Monday, August 8, 2011

ಮೌನವೆ ಹಸಿರು ವಸಂತ...


ಕನಸಿನ ಹಾದಿಯಲ್ಲಿ ನಿನ್ನ
ಕಣ್ ಬೆಳಕ ಆಸರೆ ಇಲ್ಲದೆ ಹೇಗೆ ಹೆಜ್ಜೆಯೂರಲಿ?....
ನಿನ್ನ ನಗುವಿನ ಗುರಿಯಿರದ ಬಾಳಲ್ಲಿ
ಸಂತಸದ ಕೊನೆಯನೆಂತು ಮುಟ್ಟಲಿ?/
ಮಾತುಗಲ್ಲೆಲ್ಲ ಒಣ ಎಲೆಗಳಂತೆ
ಮೌನವೆ ಹಸಿರು ವಸಂತ...
ನನಸು ಕೇವಲ ಕ್ಷಣಿಕ
ನೆನಪಿನ ಮಾಧುರ್ಯವಷ್ಟೆ ಅನಂತ//


ಸಂತಸದ ಹೊನಲಿಗಿಂತ ಸಂಕಟದ ಇರುಳು ಹೆಚ್ಚು ಆಪ್ತ
ನಿನ್ನೆದೆಯ ದಾರಿಯಲ್ಲಿ ಹಾಕುವ ಹೆಜ್ಜೆಗೆ ಮನಸು ನಿನ್ನೊಳಗೆ ಲುಪ್ತ....
ಲವಲೇಶವೂ ಉಳಿದಿರದ ನಿರೀಕ್ಷೆ ಕೆಲವೊಮ್ಮೆ,
ನನ್ನ ಶೂನ್ಯ ನೋಟದಲ್ಲೂ ಸಂತಸ ಉಕ್ಕಿಸುವುದಿದೆ....
ನಿನ್ನ ನೆನಪುಕ್ಕಿ ಬಂದಾಗ!/
ಕಲ್ಲಿನ ಎದೆಯ ಮೇಲೂ ಕನಸ ಚಿಗುರೊಡೆಸಿದ
ನಿರೀಕ್ಷೆಯ ಬೀಜದ ಬಳ್ಳಿ ಸ್ವಚ್ಛಂದ ಬೆಳೆದು....
ಬಾಳ ತುಂಬಾ ಹಬ್ಬಿದೆ,
ಕನಸು ಕಂಗಳ...ಸಂಜ್ಞೆ ಮಾತಿಗೆ
ನಿನ್ನ ಮೌನದ ಉತ್ತರ....
ಅದನ್ನು ಅರ್ಥ ಮಾಡಿಕೊಳ್ಳಲಾಗದೆ ನಾನಂತೂ ಆದೆ ತತ್ತರ//


ಮೋಡದ ಮೋಹಕತೆಗೆ ಮರುಳಾಗಿ
ಭಾಸ್ಕರ ಬಾನಿಗೆ ಹೊಡೆದ ಕಣ್ಣು....
ಮುಗಿಲಲಿ ಹೊಳೆವ ಮಿಂಚಾಯ್ತು
ನಭದಿಂದ ನೆಲಕ್ಕಿಳಿದ ಮಳೆಯ ಮಧುರ ಸಂಚಾಯ್ತು/
ಒದ್ದೆಕಂಗಳ ಪ್ರತಿಹನಿಯಲ್ಲೂ ನಿನ್ನ ನೆನಪಿನ ಬಿಸಿಯಿದೆ
ಮನದ ಅಂಗಳಕ್ಕೆ ಹಚ್ಚಿದ ನಿರೀಕ್ಷೆಯ ರಂಗೋಲಿಯಲ್ಲಿ....
ನಿನ್ನದೆ ಉಸಿರು ಸೋಕಿಸಿದ ನೆನ್ನೆಯ ಹಸಿಯಿದೆ,
ಮಾತುಗಳೆಲ್ಲವನ್ನು ಬಂಧಿಸಿರಿಸಿರುವ ಮೌನದ
ಕತ್ತಲ ಕೊನೆಯಲ್ಲಿ ಭೀಕರ ಏಕತಾನತೆಯ ಆರ್ತನಾದ...
ನೀನಿದ್ದಿದ್ದರೆ
ಒಮ್ಮೆ ಬಂದಿದ್ದರೆ ಪಾರಾಗುತ್ತಿದ್ದೆನೇನೋ ಇದರಿಂದ ನಾನು//


ನೀನಿರದ ನನಸು
ನೀ ಬಾರದ ಕನಸು...
ನನ್ನ ದೃಷ್ಟಿಯಲ್ಲಿ ಮೌಲ್ಯ ಕಳೆದುಕೊಂಡ ಬಿಲ್ಲೆ
ಏನಿದ್ದರೇನು ಇರದಾಗ ನಿನ್ನ ನೆನಪಿಗೆ ಅಲ್ಲಿ ನೆಲೆ?/
ನೆನಪಿನ ಪರಿಮಳದಲ್ಲಿ
ಮಿಂದೆದ್ದ ಮನಸು,
ಇನ್ನೂ ನಿನ್ನ ಕನಸಿನ
ಮೆಲುಕಿನಲ್ಲಿಯೆ ಮಗ್ನವಾಗಿದೆ//





























































No comments:

Post a Comment