ಮಲೆನಾಡಿನ ಸೆರಗಿನಡಿ, ಕರಾವಳಿಯ ಮೂಲೆಯ ಹಳ್ಳಿಯೊಂದರಲ್ಲಿ ನನ್ನ ಬಾಲ್ಯದ ಬಹು ಸಮಯ ಕಳೆದಿದ್ದರಿಂದ ಈ 'ಮಳೆ' ಅನ್ನುವ ಶಬ್ದವೆ ನನ್ನಲ್ಲಿ ಆಪ್ತತೆಯ ರೋಮಾಂಚನ ಮೂಡಿಸುತ್ತದೆ. ಕೇವಲ ಒಣ ವಿವಾರಣೆಗೆ ನಿಲುಕದ- ಬರಿ ಮಾತಿನಲ್ಲಿ ಹೇಳಿ ಮುಗಿಸಲಾಗದ ಅವ್ಯಕ್ತ ಸಂಭ್ರಮದ ನನ್ನ ಮತ್ತು ಮಳೆಯ ನಡುವಿನ ಅವಿನಾಭವ ಸಂಬಂಧವನ್ನ ಅದೇ ಗಾಢತೆಯೊಂದಿಗೆ ನನ್ನ ಬಯಲುಸೀಮೆಯ ಗೆಳೆಯರಿಗೆ ಮನದಟ್ಟು ಮಾಡಿಕೊಡಲಾರೆ. ಒಂದು ವೇಳೆ ಅಂತಹ ವ್ಯರ್ಥ ಪ್ರಯತ್ನಕ್ಕೆ ನಾನೊಮ್ಮೆ ಇಳಿದರೂ ಸಹ ಮುಂಬೈ, ಬೆಂಗಳೂರಿನಂತಹ ನಗರಗಳ ಕಪ್ಪು ಮಳೆಯನ್ನಷ್ಟೆ ನೋಡಿ ಗೊತ್ತಿರುವ ಅವರಿಗೆ ಪಶ್ಚಿಮಘಟ್ಟದ ಹಸಿರ ಮಧ್ಯದ ಸ್ಪಟಿಕದಂತಹ ಹನಿಗಳ ಆರ್ದ್ರತೆ ಬಹುಷಃ ಅರ್ಥವೂ ಆಗಲಾರದು. ಅದರೆಡಿಗಿನ ನನ್ನ ಮೋಹದ ಅರಿವೂ ಆಗಲಾರದು.
ಕೀಲುಕೊಟ್ಟ ಬೊಂಬೆಗಳಂತೆ ದಿನವಿಡಿ ದುಡಿವ ಅನಿವಾರ್ಯತೆಯಿರುವ ಈ ನಗರ ಜೀವನದಲ್ಲಿ ಆಗೊಮ್ಮೆ ಈಗೊಮ್ಮೆ ಬೀಳುವ ತುಂತುರು ಹನಿಗಳು ನನ್ನೊಳಗಿನ ಸುಶುಪ್ತ ಭಾವನೆಗಳನ್ನ ಬಡಿದೆಬ್ಬಿಸುತ್ತವೆ. ರಚ್ಚೆ ಹಿಡಿದ ಚಂಡಿ ಮಗುವಿನಂತೆ ದಿನವಿಡಿ ಪಿರಿಪಿರಿ ಸುರಿಯುತ್ತಲೆ ಇರುತ್ತಿದ್ದ ಊರ ಮಳೆ ಬೆಳಗ್ಗಿನಿಂದ ಸಂಜೆಯವರೆಗೂ ಕಣ್ಣಾಮುಚ್ಚಾಲೆ ಆಡುತ್ತಲೆ ಇರುತ್ತಿದ್ದು ಅಲ್ಲಿನ ಇನ್ನೆಲ್ಲರಂತೆ ನಾನೂ ಬಡ್ಡುಗಟ್ಟಿ ಅದಕ್ಕೆ ಒಗ್ಗಿ ಹೋಗಿದ್ದೆ. ಕೆಲವೊಮ್ಮೆ "ಶನಿಮಳೆ"ಎಂಬ ತಾತ್ಸಾರ ಹುಟ್ಟುತ್ತಿದ್ದರೂ ಸಹ ಅವೆಲ್ಲ ಆ ಕ್ಷಣದ ಪ್ರತಿಕ್ರಿಯೆಗಳಾಗಿರುತ್ತಿದ್ದು ಮರು ಘಳಿಗೆ ಅದು ಸ್ಮೃತಿ ಪಟಲದಿಂದ ಬಿದ್ದ ಅದೆ ಮಳೆಯ ಹನಿಗಳಿಗೆ ಸಿಕ್ಕು ಅಳಿಸಿ ಹೋಗಿರುತ್ತಿತ್ತು.
ಸುಖಾಸುಮ್ಮನೆ ಆಗಾಗ ಸಿಟ್ಟಿಗೆ ಪ್ರೇರೇಪಿಸುತ್ತಿದ್ದರೂ ಸಹ ಇನ್ನೊಮ್ಮೆ ಪ್ರೀತಿಯುಕ್ಕಿಸುತ್ತಿದ್ದ ಈ "Love And Hate" ಸಂಬಂಧ ಅನೇಕ ಕ್ಷುಲ್ಲಕ ಸಂಗತಿಗಳೊಂದಿಗೆ ತಳುಕು ಹಾಕಿಕೊಂಡಿದ್ದರೂ ಅದರ ಮೌಲ್ಯ ನನ್ನ ಪಾಲಿಗೆ ಬೇರಾವುದೆ ಐಶಾರಾಮಿ ಅಮಿಷಗಳಿಗಿಂತಲೂ ಮಿಗಿಲಾಗಿದೆ. ರಬ್ಬರಿನ ಹವಾಯಿ ಚಪ್ಪಲಿಗಳಿಗಿಂತ ಬೆಲೆಬಾಳುವ ಪಾದರಕ್ಷೆಗಳು ಕೇವಲ ಕನಸಾಗಿದ್ದ, ಕೆಲವೆ ಸ್ಥಿತಿವಂತ ಸಹಪಾಠಿಗಳು ಶಾಲೆಯಲ್ಲಿ ಧರಿಸಿ ಮೆರೆಯುತ್ತಿದ್ದ ಪ್ಲಾಸ್ಟಿಕ್ಕಿನ ಅಥವಾ ಚರ್ಮದ ಹೊಳೆವ ಚಪ್ಪಲಿಗಳನ್ನೆ ಆಸೆ ಕಣ್ಗಳಿಂದ ನಿರುಕಿಸುತ್ತಿದ್ದ ಬಾಲ್ಯದ ಆ ದಿನಗಳ ಮಳೆಯ ವ್ಯಾಖ್ಯೆ ಈಗಿನದ್ದಕ್ಕಿಂತ ತೀರ ಭಿನ್ನವಾಗಿತ್ತು. ವರ್ಷಕ್ಕೆ ಸರಿಸುಮಾರು ಒಂಬತ್ತು ತಿಂಗಳ ಅತಿಥಿಯಾಗಿದ್ದ, ಹತ್ತಿರ ಹತ್ತಿರ ಇನ್ನೂರಿಂಚು ವಾರ್ಷಿಕ ದಾಖಲೆಯಿರುತ್ತಿದ್ದ ಸುರಿವ ಜಡಿಮಳೆಯನ್ನ ಹೀರಿಹೀರಿ ನಮ್ಮೂರ ಗದ್ದೆಗಳೆಲ್ಲ ಕೆರೆಯಂತಾಗಿರುತ್ತಿದ್ದವು. ಒಂದೆರಡು ದಿನ ನೇಗಿಲು ಹೂಡಿ ಬೀಜ ಚಲ್ಲಿದರೆ ಸುಲಭವಾಗಿ ಭರ್ಜರಿ ಬೆಳೆ ತೆಗೆಯ ಬಹುದಾದಷ್ಟು ಫಲವತ್ತಾದ ಕೆಸರು ತುಂಬಿಕೊಂಡಿರುತ್ತಿದ್ದ ನಮ್ಮೂರಿನ ರಾಜರಸ್ತೆಗಳಲ್ಲಿ ರಬ್ಬರಿನ ಹವಾಯಿ ಚಪ್ಪಲಿ ತೊಟ್ಟು ಬೆನ್ನಿಗೆ ಚೀಲವನ್ನೇರಿಸಿ ಹೊರಟವರು ಶಾಲೆ ತಲುಪಿ ನೋಡಿಕೊಂಡರೆ ಹಡಿಗೆ ಕೆಸರು ಬೆನ್ನಿಗೆಲ್ಲ ಸಿಡಿದ್ದಿದ್ದನ್ನ ಕಂಡು ಹಾಳು ಮಳೆಯ ಈ ಮಸಲತ್ತಿನ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟು ರುಮ್ಮನೆ ತಲೆಗೇರುತ್ತಿತ್ತು.
ಇಷ್ಟಕ್ಕೆ ಸೀಮಿತವಾಗಿರುತ್ತಿರಲಿಲ್ಲ ಕಿಡಿಗೇಡಿ ಮಳೆಯ ಇಂತಹ ಥರೇವಾರಿ ಕಿತಾಪತಿ. ನಮ್ಮ ಬೀದಿಯ ಕಪಿ ಸೈನ್ಯದ ಹಾವಳಿಗಳನ್ನೆಲ್ಲ ಕಿಂಚಿತ್ತೂ ಸಹಿಸದ ಹಿರಿಯರೆಲ್ಲ ರಜಾದಿನಗಳಲ್ಲಿ ಎಲ್ಲರನ್ನೂ ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಗಟ್ಟಿ ಪದೆಪದೆ ಕೆಸರನ್ನ ಮನೆಯುದ್ದ ಪಸರಿಸದಂತೆ ಸದಾ ಮುಂಬಾಗಿಲನ್ನ ಜಡಿದಿರುತ್ತಿದ್ದರು. ಆದರೆ ಮಿತಿಮೀರಿದ ತಂಟೆಕೋರತನ ತೋರುತ್ತಿದ್ದ ನಾವೆಲ್ಲ ಕಣ್ಣಮುಚ್ಚಾಲೆ ಆಡುವ ನೆಪದಲ್ಲಿ ಯರ್ಯಾರದೋ ಹಿತ್ತಲು, ಇನ್ಯಾರದೋ ಉಪ್ಪರಿಗೆ, ಮತ್ಯಾರದೋ ಅಟ್ಟ, ಮತ್ತಿನ್ಯಾರದೋ ಹಟ್ಟಿಗಳಲ್ಲಿ ಭೂಗತರಾಗಿ ತಲೆ ಮರೆಸಿಕೊಂಡು - ನಮ್ಮನ್ನು ಹಿಡಿದೆ ತೀರುವ ಘನಂದಾರಿ ಉದ್ದೇಶದಿಂದ ಸರ್ಚ್ ವಾರೆಂಟ್ ಇಲ್ಲದೆಯೆ ಎಲ್ಲೆಂದರಲ್ಲಿ ನುಗ್ಗುವ ನಮ್ಮ ಸ್ಕಾಟ್ ಲ್ಯಾಂಡ್ ಯಾರ್ಡ್ ಸ್ನೇಹಿತರ ಲೂಟಿಯಿಂದ ಹಿರಿಯರ ಮುಂಜಾಗ್ರತಾ ಕ್ರಮಗಳೆಲ್ಲ ವಿಫಲವಾಗುತ್ತಿದ್ದಾಗ ಅವರ ಆಕ್ರೋಶಕ್ಕೆ ತುತ್ತಾಗಿ ಅಡಗುತಾಣಗಳ ಕೊರತೆಯಿಂದ ಪರದಾಡುತ್ತಿದ್ದಾಗ ವರದಂತೆ ಒದಗಿ ಬಂದದ್ದು ನಮ್ಮ ಮನೆ ಹತ್ತಿರವೇ ಇದ್ದ ಒಂದು ಮಳೆನೀರು ಹರಿದು ಹೋಗುವ ಚರಂಡಿಯ ಕೊರಕಲು. ಯುಪಟೋರಿಯಂ ಜಿಗ್ಗು ಬೆಳೆದು ಮರೆಯಾಗಿದ್ದ ಆ ಸ್ಥಳ ನಮಗೆಲ್ಲ ಅಂಡರ್ ಗ್ರೌಂಡಾಗಲು ಎಲ್ಲಾ ರೀತಿಯಿಂದ ಪ್ರಶಸ್ತವಾಗಿದ್ದರೂ ಎಡೆಬಿಡದ ಮಳೆಯಲ್ಲಿ ಅಲ್ಲಿ ಕೂರುವುದು ಅಸಾಧ್ಯವಾಗಿ, ಹಾಗೊಂದು ವೇಳೆ ಕಷ್ಟಪಟ್ಟು ಕೂತರೂ ಅಲ್ಲಿನ ಮೂಲ ನಿವಾಸಿಗಳಾದ ಸೊಳ್ಳೆಗಳ ಅಸಹನೆಗೆ ತುತ್ತಾಗ ಬೇಕಾಗಿರುತ್ತದಾದ್ದರಿಂದ ಕೇಡಿ ಮಳೆಗೆ ಸಹಜವಾಗಿಯೆ ಆಗೆಲ್ಲ ನೊಂದ ನಮ್ಮಂತಹ ನಿರಾಶ್ರಿತರ ಶಾಪಗಳು ಸಲ್ಲುತ್ತಿದ್ದವು. ಹೀಗೆ ಸಿಕ್ಕಿ ಹಾಕಿಕೊಂಡು ಔಟಾದ ಸಂದರ್ಭಗಳಲ್ಲೆಲ್ಲ ಮಳೆಗೆ ಮನಸ್ವಿ ಶಾಪ ಹಾಕಿ ಸಿಟ್ಟು ತಣಿಸಿಕೊಂಡರೂ ಮಳೆ ನಿಂತ ಮರುಕ್ಷಣ ಅಲ್ಲಿಯೆ ಅಡಗಿ ಆಟವನ್ನ ಬಿಟ್ಟಲ್ಲಿಂದಲೆ ಮುಂದುವರೆಸುತ್ತಿದ್ದವು!
ಮಳೆಯ ನಿತ್ಯದ ಧಾಳಿಗೆ ಸಿಲುಕಿ ಪಾಚಿಯ ಪದರ ಕಟ್ಟಿಕೊಂಡು ಜಾರುತ್ತಿದ್ದ ಮುರಕಲ್ಲಿನ ಅಂಗಳದಲ್ಲಿ ನಡೆಯಲೆಂದೆ ಹಾಸಿದ್ದ ತೆಂಗಿನ ಮಡಿಲ ಮೇಲೆ ನಡೆಯದೆ ಮಂಗಾಟ ಮಾಡಿ ಜಾರಿ ಬಿದ್ದು ಮೈ-ಕೈ ತರುಚಿದಾಗ ತುಟಿಯುಬ್ಬಿಸಿ ಅಳು ಬರಿಸಿಕೊಂಡದ್ದು, ಮಳೆಯ ಅರ್ಭಟ ಏಕಾಏಕಿ ಹೆಚ್ಚಿದಾಗ ಇನ್ನೂ ದಿನದವಧಿ ಉಳಿದಿದ್ದರೂ ನಡುವಿನಲ್ಲೆ ಶಾಲೆಗೆ ದಿನದ ರಜೆ ಘೋಷಿಸಿದ್ದಾಗ "ಹೋ...." ಎಂದು ಸಾಮೂಹಿಕವಾಗಿ ಕಿರುಚಿಕೊಂಡು ಸಂತೋಷದ ಅತಿರೇಕವನ್ನ ಆಂಗಿಕವಾಗಿಯೂ ಪ್ರಕಟಿಸುತ್ತಾ ಮನೆಯತ್ತ ಪೇರಿ ಕೀಳುತ್ತಿದ್ದುದು, ಮರಳಿ ಮನೆಗೆ ನುಗ್ಗಿದಾಗ ಮಳೆಗಾಲದ ಸಂಜೆಗಳಿಗಷ್ಟೆ ಸೀಮಿತವಾಗಿರುತ್ತಿದ್ದ ಸುಟ್ಟ ಹಲಸಿನ ಬೀಜ- ಹಪ್ಪಳ ಕಟಕರಿಸುತ್ತಿದ್ದುದು, ಆಡ್ಡ ಮಳೆಗೆ ಸೂರಿನ ಸಂದಿಗೊಂದಿಗಳಿಂದ ಸುರಿಯುತ್ತಿದ್ದ ನೀರಿನ ಪರಿಮಾಣಕ್ಕನುಗುಣವಾಗಿ ಇಟ್ಟಿರುತ್ತಿದ್ದ ಚೊಂಬು-ಬೋಗುಣಿ-ಪಾತ್ರೆಗಳಿಂದ ನೀರ ಹೊಡೆತಕ್ಕೆ ಮೂಡುತ್ತಿದ್ದ ಏಕನಾದವನ್ನೂ, ಅದರ ಸ್ವರ ಮಾಧುರ್ಯಕ್ಕೆ ಅಂಗಳದ ಮೂಲೆಯಿಂದಲೆ ಲಯಬದ್ಧವಾದ ಪಕ್ಕವಾದ್ಯದ ಸಾಥ್ ನೀಡುತ್ತಿದ್ದ ಗೋಂಕ್ರ ಕಪ್ಪೆಗಳ ಒಟಗುಡುವಿಕೆಯನ್ನ ಅಮರ ಸಂಗೀತ ಪ್ರೇಮಿಯಂತೆ ಆಸ್ವಾದಿಸುತ್ತಾ ಅರೆನಿಮೀಲಿತ ಕಣ್ಣುಗಳಲ್ಲಿ ಹಗಲು ಕನಸು ಕಾಣುವುದರಲ್ಲೆ ಮುಳುಗಿದ್ದಾಗ ಹಿರಿಯರ್ಯಾರಾದರೂ ತಲೆಗೆ ಮೊಟಕಿದಾಗಲೆ ಅನಿವಾರ್ಯವಾಗಿ ವಾಸ್ತವ ಪ್ರಜ್ಞೆಗೆ ಮರಳುತ್ತಿದ್ದುದು. ಇಂದು ಇವೆಲ್ಲ ಯಾವುದೋ ಕ್ರಿಸ್ತಪೂರ್ವದ ಶಿಲಾಯುಗದಲ್ಲಿಯೆ ಕಳೆದು ಹೋದವೇನೋ ಎಂದೆನಿಸಿ ಮನಸಿಗೆ ಪಿಚ್ಚೆನಿಸುತ್ತದೆ.
ಅಂದು ಶಾಲೆಯ ಹಾದಿಯಲ್ಲಿ ಸಿಗುತ್ತಿದ್ದ ಮಳೆನೀರಿನ ತೋಡಿನಲ್ಲಿ ಮುಗುಡು, ಹಿಂಡು ಹಿಂಡಾಗಿ ತೇಲುವ ಗೊದಮೊಟ್ಟೆಗಳನ್ನ ಹಿಡಿಯುವ ಭರದಲ್ಲಿ ಅದೇ ನೀರಿನಲ್ಲಿ ಎದ್ದೂಬಿದ್ದು ಮೈಯೆಲ್ಲ ಕೆಸರಾದರೂ ಅನುಭವಿಸುತ್ತಿದ್ದ ಆ ದಿನಗಳ ಥ್ರಿಲ್ ಇಂದು ಕೊಂಚವೂ ಇಸ್ತ್ರಿ ಕೆಡದ ಹವಾನಿಯಂತ್ರಿತ ಸ್ಟುಡಿಯೋದೊಳಗೆ ಮೈಕ್ರೋಫೋನಿನೊಂದಿಗೆ ನಡೆಸುವ ಸರಸ ಸಲ್ಲಾಪದಲ್ಲಿ ಸಿಗದೆ ಹೋಗಿ ಪರಮ ನಿರಾಶೆಯಾಗುತ್ತದೆ. ಮಳೆನೀರಿಗೆ ನೆನೆನೆನೆದು ಹುಳವಾಗಿ ಬಿಳುಚಿಕೊಂಡ ಕಾಲು ಬೆರಳ ಸಂದಿಗಳು ನೀಡುತ್ತಿದ್ದ ನವಿರು ತುರಿಕೆಯ ಹಿತ ಕಾಲುಚೀಲ ಹಾಗೂ ಶೂನೊಳಗೆ ಹುದುಗಿ ಬೆಚ್ಚಗಿರುವ ಸುಖದ ಪಾದಕ್ಕೆ ಬೇಕೆಂದರೂ ಸಿಗುತ್ತಿಲ್ಲ. ಆದರೂ ಅಪರೂಪಕ್ಕೊಮ್ಮೆ ಎರಡು ಹನಿ ಬಾನಿನೊಡಲಿಂದ ಕೆಳಗೆ ಸುರಿದಾಗ ಕಿಟಕಿಯ ಮುಂದೆ ಆರಾಮವಾಗಿ ಕುಳಿತು ಮಳೆಯನ್ನೆ ನೋಡುತ್ತಾ ಹಬೆಯಾಡುವ ಚಹದ ಕಪ್ಪನ್ನು ಸಶಬ್ದವಾಗಿ ಗುಟುಕರಿಸುವಾಗ ಹಳೆಯ ನೆನಪುಗಳಲ್ಲಿ ಮನ ಲೀನವಾಗಿ ಪ್ರಫುಲ್ಲವಾಗುತ್ತದೆ.
ಮನೆಯ ತೆರೆದ ಜಗುಲಿಯ ಅಂಚಿನಲ್ಲಿ ಕಂಭವನ್ನ ಬಳಸಿ ನಿಂತು ಮಾಡಿನಿಂದ ಸುರಿಯುತ್ತಿದ್ದ ಮುಗಿಲ ಸ್ವೇದಬಿಂದುಗಳಿಗೆ ಅಂಗೈ ಒಡ್ದುತ್ತಿದ್ದಾಗಲಿನ ಅವರ್ಚನೀಯ ಸುಖದ ಸವಿ ಇಂದು ಇಲ್ಲದಿದ್ದರೂ "ಕುರುಡುಗಣ್ಣಿಗಿಂತ ಮಳ್ಳೆಗಣ್ಣು ಲೇಸು" ಎನ್ನುವ ಅಲ್ಪತೃಪ್ತಿಗೆ ಒಗ್ಗಿ ಹೋಗಿದೆ ಮನಸು. ಹಸಿರ ಹಚ್ಚಡದ ನೆಲ, ಮೋಡದಿಂದ ತುಂಬಿದ ಆಕಾಶ ಇವನ್ನಷ್ಟೆ ನೋಡಿ ಗೊತ್ತಿದ್ದ ನನಗೆ ಆ ದಿನಗಳಲ್ಲಿ ಆನುಭವಕ್ಕೆ ಸಿಗುತ್ತಿದ್ದ ಹೊಸತನ ಈಗ ಮಹಡಿ ಮೇಲಿನ ಜರೋಕದಿಂದ ಕಾಣಸಿಗುವ ಶುಭ್ರ ಬಾನಿನಲ್ಲಿ ಕಸದಂತೆ ಅಲ್ಲಲ್ಲಿ ತೇಲುವ ಅಲ್ಪಸ್ವಲ್ಪ ಮೋಡಗಳನ್ನ ಆಸೆಬುರುಕನಂತೆ ಕಣ್ತುಂಬಿಸಿಕೊಳ್ಳುವಾಗ ಅರಿವಿಗೆ ಬರುತ್ತಿಲ್ಲ. ನನ್ನ ವಾಸದ ಸ್ಥಳದ ಪಕ್ಕದಲ್ಲಿಯೆ ಪೆಡಂಭೂತದಂತೆ ತಲೆಯೆತ್ತುತ್ತಿರುವ ಬಹು ಮಹಡಿ ಕಟ್ಟಡದ ದೆಸೆಯಿಂದ ನನ್ನ ಈ ತುಣುಕು ಆಕಾಶವೂ ಕಾಣೆಯಾಗಿ ಹೋಗಿ ಇನ್ನೇನು ಈ ಕನಿಷ್ಠ ಸುಖವೂ ಮರೀಚಿಕೆಯಾಗಲಿದೆ. ಮನಸು ಖಾಲಿ ಖಾಲಿ. ನನ್ನ ಬಾನ ನೀಲಿಯೆಲ್ಲೋ ಕರಗಿ ಹೋಗಿದೆ.
( ಈ ಲೇಖನ ಬರೆದದ್ದು ೨೦೦೪ರ ಮೊತ್ತಮೊದಲನೆಯ ದಿನದಂದು. ಇದು ಅದೇ ತಿಂಗಳು "ಕನ್ನಡಪ್ರಭ"ದ 'ಸಾಪ್ತಾಹಿಕ ಪ್ರಭ'ದಲ್ಲಿ ಆರಂಭವಾಗಿದ್ದ "ಜಗಲಿ" ಅಂಕಣದಲ್ಲಿ ಪ್ರಕಟವೂ ಆಗಿತ್ತು. ಇನ್ಯಾವುದೋ ಪ್ರಕರಣವೊಂದರ ಬಗ್ಗೆ ಪರಿಚಿತ ಅಂಕಣಕಾರರೊಬ್ಬರ ಜೊತೆ ಮಾತನಾಡುವಾಗ ನೆನಪಾಗಿ ಇಲ್ಲಿ ಏರಿದೆ. ಆಗಿನ ಆರಂಭದ ಬರವಣಿಗೆ ಈಗ ಓದುತ್ತಿದ್ದರೆ ತೀರ ಜಾಳುಜಾಳು ಎನಿಸುತ್ತಿದೆ.)
No comments:
Post a Comment