಿ ನಿಲ್ಲುವ ಜೀವನೋತ್ಸಾಹದ ಸೆಲೆಯೊಂದು ಕಾಣಿಸುತ್ತದೆ.
ಜ್ಞಾನಪೀಠದ ಗೌರವವನ್ನ ಪಡೆದಿರುವ ಕಾರಂತರು "ಬೆಟ್ಟದ ಜೀವ"ವನ್ನ ಕೇವಲ ಕಲ್ಪಿಸಿಕೊಂಡು ಬರೆದದ್ದಲ್ಲ. ಅವರ ಬರಹ ಬಾಳ್ವೆಯ ಅತ್ಯುತ್ತಮ ಕಾದಂಬರಿ ಇದು ಎನ್ನಲು ಅಡ್ಡಿ ಇಲ್ಲ. ಅಕಾಡಮಿ ಪ್ರಶಸ್ತಿಯನ್ನೂ ಗಳಿಸಿರುವ ಈ ಕಾದಂಬರಿ ವಾಸ್ತವದಲ್ಲಿ ಪುತ್ತೂರು ತಾಲೂಕಿನ ಕಡಬದ ಕಾಡಿನಂಚಿನ ಕಳಂಜಿ ಮಲೆಯ ದಟ್ಟ ಕಾಡಿನ ನಡುವೆ ಬದುಕು ಕಟ್ಟಿಕೊಂಡಿದ್ದ ದೇರಣ್ಣ ಗೌಡ ಹಾಗೂ ಗೋವಿಂದಯ್ಯರೆಂಬ ವಯೋ ವೃದ್ಧರ ಬದುಕಿನ ಸುರಮ್ಯ ನಿರೂಪಣೆ ಇದು. ಸ್ವಾತಂತ್ರ್ಯ ಪೂರ್ವ ಕಾಲದ ಸುಳ್ಯ ಹಾಗೂ ಪುತ್ತೂರಿನ ಪರಿಸರವನ್ನ, ಆ ಕಾಲದ ರೀತಿ ರಿವಾಜುಗಳನ್ನ ಅರಿಯಲು ಇದರ ಓದು ಸಹಕಾರಿ. ಇತ್ತೀಚೆಗೆ ಮೂರು ವರ್ಷಗಳ ಹಿಂದೆ ಪ್ರಶಸ್ತಿಗಾಗಿಯೆ ರೀಲು ಸುತ್ತುವ ನಿರ್ದೇಶಕರೊಬ್ಬರು ತಮ್ಮ ಮೂಗಿನ ನೇರಕ್ಕೆ ಈ ಕೃತಿಯನ್ನ ಅದೆ ಹೆಸರಿನಲ್ಲಿ ಸಿನೆಮಾವಾಗಿಸಿ ತೆರೆಗೆ ತಂದು ಒಂದೊಳ್ಳೆಯ ಅನುಭವವಾಗಬಹುದಾಗಿದ್ದ ಕಥೆಯನ್ನ ಕುಲಗೆಡೆಸಿದರು ಅನ್ನುವ ನೋವಿರುವವರು ಕೃತಿಯ ಓದಿನಲ್ಲಿ ಸುಖ ಕಾಣಬಹುದು. ಅಲ್ಲಿ ಓದುಗರ ಕಲ್ಪನೆಗೆ ಇನ್ಯಾರದೆ ನಿರ್ದೇಶನದ ಹಂಗು ಇರಲಾರದು!

No comments:

Post a Comment