ಕನಸ ಹಾದಿಯುದ್ದ ಜೊತೆಯಿಲ್ಲದ ಒಂಟಿತನದ ಕತ್ತಲೆ
ಭಾವ ವಿಕಾರಕ್ಕೆಡೆಯಿಲ್ಲದಿದ್ದರೂ....
ಮರುಳ ಮನ ಜೀವನ ಪೂರ್ತಿ ಬರಿ ಬೆತ್ತಲೆ,
ಗೋರಿ ರಾಶಿ ಹಾಕಿದ ಸ್ವಪ್ನಗಳಲ್ಲೆಲ್ಲ
ಹಳೆಯ ಹೊಂಗಸಿನ ಕುರುಹು....
ಸೋತ ಸಂಕಟದಲ್ಲೂ ಮನದ್ದು
ಮಾಸದ ಸಂತಸದ ನಿರಂತರ ಸೋಗು/
ಕೆಲವಾದರೂ ಸಾರಿ ಮೌನಕ್ಕೆ
ನೆನಪ ಮಾತುಗಳು ಸೋಕಿರಲೇಬೇಕು....
ಅದರೆದೆಯೊಳಗೂ ಸವಿ ಸ್ವಪ್ನಗಳ ಅಲೆ
ಹಾದು ತಾಕಿರಲೇಬೇಕು,
ಗಾಳಿಗೆ ಮೋಡವಿತ್ತ ಸ್ವಚ್ಛಂದ ಸಲುಗೆ
ಹಾಕಿದೆ ನೆಲದೆದೆಯ ಒಡಕಿನ ಸಾಲಿನುದ್ದ....
ಹನಿ ಹನಿಗಳ ತಂಪನೆ ಒಲವಿನ ಬೆಸುಗೆ.//
ಗಲಿಬಿಲಿಯ ಸರಹೊತ್ತಿನಲ್ಲಿ ಸುರಿಮಳೆಯೆ
ಸರಿಯಾದ ಸಾಂತ್ವಾನ.....
ಮೂಕವಾದ ನನ್ನ ಮನಸ
ಗಾನವಾಗಿ ಹೊಮ್ಮಿದ ನೀನು,
ನನ್ನೊಳಗಿನ ಮೌನದೊಳಗೂ
ಮಾತಾಗಿಯೆ ಇರುವುದು ನಿಜವಲ್ಲವೇನು?/
ನೆನ್ನೆಯ ನೆನಪಿನ ನಡುವಲ್ಲಿ
ನಾಳೆಯ ಕನಸೆ ಇಂದಿನ ಬಾಳು....
ಮಳೆಯ ತೆರೆಯಾಚೆ ಹುದುಗಿದೆ
ಸಂತಸಗಳ ಗುಚ್ಛ ಹೊತ್ತ ಬಾನು,
ಸಹವಾಸ ದೋಷ ಒಲವ ಹಿಮಮಣಿಯ ಸ್ಪರ್ಶ
ನೆನಪುಗಳೊಂದು ನಿರಂತರ ಬಿಟ್ಟಿಲಾಗದ ಗೀಳು.//
ಬೀಸಿ ನಿರಾಕರಣೆಯ ಕಲ್ಲೊಗೆದರೂ
ಒಡೆಯದ ಗಾಜು ಮಾನಗೆಟ್ಟ ಭಂಡ ಮನ....
ಅದಕ್ಕೆ ಮತ್ತೆ ಮತ್ತೆ
ಹಳೆಯ ಪ್ರೀತಿಯ ಹಂಬಲದ್ದೆ ಅನುದಿನದ ಧ್ಯಾನ,
ನೋವಿನ ತರಂಗಗಳು
ಸಂಕಟದ ಕಡಲ ಅಲೆಯಲೆಯಲ್ಲೂ ಇವೆ....
ಪಾಪಿ ಮನಕ್ಕೆ ಹಳೆಯ ನೆನಪುಗಳನ್ನ
ಕೆರೆದುಕೊಳ್ಳುವ ಕೊನೆಗಾಣದ ಅನುಗಾಲದ ನವೆ/
ನೆಲೆಗಾಣದೆ ನಡುಗಡಲಲ್ಲಿ ಕೆಟ್ಟು ನಿಂತ
ತಳ ತೂತುಬಿದ್ದ ಹಾಯಿದೋಣಿ ಮನ....
ಮತ್ತೆ ಒಲವಿನ ಸುರಕ್ಷಿತ ದಡ ಮುಟ್ಟಿಸಬಲ್ಲ
ನಿನ್ನ ನೆನಪಿನ ತಂಗಾಳಿ ಈಗಲಾದರೂ ಬೀಸಬಾರದ?,
ಸುಲಭ ಗಣಿತದಲ್ಲಿ ಕೂಡಲಾಗದ
ಕ್ಲಿಷ್ಟ ಲೆಕ್ಖದಲ್ಲಿ ಕಳೆಯಲಾಗದ....
ಅನುಬಂಧವ ನಿರ್ಮಲ ಪ್ರೀತಿಯೆನ್ನಲಡ್ಡಿಯಿಲ್ಲ.//
ಹೂ ಅರಳಿದ ಮೇಲೆ ಪರಾಗದ ಸ್ಪರ್ಶ
ಖಂಡಿತ ಖಾತ್ರಿ....
ಚಿತ್ತಾರದ ಚಿಟ್ಟೆಯೆ ಕಾಡ ಬೇಕಂತೇನಿಲ್ಲ
ನಿರ್ಭಾಗ್ಯ ಪತಂಗ ಸೋಕಿದರೂ ಸಾಕು ಈ ರಾತ್ರಿ,
ಕಾಲ ಸರಿವ ವೇಗದ ಎದುರು
ಬದುಕಿನ ಬಾಕಿ ದೊಂಬರಾಟಗಳೆಲ್ಲ ಬರೀ ಗೌಣ/
ನಿನ್ನ ಕನಸಿನ ಚೂರುಗಳೆಲ್ಲಾದರೂ ಬಿದ್ದಿರೋದು
ಕಸವ ಸೇರಿ ಹೋಗೀತು ಅಂತ....
ನಾನಿನ್ನೂ ಮನದ ಒಳಮನೆಯನ್ನ
ನೀ ಬಿಟ್ಟು ಹೋದ ಮೇಲೆ ತುಸುವೂ ಗುಡಿಸಿಯೇ ಇಲ್ಲ,
ಕೊಳವಾದ ಕಣ್ಣ ಕೆರೆಯೆದೆಯ ನಿರಾಸೆಯ ಕೆಸರಲ್ಲೂ
ಕನಸ ಕೆಂದಾವರೆ ಮತ್ತರಳೀತು....
ಮತ್ತೆ ಮೌನದ ಸುಖ
ಮಾತಿನ ಮಹಲಿನಲ್ಲಿ ಅನುಮತಿ ಕೋರಿ ಮರಳೀತು.//
No comments:
Post a Comment