Tuesday, July 9, 2013

ಮುಂಗಾರಿನ ತಹತಹಿಕೆಯಲ್ಲಿ ಆಷಾಢ ವಿರಹದ ಆತಂಕವೂ ಮಡುಗಟ್ಟಿದೆ.....

ಬಾಳ ಮಡುವಿನಲ್ಲಿ ಸುಳಿಯಿರುವ ಬಗ್ಗೆ
ಮೊದಲೆ ಖಚಿತ ಸುಳಿವಿದ್ದಿದ್ದರೆ.....
ಅದರಲ್ಲಿ ಈಜುವ ಧೈರ್ಯವನ್ನೆ
ಬಹುಶಃ ನಾನು ಮಾಡುತ್ತಿರಲಿಲ್ಲವೇನೊ,
ಕನಸುಗಳೆಲ್ಲ
ಕನಸುಗಳಾಗಿಯೆ ಉಳಿದು ಹೋದ ವಿಷಾದಕ್ಕೆ....
ಕಂಬನಿಯ ಕೊನೆ ಹನಿಯೊಂದೆ ಅತ್ಯಾಪ್ತ ಮಿತ್ರ/
ಎಂದೆಂದೂ ಮುಗಿಯದ ದಾರಿಯಂಚಿನಲ್ಲಿ
ನೀನೆ ಅನಾಥವಾಗಿ ಬಿಟ್ಟು ನಡೆದ ನಿನ್ನೆಲ್ಲ ಕನಸುಗಳ ಬಗ್ಗೆ.....
ನೀನೆಂದಿಗೂ ತೃಣ ಮಾತ್ರವೂ ಚಿಂತಿಸಲೆಬೇಡ,
ಅವೆಲ್ಲ ನನ್ನ ಮನದಾಳದಲ್ಲಿ
ಸದಾಕಾಲ ಬೆಚ್ಛಗಿರಲಿವೆ.//


ನೆಲಕೆ ಸುರಿವ ಹನಿ ಹನಿಯ ಎದೆಯಾಳದಲ್ಲಿ
ಬಾನ ತೊರೆದ ವಿರಹದ ನೋವಿನ ಪಸೆ.....
ಗಾಢವಾಗಿ ಹುದುಗಿದ್ದು ಇನ್ನೂ ಆರಿಲ್ಲ,
ಸಣ್ಣಗೆ ಹನಿವ ಮಳೆಯ ಗುಂಗಿನಲ್ಲಿ
ಲೀನವಾಗಿರುವ ಮನಕ್ಕೆ....
ಮೌನದ ಪರದೆ ಹೊದಿಸಲಾಗಿದೆ/
ಇನ್ಯಾರಿಗೆ ಹೇಗೋ ಒಲವ ಭಾವ ಗೊತ್ತಿಲ್ಲ
ನನ್ನ ಪಾಲಿಗೆ ನೆನ್ನೆ ಇಂದು ನಾಳೆ....
ಕೇವಲ ನೀನು ಮಾತ್ರ,
ನೀನೆಂದೆಂದಿಗೂ ಕಾಲಿಡದ
ನನ್ನ ಮನದೊಳಮನೆಯ ತಲೆ ಬಾಗಿಲಿಗೆ ಇಟ್ಟ ರಂಗೋಲಿಯನ್ನ....
ನಿನ್ನ ಪಾದದ ಅಚ್ಛೆ ಒರೆಸಲಿ ಅಂತಲೆ ಕಾದಿರುವ
ನನ್ನದು ವಾಸಿಯಾಗದ ಹುಚ್ಚಲ್ಲವ?.//


ಅದೇನೆ ಇದ್ದರೂ ನಿನ್ನ ನೆನಪ ನೋವಿನಲ್ಲೂ
ಹಿತದ ಗರಿ ತೀಡುತ್ತದೆ....
ನನ್ನೆದೆಯ ಮೌನವನ್ನದು ನೇವರಿಸಿ
ಸಂಕಟ ಕೊಟ್ಟಾದರೂ ಕಾಡುತ್ತದೆ,
ಮರೆಯದೆ ಪ್ರತಿಕ್ಷಣ ನಿನ್ನ ನೆನೆಯುವ ನಾನು
ಮೂಢನೋ ಇಲ್ಲಾ ಕೈ ಸಿಗದ ಮಾಯಾಮೃಗದ ಬೆನ್ನು ಹತ್ತಿದ....
ಮರುಳ ಬೇಡನೋ?
ಗೊಂದಲ ಜಾರಿಯಲ್ಲಿದೆ/
ಕಡಲತಡಿಯ ಮೌನದಲ್ಲಿ
ಬೀಸುವ ಗಾಳಿಯದ್ದೆ ದರ್ಬಾರು....
ಅಲ್ಲಿ ದೂರದಲ್ಲಿ ನಡುಗಡಲಲ್ಲಿ ಮಿನುಗುವಂತೆ ಕಾಣುತ್ತಿರೋದು ಯಾರು?
ನೀನೇನ? ಇಲ್ಲಾ ನಿನ್ನ ನೆನಪ ಹೊಳಪೇನ?,
ಇಂದಿನ ಗಾಢ ಮೌನದಲ್ಲಿ ಶಾಶ್ವತವಾಗಿ ಕರಗಿ ಹೋಗುವ ಮುನ್ನ
ನಿನ್ನ ಮಾತಿನ ಅಲೆಗಳಲ್ಲಿ....
ನಾನು ತೇಲಿಯೂ ಹೋಗಿದ್ದೆ.//


ಮೊದಲ ಮಳೆಹನಿಯ ತಂಪು
ಕಡು ಮಾಡಿನಿಂದ ಲಯಬದ್ಧವಾಗಿ ಸುರಿವ....
ಹನಿಗಳೆದೆಯಲ್ಲಡಗಿರುವ ಇಂಪು,
ಕೇವಲ ಇವುಗಳಷ್ಟೆ ನನ್ನ ನಿತ್ಯದ
ಮಿಡುಕಾಟದ ಸಂಗಾತಿಗಳು/
ಹೊರಗೆ ಪಿರಿಪಿರಿ ಮಳೆ
ಒಳಗೆ ನಿನ್ನ ನೆನಪ ಇರಚಲು...
ಒಟ್ಟಿನಲ್ಲಿ ನಾನಂತೂ ಒದ್ದೆಮುದ್ದೆ,
ಮುಗಿಲ ಪ್ರತಿಹನಿಗೂ ನೆಲದೆಡೆಗೆ
ತೀರದ ಮೋಹ....
ನನಗೆ ನಿನ್ನೆಡೆಗೆ ಇರುವ ಹಾಗೆ.//

No comments:

Post a Comment