"ಮೋಹನಸ್ವಾಮಿ"
ಲೇಖಕ; ವಸುಧೇಂದ್ರ,
ಪ್ರಕಾಶಕರು; ಛಂದ ಪುಸ್ತಕ,
ಪ್ರಕಟಣೆ; ೨೦೧೩,
ಕ್ರಯ; ರೂಪಾಯಿ ೧೮೦.
" ಅದು ಕಾರ್ತೀಕ ಮತ್ತು ರಶ್ಮಿಯ ಮೊದಲ ರಾತ್ರಿ. ಮೋಹನಸ್ವಾಮಿಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲ. ಕಣ್ಣು ಮುಚ್ಚಿದರೆ ಸಾಕು, ಕಾರ್ತೀಕ ಮತ್ತು ರಶ್ಮಿಯ ಮೈಥುನದ ದೃಶ್ಯಗಳು ಅಲೆಅಲೆಯಾಗಿ ನುಗ್ಗಿ ಬರುತ್ತಿದ್ದವು. ಅವರಿಬ್ಬರ ನಗು, ಉತ್ಸಾಹ, ಉನ್ಮಾದಗಳೆಲ್ಲವೂ ಅವನಿಗೆ ಸ್ಪಷ್ಟವಾಗಿ ಕಾಣಿಸುತ್ತಿದ್ದವು, ಕೇಳಿಸುತ್ತಿದ್ದವು.
ಅದೋ ನೋಡಲ್ಲಿ, ಕಾರ್ತೀಕ ತನ್ನೆಲ್ಲವನ್ನೂ ಅವಳಿಗೆ ಅರ್ಪಿಸುತ್ತಿದ್ದಾನೆ. ದೇಹದ ಕಣಕಣವೂ ಈಗವಳ ಸ್ವತ್ತು. ಅವಳೇನು ಬಯಸಿದರೂ ಎತ್ತಿ ಎತ್ತಿ ಕೊಡುತ್ತಿದ್ದಾನೆ. ಅವನ ಮುಖ ನೋಡು, ಅದೆಷ್ಟು ಖುಷಿಯಿಂದ ಕೂಡಿದೆ. ಅವಳದೊಂದು ಸ್ಪರ್ಶಕ್ಕೆ ಯಾವ ತ್ಯಾಗಕ್ಕಾದರೂ ಸಿದ್ಧವಾಗಿದ್ದಾನೆ. ಅವನಿಗೆ ಈ ಸದ್ಯಕ್ಕೆ ಜಗತ್ತಿನ ಯಾವ ಸಂಗತಿಗಳೂ ಬೇಕಿಲ್ಲ.
ಇಲ್ಲ, ನಾನಿದನ್ನೆಲ್ಲಾ ಯೋಚಿಸುವುದಿಲ್ಲ. ನನ್ನದು ಅತ್ಯಂತ ಕೊಳಕಾದ ಮನಸು. ಅದು ಅವನ ಬದುಕು, ಅವನ ಬಯಕೆ. ನನಗೆ ಸಂಬಂಧಿಸಿದ್ದಲ್ಲ.
ಅದೋ ನೋಡಲ್ಲಿ, ರಶ್ಮಿಯ ಆ ತುಂಬು ಸ್ತನಗಳು ಅವನನ್ನು ಹೇಗೆ ಉನ್ಮತ್ತವಾಗಿಸಿವೆ. ಎಷ್ಟು ಮುಟ್ಟಿದರೂ, ಹೇಗೆ ಮುಟ್ಟಿದರೂ ಅವನ ಬಯಕೆ ತೀರುತ್ತಿಲ್ಲ. ಹೇಗೆ ಖುಷಿಯ ಧಾಳಿಗೆ ಕಂಗಾಲಾಗಿ ಕಣ್ಣನ್ನು ಮುಚ್ಚುತ್ತಿದ್ದಾನೆ ನೋಡು. ಸುಖ ಸೂರೆಗೊಳ್ಳುವುದು ಅದೆಷ್ಟು ಬಗೆ. ಒಮ್ಮೆ ಮೃದುವಾಗಿ, ಒಮ್ಮೆ ಶಕ್ತಿಯನ್ನೆಲ್ಲಾ ಸೇರಿಸಿ ಕಠಿಣವಾಗಿ, ಮಗದೊಮ್ಮೆ ಹಾಗೇ ಸುಮ್ಮನೆ, ಇನ್ನೊಮ್ಮೆ...
ಬೇಡ, ಪ್ಲೀಜ್ ಬೇಡ. ಇವೆಲ್ಲಾ ಕೆಟ್ಟ ದೃಶ್ಯಗಳು ನನ್ನ ಕಣ್ಣಿಂದ ಮರೆಯಾಗಲಿ. ನನಗೆ ಸುಮ್ಮನೆ ಸುಖವಾಗಿ ನಿದ್ದೆ ಬರಲಿ. ಕನಸಿನಲ್ಲಿಯೂ ಅವನು ಬರುವುದು ಬೇಡ. ಇನ್ನೆಂದೂ ನನಗೆ ಅವನ ಸ್ಪರ್ಶವೂ ಬೇಡ, ನೆನಪೂ ಬೇಡ.
ನೋಡು ನೋಡು, ಕಾರ್ತೀಕ ಹೇಗೆ ಮುತ್ತಿನ ಮಳೆಗರೆಯುತ್ತಿದ್ದಾನೆ. ದೇಹದ ಯಾವ ಭಾಗವನ್ನೂ ಬಿಡುತ್ತಿಲ್ಲ. ಯಾವ ಮೂಲೆಗಳೂ ಅವನಿಗೆ ಅಸಹ್ಯ ಬರಿಸುವುದಿಲ್ಲ. ಬರೀ ಒಮ್ಮೆ ಮುತ್ತಿಟ್ಟರೆ ಬಯಕೆ ತೀರುವುದೂ ಇಲ್ಲ. ಮತ್ತೆ ಮತ್ತೆ, ಇನ್ನೊಮ್ಮೆ ಮಗದೊಮ್ಮೆ. ಮುತ್ತಿನ ಧಾಳಿಗೆ ನೋಡವಳು ಹೇಗೆ ಖುಷಿಯಿಂದ ನರಳುತ್ತಿದ್ದಾಳೆ. ತನ್ನ ಓರೆಕೋರೆಗಳನ್ನು ಅವನಿಗೆ ಅನುಕೂಲವಾಗುವಂತೆ ಹೇಗೆ ಒಪ್ಪಿಸುತ್ತಿದ್ದಾಳೆ. ಅವನಿಗೀಗ ಅರ್ಥವಾಗಿ ಹೋಗಿದೆ. ಇದು ಅಪ್ಪಟ ಬಂಗಾರ. ಅಪರಂಜಿ. ಇಷ್ಟು ದಿನ ಕಾಗೆ ಬಂಗಾರವನ್ನು ನಂಬಿದ್ದೆನಲ್ಲಾ ಎಂದು ಪಶ್ಚಾತ್ತಾಪವಾಗುತ್ತಿದೆ.
ಕಾರ್ತೀಕ್, ಪ್ಲೀಜ್, ಹಾಗನ್ನಬೇಡ. ಅದು ಅನ್ಯಾಯ. ಐ ಹೇಟ್ ಯು. ನನಗೂ ಚೂರು ಬದುಕಲು ಬಿಡು. ನನ್ನನ್ನು ಕ್ರಿಮಿಯಾಗಿ ನೋಡಬೇಡ. ನಾನೆಂದೂ ನಿನಗೆ ವಂಚನೆ ಮಾಡಿಲ್ಲ.
ಅವಳ ಗಂಜಲದ ಗುಂಡಿಯಲ್ಲಿ ಮುಖವಿಟ್ಟು ನಲಿಯುವ ಅವನಿಗೆ ಇನ್ನೆಂದೂ ಅವಳಿಂದ ರಹಸ್ಯಗಳನ್ನು ಮುಚ್ಚಿಡುವುದು ಸಾಧ್ಯವಿಲ್ಲ. ಒಂದೆರಡೇ ದಿನವಷ್ಟೇ! ಎಲ್ಲವನ್ನೂ ಹೇಳಿ ಬಿಡುತ್ತಾನೆ. ನಿನ್ನ ವಿಕೃತಿಗಳನ್ನೆಲ್ಲಾ ತೆರೆದಿಟ್ಟುಬಿಡುತ್ತಾನೆ. ಅದೆಷ್ಟು ಸಿಲ್ಲಿ ಎಂದು ನಗುತ್ತಾನೆ. ಅವಳಿಗೆ ಅಚ್ಚರಿ, ಅಸಹ್ಯ. ನೀನೀಗ ಅವಳ ಕಣ್ಣಲ್ಲಿ ಕ್ಷುಲ್ಲಕ. ಮುಂದೆ ಎಲ್ಲೇ ನಿನ್ನ ನೋಡಿದರೂ ಸಾಕು, ಮುಸಿ ಮುಸಿ ನಗಲು ಶುರುವಿಡುತ್ತಾಳೆ. ಅವನೂ ಆ ನಗುವಿಗೆ ಪ್ರೋತ್ಸಾಹ ಕೊಡುತ್ತಾನೆ. ಅವಳು ತನ್ನ ನಗುವಿನ ಕಾರಣವನ್ನು ಉಳಿದವರಿಗೂ ಹೇಳಿಬಿಡುತ್ತಾಳೆ. ಅವರೂ ನಗುತ್ತಾರೆ. ನೀನು ಹೊರಗೆ ಕಾಲಿಟ್ಟರೆ ಸಾಕು, ತಮಾಷೆ, ನಗು ನಿನ್ನನ್ನು ಅಟ್ಟಿಸಿಕೊಂಡು ಬರುತ್ತವೆ. ನೀನು ಇಂದಿನಿಂದ ಸಮಾಜದ ಬಹು ದೊಡ್ಡ ಕುಚೋದ್ಯವಾಗುತ್ತೀಯ. ದಿನದಿನಕ್ಕೆ ನಿನ್ನ ಅಂತಃಶಕ್ತಿ ಕುಸಿಯುತ್ತದೆ. ದೇಹ ಹಿಡಿಯಾಗುತ್ತದೆ. ಬೇಕಿದ್ದರೆ ನೋಡುತ್ತಿರು, ಕೆಲವೇ ದಿನಗಳಲ್ಲಿ ನೀನು ನಿಶ್ಯೇಷನಾಗುತ್ತೀಯ. ಆದರೆ ಅದಕ್ಕೆ ಯಾರಿಗೂ ಬೇಸರವಾಗುವುದಿಲ್ಲ. ಏಕೆಂದರೆ ಯಾರಿಗೂ ನೀನು ಮಹತ್ವದವನಲ್ಲ. ಕ್ಷುಲ್ಲಕ ಹುಳು. ಬೇಡದ ಕ್ರಿಮಿ. ಪಟ್ಟೆಂದು ಕೈಯಲ್ಲಿ ಹೊಡೆದು ಸಾಯಿಸಿದರೆ ಅವರಿಗೆ ಕಿರಿಕಿರಿ ಕಡಿಮೆ.
ಇಲ್ಲ, ಇಲ್ಲ. ನಾನೂ ಬದುಕುತ್ತೀನಿ. ನನಗೂ ಅವಕಾಶ ಕೊಡಿ. ಈ ಕಾಮದ ಸಹವಾಸವೇ ಬೇಡ. ಅದು ಬರೀ ನೋವನ್ನು ಕೊಡುತ್ತದೆ. ಸುಮ್ಮನೆ ಬದುಕುತ್ತೇನೆ. ಊಟ, ಕೆಲಸ, ನಿದ್ದೆ. ಅಷ್ಟೇ! ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡಿ. ಎಷ್ಟೇ ನೋವಾದರೂ ಚಿಂತೆಯಿಲ್ಲ, ಕಾಮದಿಂದ ದೂರವಿರುತ್ತೇನೆ. ಕಾಮವನ್ನು ಜಯಿಸಿ ಬದುಕುತ್ತೇನೆ. ನಿನ್ನ ಸೃಷ್ಟಿಯನ್ನೇ ವಿರೋಧಿಸುತ್ತೇನೆ.
ಅಯ್ಯೋ ಮೂರ್ಖ, ಸಲ್ಲದ ಸಂಗತಿಗಳನ್ನು ಧ್ಯಾನಿಸಬೇಡ. ಸುಮ್ಮನೆ ಮನಸ್ಸಿನಲ್ಲಿ ಕಾರ್ತೀಕನ ಬೆತ್ತಲೆ ದೇಹದ ಕಲ್ಪನೆಗೇ ಹೇಗೆ ನಿನ್ನ ಮೈಯೆಲ್ಲಾ ಉದ್ರೇಕದಿಂದ ಉನ್ಮತ್ತವಾಗಿದೆ ನೋಡು. ಅವನ ಒಂದು ನಗೆ ಸಾಕು, ನಿನ್ನ ಎಲ್ಲಾ ನಿರ್ಧಾರಗಳನ್ನು ಅಲ್ಲಾಡಿಸಿಬಿಡಲು. ಅವನ ಒಂದು ನಡೆ ಸಾಕು, ನಿನ್ನನ್ನು ಅವನ ದಾಸನನ್ನಾಗಿ ಮಾಡಲು. ಅವನ ಕಡೆದಿಟ್ಟ ನಿಲುವು ಸಾಕು, ನಿನ್ನತನವನ್ನು ನಿರ್ನಾಮ ಮಾಡಲು. ಬರೀ ಅವನ ಆಳಾಗಲು ಸರಿ ನೀನು. ಅವನು ಹೇಳಿದ್ದನ್ನು ಮಾಡುತ್ತಾ, ಅವನು ಹೊಡೆದರೆ ಹೊಡೆಸಿಕೊಳ್ಳುತ್ತಾ, ಬಯ್ದರೆ ಬೈಸಿಗೊಳ್ಳುತ್ತಾ, ಎಂದಾದರೊಮ್ಮೆ ನಿನ್ನನ್ನು ಪ್ರೀತಿಯಿಂದ ಮುಟ್ಟಿಯಾನೋ ಎಂಬ ಬಯಕೆಯಲ್ಲಿ ಕಾದು ಕಾದು ಕಾದು... ಊಹೂಂ, ಅವನು ನಿನ್ನ ಕಾಡುತ್ತಲೇ ಹೋಗುತ್ತಾನೆ. ನಿನ್ನ ಬೆಳಗು, ಮಧ್ಯಾಹ್ನ, ರಾತ್ರಿಗಳಲ್ಲೆಲ್ಲಾ ಕೈಗೆ ಸಿಗದಂತೆ ನಿನ್ನನ್ನು ಆಟವಾಡಿಸುತ್ತಾನೆ. ಹಿಡಿಯಲು ಹೋಗಿ ಹೋಗಿ ಸಿಗದೆ ಹತಾಶನಾಗಿ ನೀನು ನಿತ್ರಾಣವಾಗುತ್ತೀಯ. ಅವನು ಬೇಕೇ ಬೇಕೆಂದು ಗೋಗರೆಯುತ್ತೀಯ. ದುಃಖ ಪಡುತ್ತೀಯ. ಆದರೆ ನಿನ್ನ ದುಃಖ ಯಾರಿಗೂ ಅರ್ಥವಾಗುವುದಿಲ್ಲ. ಅದು ತಮಾಷೆಯ ಸಂಗತಿಯಾಗುತ್ತದೆ. ದುಃಖವೇ ತಿಳಿಯದವರ ಮುಂದೆ ಅದು ಹೇಗೆ ನೋವನ್ನು ತೋಡಿಕೊಳ್ಳುತ್ತೀಯ?
ಅಪ್ಪ, ಅಮ್ಮ, ಅಕ್ಕ, ಅಣ್ಣ, ಸ್ನೇಹಿತ, ಸಹೋದ್ಯೋಗಿ, ಗುರು, ಸೇವಕ, ಸಮಾಜ, ಕೋರ್ಟು, ಕಛೇರಿ, ಜಗತ್ತು – ಊಹೂಂ, ಯಾರೂ ನಿನ್ನನ್ನು ಒಪ್ಪುವುದಿಲ್ಲ. ಎಲ್ಲರ ಕಣ್ಣಲ್ಲಿಯೂ ನೀನು ಪರಮ ನೀಚ. ಯಾರಿಗೂ ನಿನ್ನ ಮೇಲೆ ಹನಿ ಕನಿಕರವೂ ಮೂಡುವುದಿಲ್ಲ. ಯಾವುದೇ ಕಟಕಟೆಯಲ್ಲಿ ನಿಂತು ಗೋಗರೆದರೂ ನೀನು ತಪ್ಪಿತಸ್ಥನಾಗುತ್ತೀಯ.
ಬೇಡ, ಬೇಡ. ಈ ಕೆಟ್ಟ ಆಲೋಚನೆಗಳು ನನಗೆ ಬೇಡ. ನನಗೆ ಒಂದಿಷ್ಟು ನಿದ್ದೆ ಸಾಕು. ಹೇ ಕೃಷ್ಣಾ, ನಿನ್ನನ್ನು ಮನಃಪೂರ್ವಕವಾಗಿ ಆರಾಧಿಸಿದ್ದೇನೆ, ಪ್ರೀತಿಸಿದ್ದೇನೆ. ನಿನ್ನ ಈ ಗೋಪಬಾಲನಿಗೆ ಇಂತಹ ಕಠಿಣ ಶಿಕ್ಷೆ ಕೊಡಬೇಡ. ಕಾಪಾಡು. ಒಂದಿಷ್ಟಾದರೂ ಕರುಣೆ ತೋರು. ನೋವಿನ ಮಡುವಿನಲ್ಲಿ ಮುಳುಗುತ್ತಿರುವ ನನಗೆ ನಿನ್ನ ರಕ್ಷಣೆ ಒದಗಿಸು. ಬೇಡವೆನ್ನಿಸಿದರೆ ನನ್ನನ್ನು ಈ ಕ್ಷಣದಲ್ಲಿಯೇ ನಿರ್ನಾಮ ಮಾಡಿಬಿಡು. ನಿನ್ನೆಡೆಗೆ ಕರೆದುಕೊಂಡು ಬಿಡು. ಸತ್ತರೆ ಅಳುವವರು ಯಾರೂ ಇಲ್ಲವೋ ತಂದೆ. ಜೀವ ಹಿಂಡುವ ನೋವೂ ಪರರ ಕಣ್ಣಲ್ಲಿ ಕ್ಷುಲ್ಲಕವಾಗುವ ಈ ಹೀನ ಅವಸ್ಥೆ ನನಗೆ ಅದೇಕೆ ಕೊಟ್ಟಿರುವೆಯೋ ಗೆಳೆಯ. ಯಾರು ಮಾಡಿದ ಪಾಪಕ್ಕೆ ನನಗೆ ಈ ಶಿಕ್ಷೆಯೋ ಮಿತ್ರ?
ಹೋಗಲಿ ಬಿಡು, ನೀನು ಸಹಾಯ ಮಾಡುವುದಿಲ್ಲವಲ್ಲವೆ? ಸುಮ್ಮನೆ ಕೆಲಸಕ್ಕೆ ಬಾರದ ಆ ಕೊಳಲನ್ನೂದುತ್ತಿರುವೆಯಲ್ಲವೆ? ನನ್ನ ನೋವಿಗೆ ನಾನು ಪರಿಹಾರ ಕಂಡುಕೊಳ್ಳುತ್ತೇನೆ. ನನಗೆ ತಿಳಿದಂತೆ ನಾನು ವರ್ತಿಸುತ್ತೇನೆ. ಇಕೋ ನೋಡಲ್ಲಿ, ಫಳ ಫಳ ಹೊಳೆಯುವ ಚಾಕು. ನೀನು ಸೃಷ್ಟಿಸಿದ ದೇಹವನ್ನು ಹೇಗೆ ಕತ್ತರಿಸುತ್ತಿದೆ ನೋಡು. ಹೆಬ್ಬರಳಿನ ತುದಿಯನ್ನು ಕತ್ತರಿಸಲು ಅದಕ್ಕೆ ಎಷ್ಟೊಂದು ಉತ್ಸಾಹ ನೋಡು. ಅಕೋ ನೋಡಲ್ಲಿ, ಬಳಬಳನೆ ರಕ್ತ ಸುರಿಯುತ್ತಿದೆ. ನನ್ನ ರಕ್ತವೂ ಕಾರ್ತೀಕನದಂತೆ ಕೆಂಪಗಿದೆಯೋ, ಅನುಮಾನ ಬೇಡ. ನಿನಗೆ ನಂಬಿಕೆಯಾಗುತ್ತಿಲ್ಲವಲ್ಲವೆ? ತೊಗೋ, ಅದರದೇ ಅಭಿಷೇಕ ನಿನಗೆ. ಬರೀ ಹಾಲು, ಮೊಸರು, ಜೇನುತುಪ್ಪಗಳ ಸ್ನಾನವನ್ನು ಈವರೆಗೆ ಮಾಡಿದ್ದಿಯಲ್ಲವೇ? ಈ ದಿನ ರಕ್ತದ ರುಚಿಯನ್ನು ನೋಡು. ಬಿಡು ಬಿಡು, ಅದೂ ನಿನಗೆ ಹೊಸತಲ್ಲ.
ಪ್ರತಿಬಾರಿ ಅವತಾರವೆತ್ತಿ ಈ ಭೂಮಿಗೆ ಬಂದಾಗಲೂ ರಕ್ತದೋಕಳಿಯಲ್ಲಿ ಮುಳುಗಿ ತೇಲಿದ್ದೀಯ. ದುಷ್ಟ ಸಂಹಾರವೆಂದು ಕರೆದು ನಿನ್ನ ಮರ್ಯಾದೆ ಉಳಿಸಿಕೊಂಡಿದ್ದೀಯ. ಹತ್ತು ಅವತಾರ ಮುಗಿಸಿದ್ದೀಯಲ್ಲವೆ? ಅದರ ಬಗ್ಗೆ ಅಪಾರ ಹೆಮ್ಮೆ ನಿನಗಿದೆಯಲ್ಲವೆ? ಹನ್ನೊಂದನೆಯ ಅವತಾರಕ್ಕೆ ತುದಿಗಾಲಲ್ಲಿ ನಿಂತಿದ್ದೀಯಲ್ಲವೆ? ಹಾಗಿದ್ದರೆ ನಿನಗೊಂದು ಶಾಪ ಕೊಡುತ್ತಿದ್ದೇನೆ. ಸ್ವೀಕರಿಸು. ನಿನ್ನ ಹನ್ನೊಂದನೆಯ ಅವತಾರದಲ್ಲಿ ನನ್ನಂತೆ ಹುಟ್ಟು. ಹದಿನಾರು ಸಾವಿರ ಹೆಣ್ಣುಗಳನ್ನು ಅನುಭೋಗಿಸಿದ ನಿನಗೆ ಒಂದೂ ಹೆಣ್ಣನ್ನು ಮುಟ್ಟಲಾಗದ ದುಃಖ, ಅಸಹಾಯಕತೆಯ ಅರಿವಾಗಲಿ. ಯಾರನ್ನೂ ಕೈ ಎತ್ತಿ ಹೊಡೆಯಲೂ ಸಾಧ್ಯವಾಗದ ಈ ನಿತ್ರಾಣ ಬದುಕಿನಲ್ಲಿ ಅದು ಹೇಗೆ ದುಷ್ಟ ಸಂಹಾರ ಮಾಡುತ್ತೀಯೋ ನಾನೂ ನೋಡುತ್ತೇನೆ. ನೊಂದ ಮನಸ್ಸಿನ ಶಾಪ ನಿನಗೆ ತಟ್ಟಿಯೇ ತೀರುತ್ತದೆ. ಮತ್ತೊಮ್ಮೆ ಹುಟ್ಟಿ ಬಾ. ಜನರ ಕಣ್ಣುಗಳಲ್ಲಿ ಕ್ಷುಲ್ಲಕನಾಗು. ಇನ್ನೊಬ್ಬರಿಗೆ ತಟ್ಟದ ನೋವನ್ನು ಏಕಾಂಗಿಯಾಗಿ ಅನುಭವಿಸು."
- ವಸುಧೇಂದ್ರ.
" ಈ 'ಮೋಹನಸ್ವಾಮಿ'ಯನ್ನ ಬರೆದ ನಂತರ ನಾನು ನನ್ನ ಅನೇಕ ಹಿಂದಿನ ಹಿರಿಯ ಓದುಗರನ್ನ ಏಕಾಏಕಿ ಕಳೆದುಕೊಂಡೆನಾದರೂ ಹದಿವಯಸ್ಸಿನ ಹೊಸ ಓದುಗರನೇಕರು ಈಗ ನನ್ನ ಅಭಿಮಾನಿ ಓದುಗರಾಗಿದ್ದರೆ" ಎನ್ನುವ ವಸುಧೇಂದ್ರರು ಮೂಲತಃ ಅನುವಾದಕರಾಗಿ ಬರಹ ಪ್ರಪಂಚಕ್ಕೆ ಕಾಲಿಟ್ಟವರು. ಅವರು ಅನುವಾದಿಸಿದ ತೆಲುಗಿನ ಕೃತಿ ಶ್ರೀರಮಣರ ಮಿಥುನದ ಯಶಸ್ಸು ಅವರನ್ನ ಗಂಭೀರವಾಗಿ ಬರಹ ಕ್ಷೇತ್ರದಲ್ಲಿ ಕಾಲೂರುವಂತೆ ಮಾಡಿತು. ೧೯೯೭ರ ಸಾಲಿನ 'ಅಂಕಿತಾ - ವಿಜಯ ಕರ್ನಾಟಕ' ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ತನ್ನದಾಗಿಸಿಕೊಂಡ ನಂತರ ಅವರು ಸಾಹಿತ್ಯ ಕ್ಷೇತ್ರದಲ್ಲಿ ಏಕಾಏಕಿ ಆಕರ್ಷಣೆಯನ್ನ ಪಡೆದರು. ಅನಂತರ ಅವರು ಬರೆದ್ದದ್ದನ್ನೆಲ್ಲ ಕನ್ನಡಿಗ ಓದುಗರು ಆದರಭಿಮಾನಗಳಿಂದ ಸ್ವೀಕರಿಸಿ ಮನ್ನಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸಾಹಿತ್ಯಕ್ಕೆ ತಮ್ಮನ್ನ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ವಸುಧೇಂದ್ರ ತಮ್ಮ ಆರಂಭಿಕ ಪ್ರಕಟಣೆಯನ್ನ ಹೊರತರುವ ಕಸರತ್ತಿನಿಂದ ಬೇಸತ್ತು, ಅದೆ ಬಗೆಯ ತೊಂದರೆ ಅನುಭವಿಸುವ ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 'ಛಂದ ಪುಸ್ತಕ'ವನ್ನ ಆರಂಭಿಸಿದ್ದಾರೆ. ಆವರದ್ದೆ ನಾಲ್ಕು ಕಥಾ ಸಂಕಲನ, ಐದು ಸುಲಲಿತ ಪ್ರಬಂಧ ಸಂಗ್ರಹ, ಒಂದು ಕಾದಂಬರಿ, ಕೇಳುವ ಪುಸ್ತಕ ಹಾಗೂ ಬ್ರೈಲ್ ಕಾದಂಬರಿಗಳ ಜೊತೆಗೆ ಹೆಚ್ಚು ಕಡಿಮೆ ಐವತ್ತರ ತನಕ ಇನ್ನಿತರ ನವ ಬರಹಗಾರರ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಅವರ "ಛಂದ ಪುಸ್ತಕ"ದ ಮಳಿಗೆಯನ್ನ ಅಲ್ಲಿ ಕಾಣಬಹುದು.
ಮೂಲತಃ ಬಿಸಿಲ ನಾಡು ಬಳ್ಳಾರಿಯ ಸಂಡೂರಿನವರಾದ ವಸುಧೇಂದ್ರರ ಬರಹಗಳ ಸಾಮಾನ್ಯ ಆಡುನುಡಿ ಬಳ್ಳಾರಿಯ ಆಡುಗನ್ನಡದ ಧಾಟಿಯಲ್ಲಿಯೆ ಇರುತ್ತವೆ ಹಾಗೆಯೆ ಅವರು ಬಳಸುವ ಪಾರಿಭಾಷಿಕ ಪದಗಳೂ ಸಹ ಬಳ್ಳಾರಿ ಸೀಮೆಯ ಘಮವನ್ನೆ ಹೊಂದಿರುತ್ತವೆ. ಸುರತ್ಕಲ್'ನ ಕರ್ನಾಟಕ ಕೇಂದ್ರೀಯ ತಂತ್ರಜ್ಞ ಸಂಸ್ಥೆಯಲ್ಲಿ ಬಂಗಾರದ ಪದಕದೊಂದಿಗೆ ತಮ್ಮ ಬಿ'ಟೆಕ್ ಮುಗಿಸಿದ ಅವರು ಅನಂತರ "ಭಾರತೀಯ ವಿಜ್ಞಾನ ಸಂಸ್ಥೆ"ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಸಾಹಿತಿಯಾಗಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಎರಡು ದಶಕಗಳ ಸುದೀರ್ಘ ಗಣಕ ತಂತ್ರಜ್ಞನಾಗಿ ದುಡಿದ ಅನುಭವವಿರುವ ಅವರು ಅನೇಕ ಬಹುರಾಷ್ಟ್ರೀಯ ಸಂಶ್ತೆಗಳಲ್ಲಿ ತಂತ್ರಜ್ಞನಾಗಿ ದುಡಿದಿದ್ದಾರೆ. "ಝೆನೆಸಿಸ್ ಸಾಫ್ಟ್'ವೇರ್" ಸಂಸ್ಥೆಯ ಉಪಾಧ್ಯಕ್ಷರಾಗಿಯೂ ದುಡಿದಿದ್ದಾರೆ.
ಮೋಹನಸ್ವಾಮಿ ಮೂಲತಃ ಒಂದು ಕಥಾ ಸಂಗ್ರಹ. ಇದರ ಬಹುತೇಕ ಕಥೆಗಳು ಮಾತನಾಡುವುದು ಸಲಿಂಗ ಸಂಬಂಧಗಳ ಕುರಿತು. ಬಹುತೇಕ ಆತ್ಮ ನಿವೇದನೆಯ ಧಾಟಿಯಲ್ಲಿರುವ ಕಥೆಗಳನ್ನ ಬರೆದ ಲೇಖಕರ ಕೆಚ್ಚನ್ನ ನಾವು ಮೆಚ್ಚದಿರಲು ಕಾರಣಗಳೆ ಇಲ್ಲ. ಇಬ್ಬರು ಗಂಡಸರ ನಡುವೆ ಕಾಮದ ಸಂಬಂಧ ಇರಬಹುದು, ಸಮ ಲಿಂಗಿಗಳ ಮಧ್ಯೆ ದೈಹಿಕ ಸಂಬಂಧ ನಡೆದಿರಬಹುದು ಎನ್ನುವುದನ್ನ ಕಲ್ಪಿಸಿಕೊಳ್ಳಲೂ ಅರಿಯದ ಮನಸ್ಸುಗಳು ಇದರ ಬಗ್ಗೆ ಮೂಗು ಮುರಿದರೆ, ಇದೆಲ್ಲದರ ಸ್ಪಷ್ಟ ಅರಿವಿಟ್ಟುಕೊಂಡೆ ತಾವೂ ಅಲ್ಲೊಮ್ಮೆ ಇಲ್ಲೊಮ್ಮೆ ಅದರ ಸವಿ ಅನುಭವಿಸಿದ್ದರೂ ಸಹ ಆಶಾಡಭೂತಿಗಳಂತೆ ಇಂತಹ ಕೃತಿಗಳನ್ನ ಹಿಯ್ಯಾಳಿಸುವವರ ಗುಂಪೊಂದು ಸಾಹಿತ್ಯದ ಸೃಜನಶೀಲರ ನಡುವೆ ಒಂದಿದೆ. ಹೀಗಾಗಿಯೆ ಬಹುಷಃ ಕನ್ನಡದ ಯಾವೊಂದು ವೃತ್ತ ಪತ್ರಿಕೆಗಳೂ ಈ ಪುಸ್ತಕವನ್ನ ವಿಮರ್ಶಿಸುವ ಗೋಜಿಗೆ ಹೋಗಿಲ್ಲ! ಈ ಬಗ್ಗೆ ಸ್ವತಃ ವಸುಧೇಂದ್ರರಿಗೂ ವಿಷಾದವಿದೆ.
ಈ ಅಸ್ಪರ್ಶ್ಯತೆ ಹಾಗೂ ಹುಸಿ ಮಡಿವಂತಿಕೆಗಳ ನಾಟಕವದೇನೆ ಇರಲಿ ಪ್ರೇಮ ಹಾಗೂ ಕಾಮದ ಅಸಲಿಯತ್ತನ್ನ ಹಸಿಹಸಿಯಾಗಿಯೆ ಓದುಗರ ಮನಸ್ಸಿಗೆ ದಾಟಿಸುವ ಲೇಖಕರ ಒಳ ಉದ್ದೇಶ ಹಾಗೂ ಇದರಿಂದ ಸಾಮಾಜಿಕವಾಗಿ ಎದುರಾಗಬಹುದಾದ ತಿರಸ್ಕಾರಗಳನ್ನ ಮುಲಾಜಿಲ್ಲದೆ ಉಪೇಕ್ಷಿಸಿ ಮುನ್ನಡೆಯುವ ಅವರ ಆತ್ಮಸ್ಥೈರ್ಯ ಮಾತ್ರ ಅಭಿನಂದನೀಯ. ಇದು ಕೇವಲ ಪುಸ್ತಕ ಪರಿಚಯವಾಗಿರುವುದರಿಂದ ವಿಸ್ಕೃತವಾಗಿ ಇದರ ಪ್ರತಿಯೊಂದು ಕಥೆಯನ್ನೂ ನಾನು ವಿಮರ್ಶಿಸಲು ಹೋಗಿಲ್ಲ. ಅವರವರ ಲೈಂಗಿಕ ಅಭಿರುಚಿಗಳು ಅವರವರವೆ ಖಾಸಗಿ ವಿಷಯಗಳು. ಅದರಲ್ಲಿ ಮೂಗು ತೂರಿಸಿ ವಿಕೃತವಾಗಿ ಅದನ್ನ ವಿಶ್ಲೇಷಿಸುವ ಮನಸ್ಸುಗಳೆಲ್ಲ ಒಂದು ಬಾರಿಯಾದರೂ "ಮೋಹನಸ್ವಾಮಿ"ಯನ್ನ ಓದಬೇಕು ಹಾಗೂ ಬಹಿರಂಗವಾಗಿ ಆ ಕೃತಿಯ ಬಗ್ಗೆ ಚರ್ಚಿಸುವ ಛಾತಿಯನ್ನ ಬೆಳೆಸಿಕೊಳ್ಳಬೇಕು. ಆದರೆ ಈ ಹೇಳಿಕೆ ಈಗಾಗಲೆ ಕದ್ದುಮುಚ್ಚಿ ಇದನ್ನ ಓದಿದ್ದರೂ ಸಹ ಏನೂ ಅರಿಯದ ಸುಭಗರಂತೆ ಸೋಗು ಹಾಕುವ ತೋರಿಕೆಯ ಸುಸಂಸ್ಕೃತರಿಗೆ ಖಂಡಿತಾ ಅನ್ವಯಿಸುವುದಿಲ್ಲ!"
No comments:
Post a Comment