Sunday, September 9, 2012
"ಅಮೂಲ್ಯ" ಜೀವ ಇನ್ನಿಲ್ಲ...
ಬಾಳಲ್ಲಿ ನನ್ನ ನಿತ್ಯ ಪ್ರೇರಕರಲ್ಲಿ ಒಬ್ಬರಾಗಿದ್ದ ವರ್ಗೀಸ್ ಕುರಿಯನ್ ಮರಳಿ ಬಾರದ ಲೋಕಕ್ಕೆ ಇಂದು ಮುಂಜಾನೆ ಹೊರಟುಹೋಗಿದ್ದಾರೆ. ಇಂದು ಎಲ್ಲರ ಮನಸಲ್ಲಿ ಅಚ್ಚಳಿಯದೆ ನಿಂತಿರುವ "ಅಮೂಲ್" ಬ್ರಾಂಡ್'ನ ಹಿಂದಿನ ಪರಿಶ್ರಮಿಕ ಶಕ್ತಿ ಇವರೆ. "ಭಾರತ ರತ್ನ"ಕ್ಕೆ ಭಾಜನರಾಗಿ ಆ ನಾಗರೀಕ ಗೌರವದ ಗರಿಮೆ ಹೆಚ್ಚಿಸಿದ್ದ(!) ವರ್ಗೀಸ್ ಕುರಿಯನ್ ಕೇರಳದ ಕೊಟ್ಟಾಯಂ ಮೂಲದವರು. ಆಗಷ್ಟೇ ಸ್ವಾತಂತ್ರದ ಸುಖಕ್ಕೆ ತೆರೆದು ಕೊಂಡಿದ್ದ ಶೈಶವ ಪ್ರಜಾಪ್ರಭುತ್ವದ ಬಡ ಭಾರತಕ್ಕೆ ಅಮೆರಿಕಾದಿಂದ ಉನ್ನತ ಶಿಕ್ಷಣ ಪಡೆದು ಹಿಂದಿರುಗಿದ ಕುರಿಯನ್ ಎಂಬ ತರುಣ ಇಂಜಿನಿಯರ್ ಯಥೇಚ್ಛ ಸಂಬಳದ ಸರಕಾರಿ ಆಡಳಿತದ ಗದ್ದುಗೆ ಏರುವ ವಿಫುಲ ಅವಕಾಶವಿದ್ದರೂ ಆನಂದ್ ಎಂಬ ಗುಜರಾತಿನ ಕೈರಾ ಜಿಲ್ಲೆಯ ಕುಗ್ರಾಮದ ಮೋಹಕ್ಕೆ ಅದು ಹೇಗೊ ಬಿದ್ದುಬಿಟ್ಟರು. ತ್ರಿಭುವನದಾಸ ಪಟೇಲ್ ಹಾಗೂ ಮಣಿಬೇನ್ (ಸರದಾರರ ಮಗಳು) ರ ಮಾರ್ಗದರ್ಶನದಲ್ಲಿ ತಮ್ಮ ಜೀವನ ಕಟ್ಟಿಕೊಳ್ಳುತ್ತಲೇ ( ಆಗಷ್ಟೇ ಮೂಲಿಯೊಂದಿಗೆ ಅವರ ಮದುವೆ ಆಗಿತ್ತು, ಎರಡು ವರ್ಷದಲ್ಲಿ ಮಗಳು ನಿರ್ಮಲ ಮನೆ-ಮನ ತುಂಬಿದ್ದಳು.) "ಆಮೂಲ್'ನ್ನೂ ಕಟ್ಟಿ ಬೆಳೆಸಿದವರು. ಡೇರಿ ಉದ್ಯಮ ಇಂದು ದೇಶದಲ್ಲಿ ಬೃಹದಾಕಾರವಾಗಿ ಬೆಳೆದು ಅನೇಕರ ಅನ್ನದ ಆಸರೆಯಾಗಿದೆಯಾದರೆ ಅದಕ್ಕೆ ವರ್ಗೀಸ್ ಕರಿಯನ್ನರ ಕಾರ್ಯತತ್ಪರತೆಯೆ ನೇರ ಕಾರಣ. ಅಂದು ಉಳ್ಳವರ ಸೊತ್ತಾಗಿದ್ದ ಹಾಲಿಗೆ ಬಾಯಿಬಾಯಿಬಿಡಬೇಕಾಗಿದ್ದ ಭಾರತ ಇಂದು ಕ್ಷೀರ ಸಮೃದ್ಧವಾಗಲು ಆವರ ಒಳನೋಟವೆ ಹೊಣೆ.
ಡೇರಿ ಉದ್ಯಮವನ್ನ ಭಾರತದ ಉದ್ದಗಲಕ್ಕೂ ಹಬ್ಬಿಸುವ ಪ್ರತಿ ಪ್ರಯತ್ನದಲ್ಲೂ ಯಶಸ್ಸಿನ ರುಚಿಯನ್ನಷ್ಟೆ ಉಂಡಿದ್ದ ವರ್ಗೀಸ್ ಕುರಿಯನ್ನರ ವೃತ್ತಿ ಬದುಕಿನಲ್ಲೂ ವೈಫಲ್ಯದ ಕಹಿಯೂ ಒಂದಿತ್ತು. ಅದು ಶ್ರೀಲಂಕಾದಲ್ಲಿನ ವಿಫಲ ಕ್ಷೀರ ಕಾರ್ಯಾಚರಣೆ. ಅವರೇ ಅಂದಂತೆ ಅವ್ರು ಮರೆಯಲು ಬಯಸುವ ಅವರ ಬಾಳಿನ ಆರು ತಿಂಗಳುಗಳು ಅವಾಗಿದ್ದವು! ಅಂದಿನ ಅಧ್ಯಕ್ಷರಾದ ಚಂದ್ರಿಕಾ ಕುಮಾರತುಂಗರ ಆಹ್ವಾನದ ಮೇರೆಗೆ ಶ್ರೀಲಂಕಾದ ಉದ್ದಗಲ ಬಹಳ ಮುತುವರ್ಜಿಯಿಂದ ಕುರಿಯನ್ ಕ್ಷೇತ್ರಕಾರ್ಯ ನಡೆಸಿದರೂ ದನ-ಎಮ್ಮೆ ಸೇರಿ ಎಲ್ಲಾ ಜಾನುವಾರುಗಳನ್ನೂ ಕೇವಲ ನಡೆದಾಡುವ ಆಹಾರವನ್ನಾಗಿಯಷ್ಟೆ ನೋಡುವ ಶ್ರೀಲಂಕನ್ನರ ಆಲೋಚನಾ ಸರಣಿಯನ್ನ ಬದಲಾಯಿಸಲಾಗದೆ ಅವರು ಕೈ ಚಲ್ಲಬೇಕಾಯಿತು. ಲಂಕನ್ನರ ಮಾಂಸಾಹರಿ ಜಿಹ್ವಾಚಾಪಲ್ಯದ ಮುಂದೆ ಹೈನೋದ್ಯಮ ಹುಟ್ಟಿಸ ಬಹುದಾಗಿದ್ದ ಹಣದ ಹೊಳೆಯ ಆಕರ್ಷಣೆ ಅಲ್ಲಿ ಕೆಲಸ ಮಾಡಲೇ ಇಲ್ಲ.. ಅಂತೆಯೆ ನೆರೆಯ ಕೇರಳ, ಅಲ್ಲಿ ಸಿಗುವ ಹಾಲಿನ ಸ್ಥಳೀಯ ಉತ್ಪಾದನೆ ಕೇವಲ ಶೇಕಡಾ ಮೂರು! ಉಳಿದಂತೆ ಅಕ್ಕಪಕ್ಕದ ರಾಜ್ಯಗಳು ನಿತ್ಯ ಅಲ್ಲಿಗೆ ಹಾಲು ಪೂರೈಸುತ್ತಿವೆ.
ಬಹುತೇಕ ಅಸಾಧ್ಯವೆ ಆಗಿದ್ದ ಗರಣೆ ಕಟ್ಟುವ ಎಮ್ಮೆ ಹಾಲಿನಿಂದಲೂ ಹಾಲಿನಪುಡಿ ಮಾಡಿ ತೋರಿಸಿದ ಸಾಧಕ ಇವರು. ಬಹುಷಃ ಆ ಸಾಧನೆಯ ಪೇಟೆಂಟ್ ಅವರ ಹೆಸರಿನಲ್ಲಿಯೆ ಇದೆ ಅನ್ನಿಸುತ್ತೆ. ನಿವೃತ್ತರಾದ ನಂತರವೂ ತಮ್ಮ ಕಾಯಕ ಭೂಮಿ ಕೈರಾದಲ್ಲಿಯೆ ವಾಸ ಮಾಡೋದನ್ನ ಆಯ್ಕೆ ಮಾಡಿಕೊಂಡ ಅವರಿಗೆ ಕೊನೆಯುಸಿರೆಳೆವಾಗ ತೊಂಬತ್ತು ವರ್ಷ ವಯಸ್ಸಾಗಿತ್ತು. ಆದರೆ ಇಂದು ಆರ್ಥಿಕವಾಗಿ ಬಲಿತಿರುವ ಹಾಲು ಒಕ್ಕೂಟದ ಚಿಲ್ಲರೆ ಆಡಳಿತ ರಾಜಕೀಯದಿಂದ ಕೊನೆಯ ಐದುವರ್ಷ ಅವರು ನೊಂದು ನರಳುವಂತಾಗಿತ್ತು ಅನ್ನೋದು ಸತ್ಯ. ಸಹಕಾರ ಕ್ಷೇತ್ರದಲ್ಲಿ ಅವರು ಬೆಳೆಸಿದ ಎಳೆಯರೆ ಭ್ರಷ್ಟರಾಗಿ, ಆಡಳಿತ ಮಂಡಳಿಯಲ್ಲಿದ್ದು ತಮ್ಮ ಅನಾಚಾರಗಳಿಗೆ ಅಡ್ಡಿಯಾಗಿದ್ದ ಕುರಿಯನ್ನರಿಗೆ "ಸರ್ವಾಧಿಕಾರಿ" ಎನ್ನೊ ಪಟ್ಟ ಕಟ್ಟಿ ಅವರ ಮನ ನೋಯಿಸಿದರು. ಅವರೆ ಕಟ್ಟಿದ ಸಂಸ್ಥೆಯಿಂದ ಅವರನ್ನ ಹೊರಹಾಕಿ ಹಿಂಸಿಸಲಾಯಿತು. ಒಬ್ಬ ಧೀಮಂತ ಇದರಿಂದ ನೋಯುವಂತಾದದ್ದು ಅಕ್ಷಮ್ಯ.
ಅದೇನೆ ಇರಲಿ ಕುರಿಯನ್ ನಮ್ಮೆಲ್ಲರ ಹೀರೋ. "ಭಾರತ ರತ್ನ" ರಾಷ್ಟಪತಿಗಳಿಂದ ಪಡೆವ ಸಂದರ್ಭವನ್ನ ನೆನಪಿಸಿಕೊಂಡು ಸಮಾರಂಭದ ನಂತರ ತಮ್ಮ ಎಳೆಯ ಗೆಳೆಯ ಹಾಗೂ ಮೊಮ್ಮಗ ಸಿದ್ಧಾರ್ಥನಿಗೆ ಅವರೆ ಬರೆದಿದ್ದ ಒಂದು ಆತ್ಮೀಯ ಪತ್ರವನ್ನ ನಾನು ನನ್ನ ಮಿಂಚೋಲೆ ವಾರ್ತಾಪತ್ರದಲ್ಲಿ(ಬ್ಲಾಗ್) ಪ್ರಕಟಿಸಿದ್ದೆ. ಅದನ್ನೆ ಇಲ್ಲಿ ಮತ್ತೊಮ್ಮೆ ಹಾಕ್ತಿದೀನಿ. ಸಾಧ್ಯವಾದರೆ ಓದಿ ನಿಮಗೆ ಇಷ್ಟವಾಗಬಹುದು.
ಡಾ ವರ್ಗೀಸ್ ಕುರಿಯನ್ ತಮ್ಮ ಮೊಮ್ಮಗ ಸಿದ್ಧಾರ್ಥನಿಗೆ ಬರೆದ ಆತ್ಮೀಯ ಪತ್ರ.
ನನ್ನ ಪ್ರೀತಿಯ ಸಿದ್ಧಾರ್ಥ,
ನಿನಗೆ ಯಾವಾಗ ನಾನು ಬರೆದದ್ದು? ಜ್ಞಾಪಿಸಿಕೊಳ್ಳುವುದೂ ಕೂಡ ನನಗೆ ಕಷ್ಟವಾಗುತ್ತಿದೆ! ವೇಗವಾಗಿ ಓಡುತ್ತಿರುವ ಇಂದಿನ ಪ್ರಪಂಚದಲ್ಲಿ ತಕ್ಷಣದ ಸಂಪರ್ಕಕ್ಕೆ ಮೊಬೈಲನ್ನು ನಾವು ಬಳಸುತ್ತೇವೆ. ಫೋನಿನಲ್ಲಿ ಮಾತನಾಡಿದ ತಕ್ಷಣ ಮಿಂಚಿ ಮರೆಯಾಗುವಂತ ಸಂತೋಷವೇನೋ ಸಿಗುವುದು ನಿಜ. ಆದರೆ ಬರವಣಿಗೆಯ ಛಾಪೆ ಬೇರೆ. ಬರವಣಿಗೆ ಅದು ಕೇವಲ ಪತ್ರವೆ ಇರಲಿ, ನಮ್ಮ ಇಂದಿನ ತಾಪತ್ರಯಗಳು ಹಾಗು ಇಂದು ನಮ್ಮ ಸುತ್ತಮುತ್ತ ನಡೆಯುತ್ತಿರುವ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಆ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಶೇಖರಿಸಿ ವರ್ಷಗಳುರುಳಿದಂತೆ ಓದಿ ಆನಂದಿಸುವ ಆಸ್ತಿಯಾಗುತ್ತದೆ.
ಮುಂದೆ ಬರಲಿರುವ ಅಧ್ಯಾಯಗಳು ಪತ್ರಕ್ಕಿಂತ ಹೆಚ್ಚಿನವು. ನೀನು ಇದನ್ನು ಇಡಿಯಾಗಿ ಓದಬಯಸದೆ ಇರಬಹುದು. ಆದರೆ ಹತ್ತಾರು ವರ್ಷ ಕಳೆದ ನಂತರ ಈ ಟಿಪ್ಪಣಿಗಳನ್ನು ಎತ್ತಿಕೊಂಡು ನೀನು ನೋಡಿದಾಗ ನಾನು ಏನು ಮಾಡಿದೆ ಎಂಬುದರ ಅಂತರಾರ್ಥ ಹಾಗು ನಮ್ಮದೇಶದ ರೈತರ ಸೇವೆಗೆ ತೊಡಗಿದುದರ ಕಾರಣ ತಿಳಿಯಬಹುದು. ಇಪ್ಪತ್ತೊಂದನೆಯ ಶತಮಾನಕ್ಕೆ ಪ್ರಪಂಚ ಕಾಲಿಡುವ ಮುನ್ನ ಅಮೂಲ್ಯವಾದ ಆ ದಿನಗಳು ನಿನಗೆ ಆಗ ಗೋಚರಿಸುತ್ತವೆ. ಆವಾಗ ನನ್ನ ನೆನಪುಗಳನ್ನು ನಿನ್ನ ಪೀಳಿಗೆಯ-ಇಲ್ಲವೇ ನಿನಗಿಂತ ಕಿರಿಯರಿಗೊ ನಿನ್ನ ಅಜ್ಜಿ ಅಜ್ಜಂದಿರು ಬಾಳಿದ ಮತ್ತು ತಿಳಿದಿದ್ದ ಪ್ರಪಂಚವನ್ನು ಹಂಚಿಕೊಳ್ಳಬಹುದು.
ಪ್ರಾಮಾಣಿಕವಾಗಿ ಹೇಳುವದಾದರೆ ನನ್ನ ವೃತ್ತಿಬಾಳ್ವೆ ನಮ್ಮ ನಾಡಿನ ರೈತರ ಸೇವೆಗಾಗಿ ಎಂದು ನಾನು ಎಂದೂ ತೀರ್ಮಾನಿಸಿರಲಿಲ್ಲ.ಆದರೆ ಅದು ಹೇಗೋ ಘಟನೆಗಳ ಸರಮಾಲೆ ನನ್ನನ್ನು ಒಂದು ಗೊತ್ತಾದ ಸ್ಥಳಕ್ಕೆ ಸರಿಯಾದ ಸಮಯದಲ್ಲಿ ತಲುಪಿಸಿತು. ಓದಿದ್ದ ಮೆಟಲರ್ಜಿಯ ಬಲದಿಂದ ಯಾವುದಾದರೂ ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿ ಅದರ ಸಿಇಓ ಆಗಬಹುದಿತ್ತು,ಇಲ್ಲವೆ ಸೈನ್ಯಕ್ಕೆ ಸೇರಿ ಬಹುಷಃ ಜನರಲ್ ಆಗಿ ನಿವ್ರತ್ತನಾಗಬಹುದಿತ್ತು. ಆದರೆ ನಾನು ಇವ್ಯಾವುದನ್ನೂ ಆಯ್ಕೆ ಮಾಡಿಕೊಳ್ಳಲಿಲ್ಲ.ಏಕೆಂದರೆ ಆಳದಲ್ಲೆಲ್ಲೋ ನಾನು ಇಲ್ಲಿ ಅಂದರೆ ಗುಜರಾತಿನ ಆನಂದ್'ನಲ್ಲಿ ಒಂದು ಅರ್ಥಪೂರ್ಣ ಕೊಡುಗೆಗಾಗಿ ದುಡಿಯುವುದು ಸಾಧ್ಯ ಎಂಬ ಅರಿವು ನನಗಿತ್ತು.ನಿನ್ನ ಅಜ್ಜಿ ಕೂಡ ಈ ನನ್ನ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಳು.ಆದಿನಗಳಲ್ಲಿ ನಾವಿಂದು ಸಾಮಾನ್ಯ ಸೌಲಭ್ಯಗಳೆಂದು ಪರಿಗಣಿಸುವ ಸವಲತ್ತುಗಳೊ ಅಲ್ಲಿ ಅಲಭ್ಯ.ಆದರೂ ಅವಳು ಅಲ್ಲೇ ನನ್ನೊಂದಿಗೆ ವಾಸಿಸಿ ಅಲ್ಲೆ ಬದುಕ ಕಟ್ಟುವ ನನ್ನ ಆಯ್ಕೆಯನ್ನು ಮನಸಾರೆ ಬೆಂಬಲಿಸಿದಳು.ನನ್ನ ಬೆಂಗಾವಲಾಗಿ ನಿಂತ ನಿನ್ನ ಅಜ್ಜಿಯ ಆಯ್ಕೆ ನನಗೆ ನೀಡಿದ ಮಾನಸಿಕ ಶಕ್ತಿಯಿಂದಲೆ ಎಲ್ಲ ಮಹತ್ವದ ಹೆಜ್ಜೆಗಳನ್ನು ಹಿಂಜರಿಯದೆ ಮುನ್ನಡೆಸಿತು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದೊಡನೆ ನಾನು ನನ್ನ ವೃತ್ತಿ ಜೀವನವನ್ನು ಆರಂಭಿಸಿದೆ. ಅಂದಿನ ದಿನಗಳಲ್ಲಿ ನಮ್ಮ ಕನಸಿನ ಭಾರತದ ಜನ ಸಾಮಾನ್ಯರು ತಲೆಯೆತ್ತಿ ಮೆರೆಯುವುದೆ ಅಲ್ಲದೆ ನಾವು ಈ ದೇಶವನ್ನು ಕಟ್ಟಲು ಯಾವುದೆ ಮಾರ್ಗದಲ್ಲಿ ನಮ್ಮ ಕೊಡುಗೆಗಳನ್ನು ಕೊಡುವುದೆ ಶ್ರೇಷ್ಠ ಕಾರ್ಯವೆಂದು ತಿಳಿದಿದ್ದೆವು. ನಮ್ಮ ಜನ ಪರಸ್ಪರ ಗೌರವ ಮತ್ತು ಸ್ನೇಹ-ಪ್ರೇಮದಿಂದ ಬಾಳುವ ದೇಶ ನಮ್ಮದಾಗಬೇಕು. ಮುಂದುವರೆದ ರಾಷ್ಟ್ರಗಳಲ್ಲಿ ಮೊದಲ ಪಂಕ್ತಿಯಲ್ಲಿ ಪರಿಗಣಿತವಾಗಬೇಕು ಎಂಬ ಆಸೆಯಿತ್ತು. ಒಂದು ರೀತಿಯ ಬಾಳನ್ನು ಆಯ್ಕೆ ಮಾಡಿಕೊಂಡಾಗ ಇನ್ನಿತರ ಆಯ್ಕೆಗಳು ಅದೆಷ್ಟೆ ಆಕರ್ಷಕವಾಗಿದ್ದರೂ ಬದಿಗಿರಿಸುವುದು ಅನಿವಾರ್ಯ ಎಂಬ ಅರಿವಿನ ವಿನೀತ ಭಾವ ನನ್ನಲ್ಲಿ ಮೂಡಿತು. ಈ ಪರಿವರ್ತನೆ ಸಾಧ್ಯವಾದದ್ದು ಐವತ್ತು ವರ್ಷಗಳ ಹಿಂದೆ ತಮ್ಮ ಜೀವನದ ಮೇಲೆ ಹತೋಟಿ ಸಾಧಿಸಿ ಸ್ವಾವಲಂಬಿಗಳಾಗಲು ಯತ್ನಿಸುತ್ತಿದ್ದ ಹೈನುಗಾರ ರೈತರ ಒಂದು ಸಣ್ಣ ಸಹಕಾರಿ ಸಂಘಕ್ಕೆ ಕೆಲಸ ಮಾಡಲು ಒಪ್ಪಿದಾಗ.
ದೇಶದ ಪ್ರಗತಿಗೆ ಸಂದ ನನ್ನ ದುಡಿಮೆಯನ್ನು ಗುರುತಿಸಿ ಸನ್ಮಾನಿಸಿದಾಗಲೆಲ್ಲ ಅನೇಕ ಜನರ ಸಾಧನೆಗಳಿಗೆ ನನ್ನ ಮೂಲಕ ಸಂದ ಮನ್ನಣೆಯಿದು ಎಂಬುದನ್ನೂ ಒತ್ತಿಒತ್ತಿ ಹೇಳುತ್ತೇನೆ, ಹಾಗೂ ನನ್ನವೇ ಆದ ಕೆಲವು ಮೂಲ ಮೌಲ್ಯಗಳೂ ಇವಕ್ಕೆ ಕಾರಣ . ನನ್ನ ತಂದೆ ತಾಯಿಗಳ-ಕುಟುಂಬದ ಹಿರಿಯರ, ಆನಂದ್'ನ ನನ್ನ ಮಾರ್ಗದರ್ಶಕ ತ್ರಿಭುವನದಾಸ್ ಪಟೇಲರಲ್ಲಿ ನಾನು ಕಂಡ ಮೌಲ್ಯಗಳೂ ಇದರ ಹಿಂದಿವೆ. ಒಟ್ಟಾರೆ ಹೇಳಬೇಕೆಂದರೆ ಪ್ರಾಮಾಣಿಕತೆ,ತನಗೆ ತಾನು ಪ್ರಾಮಾಣಿಕನಾಗಿರುವುದು. ನೀನೂ ಸದಾ ನಿನಗೆ ಪ್ರಾಮಾಣಿಕನಾಗಿದ್ದರೆ ಇತರರೊಂದಿಗೂ ಹಾಗೆಯೆ ಇರಲು ಕಷ್ಟವಾಗಲಾರದು.
ನಾನು ಕಂಡಂತೆ ಯಾವ ಕ್ಷಣದಲ್ಲೂ ತಪ್ಪಾಗಬಹುದು. ಅನೇಕ ಬಾರಿ ಹಾಗೆಯೆ ಆಗುತ್ತದೆ. ಜನರು ಬಾಳುತ್ತಿರುವ ಪರಿಸರ ಹಾಗೂ ಅವರೆಷ್ಟು ಸಂತೋಷವಾಗಿದ್ದಾರೆ ಎಂಬುದಕ್ಕೆ ತಾಳಮೇಳ ಇರುವುದಿಲ್ಲ. ನಮ್ಮ ಸಂಬಂಧಿ,ಪರಿಚಿತ ಅಥವಾ ಇನ್ಯಾರೋ ರಸ್ತೆಯಲ್ಲಿ ಹೋಗುವವನೊಂದಿಗೆ ನಮ್ಮನ್ನ ಹೋಲಿಸಿಕೊಂಡು ಕುರುಬುತ್ತೇವೆ.ಆದರೆ ನಾವು ಗಮನವಿಟ್ಟು ಹತ್ತಿರದಿಂದ ನೋಡಿದಾಗ ಅವು ಪೂರ್ಣತೆಯ ಪ್ರತಿಬಿಂಬಗಳು ಎಂಬುದರ ಅರಿವಾಗುತ್ತವೆ. ಇಲ್ಲದಿರುವುದರ ಬಗ್ಗೆ ಚಿಂತಿಸದೆ ಇರುವುದರಲ್ಲೇ ನೆಮ್ಮದಿಯಾಗಿರಲು ಇವು ಸಹಕರಿಸುತ್ತವೆ.
೧೯೯೯ರಲ್ಲಿ ನನಗೆ ರಾಷ್ಟ್ರಾಧ್ಯಕ್ಷರು ಪ್ರಶಸ್ತಿ ನೀಡುವ ಭವ್ಯ ಸಮಾರಂಭಕ್ಕೆ ಬಂದದ್ದು ನಿನಗೆ ನೆನಪಿದೆಯೆ? ತುಂಬ ಹೆಮ್ಮೆಯಿಂದ ಪದಕವನ್ನು ಕೊರಳಿಗೆ ಹಾಕಿಕೊಂಡು ಅದನ್ನು ಅಚ್ಚರಿಯಿಂದ ನೋಡಿ "ಇದನ್ನು ನಾನು ಇಟ್ಟಕೊಳ್ಳಲೆ?" ಎಂದು ಕೇಳಿದೆ. ಆಗ ನಾನು ಮತ್ತು ನಿನ್ನ ಅಜ್ಜಿ ಹೇಳಿದ್ದು ನೆನಪಿದೆಯೆ ನಿನಗೆ? ಈ ಪದಕ ನನ್ನದರಂತೆ ನಿನ್ನದೂ ಕೂಡ ಆದರೆ ನೀನು ನನ್ನ ಪದಕಗಳನ್ನು ಕೂಡುವುದರಲ್ಲಿ ತೃಪ್ತನಾಗಬಾರದು. ಸವಾಲಿರುವುದು ಮುಂದೆ ನಿನ್ನ ಪರಿಶ್ರಮಕ್ಕೆ ತಕ್ಕ ಪ್ರಶಸ್ತಿಗಳನ್ನು ನೀನೆ ಗಳಿಸುವುದರಲ್ಲಿ.
ಕೊನೆಯದಾಗಿ ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವ ಶಕ್ತಿ. ಇನ್ನೊಬ್ಬರ ಸಂತಸದಲ್ಲೂ ನಲಿವ ಎದೆಗಾರಿಕೆ ಹಾಗು ಬಾಳಲು ನಮ್ಮೆಲ್ಲರಿಗೂ ಸಾಕಷ್ಟು ಅವಕಾಶವಿದೆ ಎಂಬ ವಿವೇಕ ನಿನ್ನಲ್ಲಿದ್ದರೆ ಬಾಳು ಅರ್ಥಪೂರ್ಣ. ಸಿದ್ಧಾರ್ಥ, ಈ ಚಿಂತನೆಗಳು ನಿನಗಾಗಿ ಹಾಗು ನಿನ್ನ ತಲೆಮಾರಿನ ನಮ್ಮ ಸುಂದರ ದೇಶದ ಲಕ್ಷಾಂತರ ಮಕ್ಕಳಿಗಾಗಿ. ಇದನ್ನು ಓದಿದ ಮೇಲೆ ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಭಯವಿಲ್ಲದೆ ಮುನ್ನುಗ್ಗಿ ದೇಶದ ಬಹುಜನರ, ಮಾನವತೆಯ ಹಿತಕ್ಕಾಗಿ ಸ್ಫೂರ್ತಿ ಸಿಗುವುದೆಂದು ಭಾವಿಸುತ್ತೇನೆ. ಹಾಗೆಯೆ ನಿಮಗೆ ಬರುವ ಪ್ರಶಸ್ತಿಗಳೆ ನಿಜವಾದ ಪ್ರಶಸ್ತಿಗಳು ಹಾಗು ಸಾರ್ಥಕ ಬದುಕಿಗೆ ಅವೆ ನಿಜವಾದ ಮನ್ನಣೆಗಳು ಎಂಬುದನ್ನು ಮರೆಯದಿರಿ.
ನನ್ನ ನಲುಮೆಯ ಪ್ರೀತಿಯೊಂದಿಗೆ
ನಿನ್ನ ಒಲುಮೆಯ
ದಾದ
Subscribe to:
Post Comments (Atom)
ಸಿದ್ಧಾರ್ಥನಿಗೆ ಅವನಜ್ಜ ಬರೆದ ಪತ್ರದಲ್ಲಿ ಇದೊಂದು ಪಂಕ್ತಿ ಬಿಟ್ಟು ಹೋಗಿತ್ತು ಕ್ಷಮಿಸಿ...
ReplyDeleteನಾನು ಅರಿತಂತೆ ಒಂದು ದಿನ ಖಂಡಿತ ನೀನೂ ಜೀವನ ಎಂಬುದೊಂದು ಸುಯೋಗ ಇದನ್ನು ಹಾಳು ಮಾಡುವುದು ತಪ್ಪು ಎಂಬುದನ್ನೂ ಅರಿಯುವೆ. ಬಾಳು ಎಂಬ ಭಾಗ್ಯದಲ್ಲಿ ನಿನ್ನ ಜವಾಬ್ದಾರಿಯನ್ನು ನೀನು ಒಪ್ಪಿ ಅರಿತುಕೊಳ್ಳಬೇಕು. ನಿನ್ನ ಕೌಶಲ್ಯ ಹಾಗು ಸಾಮರ್ಥ್ಯವನ್ನು ಶ್ರೀಸಾಮಾನ್ಯನ ಒಳಿತಿಗಾಗಿ ಯಾವುದಾದರೂ ಒಂದು ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತೀದಿನ ಈ ಅಗತ್ಯಗಳು ನಿನ್ನ ಮುಂದೆ ಬಂದೆ ಬರುತ್ತವೆ.ಹಾಗೆಯೇ ನೀನು ಸುತ್ತ ದೃಷ್ಟಿ ಹಾಯಿಸಿದರೆ ನಿನಗಾಗಿ ಕಾಯುತ್ತಿರುವ ಅವುಗಳನ್ನು ಕಾಣಬಹುದು. ನಿನ್ನ ಗೆಳೆಯನಿಗೆ ಸಹಾಯ ಬೇಕಿರಬಹುದು,ನಿನ್ನ ಉಪಾಧ್ಯಾಯರಿಗೆ ಸ್ವಯಂಸೇವಕ ಬೇಕಾಗಿರಬಹುದು ಅಥವಾ ನೀನು ಜೀವಿಸುತ್ತಿರುವ ಸಮುದಾಯಕ್ಕೆ ನಿನ್ನ ಕೊಡುಗೆಯ ಅಗತ್ಯ ಇರಲೂಬಹುದು. ಜಯದ ಪರಿವೆ ಇಲ್ಲದೆ, ಸೋಲಿನ ಹತಾಶೆಗೂ ಕುಗ್ಗದೆ ನಿನ್ನ ಉಪಯುಕ್ತ ಕೊಡುಗೆಗಳನ್ನು ನೀನು ಶ್ರಮವಹಿಸಿ ನೀಡಬಹುದು.
ವರ್ಗೀಸ್ ಕುರಿಯನ್ನರ ಕುರಿತು ನಾನು ಬರೆದಿದ್ದರಲ್ಲಿ ಒಂದು ದೊಡ್ಡ ಪ್ರಮಾದ ನುಸುಳಿದೆ. ಅವರಿಗೆ ಸಂದಿದ್ದ್ದ ಉನ್ನತ ಭಾರತೀಯ ನಾಗರೀಕ ಗೌರವ "ಪದ್ಮವಿಭೂಷಣ"ವೆ ಹೊರತು "ಭಾರತ ರತ್ನ"ವಲ್ಲ. ನನ್ನ ಅರೆ ಗ್ರಹಿಕೆಯನ್ನ ಇದನ್ನ ಅಂತರ್ಜಾಲದಲ್ಲೆಲ್ಲೂ ಓದಿದ್ದ ಯಾವೊಬ್ಬ ಓದುಗರೂ ತಿದ್ದದಿದ್ದುದು ಬೇಸರ ಹುಟ್ಟಿಸಿದೆ! ಯಾರಾದರೂ ಇದನ್ನ ಎತ್ತಿ ತೋರಲಿ ಅಂತ ನನಗೆ ತಪ್ಪು ಅರಿವಾದ ಮುಂಜಾನೆಯಿಂದ ಸಂಜೆವರೆಗೂ ಕಾದೆ, ಪ್ರಯೋಜನವಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾನೆ ಬರೆದುಕೊಳ್ಳುತ್ತಿದ್ದೇನೆ.
ReplyDeleteಇದರಲಿ ಇನ್ನೊಂದು ಮುಖ್ಯ ಸಂಗತಿ ಹೇಳಲು ಮರೆತೆಬಿಟ್ಟಿದ್ದೆ. ಒಂದು ಬ್ರಾಂಡನ್ನು ಕಟ್ಟಿ ಬೆಳೆಸುವುದೆಂದರೆ ಹಣದ ಇಡಿಗಂಟಿನ ಮೇಲೆ ವಿರಾಜಮಾನರಾಗೋದು ಎಂದರ್ಥ. ಉದಾಹಾರಣೆಗೆ ಕುರಿಯನ್ನರ ತಲೆಮಾರಿನವರೆ ಆದ ಧೀರೂಭಾಯಿ ಅಂಬಾನಿಯವರನ್ನೇ ತೆಗೆದುಕೊಳ್ಳೋಣ. ಸರಿಸುಮಾರು ಕುರಿಯನ್ನರು ವೃತ್ತಿ ಬದುಕನ್ನ ಆರಂಭಿಸುವಾಗಲೆ ಧೀರೂಭಾಯಿಯವರ ವ್ಯಾಪಾರಿ ಬದುಕು ಆರಂಭಗೊಂಡದ್ದು. ಮನಸ್ಸು ಮಾಡಿದ್ದರೆ ತಮಗೆ ಮೇಲೇರಲು ಸಿಕ್ಕ ಏಣಿಗಳನ್ನೆಲ್ಲ ಮುಲಾಜಿಲ್ಲದೆ ಒದ್ದು ಕುರಿಯನ್ನರೂ ಡೈರಿ ಉದ್ದಿಮೆಯ ಅನಭಿಶಕ್ತ ದೊರೆಯಾಗಿ ಮೆರೆಯಬಹುದಾಗಿತ್ತು. ಷೇರುದಾರರಿಂದ ಹಣ ಹೊಂದಿಸುವುದೇನೂ ಕಷ್ಟವಾಗ್ತಿರಲಿಲ್ಲ., ಆದರೆ ಅವರು ರೈತರನ್ನೆ ಷೇರುದಾರರನ್ನಾಗಿ ಹೊಂದಿದ್ದ ಸಹಕಾರಿ ಉದ್ದಿಮೆ ಕಟ್ಟುವ ಕನಸು ಕಂಡು ಅದನ್ನೆ ಸಾಕಾರಗೊಳಿಸಿದರು. ಅವರ ಶ್ರಮ ಹುಸಿ ಹೋಗಲಿಲ್ಲ. ವೃತ್ತಿ ಬದುಕಿನುದ್ದಕ್ಕೂ ( ನಿವೃತ್ತ ಜೀವನ ಅವರಿಗೆ ಕಡೆಗೂ ಲಭ್ಯವಾಗಲೆ ಇಲ್ಲ!) ಖಾಸಗಿ ಬಂಡವಾಳದಾರ ಭಾರಿ ಮೊತ್ತದ ಆಮಿಷಗಳನ್ನ ಆಗಾಗ ಅವರು ಎದುರುಗೊಂಡರೂ ಯಾವುದೆ ಖಾಸಗಿ ಡೈರಿ ಉದ್ದಿಮೆಗೆ ಅವರ ಮೇಧಾಶಕ್ತಿಯ ಧಾರೆಯೆರೆಯಲು ಅವರೊಪ್ಪಲೇ ಇಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಕ್ಷುಲ್ಲಕ ಹಣದ ಹಿಂದೆ ಬಿದ್ದು "ಪಕ್ಷಾಂತರ"ವನ್ನವರು ಮಾಡಿಕೊಳ್ಳಲಿಲ್ಲ. ಹಿರಿಯರಾದ ತ್ರಿಭುವನದಾಸ್ ಪಟೇಲ್-ಓರಗೆಯ ಮೊರಾರ್ಜಿ ದೇಸಾಯಿ-ಹಿರಿಯಕ್ಕನಂತಹ ಮಣಿಬೆನ್ ಇವರೆಲ್ಲರಿಂದ ಅವರು ಪಡೆದುಕೊಂಡದ್ದು ರೈತರ ಹಿತಕ್ಕೆ ಸಾಲುವಷ್ಟನ್ನು ಮಾತ್ರ. ವಿದೇಶಿ ಬ್ಯಾಂಕುಗಳಲ್ಲಿ ಕಪ್ಪಾಗಿಸಿ ಕೂಡಿಡುವಷ್ಟಲ್ಲ. ಇವರಿಗೆ "ಬಾರತ ರತ್ನ"ವನ್ನು ಪ್ರತ್ಯೇಕವಾಗಿ ಕೊಡ ಬೇಕಾ? ಆ ಲೋಹದ ಪದಕ "ಆ" ಕುಟುಂಬದಲ್ಲಿ ಹುಟ್ಟಿದ ಸಾಧನೆ ಮಾಡಿದ ಆಳುವ ವಂಶದಲ್ಲಿ ಹುಟ್ಟಿದ ರಾಜಕಾರಣಿಗಳಿಗೆ ಇರಲಿ ಬಿಡಿ?!