Friday, September 14, 2012
ಬಿಡೆನು ನಿನ್ನ ಪಾದ.......
( ಒಂದು ಸೀಮೆಯ ಎಣ್ಣೆ ಪುರಾಣ! )
ಮಳೆ ನಾಡೂ ಆಗಿದ್ದ ಮಲೆನಾಡಿನ ತೀರ್ಥಹಳ್ಳಿ ಒಂಥರಾ ಬಸಿರಾದ ಮೋಡಗಳ ಹೆರಿಗೆ ಮನೆ. ಪರವೂರಿಗೆ ಮದುವೆ ಮಾಡಿಕೊಟ್ಟಿದ್ದರೂ ಮನೆ ಮಗಳಂದಿರಾದ ಮುಗಿಲ ಸುಂದರಿಯರು ತಪ್ಪದೆ ತಮ್ಮ ಪ್ರತಿ ಹೆರಿಗೆಗಾಗಿಯೂ ತಪ್ಪದೆ ತವರನ್ನೆ ಹುಡುಕಿಕೊಂಡು ಬಂದು ಮುಟ್ಟುತ್ತಿದ್ದರು. ಹೀಗಾಗಿ ಅಲ್ಲಿ ನಿರಂತರ ವರ್ಷದ ಎಂಟು ತಿಂಗಳೂ ಮಳೆಯದ್ದೆ ಕಾರುಬಾರು. ಅವರ ಹೆರಿಗೆ ಮಾಡಿಸುವ ಸೂಲಗಿತ್ತಿಯರಾಗುವ ನಿರಂತರ ಕೆಲಸಕ್ಕೆ ಮಾನಸಿಕವಾಗಿ ಸಿದ್ಧರಾಗಿರುತ್ತಿದ್ದ ಇಲ್ಲಿನ ಸತ್ಪ್ರಜೆಗಳು ತಮ್ಮ ಎಲ್ಲಾ ಸಣ್ಣತನಗಳ ಸಹಿತ ಮಳೆಯನ್ನೂ ಮನೆಯ ಸದಸ್ಯನಂತೆಯೆ ಪರಿಗಣಿಸಿ ಅದರ ಬಗ್ಗೆ ಪರಮ ನಿರ್ಲಕ್ಷ್ಯ ವಹಿಸುವುದನ್ನು ರೂಢಿ ಮಾಡಿಕೊಂಡಿದ್ದರು. ಅಪರೂಪಕ್ಕೆ ಬರುವ ನೆಂಟರಿಗೆ ಮಾತ್ರ ತಾನೆ ವಿಶೇಷ ಮರ್ಯಾದೆ? ದಿನ ಬಿಟ್ಟು ದಿನ ಬರುವವಳು ಮನೆ ಮಗಳೇ ಆಗಿರಲಿ ಏನೀಗ? ಅನ್ನೋ ಉದಾಸೀನತೆ ಅದು. ಮಳೆಗೆ ಕ್ಯಾರೆ ಅನ್ನದೆ ತೀರ್ಥಹಳ್ಳಿ ತನ್ನ ಸೀಮಿತ ಪ್ರಪಂಚದಲ್ಲಿ ಸದಾ ತನ್ಮಯವಾಗಿಯೇ ಇರುವುದನ್ನು ಅಭ್ಯಾಸ ಮಾಡಿಕೊಂಡಿತ್ತು. ಎಲ್ಲರ ಮನೆಗೂ ಇಂದಿನಂತೆ ಅಡುಗೆ ಅನಿಲ ಸಂಪರ್ಕ ಇದ್ದಿಲ್ಲದ ದಿನಗಳವು. ಅಂದಿಗೆ ಅದು ಕೇವಲ ಉಳ್ಳವರ ಸೊತ್ತಾಗಿದ್ದು, ಮೇಲ್ಮಧ್ಯಮವರ್ಗ ಕರೆಂಟಿನ ಜೊತೆ ಸೀಮೆ ಎಣ್ಣೆಯನ್ನೂ ಹೊಂದಿಸಿಕೊಂಡು ಹೇಗೋ ಕಾಳಿಬೋಳಿ ಮಾಡಿ ಕಾಲ ಹಾಕುತ್ತಿದ್ದರೆ, ಬಡವರ್ಗ ಕೇವಲ ಸೀಮೆ ಎಣ್ಣೆಗೆ ಶರಣು ಹೋಗಿರುತ್ತಿತ್ತು. ಸರಕಾರಿ ನ್ಯಾಯ ಬೆಲೆ ಅಂಗಡಿಯ ಸೀಮೆ ಎಣ್ಣೆ ವಿತರಕ ಪದ್ಮನಾಭ ಪಟ್ಟಣದ "ವಿನೀತ" (ಈ ವಿನೀತ ಭಾವ ನೀರ ಮೇಲಿನ ಗುಳ್ಳೆಯಂತೆ ಸೀಮೆ ಎಣ್ಣೆ ಕೊಡುವ ದಿನಕ್ಕೆ ಮಾತ್ರ ಸೀಮಿತ ಅನ್ನೋದು ಗಮನಾರ್ಹ) ಪ್ರಜೆಗಳ ಪಾಲಿಗೆ ಸೀಮೆ ಎಣ್ಣೆ ಸ್ಟಾಕ್ ಇರುವ ಎರಡು ಮೂರು ದಿನ ಸಾಕ್ಷಾತ್ ಧರೆಗಿಳಿದ ಭಗವಂತನೆ ಆಗಿರುತ್ತಿದ್ದ.
ನೊರೆನೊರೆ ಸೀಮೆಎಣ್ಣೆಯನ್ನ ಆತ ಮೊಗೆ ಮೊಗೆದು ಕೊಡುವಾಗ ಕ್ಷೀರ ಸಾಗರದಿಂದ ಆತ ಅಮೃತವನ್ನೇ ಮೊಗೆದು ತಮ್ಮ ಬಾಟಲು-ಕ್ಯಾನುಗಳಿಗೆ ಯಥಾಶಕ್ತಿ ತುಂಬುತ್ತಿದ್ದಾನೇನೋ(?) ಎನ್ನುವಂತೆ ಭಕ್ತಿ ಪರವಶರಾಗಿ ಅವನ ಟೆಂಪರ್ವರಿ ಭಕ್ತ ಕೋಟಿ ಅರ್ಧ ನಿಮೀಲಿತ ಕಣ್ಣುಗಳಿಂದಲೆ ಆ ಪುಣ್ಯ ಕಾರ್ಯವನ್ನ ದಿಟ್ಟಿಸುತಿದ್ದರು. ತಮ್ಮ ಕ್ಯಾನಿನ ಸರದಿ ಬಂದ ಆ ಶುಭ ಸಮಯದಲ್ಲಿ ಕಳೆದ ನಾಲ್ಕಾರು ಘಂಟೆಗಳ ಕಾಲ ಕೇವಲ ಹತ್ತು ಲೀಟರ್ ಸೀಮೆಎಣ್ಣೆಗಾಗಿ ಅಂಗಡಿಯ ಅಂಗಳ ದಾಟಿ ರಸ್ತೆಯಾಚೆ ಮುಂದೆ ಹೋಗಿದ್ದ ಉದ್ದಾನುದ್ದಾ ಸಾಲಿನಲ್ಲಿ ನಿಂತು ಜಾತಕ ಪಕ್ಷಿಯಂತೆ ಕಾತರಿಸಿದ್ದ ಕಾಲು ನೋವೆಲ್ಲ ಅವರಿಗೆ ಮರೆತೆ ಹೋಗಿರುತ್ತಿತ್ತು. ಸೀಮೆಎಣ್ಣೆಗೆ ಪೈಪೋಟಿ ಕೊಡುವಂತೆ ಎಣ್ಣೆ ಸುರಿಯುತ್ತಿದ್ದ ವಿತರಕನ ಎಣ್ಣೆಮುಖವೂ ಆ ಒಂದು ಕ್ಷಣ ಪ್ರಪಂಚದಲ್ಲಿಯೆ ಪರಮ ಸುಂದರವಾಗಿ ಅವರ ಸೋತು ಸುಣ್ಣವಾದ ಕಣ್ಣಿಗೆ ಕಾಣಿಸುತ್ತಿತ್ತು. ಇನ್ನೂ ಅವನ ಕೃಪಾ ಕಟಾಕ್ಷ ಗಿಟ್ಟಿಸಿ ನಾಲ್ಕಾರು ಹಾನಿ ಹೆಚ್ಚು ಹಾಕಿಸಿ ಕೊಳ್ಳುವ ತವಾಕ ದಲ್ಲಿ ಕೆಲವರಂತೂ ಆವನ ಮುಂದೆ ವಿಪರೀತ ವಿನಯ ನಟಿಸುತ್ತಿದ್ದರು. ಅದೇನೆ ಇದ್ದರು ಆತ ಲೀಟರಿನಲ್ಲಿ ಕನಿಷ್ಠ ಹತ್ತರಲ್ಲೊಂದು ಭಾಗ ಮುಲಾಜಿಲ್ಲದೆ ದೋಖಾ ಹಾಕುತ್ತಿದ್ದ. ಅದರರಿವಿಲ್ಲದ ಈ ಮುಗ್ಧರು ಅಂತಹ ಯಕಶ್ಚಿತ್ ಮೋಸಕ್ಕೆಲ್ಲ ತಾವು ತಲೆಕೆಡಿಸಿಕೊಳ್ಳದೆ ಬರುವ ತಿಂಗಳು ಮತ್ತೆ ಯಾವತ್ತು ಮತ್ತೆ ಈ ಕ್ಯೂ ನಿಲ್ಲಬೇಕು? ಅಲ್ಲಿಯವರೆಗೂ ಈ ತಿಂಗಳ ಕೋಟಾವನ್ನ ಹೇಗೆ ಸಂಭಾಳಿಸಿಕೊಳ್ಳಬೇಕು ಅಂತ ಮನದಲ್ಲಿಯೇ ಲೆಕ್ಖ ಹಾಕುತ್ತಾ ಮನೆಯ ಹಾದಿ ಹಿಡಿಯುತ್ತಿದ್ದರು. ಈ ಸಭ್ಯತೆಯ ಸೋಗೆಲ್ಲ ಕೇವಲ ಆ ಮೂರು ಪವಿತ್ರ ದಿನಗಳೊಂದಿಗೆ ಮುಗಿದು ಹೋಗಿ ಮುಂದಿನ ಕೋಟಾದ ದಿನ ತಡವಾದನ್ತೆಲ್ಲ (ಅದು ಹೇಗೊ ಪ್ರತಿ ತಿಂಗಳೂ ಸೀಮೆಎಣ್ಣೆ ತೀರ್ಥಹಳ್ಳಿಗೆ ತಡವಾಗಿಯೆ ಬರುತ್ತಿತ್ತು! ಎಂದೂ ಸರಿಯಾದ ತಾರೀಕಿಗೆ ಬಂದದ್ದೆ ಇಲ್ಲ. ಅದೊಂಥರಾ ಭಾರತೀಯ ರೈಲಿನಂತೆ! ) ವಿತರಕನ ಅಕ್ಕ-ಅಮ್ಮನನ್ನೂ ಬಿಡದೆ ಮನೆಯಲ್ಲೆ ಕೂತು ಅವನ ಎಲ್ಲಾ ಕುಟುಂಬಸ್ಥರ ಜನ್ಮವನ್ನ ಬಾಯಿ ಸೋಲುವವರೆಗೂ ಜಾಲಾಡುತ್ತಿದ್ದರು.ಬಾಯಿ ಸೋತ ನಂತರ ಸುಮ್ಮನಾಗದೆ ವಿಧಿಯಿರುತ್ತಿರಲಿಲ್ಲ!
ಶಾಲೆಗೇ ಹೋಗುವ ಮಕ್ಕಳು ತಮ್ಮ ಪೋಷಕರ ಪ್ರತಿನಿಧಿಗಳಾಗಿ ಮೊದಲಿಗೆ ತಮ್ಮತಮ್ಮ ಕ್ಯಾನ್'ಗಳೊಂದಿಗೆ ಬಂದು ತಮ್ಮ ಸಹ ಸ್ಪರ್ಧಿ ಗಳೊಡನೆ ಕುಸ್ತಿ ಮಾಡಿಯಾದರೂ ಸರಿ ಸಾಲಿನಲ್ಲಿ ಆದಷ್ಟು ಮುಂದಿನ ಜಾಗವನ್ನ ಖಾತ್ರಿ ಮಾಡಿಕೊಳ್ಳುತ್ತಿದ್ದರು. ಭವ್ಯ ಭಾರತದ ಮುಂದಿನ ಭವಿಷ್ಯವಾದ ಅವರಿಗೆ ಮುಂದಿನ ಹೋರಾಟದ ಬದುಕಿಗೆ ಇದೊಂದು ಪ್ರಶಸ್ತ ರಂಗತಾಲೀಮಿನ ಸ್ಥಳವಾಗಿರುತ್ತಿತ್ತು. ಇಲ್ಲಿ ಜಯಿಸಿದವನು ಎಲ್ಲೂ ಜಯಿಸಬಹುದು ಎನ್ನುವ ಆತ್ಮ ವಿಶ್ವಾಸವನ್ನದು ಮೂಡಿಸುತ್ತಿತ್ತು. ಮನೆಗೆದ್ದವ ತಾನೆ ಮಾರು ಗೆಲ್ಲುವುದು! ಇಷ್ಟಾಗಿಯೂ ಕೆಲವರಿಗೆ ಸಾಲಿನ ಬಾಲದ ಕಡೆಯಿಂದ ಮೊದಲನೆಯವರಾಗುವುದರಿಂದ ತಪ್ಪಿಸಿಕೊಳ್ಳೋಕೆ ಆಗ್ತಲೇ ಇರಲಿಲ್ಲ! ಇನ್ನು ಮಕ್ಕಳ ಹಿಂದೆಯೆ ಧಾವಿಸಿ ಬರುತ್ತಿದ್ದ ಹಿರಿಯರು ಕ್ಷಣಕಾಲ ತಮ್ಮ ಸಾಂಸಾರಿಕ ತಾಪತ್ರಯಗಳನ್ನೆಲ್ಲ ಮರೆತು, ದುಃಖ-ದುಮ್ಮಾನಗಳನ್ನೆಲ್ಲ ನಿಯಂತ್ರಣಕ್ಕೆ ತಂದುಕೊಂಡು ಮುಂದಿನ ಮೂರು ಘಂಟೆಗಳ ಕಾಲ ಸಾಲಿನಲ್ಲಿಯೆ ನಿರ್ಲಿಪ್ತರಾಗಿ ನಿಂತು ತಮ್ಮ ಪಾಲಿಗೆ ಬರುವ ಪಂಚಾಮೃತಕ್ಕಾಗಿ ಕಾಯುವ ಮನಸ್ಥಿತಿಯನ್ನ ಮೈಗೂಡಿಸಿ ಕೊಳ್ಳುತ್ತಿದ್ದರು. ಅದೊಂತರಾ ಧ್ಯಾನಸ್ತ ಸ್ಥಿತಿ.
ಅಂದಮಾತ್ರಕ್ಕೆ ಹೀಗೆ ಬಂದು ಸಾಲು ನಿಂತ ಎಲ್ಲರಿಗೂ ಸೀಮೆ ಎಣ್ಣೆ ಅಂದೆ ಸಿಗಬೇಕೆಂಬ ನಿಯಮವೇನೂ ಇಲ್ಲ! ಮಧ್ಯದಲ್ಲಿಯೆ ಸೀಮೆಎಣ್ಣೆಯ ಸ್ಟಾಕ್ ಮುಗಿದು ಹೋಗಬಹುದು. ಅಥವಾ ಈ ಸಾರಿ ಕೆಲವೊಂದು ನಿರ್ದಿಷ್ಟ ಸರಣಿ ಸಂಖ್ಯೆಯ ಕಾರ್ಡುದಾರರಿಗೆ ತಡವಾಗಿ ವಿತರಿಸಬೇಕು ಎನ್ನುವ ಸರಕಾರಿ ಸುತ್ತೋಲೆ ಬಂದಿರಬಹುದು, ಹೀಗೆ ಅಂತ ಹೇಳೋಕಾಗಲ್ಲ! ಇಂತಹ ಅನಿರೀಕ್ಷಿತ ಕಂಟಕಗಳು ಎದುರಾಗದಿರಲಿ ಅಂತ ಆ ಜಗನ್ನಿಯಾಮಕನಲ್ಲಿ ಮೊರೆಯಿಡುವುದನ್ನು ಬಿಟ್ಟು ಈ ಬಡಪಾಯಿ ಹುಲು ಮಾನವರಿಗೆ ಬೇರೆ ಇನ್ನೇನನ್ನೂ ಮಾಡಲಾಗುತ್ತಿರಲಿಲ್ಲ. ಹೀಗಾಗಿಯೆ ಬಹುಷಃ ಊರಿನ ಎಲ್ಲರೂ ತಪ್ಪದೆ ಸಂಕಷ್ಟಹರವೃತ, ಏಕಾದಶಿ ಉಪವಾಸ, ಮಾಂಸಹಾರಿಗಳಾಗಿದ್ದರೆ ನಿರ್ದಿಷ್ಟ ದಿನಗಳಂದು ಸಸ್ಯಾಹಾರಕ್ಕೆ ಕಟಿಬದ್ಧತೆ ಹಾಗೂ ಗೊತ್ತು ಪಡಿಸಿದ ದಿನ ಗೊತ್ತು ಪಡಿಸಿದ ದೇವಸ್ತಾನಕ್ಕೆ ತಪ್ಪದೆ ಹೋಗಿ ಭಗವಂತನಿಗೆ ಹಣ್ಣು ಕಾಯಿ ಮಾಡಿಸಿ ದೀನವಾಗಿ ಅಡ್ಡಬಿದ್ದು ಆರ್ತವಾಗಿ ಮೊರೆಯಿಡುವುದನ್ನು ರೂಢಿಸಿಕೊಂಡಿದ್ದರು. ಜನರಲ್ಲಿ ಆಸ್ತಿಕ ಭಾವವನ್ನ ಜಾಗೃತವಾಗಿಡುವಲ್ಲಿ ಸೀಮೆ ಎಣ್ಣೆಯ ಪಾತ್ರ ಹಿರಿದಾಗಿರುತ್ತಿತ್ತು. ಎನ್ ಮಾಡ್ತೀರಿ ಸೀಮೆಎಣ್ಣೆ ಎಂಬ ಮಾಯಾ ಲೋಕದ ವಸ್ತುವಿಗಾಗಿ ಜನ ಬೇಕಿದ್ದರೆ ನ್ಯಾಯ ಬೆಲೆ ಅಂಗಡಿಯವರೆಗೂ ತೆವಳಿ ಬರಲೂ ಸಿದ್ಧರಾಗಿದ್ದ ಆ ಕಾಲದಲ್ಲಿ ಈ ಹರಕೆ ಉಪಾವಾಸ ವನವಾಸಗಳೆಲ್ಲ ಯಾವ ಲೆಕ್ಖ! ಹೀಗಿದ್ದೂ ಅವರು ನಂಬಿದ್ದ ಭಗವಂತ ತಾನು ಕಲ್ಲು ಎನ್ನುವುದನ್ನು ಕಾಲಕಾಲಕ್ಕೆ ಸೀಮೆಎಣ್ಣೆಯ ಅನಾವೃಷ್ಟಿ ಸೃಷ್ಟಿಸಿ ಸಾಬೀತು ಪಡಿಸುತ್ತಿದ್ದ. ಇದರಲ್ಲಿ ಸೀಮೆ ಎಣ್ಣೆ ವಿತರಕ ಪದ್ಮನಾಭನ ಕೈವಾಡ ಇರೋದು ಎಲ್ಲರಿಗೂ ಸ್ಪಷ್ಟವಿದ್ದರೂ ಇದೆಲ್ಲ ತಮ್ಮ ಜನ್ಮಜನ್ಮಾಂತರದ ಕರ್ಮ ಎಂದು ನಿಡುಸುಯ್ದು ತಮ್ಮ ದುರ್ವಿಧಿಯನ್ನ ಅನುಭವಿಸುವುದನ್ನೇ ಎಲ್ಲರೂ ಅಭ್ಯಾಸ ಮಾಡಿಕೊಂಡಿದ್ದರು. ತಾವೊಂದು ಬಗೆದರೆ ವಿಧಿ ತೀರ್ಥಹಳ್ಳಿಯ ನಾಗರೀಕರ ಪಾಲಿಗೆ ಪ್ರತಿ ತಿಂಗಳೂ ಇನ್ನೇನನ್ನೋ ಬಗೆದಿರುತ್ತಿತ್ತು.
ಆಗಾಗ ಕೈ ಕೊಡುವ ಕರೆಂಟು. ಸದಾ ಮಳೆಯ ರೇಜಿಗೆ ಇರೋದರಿಂದ ಹಸಿ ಕಟ್ಟಿಗೆಯಲ್ಲಿಯೇ ಹಂಡೆಯ ನೀರು ಕಾಯಿಸುವ ಹಣೆಬರಹ. ಅಡುಗೆಯ ಒಲೆಗೂ ಅದರಲ್ಲಿಯೆ ಹೊಂದಿಸಿಕೊಂಡು ತಿಂಗಳು ಪೂರ್ತಿ ಸಂಭಾಳಿಸ ಬೇಕಾಗುತ್ತಿದ್ದ ಕರ್ಮ, ಮನೆಯ ಅಡುಗೆಯ ಹೊಣೆ ಹೊತ್ತ ಹೆಂಗಸರಿಗಂತೂ ಪ್ರತಿ ತಿಂಗಳ ಕೊನೆ ದಿನಗಳನ್ನ ದೂಡುವುದು ಪರಮ ಹಿಂಸೆಯಾಗಿ ಪರಿಣಮಿಸುತ್ತಿತ್ತು. ತೀರ್ಥಹಳ್ಳಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಇದ್ದ ಹಂಡೆ ಒಲೆ ಈ ಕಾಲದಲ್ಲಿ ಮಂಗಮಾಯವಾಗಿದೆ. ಆ ಜಾಗದಲ್ಲಿ ಬಾಯ್ಲರ್- ಗೀಸರ್- ಗ್ಯಾಸ್ ಗೀಸರ್'ಗಳು ಪ್ರತಿಷ್ಟಾಪಿತವಾಗಿವೆ . ಫೋನು ಮಾಡಿ ಮುಂಗಡ ಕಾದರಿಸಿದ ವಾರಕ್ಕೆಲ್ಲ ಅಡುಗೆ ಅನಿಲ ತಪ್ಪದೆ ಮನೆ ಬಾಗಿಲಿಗೆ ಬರುವುದರಿಂದ ಬಹುಷಃ ಸೀಮೆಎಣ್ಣೆ ವಿತರಿಸುವ ನ್ಯಾಯ ಬೆಲೆ ಅಂಗಡಿಗೆ ಮೊದಲಿನ ಗ್ಲಾಮರ್ ಕೂಡ ಉಳಿದಿಲ್ಲ. ದುರಂತವೆಂದರೆ ಇಂದಿನ ಮಕ್ಕಳಿಗೆ ಈ "ಸೀಮೆಎಣ್ಣೆ " ಅಂದರೆ ಏನು? ಆನ್ನೋದರ ಅರಿವೆ ಇಲ್ಲ. ಕಾಲ ನಿಜಕ್ಕೂ ಬದಲಾಗಿದೆ. ಇಪ್ಪತ್ತು ವರ್ಷಗಳಲ್ಲಿ ಅದೆಷ್ಟು ಬದಲಾವಣೆಯ ಗಾಳಿ ಬೀಸಿದೆ ಅನ್ನೋದನ್ನ ಯೋಚಿಸುವಾಗ ವಿಸ್ಮಯವಾಗುತ್ತದೆ.
Subscribe to:
Post Comments (Atom)
No comments:
Post a Comment