Saturday, August 13, 2011
ಯಾರಿಗೆ ಬಂತು? ಎಲ್ಲಿಗೆ ಬಂತು?
ಸ್ವಾತಂತ್ರ ಯಾರಿಗೆ ಬಂದಿದೆ? ಎಂದು ಮುಂಜಾನೆ ಕಣ್ತೆರೆವಾಗ ನಾನೂ ಕಣ್ ಕಣ್ ಬಿಡುತ್ತ ತಲೆ ತುರಿಸಿಕೊಂಡೆ.ಹಾ ಯುರೇಕ....ಕ'ಮಲ'ಳ ಲಂಗ ಜಳಜಳ ಎಂದು ವಿಧಾನಸೌಧದಿಂದ ಹಿಡಿದು ಪರಪ್ಪನ ಅಗ್ರಹಾರದವರೆಗೆ (ಎರಡೂ ಕಲ್ಲು ಕಟ್ಟಡಗಳೇ!) ಸಾಮ್ರಾಜ್ಯ ವಿಸ್ತರಿಸಿಕೊಂಡಿರುವ 'ರಸಿಕ'ರೇಣು-ವರ್ತೂರು ಪ್ರಕಾಶ-ಸರ್ವರ್ ಸೋಮರಂತಹ 'ಕಟ್ಟಾ'ಳುಗಳಿಗೆ ಸ್ವಾತಂತ್ರ ಬಂದಿದೆ! ಆದರೆ ಅತ್ತ ಸವಣೂರಿನಂತಹ ಊರುಗಳಲ್ಲಿ ಇನ್ನೂ ಅಂತ್ಯಜ 'ಮಲ'ವನ್ನ ತಲೆಮೇಲೆ ಹೊರುತ್ತ,ಬೇಸತ್ತಾಗ ಸುರಿದುಕೊಳ್ಳುತ್ತಾ ಹಾಗೆ ಇದ್ದಾನೆ. ಮೂರ್ ಮೂರ್ ದಿನಕ್ಕೆಲ್ಲ ಬಂಡಾಯ ಸಾರಿ ಮಾಡೊ ಕೆಲಸ ಬಿಟ್ಟು ರೆಸಾರ್ಟ್ ಸೇರಿ ಅಲ್ಲಿಂದ ಹೊರ ಬಂದ ತಕ್ಷಣ ಮಂತ್ರಿಗಿರಿ ಅನಾಯಾಸವಾಗಿ ಪಡೆದು ಅರ್ಜೆಂಟ್ 'ರೆಡ್ ಲೈಟ್'ಸಚಿವರಾಗಿ ಕೆಡೋಗಾಲಕ್ಕೆ ಸಿರಿ ಅಂದವರ ಹಾಗೆ ನಡುರಾತ್ರೆಯಲ್ಲೂ ಹಿಂದೆ ಮೂರು,ಮುಂದೆ ಮೂರು ಗೂಟದ ಕಾರುಗಳನ್ನ ಸೈರನ್ ಗಲಭೆ ಸಹಿತ ಓಡಿಸಿ ಜನರ ನೆಮ್ಮದಿಗೆ ಬೆಂಕಿ ಇಟ್ಟವರಿಗೆ ಸ್ವಾತಂತ್ರ ಬಂದಿದೆ!
ತಮ್ಮೆಲ್ಲರ ಖಾಸಗಿ ಖಜಾನೆಯ ಕಾಮನ್'ವೆಲ್ತ್'ನ್ನ ಮುಲಾಜಿಲ್ಲದೆ ಕ್ರೀಡಾ ಮನೋಭಾವದಿಂದಲೆ ಸಮಾನವಾಗಿ (ಕಡೆಪಕ್ಷ ಅಲ್ಲಾದರೂ ಸಮಾನತೆಯಿದೆ,ಸಂತೋಷ!) ಹಂಚಿಕೊಂಡ ಕಲ್ಮಾಡಿಯಿಂದ ಹಿಡಿದು ಹುಟ್ಟಿನ ಕಾರಣದಿಂದಷ್ಟೇ 'ಗಾಂಧಿ'ಗಿರಿ ಮಾಡೋವವರವರೆಗೆ ಎಲ್ಲರಿಗೂ ಭೇದ-ಭಾವವಿಲ್ಲದೆ ಸೌತ್ ಬ್ಲಾಕಿನಿಂದ-ತಿಹಾರಿನ ಬ್ಯಾರಕ್ಕಿನ ಕೊನೆ ಮೂಲೆಯಲ್ಲಿ ಕುಳಿತ 'ರಾಜಾ'ಧಿರಾಜರಿಗೆಲ್ಲ ಸ್ವತಂತ್ರ ಬಂದಿದೆ!
ತನ್ನ ಅಂಗೈ ಅಗಲದ ಹೊಟ್ಟೆಪಾಡಿನ ಮೂಲಾಧಾರ ಭೂಮಿಯನ್ನ ಉಳಿಸಿಕೊಳ್ಳಲು ಬಡ ಬೋರೆಗೌಡ ಮಾತ್ರ ಆಳುವವರ ಗುಂಡಿಗೆ ಗುಂಡಿಗೆಯೋಡ್ದುತ್ತಲೆ ಇದ್ದಾನೆ (ಅನಿವಾರ್ಯವಾಗಿ!).ದೇಶ ಇಬ್ಭಾಗವಾಗಿ ನಮ್ಮ ಸಂಸ್ಕೃತಿಯ ತುಣುಕು ಇನ್ಯಾರೊ ಅರಿವುಗೇಡಿಗಳ ಪಾಲಾದ ೬೪ರ ಈ ಸಂಭ್ರಮಕ್ಕೆ ಹೌದು, ಬೆಚ್ಚಗೆ ಕಂಬಳಿ ಹೊದ್ದುಕೊಂಡ 'ಗೂಟದ' ಕಾರಿನ ಕೆಲವು ಕರಿ ಸಾಹೇಬರಿಗಂತೂ ನಿಜಕ್ಕೂ ಸ್ವಾತಂತ್ರ ಬಂದಿದೆ ಅನ್ನುವ ಜ್ಞಾನೋದಯ ಕಡೆಗೂ ಕಾಮೋಡಿನ ಮೇಲೆ ಆಯ್ತು?!.
Subscribe to:
Post Comments (Atom)
No comments:
Post a Comment