Friday, November 27, 2015

ವಲಿ - ೩೬









ಮೊದಲೆ ಸ್ಪಷ್ಟ ಪಡಿಸಿದ್ದಂತೆ ಮೆಕ್ಕಾ ಒಂದು ಸರ್ವಧರ್ಮ ಕೇಂದ್ರವಾಗಿತ್ತು. ಧಾರ್ಮಿಕವಾಗಿ ಅದು ಇಂದು ಮುಸಲ್ಮಾನರ ಏಕಸಾಮ್ಯಕ್ಕೆ ಒಳಪಟ್ಟಿದೆ ಅನ್ನುವ ಕ್ಷುಲ್ಲಕ ಕಾರಣಕ್ಕೆ ಯಾರಾದರೂ ಅದನ್ನ ಹೀಗಳೆದು ಮಾತನಾಡುವುದು ಅಕ್ಷಮ್ಯ. ಯಾರಿಗೆ ಗೊತ್ತು? ಇರುಳು ಹರಿದು ಮತ್ತೆ ಬೆಳಕಾಗುವಂತೆ ಮರಳಿ ಅಲ್ಲಿ ಸರ್ವಧರ್ಮೀಯರೂ ಪ್ರವೇಶಿಸುವ ಕಾಲವೂ ಸನ್ನಿಹಿತವಾಗುತ್ತಿರಬಹುದು. ಅಲ್ಲಿ ಮುಸಲ್ಮಾನೇತರರಿಗೆ ಖಡ್ಡಾಯವಾಗಿ ಪ್ರವೇಶ ನಿಷೇಧಿಸಿರುವ ಇಸ್ಲಾಮಿನ ಗೂಂಡಾಗಿರಿಗೂ ಒಂದು ಕೊನೆ ದಿನ ಮುಂದೆ ಇದ್ದಿರಬಹುದು. ಈಗ ವಿಷಯಕ್ಕೆ ಬರೋಣ. ಪವಿತ್ರ ನಗರಿಯಾಗಿ ಹೊರ ಹೊಮ್ಮಿದ್ದ ಮೆಕ್ಕಾದ ಕಾಬಾ ಗುಡಿಯ ಮೇಲಿನ ಅಧಿಪತ್ಯವನ್ನ ವಂಶಪಾರಂಪರ್ಯವಾಗಿ ಸೌರಮಾನ ಪಂಚಾಂಗ ಹಾಗೂ ದಿನಮಾನಗಳ ಅನುಸಾರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವ ಜವಾಬ್ದಾರಿಯೊಂದಿಗೆ ಖುರೈಷಿ ಕುಲಸ್ಥರು ಪಡೆದಿದ್ದರು. ಈಗ ಅವೆಲ್ಲವೂ ಬಲಾತ್ಕಾರವಾಗಿ ಮಹಮದನ ವಶಕ್ಕೆ ಹೋಗಿದ್ದವು. ಅವನು ಇಚ್ಛಿಸಿದವರಿಗೆ ಅಲ್ಲಿನ ಜವಾಬ್ದಾರಿಗಳನ್ನ ಹೊರಿಸಲು ಸ್ವತಂತ್ರ್ಯನಾಗಿದ್ದನು. ಅದನ್ನ ಪ್ರಶ್ನಿಸುವ ಎದೆಗಾರಿಕೆ ಅಲ್ಲಿನ ಇನ್ಯಾರಿಗೂ ಉಳಿದಿರಲಿಲ್ಲ.



ಹಾಗಂತ ಆತ ಅಲ್ಲಿನ ಯಾವುದೆ ಪ್ರಾಚೀನ ಧಾರ್ಮಿಕ ವಿಧಿ ವಿಧಾನಗಳನ್ನಾಗಲಿ - ಕಾಯ್ದೆ ಕಟ್ಟಳೆಗಳನ್ನಾಗಲಿ ಎಂದೂ ಬದಲಿಸುವ ಗೋಜಿಗೆ ಹೋಗಲಿಲ್ಲ. ವಿಗ್ರಹಾರಾಧನೆ ಇದ್ದ ಇಸ್ಲಾಂ ಪೂರ್ವದ ಆಚರಣೆಗಳನ್ನೆ ವಿಧಿವತ್ತಾಗಿ ಮುಂದೆಯೂ ಆಚರಿಸಲು ಆತ ಅನುವು ಮಾಡಿಕೊಟ್ಟಿದ್ದ. ಅವನ್ನೆ ಅಷ್ಟಿಷ್ಟು ತಿದ್ದಿ ತೀಡಿ ತನ್ನ ಇಸ್ಲಾಮಿನಲ್ಲಿಯೂ ಅಳವಡಿಸಿಕೊಳ್ಳುವ ಜಾಣ್ಮೆಯನ್ನಾತ ಮೆರೆದ. ಹಿಂದಿನಿಂದಲೂ ಸುತ್ತಮುತ್ತಲಿನ ಬುಡಕಟ್ಟಿನವರು ನಂಬಿ ಆಚರಿಸಿಕೊಂಡು ಬರುತ್ತಿದ್ದ ಯಾವುದೆ ಆರಾಧನೆ ಹಾಗೂ ಹರಕೆಯ ವಿಧಿವಿಧಾನಗಳಿಗೂ ಹೀಗಾಗಿ ಯಾವುದೆ ಚ್ಯುತಿ ಬರಲಿಲ್ಲ. ಹಿಂದಿನ ಧಾರ್ಮಿಕ ರೀತಿನೀತಿಗಳನ್ನ ತ್ಯಜಿಸದೆ, ಅಲ್ಲಿನ ಯಾವುದೆ ನಂಬಿಕೆಯ ಆಚರಣೆಗಳಿಗೆ ಅಡ್ಡಿ ಪಡಿಸದೆ ಆತ ಭಾವನೆಗಳಿಗೆ ಧಕ್ಕೆ ಮಾಡದೆ ತನ್ನ ನೂತನ ಧರ್ಮದಲ್ಲೂ ಅವನ್ನೆಲ್ಲಾ ಅಳವಡಿಸಿದ್ದು ಅವನ ನೂತನ ಹಿಂಬಾಲಕರಿಗೆಲ್ಲಾ ಸರ್ವಸಮ್ಮತವಾಗಿತ್ತು. ಇದರ ಪರಿಣಾಮವಾಗಿಯೆ ಅರೆಬಿಯಾ ಪ್ರಸ್ಥಭೂಮಿಯಲ್ಲಿ ಇಸ್ಲಾಮ್ ಬಲವಾಗಿ ಬೇರೂರಿತು.


ಇಸ್ಲಾಮಿನ ಸ್ಥಾಪನೆಯೊಂದಿಗೆ ಅದನ್ನ ಒಪ್ಪಿ ಅಪ್ಪಿ ನಡೆದವರೆಲ್ಲಾ ಏಕ ದೈವತ್ವ ಹಾಗೂ ಮಹಮದನ ಪ್ರವಾದಿತ್ವವನ್ನು ಸ್ವೀಕರಿಸಿ ಮುನ್ನಡೆದರೂ ಸಹ ಅವರು ಆತನ ಧರ್ಮೇತರ ಜಾತ್ಯತೀತ ಅಧಿಪತ್ಯಕ್ಕೂ ಸಹ ತಲೆಬಾಗಲೆ ಬೇಕಾಯಿತು. ಧರ್ಮಪಾಲನೆಯ ಜೊತೆಗೆ ಧಾರ್ಮಿಕ ಕಾಣಿಕೆಯನ್ನೂ ಸಹ ಒಪ್ಪಿಸುವ ಕ್ರಮ ಕಟ್ಟುನಿಟ್ಟಿನಿಂದ ಜಾರಿಗೆ ಬಂತು. ಅದು ಕಪ್ಪದ ರೂಪದಲ್ಲಿರದೆ ಪ್ರತ್ಯೇಕವಾಗಿ ವರ್ಷಕ್ಕೊಂದಾವರ್ತಿ ತಮ್ಮ ದುಡಿಮೆಯ ಒಟ್ಟು ಪಾಲಿನ ನಿಗದಿತ ಪರಿಮಾಣವನ್ನು ಧಾರ್ಮಿಕ ದೇಣಿಗೆಯಾಗಿ ನೀಡುವ ಹೊಸ ಕ್ರಮವಾಗಿತ್ತು. ಆದರೆ ವಿಧರ್ಮೀಯರಾದ ಯಹೂದಿ, ಕ್ರೈಸ್ತ ಹಾಗೂ ಇನ್ನಿತರ ಮೂರ್ತಿಪೂಜಕ ಬುಡಕಟ್ಟಿನವರು ಮಾತ್ರ ಈಗ ಒತ್ತಾಯದ ತಲೆಗಂದಾಯವಾಗಿ ಕಟ್ಟುನಿಟ್ಟಿನ ಕಪ್ಪ ಒಪ್ಪಿಸಲೇ ಬೇಕಾಗಿ ಬಂತು.

ಮಹಮದ್ ಮೆಕ್ಕಾದ ನೂತನ ಅಧಿಪತಿಯಾದ ನಂತರ ಈ ಎಲ್ಲಾ ಕಂದಾಯಗಳನ್ನ ಕಾಲಕಾಲಕ್ಕೆ ಕಟ್ಟುನಿಟ್ಟಾಗಿ ಸಂಗ್ರಹಿಸಲು ಅಧಿಕಾರಿಗಳನ್ನ ಅತನ್ನ ಪರವಾಗಿ ನೇಮಿಸಿದ ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೮೨೧ರಲ್ಲಿ. ಅದರಲ್ಲಿ ಆ ಅಧಿಕಾರಗಳ ವಿವರವಾದ ಪಟ್ಟಿಯನ್ನೆ ಮುಬಾರಖಿ ನೀಡಿದ್ದು ಆಸಕ್ತರು ಗಮನಿಸಬಹುದು. ಈ ಕಂದಾಯಗಳಿಗೆ ಮಹಮದನ ಅನುಯಾಯಿಗಳಿದ್ದ ಪ್ರದೇಶಗಳಲ್ಲಿ ಔಚಿತ್ಯಪೂರ್ಣವಾದ ಸ್ವಾಗತ ದೊರೆತು ಸ್ವ ಇಚ್ಛೆಯಿಂದಲೆ ಕಂದಾಯ ಸಲ್ಲಿಸುವ ಪರಿಪಾಠ ಆರಂಭವಾಯಿತು. ಆದರೆ ಎಲ್ಲಾ ಕಡೆಯಲ್ಲಿಯೂ ಇದೆ ಪರಿಯಲ್ಲಿ ಅಧಿಕಾರಿಗಳು ಹೃತ್ಪೂರ್ವತೆಯನ್ನ ಕಾಣಲಾಗಲಿಲ್ಲ. ಪ್ರತಿರೋಧಗಳನ್ನೂ ಸಹ ಆಲ್ಲಿ ಅವರು ಕಾಣಬೇಕಾಗಿ ಬಂತು. ಬೆನ್ ತಮೀಮ್ ಬುಡಕಟ್ಟಿನವರೂ ಹೀಗೆ ಸೆಡ್ಡು ಹೊಡೆದವರಲ್ಲಿ ಒಬ್ಬರಾಗಿದ್ದರು. ಕಂದಾಯ ಸಂಗ್ರಹಕ್ಕೆ ಅಧಿಕಾರಗಳು ಬಂದಿದ್ದಾಗ ಬಂಡೆದ್ದ ಬುಡಕಟ್ಟಿನವರು ಅವರನ್ನ ಮುಲಾಜಿಲ್ಲದೆ ಒದ್ದು ಓಡಿಸಿದರು.

ಸುದ್ದಿ ಮಹಮದನಿಗೆ ಬಂದು ಮುಟ್ಟಿದಾಗ ತನ್ನ ವಿರುದ್ಧ ಬಂಡೆದ್ದ ಅವರಿಗೆ ಬುದ್ಧಿ ಕಲಿಸಲು ಆತ ಒಂದು ದಂಡನ್ನ ಕಳುಹಿಸಿದ. ಒಯ್ಯಾನ್ ಎಂಬ ಆತನ ನೆಚ್ಚಿನ ಬಂಟನ ನೇತೃತ್ವದಲ್ಲಿ ನಡೆದ ಈ ಧಾಳಿ ಯಶಸ್ವಿಯಾಗಿ ಆತ ಅಲ್ಲಿ ಆಗ ಇದ್ದ ಗಂಡಸರು, ಹೆಂಗಸರು, ಮಕ್ಕಳು ಮುದುಕರು ಹಾಗೂ ಜಾನುವಾರುಗಳೆನ್ನದೆ ಎಲ್ಲರನ್ನೂ ಸೆರೆ ಹಿಡಿದು ಮಹಮದನ ಬಳಿ ಕರೆತಂದ. ಇವರನ್ನೆಲ್ಲ ಸೆರೆಯಲ್ಲಿಡಲಾಗಿತ್ತು. ಅವರ ಪರವಾಗಿ ಬಿಡುಗಡೆಗಾಗಿ ಪ್ರಾರ್ಥಿಸಲು ಅಳಿದುಳಿದ ಬೆನ್ ತಮೀಮ್ ಬುಡಕಟ್ಟಿನ ಕೆಲವರು ನಿಯೋಗ ತಂದರು. ಅವರು ಈ ಹಿಂದೆ ಮಹಮದನ ಪರವಾಗಿ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದವರೆ ಆಗಿದ್ದು ಆತನಿಂದ ಶೌರ್ಯಕ್ಕೆ ಶಾಭಾಷಗಿರಿಯನ್ನೂ ಸಹ ಪಡೆದಿದ್ದರು. ಅದನ್ನೆಲ್ಲಾ ಆತನಿಗೆ ವಿವರವಾಗಿ ನೆನಪಿಸಿಕೊಡಲು ಅವರು ನಿರ್ಧರಿಸಿದರು. ಬೆದಾವಿನರಲ್ಲಿ ಒಂದು ಉಪ ಬುಡಕಟ್ಟಾಗಿದ್ದ ಬೆನ್ ತಮೀಮರು ಸ್ವಭಾವತಃ ಒರಟರಾಗಿದ್ದರು.



ಅವರ ಸಂಸ್ಕೃತಿ, ಭಾಷೆ ಹಾಗೂ ನಡೆನುಡಿ ತೀರಾ ಕಚ್ಚಾವಾಗಿದ್ದು ಅವರೆಲ್ಲಾ ಮಹಮದನ ಮನೆಯ ಮುಂದೆ ನಿಂತು 'ಏ ಮಹಮದ್! ಹೊರಗೆ ಬಾ. ನಮ್ಮ ಬಳಿಗೆ ಬಾ' ಎಂದು ಬೊಬ್ಬಿಡಲು ಆರಂಭಿಸಿದರು. ಮಹಮದ್ ಈಗೀಗ ಅರೇಬಿಯಾದಲ್ಲಿಯೆ ಒಬ್ಬ ಗಣ್ಯವ್ಯಕ್ತಿಯಾಗಿ ಗುರುತಿಸಪಡುತ್ತಿದ್ದ. ಅವನನ್ನು ಕೇವಲ ಒಬ್ಬ ಸಾಮಾನ್ಯ ದಾರಿಹೋಕನಂತೆ ಹೀಗೆ ಅಸಭ್ಯವಾಗಿ ಕೂಗಿ ಕರೆಯುವುದು ಅವನಿಗೆ ಅಸಹನೀಯವೆನ್ನಿಸಿತು. ಅವನು ಸಿಟ್ಟಿನಿಂದಲೆ ಹೊರಬಂದ. ಮಧ್ಯಾಹ್ನದ ಪ್ರಾರ್ಥನೆಯ ಹೊತ್ತು ಸಮೀಪವಾಗಿದ್ದರಿಂದ ಆತ ನಮಾಝ್ ಮುಗಿಸಿ ಬಂದು ಮಸೀದಿಯ ಪಡಸಾಲೆ ಪಕ್ಕದ ಕೋಣೆಯಲ್ಲಿ ಬೆನ್ ತಮೀಮ್ ಪ್ರತಿನಿಧಿಗಳ ಅಹವಾಲನ್ನ ಆಲಿಸಿದ. ಅವರು ವಿಚಿತ್ರವಾದ ಸವಾಲೊಂದನ್ನ ಅವನ ಮುಂದೊಡ್ಡಿದರು. ಮದೀನಾ ನಗರದಲ್ಲಿಯೆ ವಾಕ್ ಸಾಮರ್ಥ್ಯವಿರುವ ಯಾರಾದರೂ ತಮ್ಮ ಕವಿತ್ವದ ಪ್ರತಿಭಾ ಪ್ರದರ್ಶನ ಮಾಡಬಹುದಂತಲೂ, ಅವರು ಆತನನ್ನ ಕವಿತ್ವದಲ್ಲಿ ಸೋಲಿಸಿದರೆ ತಮ್ಮವರನ್ನ ಬಿಡಬೇಕಂತಲೂ ಅವರು ಪಂಥಾಹ್ವಾನ ಕೊಟ್ಟರು. ಮಹಮದ್ ಈಗ ಇಕ್ಕಟ್ಟಿನಲ್ಲಿ ಸಿಕ್ಕಿ ಬಿದ್ದ. ಈ ನೂತನ ಮೇಲಾಟದ ವಿಧಾನ ಅವನ ಪಾಲಿಗಂತೂ ಹೊಸತೆ ಆಗಿತ್ತು. ಆದರೆ ತನ್ನ ಮುಖ ಉಳಿಸಿಕೊಳ್ಳಲು ಕಡೆಗೂ ಆತ ಈ ವಿಲಕ್ಷಣ ಸ್ಪರ್ಧೆಗೆ ಸಮ್ಮತಿಸಿದ.


ಬೆನ್ ತಮೀಮ್ ಪಾಳಯದಿಂದ ಹಲವಾರು ಕವಿ ಪುಂಗವರು ತಮ್ಮಾ ಕವಿತಾ ಸಾಮರ್ಥ್ಯವನ್ನ ತೋರಿಸಿದರು. ಅವರಿಗೆ ಪೈಪೋಟಿಯಾಗಿ ಮದೀನಾದ ವಿದ್ವನ್ಮಣಿಗಳು ಹಾಗೂ ಕವಿ ಸರ್ವೋತ್ತಮರೂ ಸಹ ತಮ್ಮೆಲ್ಲಾ ಪ್ರತಿಭೆಗಳನ್ನ ಮೆರೆದರು. ಮಹಮದನ ಆಪ್ತ ಹಾಗೂ ಆತನ ಸೂಳೆ ಮೇರಿಯ ಮೂಲಕ ಶಡ್ಡಕನಾಗುತ್ತಿದ್ದ ಕವಿ ಹಸನ್ ಭಾವಪೂರ್ಣವಾಗಿ ಉತ್ತಮವಾದ ಕವಿತೆಯನ್ನ ತನ್ಮಯತೆಯಿಂದ ಪಠಿಸಿದಾಗ ನೆರೆದಿದ್ದವರೆಲ್ಲಾ ಆನಂದಾಶ್ಚರ್ಯಗಳಿಂದ ಹರ್ಷೋದ್ಗಾರ ಮಾಡಿದರು. ವಿರೋಧಿ ಬೆನ್ ತಮೀಮರೂ ಅದನ್ನ ಉತ್ಕೃಷ್ಟ ರಚನೆ ಎಂದು ಒಪ್ಪಿಕೊಂಡು ತಲೆದೂಗಿದರು. ಅವರ ಈ ಪ್ರತಿಕ್ರಿಯೆಯಿಂದ ಸಂತುಷ್ಟನಾದ ಮಹಮದ್ ಮೊತ್ತಮೊದಲ ಬಾರಿಗೆ ಮನಃಪೂರ್ವಕವಾಗಿ ಎಲ್ಲಾ ಬಂಧಿತ ಜನ ದನ ಜಾನುವಾರುಗಳನ್ನ ಬಿಡುಗಡೆಗೊಳಿಸಿದ. ಅವರ ಪ್ರತಿಭೆಗೆ ಮೆಚ್ಚಿ ಉದಾರವಾಗಿ ಕೈತುಂಬ ಕೊಡುಗೆಗಳನ್ನೂ ಸಹ ದಯಪಾಲಿಸಿ ಊರಿಗೆ ಕಳುಹಿಸಿಕೊಟ್ಟ. ಇದರಿಂದ ಒರಟ ಬೆನ್ ತಮೀಮರೂ ಆನಂದಿತರಾಗಿ ಅವರಲ್ಲಿ ಇಸ್ಲಾಮ್ ಸ್ವೀಕರಿಸದೆ ತಟಸ್ಥರಾಗಿದ್ದವರೂ ಸಹ ಈಗ ಮತಾಂತರವಾಗಿ ಮುಸಲ್ಮಾನರಾದರು ಎನ್ನುತ್ತಾನೆ ಇತಿಹಾಸಕಾರ ಅಲ್ ಮುಬಾರಕಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ನ ಪುಟ ಸಂಖ್ಯೆ ೨೨೬ರಲ್ಲಿ.



ಕ್ಷಮಿಸಿ ಬೀಳ್ಕೊಟ್ಟರೂ ಸಹ ಅವರ ಅಸಭ್ಯ ಭಾಷಾ ಪ್ರಯೋಗ ಹಾಗೂ ಅನಾಗರಿಕ ವರ್ತನೆಗಳನ್ನ ಮಹಮದ್ ಮರೆಯಲಿಲ್ಲ. ದೈವವಾಣಿಯನ್ನ ಪಡೇದುಕೊಂಡು ಒಂದು ಸುರಾದ ಮೂಲಕ ತನ್ನ ಅಂತಸ್ತಿನ ಬಗ್ಗೆ, ತನ್ನನ್ನ ಭೇಟಿ ಮಾಡಲು ಬರುವ ಅತಿಥಿಗಳು ಗಮನ ಕೊಡಬೇಕಾದ ಸಭ್ಯತೆಯ ಬಗ್ಗೆ ಹಾಗೂ ಅವರ ನಡೆನುಡಿಗಳ ಅಪೇಕ್ಷಣೀಯತೆಯ ಬಗ್ಗೆ ಕೆಲವು ಟೀಕೆ ಟಿಪ್ಪಣಿಗಳನ್ನ ಮಾಡಿದನು. ಸುರಾ ಸಂಖ್ಯೆ ೩೩/೫೩ರಲ್ಲಿ ಇದನ್ನ ಆಸಕ್ತರು ಗಮನಿಸಬಹುದು. ಇದೆ ಸಮಯದಲ್ಲಿ ಆತ ಕಪ್ಪ ವಸೂಲಿಯ ಕಾರಣಕ್ಕೆ ಅನೇಕ ದಂಡಯಾತ್ರೆಗಳನ್ನೂ ಸಹ ಕೈಗೊಂಡ. ಇದರ ಜೊತೆಗೆ ಆತ ಕೆಲವು ವಿರೋಧಿಗಳನ್ನ ಮಣಿಸುವ ಉದ್ದೇಶವನ್ನೂ ಸಹ ಇಟ್ಟುಕೊಂಡು ಮುನ್ನಡೆದಿದ್ದ. ಜೆಡ್ಡಾದ ಮೇಲೆ ಆತ ನಡೆಸಿದ್ದ ಅಂತಹ ಒಂದು ದಂಡಯಾತ್ರೆ ಇಲ್ಲಿ ಅತಿಮುಖ್ಯವಾಗುತ್ತದೆ. ಅಬಿಸೀನಿಯಾದವರ ಜೊತೆಜೊತೆಗೆ ಜೆಡ್ಡಾದ ಜನತೆ ಕೂಡಾ ಆರಂಭದಲ್ಲಿ ಪ್ರತಿರೋಧಿಸಿ ಸೆಡ್ಡು ಹೊಡೆದು ನಿಂತಿದ್ದರು. ಅವರನ್ನ ಮಣಿಸಲು ಮಹಮದ್ ಒಂದು ದೊಡ್ಡ ಪಡೆಯನ್ನೆ ಅಲ್ಲಿಗೆ ಕಳುಹಿಸಿದ್ದ.


ಅದೆ ಹೊತ್ತಿನಲ್ಲಿ ತನ್ನ ಅಳಿಯ ಅಲಿಯನ್ನು ಸಹ ಬೆನ್ ಥೈ ಬುಡಕಟ್ಟಿನವರ ಮೇಲೆ ಛೂ ಬಿಟ್ಟ. ಅವರು ವಿಗ್ರಹಾರಾಧಕರಾಗಿದ್ದು ಒಂದು ಬೃಹತ್ ಗುಡಿ ಕಟ್ಟಿಕೊಂಡು ಅಲ್ಲಿ ತಮ್ಮ ದೇವರ ಪೂಜೆ ಪುನಸ್ಕಾರವನ್ನ ಶ್ರದ್ಧಾಭಕ್ತಿಯಿಂದ ಮುಂದುವರೆಸಿದ್ದರು. ಅಲಿ ತನ್ನ ಪಡೆಯೊಂದಿಗೆ ಅಲ್ಲಿಗೆ ಧಾಳಿ ಇಟ್ಟು ಬೆನ್ ಥೈ ಬುಡಕಟ್ಟಿನವರನ್ನು ಸೋಲಿಸಿ ಅವರ ಸಕಲ ಸಂಪತ್ತನ್ನೂ ದೋಚಿ ತಂದ. ಹಲವಾರು ಸ್ತ್ರೀ ಪುರುಷರು ಅಲಿಗೆ ಗುಲಾಮರಾಗಿ ಸೆರೆ ಸಿಕ್ಕಿದರು. ಇತಿಹಾಸ ಪ್ರಸಿದ್ಧ ಹಾಥಿಮ್ ತಾಯ್ ಪುತ್ರಿಯೂ ಈ ಸೆರೆಯಾಳುಗಳಲ್ಲಿ ಒಬ್ಬಳಾಗಿದ್ದಳು. ಅವಳ ಅಣ್ಣ ಆದಿ ಎಂಬಾತ ಅಲಿಯ ಪಡೆ ಅಲ್ಲಿಗೆ ನುಗ್ಗುವ ಸೂಚನೆ ದೊರೆತ ಕೂಡಲೆ ಸಿರಿಯಾದತ್ತ ಪಲಾಯನಗೈದಿದ್ದ.


ಹಾಥಿಮ್ ತಾಯ್'ನ ಪುತ್ರಿ ತನ್ನ ತಂದೆಯ ಪ್ರಾಮುಖ್ಯತೆಯನ್ನ ವಿವರಿಸಿ ಅಳುತ್ತಾ ಮಹಮದನ ಕೃಪೆಗಾಗಿ ಯಾಚಿಸಿದಳು. ಮಹಮದ್ ಕನಿಕರಗೊಂಡು ಸೂಕ್ತ ಗೌರವಾದರಗಳೊಂದಿಗೆ ಅವಳನ್ನ ಬಿಡುಗಡೆ ಮಾಡಿದ. ಅವಳಿಗೆ ಸೂಕ್ತ ಸಮ್ಮಾನ ಒದಗಿಸಿ ಉಡುಗೊರೆಗಳೊಂದಿಗೆ ಹಿಂದಕ್ಕೆ ಕಳುಹಿಸಿಕೊಟ್ತ. ಮನೆಮುಟ್ಟಿದ ಅವಳು ತನ್ನ ಅಣ್ಣನನ್ನು ಅರಸುತ್ತಾ ಸಿರಿಯಾದತ್ತ ತೆರಳಿದಳು. ಅಲ್ಲಿ ಕಾಣ ಸಿಕ್ಕ ಆದಿಯನ್ನ ಮನ ಒಲಿಸಿ ಮಹಮದನ ಬಳಿಗೆ ಕರೆ ತಂದಳು. ಮಹಮದ್ ಅವನನ್ನು ಮನ್ನಿಸಿ ಇಸ್ಲಾಮಿಗೆ ಸೇರಿಸಿಕೊಂಡ. ಮುಂದೆ ಮಹಮದನ ಪರವಾಗಿ ಆದಿ ಅನೇಕ ದಂಡಯಾತ್ರೆಗಳಲ್ಲಿ ಹೋರಾಡಿ ಪ್ರಸಿದ್ಧನೂ ಆದ. ಅವನ ಬುಡಕಟ್ಟಿನ ನೇತೃತ್ವವನ್ನ ಅವನಿಗೆ ಪಟ್ಟ ಕಟ್ಟಲಾಯಿತು. ಅಲ್ಲಿಗೆ ಇನ್ನೊಂದು ಪ್ರದೇಶ ಇಸ್ಲಾಮಿನ ತೆಕ್ಕೆಗೆ ಬಂತು.


ಇದೆ ಹೊತ್ತಿನಲ್ಲಿ ಮೆಕ್ಕಾದ ಕವಿಗಳಲ್ಲಿ ಒಬ್ಬನಾಗಿದ್ದ ಕಾಬ್'ನ ಕಥೆಯ ದೃಷ್ಟಾಂತವನ್ನು ಇತಿಹಾಸದ ಪುಟಗಳಲ್ಲಿ ನೀಡಲಾಗಿದೆ. ಅವನ ಸಹೋದರ ಮಹಮದನ ಇಸ್ಲಾಮಿಗೆ ಮತಾಂತರವಾಗಿದ್ದ. ಅದನ್ನ ಸಹಿಸದ ಕಾಬ್ ತನ್ನ ಅಣ್ಣನ ವಿರೋಧವಾಗಿಯೆ ಅಸಮಾಧಾನದಿಂದ ತನ್ನ ವಿರೋಧ ಹಾಗೂ ಶಂಕೆಯನ್ನ ತೋರ್ಪಡಿಸುತ್ತಾ ಕವನಗಳನ್ನ ರಚಿಸಿ ಸಿಟ್ಟು ತೋಡಿಕೊಂಡಿದ್ದ. ಈ ವಿಷಯ ಮಹಮದನ ಗಮನಕ್ಕೆ ಬರುತ್ತಲೂ ಆತನ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವ ಇಂಗಿತವನ್ನು ವ್ಯಕ್ತಪಡಿಸಿದ. ಇದರಿಂದ ಬೆದರಿದ ಕಾಬ್'ನ ಅಣ್ಣ ತಮ್ಮನತ್ತ ದೌಡಾಯಿಸಿ ಒಂದೋ ಇಲ್ಲಿಂದ ಓಡಿ ಪಾರಾಗು ಇಲ್ಲವೆ ಮಹಮದನ ಇಸ್ಲಾಮ್ ಸ್ವೀಕರಿಸಿ ಅವನ ಅನುಯಾಯಿಯಾಗಿ ತಲೆ ಉಳಿಸಿಕೋ ಎಂದು ಪರಿಪರಿಯಾಗಿ ಅವನನ್ನು ಓಲೈಸಿ ದಾರಿಗೆ ತರಲು ಯತ್ನಿಸಿದ. ಆರಂಭದಲ್ಲಿ ಕಾಬ ಅಣ್ಣನ ಮಾತನ್ನು ಕಾಬ್ ಸರಾಸಗಟಾಗಿ ಧಿಕ್ಕರಿಸಿದರೂ ಸಹ ಅನಂತರದ ಕೆಲವು ಕಹಿ ಘಟನೆಗಳ ಹಿನ್ನೆಲೆಯಲ್ಲಿ ಕಂಗಾಲಾಗಿ ಮಹಮದನನ್ನೆ ಖುದ್ದಾಗಿ ಕಂಡು ಈ ಸಂಕಟಗಳಿಂದ ಪಾರಾಗಲು ಮದೀನಾದತ್ತ ಹೊರಡುವುದು ಅನಿವಾರ್ಯವಾಯಿತು.


ಮಹಮದನ ಮಸೀದಿಯ ದ್ವಾರದಲ್ಲಿ ನಿಂತು ಗಟ್ಟಿ ಧ್ವನಿಯಲ್ಲಿ ಮಹಮದನ ಕಿವಿಗೆ ಬೀಳುವ ಹಾಗೆ "ಜುಹೈರ್'ನ ಕಾಬ್ ಎಂಬುವವ ನಿಮ್ಮ ಬಳಿ ಬಂದು ತಮ್ಮ ವಿಶ್ವಾಸ ಹಾಗೂ ಕ್ಷಮಾಪಣೆ ಬೇಡಲು ತಯ್ಯಾರಾಗಿದ್ದಾನೆ! ನಾನು ಅವನನ್ನು ಕರೆ ತಂದರೆ ಕ್ಷಮಿಸುವಿರೇನು?" ಎಂದು ಭಿನ್ನವಿಸಿದ. ಮಹಮದ್ ಅದನ್ನು ಸಮ್ಮತಿಸಿ ಅಸ್ತು ಎಂದ ಕೂಡಲೆ ಆತ ಇನ್ಯಾರು ಅಲ್ಲ ನಾನೆ ಎಂದು ಕಾಬ್ ಸ್ಪಷ್ಟ ಪಡಿಸಿದ! ತನ್ನ ಕೃತಜ್ಞತೆಯ ದ್ಯೋತಕವಾಗಿ ಒಂದು ಆಶು ಕವಿತೆಯನ್ನ ಸ್ಥಳದಲ್ಲಿಯೆ ರಚಿಸಿ ಹಾಡಿದ. ಅದೆ ಮುಂದೆ ಇತಿಹಾಸದ ಪುಟಗಳಲ್ಲಿ 'ಕ್ವಾಸಿದ್ಧತ್ ಅಲ್ ಬುರ್ದ್' ಅಥವಾ 'ಪೊಯಮ್ ಆಫ್ ಮ್ಯಾಂಟ್ಲ್" ( poem of mantle) ಎಂದೆ ಪ್ರಸಿದ್ಧವಾಗಿದೆ.


ಆ ಹೊಗಳು ಪದಗಳೆ ತುಂಬಿದ್ದ ಕವಿತೆಯ ಸಾಲೊಂದು ಸಾರುವಂತೆ 'ಹೌದು, ಪ್ರವಾದಿ ದೇವರ ಆಯುಧಶಾಲೆಯಲ್ಲಿನ ಒಂದು ಬಿಚ್ಚುಗತ್ತಿ! ವಿಶ್ವಕ್ಕೆ ಬೆಳಕು ನೀಡುವ ದೀಪ?!' ಎಂದು ಭಟ್ಟಂಗಿಯಾಗಿ ಹಾಡಿದ್ದಾನೆ ಕಾಬ್. ತನ್ನ ವೈಭವ, ಕೀರ್ತಿ ಹಾಗೂ ಉದಾರತೆಯನ್ನು ಸಾರುವ ಮಹೋನ್ನತ ಮುಖಸ್ತುತಿಗಳೆ ತುಂಬಿದ್ದ ರಚನೆಯ ಆ ಕವಿತೆಯನ್ನ ಕೇಳಿ ಮಹಮದ್ ಸಹಜವಾಗಿ ಉಬ್ಬಿ ಆನಂದ ತುಂದಿಲನಾದ. ಉಕ್ಕಿ ಹರಿದ ಖುಷಿಯಲ್ಲಿ ಆತ ಎದ್ದು ನಿಂತು ತಾನು ಧರಿಸಿದ್ದ ಮೇಲಂಗಿಯನ್ನೆ ತೆಗೆದು ಕಾಬನ ಮೈ ಮೇಲೆ ಗೌರವಪೂರ್ವಕವಾಗಿ ಹೊದೆಸುತ್ತಾ ಆತನನ್ನು ಕ್ಷಮಿಸಿ ತನ್ನ ಸಂತೋಷವನ್ನು ಪ್ರಕಟ ಪಡಿಸಿದ. ಈ ಮೇಲಂಗಿಯನ್ನ ಕೊಡುಗೆಯಾಗಿ ಗಿಟ್ಟಿಸಿದ್ದ ಕವಿತೆಯಾಗಿರುವ ಕಾರಣದಿಂದಲೆ ಮುಂದೆ ಈ ಕವಿತೆ 'ಮೇಲಂಗಿಯ ಕವಿತೆ' ಎಂದು ಪ್ರಸಿದ್ಧಿ ಪಡೆಯಿತು. ಕ್ರಮೇಣ ಕಾಲಾನುಕ್ರಮದಲ್ಲಿ ಈ ಮೇಲಂಗಿ ಕಾಬನ ವಂಶಸ್ಥ್ರಿಂದ ಖಲೀಫರ ಖಜಾನೆ ಹೋಗಿ ಸೇರಿತು. ಅದರ ಒಂದು ತುಣುಕು ಇಂದಿಗೂ ತುರ್ಕಿಯ ಇಸ್ತಾಂಬುಲ್ಲಿನಲ್ಲಿದೆ.



( ಇನ್ನೂ ಇದೆ.)

No comments:

Post a Comment