ಉತ್ತರೋತ್ತರ ಮಹಮದನ ರಾಜಕೀಯ ಏಳಿಗೆಯನ್ನ ಸಹಿಸಲು ಮೆಕ್ಕಾದ ಖುರೈಷಿಗಳಿಗೆ ಆಗಲಿಲ್ಲ. ಆತನ ಉನ್ನತಿ ಕ್ರಮೇಣ ಅವರ ಕಣ್ಣನ್ನ ಕೆಂಪಾಗಿಸುತ್ತಾ ಬಂತು. ಪರಿಣಾಮ ಅವರು ಅವನನ್ನ ಮಟ್ಟ ಹಾಕಲು ಯುದ್ಧ ಸಿದ್ಧತೆಯಲ್ಲಿ ನಿರತರಾದರು. ಕ್ರಿಸ್ತಶಕ ೬೨೭ರ ಮಾರ್ಚ್ ತಿಂಗಳಿನಲ್ಲಿ ಅವರಿಂದ ಜರುಗಿದ ಈ ಪ್ರಯತ್ನ ನಿಜಕ್ಕೂ ಗಂಭೀರವಾಗಿತ್ತು. ಅವರ ಪಡೆ ಹತ್ತು ಸಾವಿರ ಯೋಧರಿಗಿಂತ ಹೆಚ್ಚಿತ್ತು. ಅವರ ಕುದುರೆ ಒಂಟೆ ಸಜ್ಜಿತ ಸೈನ್ಯದ ಜೊತೆಗೆ ಅರೇಬಿಯಾದ ಅಲೆಮಾರಿ ಸಮುದಾಯ ಬೆದಾವಿನ್ನರೂ ಸೇರಿದ್ದರು. ಇದರ ಹಿಂದೆ ಹಲವಾರು ಯಹೂದಿ ಗುಂಪುಗಳ ಒತ್ತಾಸೆಯೂ ಅಡಗಿತ್ತು. ಹುಯ್ಯೆ ಎಂಬ ಯಹೂದಿ ನಾಯಕ ಇದರಲ್ಲಿ ಅಗ್ರಗಣ್ಯನಾಗಿದ್ದ. ಅವರೆಲ್ಲಾ ಒಂದಲ್ಲೊಂದು ಕಾಲದಲ್ಲಿ ನಿಷ್ಕಾರಣವಾಗಿ ಮಹಮದನಿಂದ ಪೆಟ್ಟು ತಿಂದವರೆ ಆಗಿದ್ದು ಈ ಸಾರಿ ಖುರೈಷಿಗಳ ಜೊತೆಗೂಡಿ ತಾವೂ ಯುದ್ಧ ಸನ್ನದರಾದರು.
ಇದರ ಸುದ್ದಿ ಮದೀನಾದಲ್ಲಿದ್ದ ಮಹಮದನ ಕಿವಿಗೆ ಬೀಳಲು ಹೆಚ್ಚು ಹೊತ್ತಾಗಲಿಲ್ಲ. ಮದೀನಾದ ಪ್ರಜೆಗಳು ಈ ಒಗ್ಗಟ್ಟಿನ ವೈರಿಗಳ ಪಡೆಯ ಕಥೆ ಕೇಳಿಯೆ ಅದುರಿಹೋದರು. ಇಷ್ಟೊಂದು ಬೃಹತ್ ಪ್ರಮಾಣದ ಸೇನೆ ಮದೀನಾದ ಮೇಲೆ ಬಿದ್ದರೆ ಕಥೆಯೇನು ಎಂದು ಮಹಮದ್ ಸಹ ಮದೀನಾ ವಾಸಿಗಳಷ್ಟೆ ಚಿಂತಾಕ್ರಾಂತನಾದ. ಅಪಾರ ಸಂಖ್ಯೆಯಿಂದ ಕೂಡಿದ್ದ ಖುರೈಷಿಗಳ ಮೇಲೆ ಈ ಮೊದಲು ಮಾಡಿದ್ದಂತೆ ತಾನೆ ಮೊದಲಾಗಿ ಮುಗಿ ಬೀಳುವುದು ಸಹ ಅಪಾಯಕಾರಿ ಭಂಡಾಟವಾಗುತ್ತಿತ್ತು. ಆದರೆ ಇಲ್ಲಿ ಆತ ಜಾಣತನದಿಂದ ನಡೆದುಕೊಂಡ. ತನ್ನ 'ಸೀಲ್ಡ್ ನೆಕ್ಟರ್' ಕೃತಿಯ ಪುಟ ಸಂಖ್ಯೆ ಆರುನೂರಾ ಹತ್ತರಲ್ಲಿ ಐತಿಹಾಸಕಾರ ಅಲ್ ಮುಬಾರಖಿ ಹೇಳುವಂತೆ ಅರಬ್ಬರಿಗಿಂತ ಹೆಚ್ಚು ಯುದ್ಧ ನಿಷ್ಣಾತರಾಗಿದ್ದ ಹಾಗೂ ವಿಶೇಷ ಯುದ್ಧ ಕೌಶಲ್ಯವನ್ನ ಹೊಂದಿದ್ದ ಮದೀನಾದಲ್ಲಿದ್ದ ಪರ್ಷಿಯನ್ ಸಂಜಾತ ಸಲ್ಮಾನ್ ಎಂಬ ಯೋಧನ ಸಹಾಯವನ್ನು ಆತ ಈ ವೇಳೆ ಪಡೆದ.
ಮೊದಲು ಅವನ ಸಲಹೆಯಂತೆ ನಗರದ ಸುತ್ತಲೂ ಹದಿನೈದಡಿಯ ಕಲ್ಲಿನ ಕೋಟೆ ನಿರ್ಮಿಸಿಕೊಂಡು ಭದ್ರ ಪಡಿಸಲಾಯಿತು. ಇದರ ನಿರ್ಮಾಣಕ್ಕೆ ನಗರದ ಸರ್ವರೂ ಶ್ರಮದಾನ ಮಾಡಿದರು. ಹೆಚ್ಚು ಖರ್ಚಿಲ್ಲದೆ ಇದು ಕೆಲವೆ ದಿನಗಳಲ್ಲಿ ಎದ್ದು ನಿಂತಿತು. ಹೊರ ಭಾಗದಲ್ಲಿ ಒಂದು ಹತ್ತಡಿ ಆಳದ ಕಂದಕವನ್ನು ನಗರದ ಸುತ್ತಲೂ ತೋಡಲಾಯಿತು. ಆರಡಿ ಅಗಲವೂ ಇದ್ದ ಅದನ್ನ ಯಾರೂ ಹಾರಿ ದಾಟುವುದು ಸುಲಭ ಸಾಧ್ಯವಿರಲಿಲ್ಲ. ಇಷ್ಟು ಖಚಿತ ಪಡಿಸಿಕೊಂಡ ಮಹಮದನ ಪಡೆಗಳು ಕಲ್ಲು ಗೋಡೆಯ ಹಿಂದೆ ಕಾವಲಿನಂತೆ ನಿಂತವು. ಊರ ಹೊರಗಿದ್ದ ಕೆಲವರನ್ನ ಊರೊಳಗೆ ಸ್ಥಳಾಂತರಿಸಲಾಯಿತು.
ಖುರೈಷಿಗಳ ಸೈನ್ಯ ಮದೀನಾ ನಗರವನ್ನು ಮುತ್ತಿಗೆ ಹಾಕಲು ಬರುತ್ತಿದ್ದಂತೆ ಈ ಆಳದ ಕಂದಕವನ್ನು ನೋಡಿ ಬೆಕ್ಕಸ ಬೆರಗಾಯಿತು. ಈ ರಕ್ಷಣಾ ವ್ಯವಸ್ಥೆ ಅವರ ಪಾಲಿಗೆ ಹೊಸತಾಗಿತ್ತು. ಸದಾ ಬಯಲಿನಲ್ಲಿ ಕಾದಾಡಿ ಗೆದ್ದ ಅಥವಾ ಸೋತ ಅನುಭವವಿದ್ದ ಅವರಿಗೆ ಹೀಗೆ ಕೃತಕ ಗೋಡೆ ಹಾಗೂ ಕಂದಕ ನಿರ್ಮಿಸಿ ಯುದ್ಧ ಜಾಲ ಹಣೆಯುವುದನ್ನು ಕಂಡು ವಿಸ್ಮಯವಾಯಿತು. ಈ ಜಾಲ ಬೇಧಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ದಾರಿ ತೋಚದೆ ಅವರು ಕಂದಕದಾಚೆಗೆ ಠಿಕಾಣಿ ಹೂಡಿದರು.
ಈ ನಡುವೆ ಊರ ಹೊರಗೆ ಕೊಂಚ ದೂರದಲ್ಲಿ ವಾಸವಿದ್ದ ಬೆನ್ ಕೊರೈಝ್ ಯಹೂದಿ ಬುಡಕಟ್ಟಿನವರನ್ನ ಓಲೈಸಿ ತಮ್ಮ ಕಡೆ ಮಾಡಿಕೊಳ್ಳುವುದರಲ್ಲಿ ಖುರೈಷಿ ನಾಯಕ ಅಬು ಸಫ್ಯಾನ್ ಸಫಲಗೊಂಡ. ಮಹಮದನ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಂಡು ಅದನ್ನ ಪಾಲಿಸುತ್ತಿದ್ದ ಕಟ್ಟ ಕಡೆಯ ಯಹೂದಿ ಬುಡಕಟ್ಟು ಬೆನ್ ಕೊರೈಝರದ್ದಾಗಿತ್ತು. ಯಹೂದಿ ನಾಯಕ ಹುಯ್ಯೆ ಮೆಕ್ಕಾದವರ ಪರವಾಗಿ ಅವರೊಂದಿಗೆ ಯಶಸ್ವಿ ಸಂಧಾನ ನಡೆಸಿದ. ಈ ಸಂಗತಿ ಮಹಮದನ ಗಮನಕ್ಕೆ ಬರುತ್ತಿದ್ದಂತೆ ತನ್ನ ಬೇಹುಗಾರರನ್ನ ನಿಜಸ್ಥಿತಿ ಅರಿತು ಬರಲು ಆತ ಹೊರಗೆ ಅಟ್ಟಿದ. ಕತ್ತಲಿನಲ್ಲಿ ಹೊರ ಬಂದ ಅವರು ಶತ್ರು ಪಾಳಯದಲ್ಲಿ ಓಡಾಡಿ ಸುದ್ದಿಯನ್ನ ನೂರಕ್ಕೆ ನೂರು ಖಚಿತ ಪಡಿಸಿಕೊಂಡು ಮರಳಿ ಮದೀನಾ ಸೇರಿಕೊಂಡರು. ವಿಷಯ ಅರಿತ ಮಹಮದ್ ನಿಜಕ್ಕೂ ಹೆದರಿ ಹೋದ ಎನ್ನುತ್ತಾನೆ ಅಲ್ ಮುಬಾರಖಿ ತನ್ನ ಕೃತಿ 'ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ಆರುನೂರಾ ಹದಿನೆಂಟರಲ್ಲಿ.
ಮದೀನಾದ ಇನ್ನಿತರ ಪ್ರಜೆಗಳಿಗೂ ಅಪಾಯದ ಮುನ್ಸೂಚನೆ ಸಿಕ್ಕಿತು. ಮಹಮದನ ದಬ್ಬಾಳಿಕೆ ನೀತಿಗೆ ಬಲಿಯಾಗಿದ್ದ ಯಹೂದಿ ಬುಡಕಟ್ಟುಗಳೆಲ್ಲಾ ಒಂದಾಗಿದ್ದಾವೆ! ಅವರೆಲ್ಲಾ ಇನ್ನೇನು ಊರಿನ ಒಳಗೆ ಧಾಳಿ ಇಟ್ಟರೆ ತಮಗೆ ಉಳಿಗಾಲವಿಲ್ಲವೆನ್ನುವ ವಾಸ್ತವವನ್ನವರು ಮನಗಂಡರು. ಹೀಗಾಗಿ ಪೂರ್ತಿ ಮುಸಲ್ಮಾನರ ಹುಂಬತನವನ್ನೆ ನಂಬದೆ ರಕ್ಷಣಾ ಠಾಣೆಗಳನ್ನ ಇನ್ನಷ್ಟು ಬಲಪಡಿಸಿಕೊಂಡರವರು. ಕಂದಕ ದಾಟಲು ಭಂಡ ಧೈರ್ಯ ಮಾಡಿ ಒಂದೆರಡು ಕಡೆ ಖುರೈಷಿ ಪಡೆ ಒಳ ನುಗ್ಗಲು ಯತ್ನಿಸಿತ್ತಾದರೂ ತೀವೃ ಪ್ರತಿರೋಧ ತೋರುತ್ತಾ ಅವರನ್ನ ಮುನ್ನಡೆಯಲಾಗದಂತೆ ಹಿಮ್ಮೆಟ್ಟಿಸಲಾಯಿತು. ಸುತ್ತಲೂ ಕಂದಕ ಆವರಿಸಿರೋದರಿಂದ ಏಕ ಪ್ರಮಾಣದಲ್ಲಿ ಮುನ್ನುಗ್ಗಲಾರದೆ ಸಹಜವಾಗಿ ಬೃಹತ್ ಪಡೆ ಹೊಂದಿರುವ ಖುರೈಷಿಗಳು ನಿಸ್ಸಹಾಯಕರಾಗಿದ್ದರು. ಈಗ ಪಡೆಯ ಬುಡಕಟ್ಟುಗಳಲ್ಲಿ ಒಡಕು ಮೂಡಿಸುವುದರ ಹೊರತು ಬೇರೆ ಇನ್ನೇನೂ ಉಪಾಯ ಉಳಿದಿರಲಿಲ್ಲ.
ಮಹಮದನೂ ಈ ಕುಟಿಲೋಪಾಯದ ಮಾರ್ಗವನ್ನೆ ಆಯ್ದುಕೊಂಡ. "ಎಷ್ಟಾದರೂ ಯುದ್ಧ ಒಂದು ಮೋಸದಾಟವಷ್ಟೆ!" ಎಂದು ಉದ್ಘರಿಸಿದ ಆತ ಇದಕ್ಕಾಗಿ ತನ್ನ ಪಡೆಯಲ್ಲಿದ್ದ ನೋಯಿಮ್ ಎಂಬಾತನ ಸೇವೆಯನ್ನ ಬಳಿಸಿದ ಎನ್ನುತ್ತಾರೆ ಇತಿಹಾಸಕಾರ ಸಲಾಮ್ ಫಯಾದ್ ತನ್ನ "ಲೈಫ್ ಆಫ್ ಮಹಮದ್" ಕೃತಿಯ ಪುಟ ಸಂಖ್ಯೆ ನೂರಾ ಅರವತ್ತೆಂಟರಲ್ಲಿ. ನೋಯಿಮ್ ಗುಪ್ತವಾಗಿ ಬೆನ್ ಕೊರೈಝ್ ಮುಖಂಡರನ್ನ ಸಂಧಿಸಿ ಹೇಗಾದರೂ ಸರಿ ನೀವು ಖುರೈಷಿ ಒತ್ತೆಯಾಳುಗಳನ್ನ ಹಿಡಿದಿಟ್ಟುಕೊಳ್ಳಿ ಎಂದು ಪುಸಲಾಯಿಸಿ ಮನ ಒಲಿಸಿದ. ಅದಕ್ಕೆ ಆತ ಕೊಟ್ಟ ಕಾರಣವೂ ಒಪ್ಪಲಾರ್ಹವಾಗಿತ್ತು. ಒಂದು ವೇಳೆ ಮಹಮದ್ ಗೆದ್ದು ಖುರೈಷಿಗಳಿಗೆ ಸೋಲುಂಟಾದರೆ ಆಗ ಅಪಾಯ ನಿಮಗೆ. ಎಷ್ಟಾದರೂ ನೀವು ಇಲ್ಲಿಯೇ ಬಾಳಿ ಬದುಕ ಬೇಕಾದವರು. ಆಗೊಮ್ಮೆ ಮಹಮದನ ಆಕ್ರೋಶ ನಿಮ್ಮ ಮೇಲೆ ತಿರುಗಿದರೆ ಖುರೈಷಿಗಳು ನಿಮ್ಮ ಸಹಾಯಕ್ಕೆ ಧಾವಿಸ ಬೇಡವೆ? ಅವರ ಒತ್ತೆಯಾಳುಗಳು ನಿಮ್ಮ ಬಳಿ ಇದ್ದರೆ ಖಂಡಿತವಾಗಿಯೂ ಅವರು ಹಿಂತೆಗೆಯದೆ ಅಂತಹ ಸಂದರ್ಭಗಳಲ್ಲಿ ಸಹಾಯಕ್ಕೆ ಧಾವಿಸಿ ಬಂದೆ ಬರುತ್ತಾರೆ ಎಂದಾತ ಪುಸಲಾವಣೆಯ ದನಿಯಲ್ಲಿ ಹೇಳಿದ ಉಪಾಯವನ್ನ ಈ ಬೆಪ್ಪ ಬೆನ್ ಕೊರೈಝರು ಹೆಡ್ಡರಂತೆ ಒಪ್ಪಿಕೊಂಡು ಬಿಟ್ಟರು!
ಇದನ್ನ ಯಶಸ್ವಿಯಾಗಿ ಮಾಡಿ ಮುಗಿಸಿದ ನೋಯಿಮನೆಂಬ ನಾರದನ ಸವಾರಿ ಈಗ ಖುರೈಷಿಗಳ ಬಿಡಾರ ಹೊಕ್ಕಿತು. ಅಬು ಸಫ್ಯಾನನನ್ನು ತಾನೆ ಖುದ್ದಾಗಿ ದೂತನ ಅವತಾರದಲ್ಲಿ ಭೇಟಿಯಾದ ಅವನು ಇನ್ನೇನು ಬೆನ್ ಕೊರೈಝಾರು ನಿಮ್ಮಲ್ಲಿ ಧಾವಿಸಿ ಒತ್ತೆಯಾಳುಗಳನ್ನ ಕೇಳಲಿಕ್ಕಿದ್ದಾರೆ ಅನ್ನುವ ಸುದ್ದಿ ಬಂದಿದೆ! ಹಾಗೇನಾದರೂ ಅವರ ಆ ಕರಾರಿಗೆ ಬದ್ಧರಾಗಿ ನೀವು ಒತ್ತೆಯಾಳುಗಳನ್ನ ಬಿಟ್ಟುಕೊಟ್ಟರೆ ಕೆಟ್ಟಿರಿ. ಜಗತ್ತಿನಲ್ಲಿಯೆ ಅತಿ ಕೆಟ್ಟವರಾದ(?) ಆ ಜನರು ಆ ಎಲ್ಲಾ ಒತ್ತೆಯಾಳುಗಳನ್ನ ಮಹಮದನಿಗೆ ಒಪ್ಪಿಸಿ ಕ್ರೂರವಾಗಿ ಅವರ ಹತ್ಯೆ ಮಾಡಿಸಿ ಅನಂತರ ಮಹಮದನ ಪಡೆಯೊಂದಿಗೆ ಶಾಮೀಲಾಗಿ ನಿಮ್ಮ ಬುಡಕ್ಕೆ ಬಿಸಿನೀರು ಕಾಯಿಸಿಯೆ ತೀರುತ್ತಾರೆ ಎಂದು ಹೆದರಿಸಿದ. ಬೇಕಿದ್ದರೆ ಈಗಲೆ ಇದನ್ನು ಪರೀಕ್ಷಿಸಿ ನೋಡಬಹುದು, ಕೂಡಲೆ ಯುದ್ಧ ಘೋಷಣೆಯಾಗಿದೆ ಸಹಾಯಕ್ಕೆ ಧಾವಿಸಿ ಬನ್ನಿ ಎನ್ನುವ ಸುದ್ದಿ ಅವರಿಗೆ ಕಳಿಸಿ ನೋಡಿ ಬೇಕಾದರೆ ಎಂದು ಬತ್ತಿ ಇಟ್ಟು ತಾನು ಅವರ ಮರ್ಯಾದೆ ಗಿಟ್ಟಿಸಿ ಸುರಕ್ಷಿತನಾಗಿ ಮದೀನಾ ಹೊಕ್ಕು ಬಿಟ್ಟ ನೋಯೀಮ್.
ಖುರೈಷಿಗಳಿಗೆ ಅವನ ಮಾತಿನಲ್ಲಿ ಪೂರ್ತಿ ನಂಬಿಕೆ ಹುಟ್ಟದಿದ್ದರೂ ಸಹ ಒಮ್ಮೆ ಪರೀಕ್ಷಿಸಿ ನೋಡಲು ಅವನು ಹೇಳಿದಂತೆಯೆ ಮಾಡಿದರು. ಅಂದು ಶುಕ್ರವಾರವಾಗಿದ್ದು ಮರುದಿನ ಯಹೂದಿಗಳ ವಾರದ ಸಬ್ಬತ್ ದಿನವಾಗಿತ್ತು. ಶನಿವಾರದಂದು ದೇವರ ಧ್ಯಾನ ಹಾಗೂ ವಾರದ ಪ್ರಾರ್ಥನೆಗೆ ಮೀಸಲಾಗಿರುವುದರಿಂದ ಪ್ರವಾದಿ ಮೋಸೆಸ್ ವಿಧಿಸಿದ ಕಟ್ಟಳೆಗಳನ್ನ ಮೀರುವಂತಿಲ್ಲ ಹೀಗಾಗಿ ನಾಳೆಯೆ ಯುದ್ಧ ಕಣಕ್ಕೆ ಧುಮುಕುವುದು ಸಾಧ್ಯವಿಲ್ಲ ಎನ್ನುವ ಉತ್ತರ ಅತ್ತಲಿನಿಂದ ಬಂತು. ನೋಯಿಮನ ಚಾಡಿಗೆ ಖುರೈಷಿಗಳಲ್ಲಿ ಈ ರೀತಿಯಾಗಿ ಬೆಲೆ ಬಂತು!
ಈ ಬೆನ್ ಕೊರೈಝಾರನ್ನು ನಂಬುವಂತಿಲ್ಲ ಏಕಕಾಲದಲ್ಲಿ ನಮಗೂ ಮಾತುಕೊಟ್ಟು ಅದೆ ಹೊತ್ತಿನಲ್ಲಿ ಮಹಮದನೊಂದಿಗೂ ಅವರ ಸಂಧಾನ ಸಾಗಿದೆ ಎಂದು ಅವರು ಸಂಶಯ ಪಟ್ಟರು. ಹಾಗೇನಾದರೂ ಅವರು ಬೆನ್ನಿಗೆ ಬಾಕು ಹಾಕುವಂತೆ ಹಿಂದಿನಿಂದ ದಾಳಿ ಎಸಗಿದರೆ ತಾವು ಕೆಟ್ಟೆವು ಎಂದು ಅವರಿಗೆ ಅನ್ನಿಸಿತು. ಎರಡು ದಿನದಿಂದ ಕಾದರೂ ಪೂರ್ಣ ಪ್ರಮಾಣದ ಯುದ್ಧಾರಂಭ ಸಾಧ್ಯವಾಗಿರಲಿಲ್ಲ. ಮಹಮದನ ಕಂದಕ ತಂತ್ರದಿಂದ ಖುರೈಷಿಗಳು ಕೆಂಗೆಟ್ಟಿದ್ದರು. ಅದನ್ನ ದಾಟಿ ಪೂರ್ಣಪ್ರಮಾಣದ ಯುದ್ಧಾರಂಭ ಮಾಡಲು ಅವರಿಗೆ ಧೈರ್ಯ ಸಾಲದಾಗಿತ್ತು. ಇತ್ತ ಬೆನ್ ಕೊರೈಝರ ಬಗ್ಗೆ ಮೂಡಿದ್ದ ಅಪನಂಬಿಕೆ. ತಮ್ಮ ಸಹಾಯಕ್ಕೆ ಸ್ಥಳಿಯರು ಬಾರದಿದ್ದರೆ ಸೋಲುವ ಭೀತಿ, ಅಲ್ಲದೆ ತಮ್ಮ ಪಡೆಯ ಜಾನುವಾರುಗಳಿಗೆ ಬೇಕಾದಷ್ಟು ಮೇವು ಹಾಗೂ ನೀರು ಸಿಗದೆ ಉಂಟಾದ ಕೃತಕ ಆಹಾರದ ಕೊರತೆ ಇವೆಲ್ಲದರಿಂದ ಅವರು ಹೈರಾಣಾಗುತ್ತಿದ್ದರೆ, ರಾತ್ರಿ ವಿಪರೀತ ಬಿರುಗಾಳಿ ಸಹಿತ ಮಳೆ ಸುರಿದು ಅವರ ಯುದ್ಧ ಉತ್ಸಾಹವೆಲ್ಲ ನಂದಿ ಹೋದಂತಾಯಿತು.
ಅಬು ಸಫ್ಯಾನ ಮಂತ್ರಾಲೋಚನೆ ನಡೆಸಿ ಇಂತಹ ವ್ಯತಿರಿಕ್ತ ಪರಿಸ್ಥಿತಿಯಲ್ಲಿ ಯುದ್ಧ ಮಾಡುವುದು ಕಷ್ಟ ಸಾಧ್ಯ ಎನ್ನುವ ಸರ್ವ ಸಮ್ಮತಿಯನ್ನ ಒಪ್ಪಿದ್ಸ. ಹೀಗಾಗಿ ಮೆಕ್ಕಾದ ಸೈನ್ಯಕ್ಕೆ ಮರಳಿ ಮನೆಗೆ ಧಾವಿಸಲು ಆದೇಶಿಸಿ ತಾನು ತನ್ನ ಒಂಟೆಯನ್ನೇರಿ ಊರಿನ ಹಾದಿಯತ್ತ ದೌಡಾಯಿಸಿದ. ಇತ್ತ ಇದೆಲ್ಲಾ ತಾನು ದೇವರೊಂದಿಗೆ ಮಾಡಿಕೊಂಡ ಪ್ರಾರ್ಥನೆಯ ಫಲವೆಂದು ಮಹಮದ್ ಜಂಭ ಕೊಚ್ಚಿಕೊಂಡ. ದೇವರ ಒಳ ಸಹಕಾರ ತನ್ನ ಪರವಾಗಿದ್ದುದರಿಂದಲೆ ಹೆದರಿ ಖುರೈಷಿಗಳು ಓಡಿ ಹೋದರು ಸರ್ವಶಕ್ತನಿಗೆ ಸ್ತುತಿ ಎಂದಾತ ಬಡಾಯಿ ಕೊಚ್ಚಿಕೊಂಡ. ವಾಸ್ತವದಲ್ಲಿ ಆ ಸಂಧರ್ಭದಲ್ಲಿ ಎಲ್ಲರ ಪಾಲಿನ ಅಲ್ಲಾಹ ಯುದ್ಧ ತಪ್ಪಿಸಿದ ಕುತಂತ್ರಿ ನಾರದ ನೋಯಿಮನೆ ಆಗಿದ್ದ!
ನಿಟ್ಟುಸಿರು ಬಿಡುತ್ತಾ ಒಳಗೊಳಗೆ ಖುಷಿ ಹಾಗೂ ಸಮಾಧಾನ ಪಟ್ಟಿಕೊಂಡು ಆತ ತನ್ನ ಮನೆಗೆ ಮರಳಿ ಬಂದೊಡನೆ ಆತನಿಗೆ ಅಲ್ಲಿ ಯಕ್ಷ ಗ್ರಾಬ್ರಿಯಲ್ಲನ ತುರ್ತು ಸಂದೇಶ ಕಾದಿತ್ತು. ಒಡನೆಯೆ ಬೆನ್ ಕೊರೈಝಾರ ಮೇಲೆ ಮುಗಿ ಬೀಳುವಂತೆ ದೇವರು ಅವನಿಗೆ ಆದೇಶಿಸಿದ್ದ! ಎಷ್ಟಾದರೂ ದೈವಾಜ್ಞೆಯನ್ನ ಮೀರುವಂತಿರಲಿಲ್ಲ!! ಪಾಪ, ಹಗಲು ಕಂಡ ಬಾವಿಯಲ್ಲಿ ಮೂರ್ಖ ಬೆನ್ ಕೊರೈಜರು ನಿಚ್ಚಳ ಹಗಲಿನಿಲ್ಲಿಯೆ ಬಿದ್ದಿದ್ದರು?! ಕೂಡಲೆ ಅವರನ್ನ ಸುತ್ತುವರೆಯುವಂತೆ ಮಹಮದ್ ತನ್ನ ಮುಸಲ್ಮಾನ ಪಡೆಗಳಿಗೆ ಆಜ್ಞಾಪಿಸಿದ. ಯಾವುದೆ ಯುದ್ಧ ಸೂಚನೆಯಿಲ್ಲದೆ ಆರಾಮವಾಗಿದ್ದ ಬೆನ್ ಕೊರೈಝರು ಏಕಾಏಕಿ ಎರಗಿದ ಮುಸಲ್ಮಾನ ಪಡೆಗಳನ್ನ ಎದುರಿಸಲಾಗದೆ ಕೆಂಗೆಟ್ಟರು. ಬಾಣಗಳ ಮಳೆಗೈದು ಅವರನ್ನ ಕೆಂಗೆಡಿಸಲಾಯಿತು. ತಮ್ಮ ಕುಲದ ಇನ್ನಿತರ ಬುಡಕಟ್ಟುಗಳಿಗೆ ಬಂದೊದಗಿದ್ದ ಇಂತಹದ್ದೆ ದುಸ್ಥಿತಿಯನ್ನ ಈ ಹಿಂದೆ ಕಂಡು ಅರಿತಿದ್ದರೂ ಸೂಕ್ತ ಮುಂಜಾಗ್ರತೆ ವಹಿಸದ ಕಾರಣ ಈಗ ಅವರು ಬೃಹತ್ ಬೆಲೆಯನ್ನೆ ತೆರಬೇಕಾಗಿ ಬಂದಿತ್ತು.
ಹಿಂದೆ ಯಹೂದಿಗಳನ್ನ ಮಹಮದ್ ಹಿಂಸೆ ಮಾಡಿ ಕೊಂದ ಬಗ್ಗೆ ಅವರಿಗೆ ಈಗ ಪಶ್ಚಾತಾಪವಾಯಿತು, ಆಗ ಅವರ ಸಹಾಯಕ್ಕೆ ತಾವು ಧಾವಿಸಬೇಕಿತ್ತು ಅನ್ನುವ ಅರಿವು ಮೂಡಿತು. ಆದರೆ ಏನು ಮಾಡುವುದು ಈಗ ಕಾಲ ಮಿಂಚಿ ಹೋಗಿತ್ತು ಹಾಗೂ ಚಿಂತಿಸಿ ಮೂರು ಕಾಸಿನ ಪ್ರಯೋಜನವಿರಲಿಲ್ಲ. ಮುಸಲ್ಮಾನರ ಹಾವಳಿಯಿಂದ ರೋಸತ್ತು ತಮ್ಮ ಕೋಟೆ ಸುತ್ತ ನೆರೆದು ಹಿಂಸಾಚಾರಕ್ಕೆ ಇಳಿದ ಮುಸಲ್ಮಾನ ಯೋಧರಲ್ಲೊಬ್ಬನನ್ನು ಯಹೂದಿ ಮಹಿಳೆಯೊಬ್ಬಳು ಮೇಲಿನಿಂದ ಕಲ್ಲುಗುಂಡು ಎತ್ತಿ ಹಾಕಿ ಕೊಂದಳು.
ಕೋಟೆಯೊಳಗೆ ಅವಿತು ಹೋರಾಡುವ ಸಮರದಿಂದ ಸಮಯ ಮಾರ್ತ ವ್ಯರ್ಥ ಅನ್ನುವುದು ಅವರಿಗೆ ಎದುರಾಗಲಾರಂಭಿಸಿದ ಆಹಾರ ಹಾಗೂ ಮೇವಿನ ಕೊರತೆಯಿಂದ ಅರಿವಾಗತೊಡಗಿತು. ಶರಣಾಗತಿ ಸೂಚಿಸದೆ ಅನ್ಯ ಮಾರ್ಗವೆ ಉಳಿದಿರಲಿಲ್ಲ. ಹೀಗಾಗಿ ಈ ಹಿಂದೆ ಮಾಡಿದ್ದಂತೆ ತಮಗೂ ಕ್ಷಮಾದಾನ ನೀಡಿ ಬಿಟ್ಟರೆ ತಾವು ಆ ವಸತಿಯನ್ನೆ ತೊರೆದು ದೂರ ದೇಶಕ್ಕೆ ಸಾಗುವ ಭರವಸೆಯ ಸಂದೇಶವನ್ನು ಅವರು ಮಹಮದನಿಗೆ ಕಳಿಸಿದರು. ಆದರೆ ಈ ಬಾರಿ ಹೆಚ್ಚು ಕಠಿಣನಾಗಿದ್ದ ಮಹಮದ್ ಇದಕ್ಕೆ ಒಪ್ಪಲಿಲ್ಲ. ಯಹೂದಿಗಳು ಕಾಡಿ ಬೇಡಿ ತಾವು ಅರಬ್ಬರ ಔಸ್ ಬುಡಕಟ್ಟಿನವರೊಂದಿಗೆ ಹೆಚ್ಚು ಅನ್ಯೋನ್ಯವಾಗಿದ್ದ ಸಂಗತಿಯನ್ನ ನೆನಪಿಸಿ ಗೋಳಿಟ್ಟರೂ ಮಹಮದನ ಎದೆ ಮಾತ್ರ ಕರಗಲಿಲ್ಲ. ಅವರಿಗೆ ಅತಿ ಕಠಿಣ ಶಿಕ್ಷೆ ನೀಡುವ ಸನ್ನಾಹದಲ್ಲಿ ಅವನಿದ್ದ.
ಅವರು ಔಸ್ ಬುಡಕಟ್ಟಿನ ಅರಬ್ಬರ ಮುಖಂಡ ಅಬು ಲುಬಾಬನನ್ನ ಮಧ್ಯಸ್ಥಿಕೆ ವಹಿಸಲು ಪ್ರಾರ್ಥಿಸಿದರು. ಅವರ ಹೆಂಗಸರು ಮಕ್ಕಳ ಗೋಳು ಸಂಕಟ ನೋಡಲಾರದೆ ಅಬು ಲುಬಾಬ್ ಮೊದಲು ಸಂಧಾನಕ್ಕೆ ಸಮ್ಮತಿಸಿದನಾದರೂ ಮಹಮದನ ಕ್ರೌರ್ಯದ ನುಡಿಗಳನ್ನ ಕೇಳಿದವ ತೆಪ್ಪಗಾದ. ಮರಳಿ ಕೊರೈಝರ ಬಿಡಾರ ಮುಟ್ಟಿ ಕತ್ತಿಯಿಂದ ತನ್ನ ಕತ್ತನ್ನೆ ಕಡಿದುಕೊಳ್ಳುವಂತೆ ನಟಿಸುತ್ತಾ ಸಾಂಕೇತಿಕವಾಗಿ ಹೋರಾಡಿ ಸಾಯುವುದೆ ಲೇಸು ಎಂದವನು ಅವರೆಲ್ಲರಿಗೂ ಬೋಧಿಸಿದ. ಆತ ಪ್ರಾಮಾಣಿಕವಾದ ಸಂಧಾನ ಪ್ರಯತ್ನಗಳನ್ನು ಮಾಡಿದ್ದ. ಯುದ್ಧ ಎಷ್ಟಾದರೂ ಮೋಸದಾಟವಷ್ಟೆ ಎಂದು ಆತ ಮಹಮದನ ಮುಂದೆ ವಾದಿಸಿದ್ದ. ಮಹಮದ ಕಠಿಣನಾದಷ್ಟೂ ಆತ ತಾನು ಅಮಾಯಕ ಯಹೂದಿಗಳಿಗೆ ಯುದ್ಧ ಮಾಡಿ ಸಾಯಲು ತಿಳಿಸಿ ವಂಚಿಸಿದೆ, ಅವರ ನೋವಿಗೆ ನಾನೆ ಕಾರಣನಾಗಿ ಹೋದೆ, ದೇವರ ಶಾಪಕ್ಕೆ ಗುರಿಯಾಗಲಿದ್ದೇನೆ ಎಂದು ಹಲುಬಿದ.
ಕೊನೆಗೆ ಬೇರೆ ಉಪಾಯ ಕಾಣದೆ ತನ್ನನ್ನ ತಾನು ಮದೀನಾದ ಮುಖ ಮಸೀದಿಯ ಬಳಿ ಮರವೊಂದಕ್ಕೆ ಹಗ್ಗಗಳಿಂದ ಬಿಗಿದುಕೊಂಡು ಅನೇಕ ದಿನ ಅನ್ನ ನೀರಿಲ್ಲದೆ ನಿಂತ. ಇದನ್ನ ಕಂಡು ಮೊದಮೊದಲು ಉಪೇಕ್ಷಿಸಿದರೂ ವಾರದ ನಂತರ ಮಹಮದ್ ಅವನನ್ನ ಅಲ್ಲಿಂದ ಬಿಡಿಸಿ ಅವನ ಸ್ವಯಂ ಪ್ರೇರಿತ ಶಿಕ್ಷೆಯಿಂದ ಪಾರು ಮಾಡಿದ ಎನ್ನುತ್ತಾನೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತನ್ನ 'ಲೈಫ್ ಆಫ್ ಮಹಮ್ದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಹದಿನೈದರಲ್ಲಿ.
ಇತ್ತ ಔಸರ ಮಧ್ಯಸ್ಥಿಕೆಗೆ ಒಪ್ಪುವಂತೆ ಬೆನ್ ಕೊರೈಝರು ಸಂದೇಶಗಳನ್ನ ಮೇಲಿಂದ ಮೇಲೆ ಕಳಿಸುತ್ತಲೆ ಇದ್ದರು. ಕಡೆಗೂ ಇದನ್ನ ಒಪ್ಪಿದಂತೆ ಈಗ ಮಹಮದ್ ನಟಿಸಿದ. ಅವರಿಗೆ ಶರಣಾದರೆ ಗಡಿಪಾರು ಮಾಡಲಾಗುವುದು ಎಂದು ತಿಳಿಸಲಾಯಿತು. ಅವರು ಅದಕ್ಕೆ ಒಪ್ಪಿ ಕೋಟೆ ಬಾಗಿಲು ತೆರೆದು ಸರ್ವ ಶರಣಾಗತಿ ಸೂಚಿಸಿದರು. ಅವರ ಎರಡು ಸಾವಿರ ಗಂಡಸರನ್ನ ಹೆಂಗಸರು ಹಾಗೂ ಮಕ್ಕಳಿಂದ ಬೇರ್ಪಡಿಸಿ ಬೆನ್ನ ಹಿಂದಕ್ಕೆ ಅವರೆಲ್ಲರ ಕೈಯನ್ನ ಬಿಗಿದು ಕಟ್ಟಿ ಕೋಟೆಯಿಂದ ಹೊರಗೆ ಎಳೆದು ತರಲಾಯಿತು. ಮಹಿಳೆಯರಿಂದ ಮತ್ತೆ ಮಕ್ಕಳನ್ನ ಬೇರ್ಪಡಿಸಿ ಗುಲಾಮರನ್ನಾಗಿಸಲು ಎರಡು ಗುಂಪಾಗಿಸಲಾಯಿತು. ಅವರೆಲ್ಲರನ್ನೂ ಮಹಮದನ ಮುಂದೆ ತಂದಾಗ ಯಹೂದಿ ಸುಂದರಿ ರೆಹಾನಾ ತನ್ನ ರೂಪರಾಶಿಯಿಂದ ಮಹಮದ ರಸಿಕ ಮನಸ್ಸನ್ನ ಸೆಳೆದಳು. ಅವಳನ್ನ ತನ್ನವಳನ್ನಾಗಿಸಿಕೊಳ್ಳಲು ಅವನು ನಿರ್ಧರಿಸಿದ. ಯಹೂದಿಗಳ ಸಕಲ ಆಸ್ತಿಪಾಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಯಿತು.
ಔಸ್ ಬುಡಕಟ್ಟಿನ ಮುಖಂಡರು ಈಗ ನ್ಯಾಯ ಪಂಚಾಯ್ತಿಗೆ ಬಂದಾಗ, ತಲೆತಲಾಂತರದ ಶಾಂತಿ ಒಪ್ಪಂದ ಮುರಿದು ಬೀಳುವ ಹಂತದಲ್ಲಿನ ಕ್ರಮದಂತೆ ಅವರೆಲ್ಲರನ್ನೂ ಎಲ್ಲಾ ಕಿತ್ತುಕೊಂಡು ಗಡಿಪಾರು ಮಾಡಲು ಅಡ್ಡಿಯಿಲ್ಲ ಎಂಬುದನ್ನ ಮಹಮದನ ಗಮನಕ್ಕೆ ತರಲಾಯಿತು. ಆದರೆ ಅದಕ್ಕೂ ಮೊದಲು ಒಂದು ವಿಚಾರಣೆಯ ನಾಟಕವನ್ನಾಡಲು ಮಹಮದ್ ನಿರ್ಧರಿಸಿದ. ಸಾದ್ ಇಬ್ನ್ ಮಅದ್ ಎನ್ನುವ ಮುಸಲ್ಮಾನ ಮುಖಂಡನನ್ನು ನ್ಯಾಯಾಧೀಶನಾಗಿ ನೇಮಿಸಿ ವಿಚಾರಣೆ ಆರಂಭಿಸಲಾಯಿತು. ವಾಸ್ತವದಲ್ಲಿ ಗಡಿಪಾರು ಮಾಡುವ ಉದ್ದೇಶ ಮಾತ್ರವಿದ್ದಿದ್ದರೆ ಈ ವಿಚಾರಣೆ ಎನ್ನುವ ಪ್ರಹಸನವೆ ಅನಗತ್ಯವಾಗಿತ್ತು. ಮಹಮದ ಹೆಣೆದ ಬಲೆಗೆ ಮೊದಲ ದಿನವೆ ಬಿದ್ದಿದ್ದ ಬೆನ್ ಕೊರೈಝರು ವಾಸ್ತವದಲ್ಲಿ ನಿರಪರಾಧಿಗಳೆ ಆಗಿದ್ದರು.
ಆದರೆ ಕುತಂತ್ರಿ ಮಹಮದನ ಮೆದುಳು ಬೇರೇನನ್ನೋ ನಿರ್ಧರಿಸಿ ಆಗಿತ್ತು. ನ್ಯಾಯಾಧೀಶನ ನೇಮಕದಲ್ಲಿಯೆ ಅವನ ಪ್ರಾಮಾಣಿಕತೆ ಅನಾವರಣಗೊಂದಿತು. ಈ ಸಾದ್ ಕೆಲವೆ ದಿನಗಳ ಹಿಂದೆ ಕೊರೈಝಾರ ಕೋಟೆಯ ಲಗ್ಗೆ ಕಾರ್ಯದಲ್ಲಿ ಅವರಿಂದ ಮಾರಣಾಂತಿಕ ಕತ್ತಿಯೇಟು ತಿಂದ ಒಬ್ಬ ಯೋಧನಾಗಿದ್ದ. ಪ್ರತಿಕಾರದಿಂದ ಕುದಿಯುತ್ತಿದ್ದ ಅವನ ಮನಸ್ಸಿನಲ್ಲಿ ನಿಶ್ಪಕ್ಷಪಾತದ ನಡುವಳಿಕೆಗೆ ಪ್ರೇರಣೆ ಹುಟ್ಟುವುದಂತೂ ಸಾಧ್ಯವೆ ಇರಲಿಲ್ಲ. ದೇಹದ ಮೇಲಿನ ಗಾಯವೆ ಇನ್ನೂ ಮಾಯ್ದಿರಲಿಲ್ಲ ಇನ್ನು ಅವನ ಮನಸ್ಸಿನ ಗಾಯ ಮಾಯುವುದಾದರೂ ಹೇಗೆ ಸಾಧ್ಯ? ಅಷ್ಟಕ್ಕೂ ಅವನಿಗೆ ನ್ಯಾಯ ವಿಚಾರಣೆಯ ಗಂಧ ಗಾಳಿಯೂ ಇರಲಿಲ್ಲ. ಅಲ್ಲದೆ ಯುದ್ಧದ ಕಾಲಾಳುವಾದ ಆತ ಸಮಚಿತ್ತದ ವಿಚಾರಣೆ ನಡೆಸಲು ಸಂತನೂ ಆಗಿರಲಿಲ್ಲ.
( ಇನ್ನೂ ಇದೆ.)
No comments:
Post a Comment