Monday, July 8, 2013

ಕಮರಿದ ಕನಸಿನ ಬೀದಿಯಲ್ಲಿ ಬೆಳಕಿಲ್ಲ.... ಬರಿ ಕತ್ತಲೆ.

ನೀರಿಲ್ಲದಿದ್ದರೂ ಜೊತೆ ತೇಲುವ ಮೀನಾಗಿ ನೀನಿಲ್ಲದಿದ್ದರೂ
ಬತ್ತಿದ ಜಲರಾಶಿಯಲ್ಲಿ ನೆಲದ ಮೇಲ್ಮೈ ಕಾಣುತ್ತಿದ್ದರೂ.....
ಬಾಳ ನೌಕೆ ನೋವಿನ ಕಡಲಿನಲ್ಲಿ ಹೇಗಾದರೂ ಸರಿ ಸಾಗಲೆಬೇಕಲ್ಲ?
ತೇಲಿಕೊಂಡೋ....
ಇಲ್ಲಾ ತೆವಳಿಕೊಂಡೋ
ಬೇಡದಿದ್ದರೂ ದಡವೊಂದ ಮುಟ್ಟಲೆಬೇಕಲ್ಲ?,
ಹಗಲಿನಲ್ಲಿ ಭಾವಗಳನ್ನ ಹತ್ತಿಕ್ಕಿದ ಸಂಯಮ
ಇರುಳಿನ ಕಡುಗತ್ತಲಲ್ಲಿ ಕರಗಿ ಕರಗಿ....
ಯಾರಿಗೂ ಕಾಣದಂತೆ ನೀರಾಗುವಾಗ
ನಾನು ನಿರಂತರ ನಿರುಪಾಯ/
ಸಂತಸದ ತಲಾಷಿನಲ್ಲಿ ಹೊರಟವ
ಸಂಕಟದ ಸಂಕ ದಾಟಬೇಕಾಗಿ ಬಂದರೂ ಸಹ....
ಮನಸ ಮೂಲೆಯಲ್ಲಿ ಅಶಾವಾದದ ಕಿರು ಸೊಡರಿನ್ನೂ
ಆರದಂತೆ ಉರಿಯುತ್ತಲೆ ಇದೆ,
ಇರುಳ ಮೌನದಾವರಣದೊಳಗೆ
ದುರುಳ ಸ್ವಪ್ನಗಳ ಸಲುಗೆ....
ಸಲುಗೆಯಲ್ಲ ಇದು
ನವಿರು ಭಾವಗಳ ಸುಲಿಗೆ.//


ಕಳ್ಳ ಹೆಜ್ಜೆಗಳ ಮಳ್ಳ ಕನಸುಗಳಿಗೆ
ಇರುಳೇನು? ಹಗಲೇನು?
ಮನ ಬಂದಾಗ ಸ್ವಚ್ಛಂದವಾಗಿ....
ಮನಸಿನ ಛಿದ್ರ ಕೋಟೆಗೆ
ಏಕಾಏಕಿ ದಾಳಿಯಿಡುತ್ತವೆ,
ಚಳಿಯ ಗುಂಗಿಗೆ ಹಬೆಯಾಡುವ ಚಹಾ
ಹುಟ್ಟಿಸುವ ಬೆಚ್ಚನೆ ಮುದದಂತೆ ನೀನು....
ನಿನ್ನ ನೆನಪು
ನನ್ನ ಮುದುಡಿದ ಮನಸಿಗೆ/
ಸಹಜ ಬದುಕಿನ ಸಂತಸದ ನಿರೀಕ್ಷೆಗಳೆಲ್ಲ
ಅವಸರದ ಅನಿರೀಕ್ಷಿತ ಸಂಕಟಗಳ ಪ್ರವಾಹಗಳಲ್ಲಿ ಕೊಚ್ಚಿ ಹೋದವು....
ಸೋತ ಹೆಜ್ಜೆಗಳಿಗೆ ಮತ್ತೆ
ಸ್ವಪ್ನದ ಹೊರಳು ಹಾದಿಯಲ್ಲಿ
ಕಷ್ಟದ ದಾರಿ ಸವೆಸುವ ಉಮೇದು ಖಂಡಿತ ಉಳಿದಿಲ್ಲ,
ಒಂಟಿ ಬಾಳು ಗೋಳಿನ ಹಾದಿ ನಿಜ
ಆದರೆ ನಿನ್ನ ನೆನಪಿನ ಕಿರುಬೆರಳ ಆಸರೆ ಇದ್ದೇ ಇದೆಯಲ್ಲ.//



ಮತ್ತರಳಲು ತವಕಿಸುವ ಕನಸ ಮೊಗ್ಗು
ಸ್ವಪ್ನ ಸುಮವಾಗುವ ಮುನ್ನ.....
ಮುರುಟಿ ಬಾಡದಿರದಂತೆ ಕಾಯುವ ಪ್ರಾಮಾಣಿಕತೆ
ದುರುಳ ವಿಧಿಗೆ ಎಂದೆಂದಿಗೂ ಇರಲಾರದೇನೋ,
ಅಲ್ಪಸ್ವಲ್ಪ ನೆಮ್ಮದಿಗಾಗಿ
ನಿರಂತರ ಮಿಡಿಯುವ ಮೌನಿ ಮನ....
ಒಂದರ್ಥದಲ್ಲಿ ನಿಶ್ಪಾಪಿ ಪಾಪ/
ಬಿಡಿಸಲಾಗದ ಕಗ್ಗಂಟಾದ ಬದುಕಿನ ತೆಳು ಎಳೆಗಳಿಗೆ
ಮತ್ತೆ ನವಿರಾದ ಕನಸ ಚಾದರ ಹೊಲೆಯುವ ಭಾಗ್ಯವಿಲ್ಲ.....
ಕನಸಿನ ತೆರೆಯಾಚಿನ ಅವಾಸ್ತವಗಳಿಗೆಲ್ಲ
ಖಚಿತ ರೂಪ ಕೊಡುವ ಹುಮ್ಮಸ್ಸು ಹನಿಹನಿಗಳಾಗಿ,
ನಿತ್ಯ ಕರಗುತಿದ್ದರೂ
ಮನಸು ನಿರಂತರ ಆಶಾವಾದಿ.//


ಹರಿವಿನ ಪಾತ್ರವಿದ್ದ ಮಾತ್ರಕ್ಕೆ ಸಾಲದು
ಅಲ್ಲಿ ನೀರಿನ ಧಾರೆಯೂ ಇರಬೇಕು....
ಬರಡು ಬಾಳೂ ಒಂಥರಾ ಹಾಗೇನೆ
ಅದರದೂ ಸ್ಥಿತಿ ಒಲವ ಧಾರೆ ಇಲ್ಲದೆ ಬತ್ತಿ ಹೋದ ನದಿಯ ಪಾಡೇನೆ,
ಕಾಯುವ ನೋಯುವ ಅಭ್ಯಾಸ
ಒಮ್ಮೆಯಾದ ನಂತರ....
ಸಾಯುವವರೆಗೂ ಸಾವಿರ ಸಂಕಟ ಎದುರಾದರೂ ಮುದುಡಿದ ಮನ
ಸಹನೆಯ ಚರಮ ಸೀಮೆಯನ್ನ ಮುಟ್ಟಿ ಜಡ್ಡುಗಟ್ಟಿ ಹೋಗಿರುತ್ತದೆ/
ಕಣ್ಣ ಆಳದಲ್ಲಡಗಿದ ನೋವುಗಳ ಪ್ರತ್ಯಕ್ಷ ರೂಪ ಹನಿ
ಅದರೆದೆಯಾಳದಲ್ಲೂ ಹುದುಗಿರೋದು....
ಕೇವಲ ಕಡು ಸಂಕಟದ ದನಿ,
ಹಸಿರು ಹುಟ್ಟದ ಬಟಾಬಯಲಾದ ಮನದ ಬರಡಿನಲ್ಲಿ
ಅದು ಹೇಗೋ ಉಳಿದೇ ಇರುವ ನಿರೀಕ್ಷೆಯ ಗರಿಕೆ....
ನನ್ನ ದುರಾಸೆಯನ್ನೆ ಅನುಗಾಲ ಅಣಗಿಸುತ್ತಿದೆ.//

No comments:

Post a Comment