Friday, September 21, 2012
ನನ್ನ ದೃಷ್ಟಿಯಲ್ಲಿ ಇಸ್ಲಾಂ...
ಇವತ್ತು ಶುಕ್ರವಾರದಿಂದ ಈ ಮೊದಲೆ ಹೇಳಿದಂತೆ "ಇಸ್ಲಾಂ'ನ ಆತ್ಮಕಥೆ"ಯ ತಲೆಗಟ್ಟಿನಲ್ಲಿ "ಮಹಮದ್ ಪೈಗಂಬರ್ ಹಾಗು ಖಲೀಫರು" (ಲೇಖಕ: ಆಗುಂಬೆ ಎಸ್,ನಟರಾಜ್) ಇಂದ ದಿನಕ್ಕೊಂದು ಪುಟವನ್ನ ಇಲ್ಲಿ ಪ್ರಕಟಿಸಲಿದ್ದೇನೆ. ಇದೊಂದು ಇತಿಹಾಸದ ನಿಷ್ಪಕ್ಷಪಾತ ನಿರೂಪಣೆ ಆಗಿರುತ್ತದೆ. ಆ ಹಿನ್ನೆಲೆಯಲ್ಲಿ 'ಇಸ್ಲಾಂ' ಕುರಿತು ವಯಕ್ತಿಕವಾಗಿ ನನ್ನ ನಿಲುವು ಹಾಗು ಅಭಿಪ್ರಾಯವನ್ನ ಅದಕ್ಕಿಂತ ಮೊದಲೆ ಜಾಹೀರು ಮಾಡೋದು ಉತ್ತಮ ಅಂದುಕೊಂಡಿದ್ದೇನೆ. ಎಲ್ಲಾ ಸಂಗತಿಗಳನ್ನು ಸಂಕುಚಿತ ಮನೋಭಾವನೆಯಿಂದಲೆ ನೋಡಿ ಪ್ರತಿಕ್ರಿಯೆ ನೀಡುವ ಅನೇಕರು ನಮ್ಮ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ನನ್ನ ದೃಷ್ಟಿಕೋನಕ್ಕೆ ಇನ್ಯಾರದೊ ಬೇಕಾಬಿಟ್ಟಿ ಅಭಿಪ್ರಾಯದ ಚೌಕಟ್ಟು ಬಲವಂತವಾಗಿ ಹೇರಿಕೆಯಾಗುವ ಮುನ್ನ ನಾನೆ ಖಚಿತವಾಗಿ ಬಿಡಿಸಿ ಹೇಳೋದರಿಂದ ಗೊಂದಲ ಪ್ರಿಯರ ಸದ್ದನ್ನ ಆರಂಭದಲ್ಲೆ ಅಡಗಿಸಲಷ್ಟೆ ಈ ವಿವರಣೆ ಕೊಡುವ ಪ್ರಯತ್ನ ನನ್ನದು.
ಭಾರತದ ಸಾಂಸ್ಕೃತಿಕ ನೆಲೆಗಟ್ಟು ಗೋಚರವಾಗಿಯೊ-ಅಗೋಚರವಾಗಿಯೊ ಇಂದು ಇಲ್ಲಿ ವಾಸಿಸುವ ಎಲ್ಲಾ ಜನಾಂಗೀಯರ ಮೇಲೆ ಜಾತಿ-ಮತ-ಲಿಂಗಾತೀತವಾಗಿ ತನ್ನ ಪ್ರಭಾವ ಬೀರಿಯೆ ಇದೆ. ಬಹುಷಃ ಅದನ್ನ ವ್ಯಕ್ತ ಪಡಿಸುವ ರೀತಿನೀತಿಗಳು ಹಾಗು ಅವುಗಳ ಪರಿಮಾಣದಲ್ಲಿ ಕೊಂಚ ವ್ಯತ್ಯಾಸ ಇದ್ದಿರಬಹುದೇನೊ ಅಷ್ಟೆ. ಮೂಲತಃ ಸೋ-ಕಾಲ್ಡ್ 'ಹಿಂದೂ ಧರ್ಮ'ವೂ ಇಲ್ಲಿ ಅಸ್ತಿತ್ವದಲ್ಲಿ ಇರಲಿಲ್ಲ! ಇಲ್ಲಿನ ವಿಭಿನ್ನ ಬುಡಕಟ್ಟುಗಳ ಆಚರಣೆಯಲ್ಲಿ ಹಲವಾರು ಸಾಮ್ಯತೆಗಳು ಎದ್ದು ಕಾಣುವಂತಿತ್ತು. ಕಾಲಾನುಕ್ರಮದಲ್ಲಿ ಪುರೋಹಿತಶಾಹಿ ವ್ಯವಸ್ಥೆಯ ಕಟ್ಟುಪಾಡುಗಳು ದೇಶದಾದ್ಯಂತ ಹರಡಿದ್ದ ಎಲ್ಲಾ ಪಾಳೆಪಟ್ಟುಗಳ ಆಳುವ ವರ್ಗಕ್ಕೆ ಸ್ವೀಕಾರಾರ್ಹವಾಯಿತು. "ಯಥಾ ರಾಜ,ತಥಾ ಪ್ರಜಾ" ಎಂಬುದಕ್ಕೆ ಪುರಾವೆಯಾಗಿ ನಿಧಾನವಾಗಿ ಅವರಿಂದ ಆಳಿಸಿಕೊಳ್ಳುವವರೂ ಅದೇ ಧಾರ್ಮಿಕ ವಿಧಿ-ವಿಧಾನಗಳನ್ನು ತಮ್ಮ ಜೀವನದಲ್ಲಿ ಅನುಸರಿಸತೊಡಗಿದರು. ಮರಳುಗಾಡಿನಲ್ಲಿ ಉಗಮವಾದ ಯಹೂದಿ-ಕ್ರೈಸ್ತ-ಇಸ್ಲಾಮಿ ಧರ್ಮಗಳು ಈ ದೇಶದಲ್ಲಿ ಹರಡಿಕೊಳ್ಳುವ ತನಕ ಬಹುತೇಕ ಇದೆ ಇಲ್ಲಿನ ಎಲ್ಲಾ ಮೂಲ ನಿವಾಸಿಗಳ 'ಮಾತೃ ಧರ್ಮ'ವಾಗಿತ್ತು. ವಿಶಾಲಾರ್ಥದಲ್ಲಿ ಇದನ್ನು 'ಸನಾತನ ವೈದಿಕ ಧರ್ಮ' ಅಂತ ಗುರುತಿಸೋಣ.
ಆರಂಭದಲ್ಲಿ ಇಲ್ಲಿನ ನೆಲದಲ್ಲಿ ಹುಟ್ಟಿದ್ದ ಪ್ರಕೃತಿ ಆರಾಧನೆ (ಸಿಂಧೂ ಕಣಿವೆ ನಾಗರೀಕತೆ ಕಾಲದ್ದು) ಅನಂತರ ವೇದಗಳು ಅಸ್ತಿತ್ವಕ್ಕೆ ಬಂದ ಹಾಗೆ ನಿಧಾನವಾಗಿ ದೇವತಾರಾಧನೆಗೆ ತಿರುಗಿ ಅಲ್ಲಿಂದ ದೇವರನ್ನು ವಿಗ್ರಹ ಬಿಂಬಗಳಲ್ಲಿ ಪ್ರತಿಷ್ಥಾಪಿಸಿ ಆರಾಧಿಸುವವರೆಗೆ ವಿಕಸನ ಹೊಂದಿ ತನ್ನ ಉತ್ಕೃಷ್ಟತೆಗೆ ಬಂದು ಮುಟ್ಟಿತ್ತು. ಆಗಲೂ ಮತಾಂಧತೆಯ ತಿಕ್ಕಾಟ ಇಲ್ಲದಿರಲಿಲ್ಲ ಪ್ರಮುಖವಾಗಿ ಶೈವಾರಾಧಕರ ಹಾಗೂ ವೈಷ್ಣವಾರಾಧಕರ ನಡುವೆ ತಮ್ಮ ನಂಬಿಕೆಯೆ ಶ್ರೇಷ್ಠ ಎಂದು ಸಾಧಿಸಲು ಮೆಲುಗೈಗಾಗಿ ಪರಸ್ಪರ ಕಾದಾಟ ಸಾಮಾನ್ಯವಾಗಿದ್ದವು, ಆದರೆ ಅದು ಇಂದಿನಂತೆ ಹೀನ ಹಿಂಸೆಯ ಅತಿರೇಕದ ಹಂತಕ್ಕೆ ಏರಿರುತ್ತಿರಲಿಲ್ಲ. ಇವರ ಆಚರಣೆಗಳನ್ನ ಒಪ್ಪಲು ತಯಾರಿಲ್ಲದ ಕಾಡುಮೇಡಿನ ಬುಡಕಟ್ಟಿನವರು ಮಾತ್ರ ಇಬ್ಬರಿಗೂ ಸಮಾನ ಶತ್ರುಗಳಾಗಿದ್ದರು ಅನ್ನೋದು ಕುಚೋದ್ಯ.
ಈ ನಡುವೆ ಭಾರತೀಯ ಉಪಖಂಡದ ಕೆಲವು ಸಾಹಸಿ ರಾಜರು ತಮ್ಮ ರಾಜಕೀಯ ಮಹತ್ವಾಕ್ಷಾಂಶೆಗಳನ್ನ ಹೊತ್ತು ಭಾರತೀಯ ಉಪಖಂಡದ ಹೊರಗೂ ;ಅಂದರೆ ಇವತ್ತಿನ ಬರ್ಮಾ, ಇಂಡೋನೇಷಿಯ, ನೇಪಾಳ, ಥಾಯ್'ಲ್ಯಾಂಡ್, ಕಾಂಬೋಡಿಯ, ಮಲೇಶಿಯ, ಶ್ರೀಲಂಕ, ಮಾಲ್ಡೀವ್ಸ್, ಮರೀಷಸ್, ಅಫಘನಿಸ್ತಾನಗಳವರೆಗೂ ರಾಜ್ಯದ ಪರಿಧಿಯನ್ನ ವಿಸ್ತರಿಸಲು ತೊಡಗಿದಾಗ ನಿಧಾನವಾಗಿ ಈ ಸಂಸ್ಕೃತಿ ಅಲ್ಲಿನ ನೆಲಗಳಿಗೂ ಹರಡಿ ಹೋಯಿತು. ವೇದಕಾಲದಿಂದಲೂ ಈ ಎಲ್ಲಾ ರಾಜ್ಯಗಳೊಂದಿಗೆ ವ್ಯಾಪಾರ ಹಾಗೂ ವೈವಾಹಿಕ ಸಂಬಂಧಗಳು ಆಳವಾಗಿ ಇದ್ದಿದ್ದರಿಂದಲೂ ಈ ಅತಿಕ್ರಮಣಗಳು ಕೇವಲ ಬೆಲೆಬಾಳುವ ಸಂಪತ್ತಿನ ಸಂಗ್ರಹದ ಕಾರಣಕ್ಕಷ್ಟೆ ಸೀಮಿತವಾಗಿರುತ್ತಿದ್ದು ಅಲ್ಲಿನ ಆಳುವವರನ್ನ ಸಾಮಂತರನ್ನಾಗಿಸಿ ತಮ್ಮ ವಿಜಯದ ಸಂಕೇತವಾಗಿ ತಾವು ನಂಬುವ ದೈವದ ಬೃಹತ್ ದೇವಾಲಯಗಳನ್ನ ಅಲ್ಲಿ ಕಟ್ಟಿಸಿ-ಆ ಕುರಿತ ಶಾಸನ ಕೆತ್ತಿಸಿ, ಅವರು ಕೊಡುವ ಕಪ್ಪ ಹೊತ್ತು ಮರಳಿ ತಾಯ್ನಾಡಿಗೆ ಬರುವುದರಲ್ಲಿ ಎಲ್ಲಾ ಮುಗಿದು ಹೋಗಿರುತ್ತಿತ್ತು. ಹೀಗೆ ಸನಾತನ ಧರ್ಮದ ಬೇರು ಪೂರ್ವಏಷ್ಯಾದಲೆಲ್ಲ ವ್ಯಾಪಿಸಿತ್ತು.
ಈ ಏಕಸಾಮ್ಯತೆಗೆ ಮೊದಲ ಸವಾಲು ಎದುರಾದದ್ದು ಇಲ್ಲಿಯೆ ಹುಟ್ಟಿದ್ದ ಬೌದ್ಧ ಹಾಗೂ ಜೈನ ಧರ್ಮಗಳಿಂದಲೆ ಆಗಿದ್ದರೂ ಅದು ವೈದಿಕತೆಯ ಪಾರಮ್ಯಕ್ಕೆ ಹೇಳಿಕೊಳ್ಳುವಂತ ಹಾನಿಯನ್ನೇನೂ ಮಾಡಲಾಗಲಿಲ್ಲ. ಯಾಕಂದರೆ ಜನ ಮಾನಸಕ್ಕೆ ಹತ್ತಿರವಾಗಲು ಪೌರಾಣಿಕತೆಯ ಲೇಪ ಹಚ್ಚಿಕೊಳ್ಳುವ ಹಂಬಲದಲ್ಲಿ ಹೊಸತಾಗಿ ಹುಟ್ಟಿದ್ದ ಈ ಎರಡೂ ಧರ್ಮಗಳ ಪಂಡಿತರು ಸನಾತನದ ಪುರಾಣ ಕಥೆಗಳನ್ನೆ ಕೊಂಚ ಬದಲಿಸಿ ಹೊಸಧರ್ಮಗಳಿಗೆ ಅಳವಡಿಸಿಕೊಂಡದ್ದರಿಂದ ಶ್ರೀಸಾಮಾನ್ಯರಿಗೆ ಅವು ಹೊಸತೆನಿಸದೆ ಆಳದಲ್ಲಿ ತಾವು ಪಾಲಿಸುತ್ತಿರುವ ಧರ್ಮಾಚರಣೆಗಳ ವಿಸ್ತರಣೆ ಎನ್ನಿಸಿದ್ದರಿಂದ ಸನಾತನ ವೈದಿಕತೆ ಇನ್ನೂ ಸಶಕ್ತವಾಗಿ ಉಳಿದಿತ್ತು. ಆದರೆ ಈ ಪಾರಮ್ಯ ಉಳಿದದ್ದು ಮರಳುಗಾಡಿನ ಸೆಮೆಟಿಕ್ ಕ್ರೈಸ್ತ ಹಾಗೂ ಇಸ್ಲಾಂ ಧರ್ಮ ಭಾರತಕ್ಕೆ ಕಾಲಿಡುವ ತನಕ ಮಾತ್ರ.
( ನಾಳೆಗೆ....)
Subscribe to:
Post Comments (Atom)
No comments:
Post a Comment