Monday, August 29, 2011

ಕುಮಾರಣ್ಣನೂ.....ಅವರ ರಂಗೀನ್ ರಾತ್ರಿ "ರಾಧಿಕೆ"ಯರೂ....




ಒಟ್ಟಿನಲ್ಲಿ ಕನ್ನಡಿಗರ ವ್ಯಥೆಯ ಕತೆಗೆ ಒಂದು ಕೊನೆಯೇ ಇದ್ದಂತಿಲ್ಲ.ಮೊನ್ನೆ ನೋಡಿದರೆ ಯೆಡ್ಡಿಗೆ 'ಎಡ್ಸ್',ಇವತ್ತು ಕುಮಾರಣ್ಣನಿಗೆ ಮಾರಣಾಂತಿಕ ಹೃದಯ 'ಬೇನೆ'! ಶಿವಾ ಅಂತ ಆಲ್ಲಲ್ಲಿ ಅಷ್ಟಿಷ್ಟು ಪತ್ರಿಕಾಗೋಷ್ಠಿ ನಡೆಸುತ್ತ (ಪಾನಗೋಷ್ಠಿಗಳಲ್ಲ ಮತ್ತೆ!) ಭಂಡ ರಾಜ್ಯ ಸರಕಾರದ ಬಂಡವಾಳವನ್ನೆಲ್ಲ ದಾಖಲೆ ಸಮೇತ ಎಳೆಎಳೆಯಾಗಿ ರಾಜ್ಯದ ಆರುಕೋಟಿ ಜನತೆಯ ಮುಂದೆ ಬಿಚ್ಚಿಡುತ್ತಾ,ಸಂಜೆ ಹೊತ್ತು ಕಂತುತ್ತಲೆ ತಮ್ಮ ಅಧಿಕೃತ ಅಥವಾ ಅನಧಿಕೃತ ಇವುಗಳಲ್ಲಿ ಒಂದು ಸಂಸಾರ ಇರುವ ಕಡೆ ಹೋಗಿ ಮುದ್ದೆಯುಣ್ಣುವ ಮುನ್ನ ಕೇವಲ ಎರಡೆ ಎರಡು ಪೆಗ್ 'ಪರಮಾತ್ಮ'ನನ್ನು ಹಾಗೇ ಆವಾಹನೆ ಮಾಡಿಕೊಂಡು ಏನೂ ಕಪಟವರಿಯದ ಪುಟ್ಟ ಪಾಪುವಿನಂತೆ ಮಡದಿಯ (ಮತ್ತೆ ಅಧಿಕೃತವೊ? ಅನಧಿಕೃತವೊ ಎಂಬ ಅಸಡ್ಡಾಳ ದುರುದ್ದೇಶಪೂರಿತ ಪ್ರಶ್ನೆ ಕೇಳೀರಿ ಹುಷಾರ್!) ಮಡಿಲಲ್ಲೆ ಪವಡಿಸುವ ಅವರಿಗೆ ಪಾಪ ಬೈಪಾಸ್'ಸರ್ಜರಿ ಆಗಿದೆಯಂತೆ,ಇನ್ನೂ ನಳನಳಿಸುತ್ತಿರುವ ಈ ಯವ್ವನ ಕಾಲದಲ್ಲಿಯೆ (ಇನ್ನೂ ಎರಡು ವರ್ಷದ ಮಗುವಿನ ತಂದೆಯಾಗಿರುವಷ್ಟು ಚೈತನ್ಯದ ಚಿಲುಮೆ ಅವರು?!) ಅವರಿಗೆ ಅಕಾಲಿಕ ಹೃದಯ ರೋಗವಂತೆ,ಹಾಗಂತ ಅವರ ಪರ ವಕೀಲರು ಲೋಕಾಯುಕ್ತ ನ್ಯಾಯಾಲಯದಲ್ಲಿ ವಾದಿಸಿದರಲ್ಲ,ಆ ಘೋರ ಸುದ್ದಿ ಕೇಳಿ ಬಡ ಕನ್ನಡಿಗರು ಭರಿಸಲಾಗದ ವೇದನೆಯಿಂದ ತಳಮಳಿಸಿ ಹೋದರು!!

ಆ ರೋಗಿಷ್ಟ ಹೃದಯವನ್ನೇ ಇಬ್ಬರಿಬ್ಬರಿಗೆ ಏಕಕಾಲದಲ್ಲಿ ಹಂಚಿಕೊಟ್ಟ ತ್ಯಾಗಜೀವಿ ಅವರು.ಅವರನ್ನೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ದುರುದ್ದೇಶಪೂರಿತರಾಗಿ-ರಾಜಕೀಯ ಪ್ರೇರಿತರಾಗಿ ದೂಷಿಸೋದು ಅಂದರೇನು? ತುಂಬಾ ಸರಳಜೀವಿ ಅವರು. ಈಗ ಏನೋ ಕಾಲ ಅವರ ಮೇಲೆ ಮುನಿದು ಸರಳುಗಳ ಹಿಂದೆ ಹೋಗೊ ವಿನಾಶ ಕಾಲವೂ ಬಂದಿದೆ. ಅಷ್ಟಕ್ಕೆಲ್ಲ ನಾಡಿಗೆ ಅವರು ಸಲ್ಲಿಸಿದ ಅಮೂಲ್ಯ ಕೊಡುಗೆಗಳನ್ನು ಕಡೆಗಣಿಸಿ ಮರೆಯುವಷ್ಟು ಕೃತಘ್ನರೆ ನಾವು ಕನ್ನಡಿಗರು? ಅಂತಹ ಕೊಡುಗೆಗಳ ಉದಾಹಾರಣೆಗೆ ಮಿಡ್'ನೈಟ್ ನಿಖಿಲ್ ಗೌಡ ಹಾಗೂ ಶಮಿತಾ ಕೆ,ಸ್ವಾಮಿಯವರಂತಹ ನಾಡಿನ ಭವಿಷ್ಯದ ಮುಖ್ಯಮಂತ್ರಿಗಳನ್ನೆ ತೆಗೆದುಕೊಳ್ಳಿ ಬೇಕಾದರೆ!!


ನಿಮ್ಮ ನೆನಪಿನ ಗಡಿಯಾರವನ್ನು ಕೇವಲ ಹದಿನೈದೇ ವರ್ಷ ಹಿಂದೆ ತಿರುಗಿಸಿಕೊಂಡು ಅವಲೋಕಿಸಿ ಒಮ್ಮೆ.ಅಂದು ಈ ದೇಶದ ಮೇಲೆ ದೊಡ್ಡದೊಂದು ವಿಪತ್ತು ಬಂದೊದಗಿತ್ತು, ದೇಶದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಕನ್ನಡಿಗ ಪ್ರಧಾನಮಂತ್ರಿ ಹರದನಹಳ್ಳಿ ದೊಡ್ದೇಗೌಡ ದೇವೇಗೌಡರು ಸೀತಾರಾಮ ಕೇಸರಿ ಎಂಬ ಮುದಿಕುತಂತ್ರಿಯ ಮೋಸಕ್ಕೆ ಸಿಲುಕಿ ತಮ್ಮ ಸರಕಾರವನ್ನು ಪತನದ ಅಂಚಿಗೆ ತಂದು ಕೊಂಡಿದ್ದರಲ್ಲ ಅವೇ ಭೀಕರ ದಿನಗಳು ನೋಡಿ.ಆಗ ರಾಜ್ಯದ ಯುವ ಸಂಸದರಾಗಿದ್ದ (ಈಗ ಬಿ ವೈ ರಾಘವೇಂದ್ರ ಆಗಿದ್ದಾರಲ್ಲ ಥೇಟ್ ಹಾಗೆ!) ಇದೇ ಕುಮಾರಣ್ಣ ದೆಹಲಿಯ ತುಂಬಾ ಅದೆಷ್ಟು ರಂಗೀನ್ ರಾತ್ರಿಗಳನ್ನ ಆಯೋಜಿಸಿ ಚಿಲ್ಲರೆ ಪಕ್ಷಗಳ ಸಂಸತ್ ಸದಸ್ಯರ ಮನೋಲ್ಲಾಸ ಹೆಚ್ಚಿಸಿಲ್ಲ? ದೇವೇಗೌಡರು ಅವರ ತಂದೆ ಅನ್ನೋದು ಬೇರೆ ಮಾತು ಆದರೆ 'ಪ್ರಗತಿಯ ಪಥ'ದಲ್ಲಿ (ಯಾರ ಪ್ರಗತಿ ಎಂಬ ಅಡ್ಡ ಪ್ರಶ್ನೆ ಈಗ ಬೇಡ!) ದೌಡಾಯಿಸುತ್ತಿದ್ದ ಕೇಂದ್ರ ಸರಕಾರವನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನವಾಗಿದ್ದ ಅವರ ಈ ರಾತ್ರಿ ಸೇವೆಗಳಲ್ಲಿ ಕೊಂಚವಾದರೂ ಸ್ವಂತ ಸ್ವಾರ್ಥವಿತ್ತ ಹೇಳಿ? ಅವರು "ಆ" ರಾತ್ರಿಗಳ 'ಖರ್ಚಿಗೆ' ಏನು ವ್ಯವಸ್ಥೆ ಮಾಡಿಕೊಂಡಿದ್ದರು ಎಂಬ ರಾಜಕೀಯ ಪ್ರೇರಿತ ಪ್ರಶ್ನೆ ನಿಮ್ಮಿಂದ ಬಂದದ್ದೆ ಆದಲ್ಲಿ ಖಂಡಿತ ನೀವು ನರಕಕ್ಕೆ ಹೋಗುತ್ತೀರಿ.


ಇನ್ನು 'ಮುಂದೆ ಬಂದರೆ ಹಾಯದೆ ;ಹಿಂದೆ ಬಂದರೆ ಒದೆಯದೆ' ತಮಗೆ ಸಿಕ್ಕಿದ್ದ ಕಿರುಅವಧಿಯಲ್ಲಿ ಸಿಕ್ಕಸಿಕ್ಕಲೆಲ್ಲ ಮೇಯುತ್ತಿದ್ದ ಧರ್ಮಸಿಂಗ್'ರ ಸರಕಾರಕ್ಕೆ ಬತ್ತಿ ಇಟ್ಟು "ಕೋಜಾ" ಸರಕಾರ ರಚನೆಗೆ (ಕೊಳಕು ಮನಸ್ಸು ನಿಮ್ಮದು!,ಅದರ ಅರ್ಥ ಕೋಮುವಾದಿ-ಜಾತ್ಯಾತೀತ ಅಂತ ಮಾತ್ರ!!) ಅದೆಲ್ಲಿಗೊ ಶಾಸಕರ ದಂಡು ಕಟ್ಟಿಕೊಂಡು ಓಡಿ ಹೋಗಿ ರೆಸಾರ್ಟ್ಗಳಲ್ಲಿ ರಾತ್ರಿಗಳನ್ನಷ್ಟೆ ಏನು ಹಗಲುಗಳನ್ನೂ ರಂಗು ರಂಗಾಗಿಸಿದ್ದಾಗ ಅದರ 'ಖರ್ಚಿಗೆ' ಕೊಟ್ಟ ಕುಬೇರರು ಯಾರು ಎಂಬ ನಿಮ್ಮ ಅಸಂಬದ್ಧ ಪ್ರಶ್ನೆಗಳಿಗೆಲ್ಲ ಅವರು ಉತ್ತರಿಸ ಬೇಕಾಗಿಲ್ಲ.

ಅವರು ಈ ನಾಡಿನ ಮುಖ್ಯಮಂತ್ರಿ ಆಗಿದ್ದಾಗಿನ ಸಂದರ್ಭವನ್ನೆ ನೆನಪಿಸಿಕೊಳ್ಳಿ ನೋಡೋಣ? ರಾಜ್ಯ ಆದಷ್ಟು ಸು'ಭಿಕ್ಷ'ವಾಗಿತ್ತು ಅರ್ಧರಾತ್ರಿಯಲ್ಲಿ ಯಾರು ಬೇಕಾದರೂ ಅರ್ಧ ಕ್ವಾಟ್ರು ಹೊಡಕೊಂಡು ನಿರ್ಭಯವಾಗಿ ದಾರಿಗಳಲ್ಲಿ ಸಾಗೋದಷ್ಟೇ ಅಲ್ಲ ಅಕ್ಕಪಕ್ಕದ ಪಬ್-ಬಾರ್'ಗಳಿಗೆ ಮನಸ್ಸು ಬಂದಾಗ ;ಅದು ನಡುರಾತ್ರಿ ಮೂರರ ನಂತರ ಆಗಿದ್ದರೂ ಸರಿಯೆ ಊಟ ಕೊಡಿ (ಬರೀ ಊಟ ಮಾತ್ರ,ತಿಂಡಿ-"ತೀರ್ಥ"?! ಅಲ್ಲ ಮತ್ತೆ!) ಅಂತ ಮೃದುವಾಗಿ ಕೇಳಿ,ಒಂದು ವೇಳೆ ಕೊಡದಿದ್ದರೆ ಮಾತ್ರ ನೇರ ಕಾರ್ಯಾಚರಣೆಗೆ ಇಳಿಯಬಹುದಿತ್ತಲ್ಲ.ಆಗೆಲ್ಲ ಎಷ್ಟು ಶಾಂತಿ ಸಮೃದ್ಧಿಯಿತ್ತು ನಾಡಿನಲ್ಲಿ,ಏನ್ ಕಥೆ! ತಾವು ಅಧಿಕಾರದಲ್ಲಿದ್ದರೂ ತಮ್ಮ ಸ್ವಂತ ಮಗ (ಅಧಿಕೃತ!), ಸಾಕ್ಷಾತ್ ಮುಖ್ಯಮಂತ್ರಿಗಳ ಮಗನೆ ಮುಕ್ಕಾಲು ರಾತ್ರಿ ಮೀರಿದ ಮೇಲೆಯೂ ಅಂತದ್ದೊಂದು ನೇರ ಕಾರ್ಯಾಚರಣೆ ನಡೆಸಿ ನಾಡಿಗೆ ಮಾದರಿಯಾಗಿ ಈ ಸುಭಿಕ್ಷತೆಗೆ ಮರುದಿನದ ಸುದ್ದಿ ಮಾಧ್ಯಮಗಳಲ್ಲೇ ಪುರಾವೆ ಒದಗಿಸಿಕೊಟ್ಟಿದ್ದರು.


ಹಾಗಂತ ಅವರು ಎಂದೂ ಪುತ್ರವ್ಯಾಮೋಹಿ ಆಗಿರಲೇಯಿಲ್ಲ ಮಗನ 'ರಾತ್ರಿ ಖರ್ಚಿಗೆ' ಎಂದೂ ತಮ್ಮ ಕುರ್ಚಿಯ ಬಲದಿಂದ ಹಣ ಕೊಡದೆ ಅದೇನಿದ್ರೂ 'ಅಧಿಕೃತ' ಅನಿತಕ್ಕನ 'ವಿವೇಚನಾ ಕೋಟಾ'ಕ್ಕೆ ಬಿಟ್ಟಿದ್ದರು! ಇಂತಹ ನಾಡಿನ ಭವಿಷ್ಯದ ಹೃದಯಕ್ಕೆ ರೋಗ ವ್ಯಾಪಿಸಿರೋದು ಕನ್ನಡಿಗರ ದುರಾದೃಷ್ಟ ಅಲ್ಲದೆ ಮತ್ತಿನ್ನೇನು? ಅವರಲ್ಲದೆ ಇನ್ಯಾರು ಕೇಳಬೇಕು ನ್ಯಾಯಮೂರ್ತಿ ಸಂತೋಷ್ ಹೆಗ್ಡೇರ 'ರಾತ್ರಿ ಖರ್ಚಿನ' ಮೂಲಗಳ ಬಗ್ಗೆ? ಅವರು ಇದಕ್ಕಾಗಿಯೆ ಆಗ್ರಹಿಸಿ ಇನ್ನೊಮ್ಮೆ ಒಂದೇ ದಿನದಲ್ಲಿ ಮುಗಿಯುವ ತಮ್ಮದೆ ಬ್ರಾಂಡಿನ 'ಅಮರಣಾಂತ ಉಪವಾಸ'ವನ್ನ ಆದಷ್ಟು ಶೀಘ್ರವಾಗಿ ಸಂಘಟಿಸಲಿ...ಆ ಮೂಲಕವಾದರೂ ಹೆಗ್ಡೆ ಖರ್ಚುವೆಚ್ಚದ "ರಹಸ್ಯ"(?!) ಹೊರ ಬೀಳಲಿ ಅನ್ನೋದು ಅವರ ಅಸಂಖ್ಯ ಅಭಿಮಾನಿಗಳ ಮನದಾಳದ ಆಶಯ.ಮೊನ್ನೆ ಮೊನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡ ಆ 'ರಾಧಿಕಾ' ರಮಣ ಶ್ರೀಕೃಷ್ಣನಲ್ಲಿ ಕನ್ನಡಿಗದ್ದು ಕುಮಾರಣ್ಣನ ಆರೋಗ್ಯಕ್ಕಾಗಿ ವಿಹ್ವಲ ಮೊರೆ.

No comments:

Post a Comment