Saturday, November 14, 2015

ವಲಿ - ೨೯








ಸ್ವತಂತ್ರ್ಯ ಅಸ್ತಿತ್ವದ ಈ ಪ್ರಾಥಮಿಕವಾದ ಕಿರು ಮನ್ನಣೆಯನ್ನು ಮಹಮದ್ ದೇವರು ತನಗೆ ನೀಡಿದ ವಿಜಯವೆಂದು ಸಾರಿ ಬಡಾಯಿ ಕೊಚ್ಚಿಕೊಂಡ. ಖುರ್ಹಾನಿನ ಸುರಾ ೪೮/೧-೨, ೪-೫ ಈ ಮಾತುಗಳನ್ನ ಪುಷ್ಠೀಕರಿಸುತ್ತವೆ. ಅಕೇಶಿಯಾ ಮರದ ಬುಡದಲ್ಲಿ ಅಲ್ - ಹೊಬೈದಿಯಾದಲ್ಲಿ ತನ್ನ ಅನುಯಾಯಿಗಳು ನೀಡಿದ ಮಾತು ಹಾಗೂ ಇತ್ತ ಭಾಷೆಯನ್ನು ಆ ದೇವರು ಮೆಚ್ಚಿದ್ದಾನೆ. ಹೀಗಾಗಿ ಈ ಶಾಂತಿ ಒಪ್ಪಂದ ಸಾಧ್ಯವಾಗಿದೆ. ಈ ಭರವಸೆಯ ನಡೆಗಾಗಿ ಮುಂದಿನ ದಿನಗಳಲ್ಲಿ ಅದ್ಭುತವಾದ ಕೊಳ್ಳೆ ಹಾಗೂ ಲೂಟಿಗಳ ಪ್ರತಿಫಲವನ್ನು ಆ ಪರಮಾತ್ಮ ಈ ನಂಬಿಕಸ್ಥ ಬಂಟರಿಗೆಲ್ಲಾ ತಂದುಕೊಡುವುದರಲ್ಲಿ ಸಂಶಯವಿಲ್ಲ ಎಂದು ಖುರ್ಹಾನಿನ ಸುರಾ ಸಂಖ್ಯೆ ೪೮/೧೮-೨೦ರಲ್ಲಿ ಭರವಸೆಗಳ ಮಳೆಯನ್ನೆ ಆತ ಸುರಿಸಿ ಅವರೆಲ್ಲರ ಮನಗೆದ್ದ.


ಖುರೈಷಿಗಳೊಡನೆ ಶಾಂತಿ ಒಪ್ಪಂದ ಜಾರಿಗೆ ಬಂದ ನಂತರ ಉಂಟಾದ ಒಂದು ಗೊಂದಲದ ಘಟನೆ ಆ ಒಪ್ಪಂದವನ್ನೆ ನಿರುಪಯುಕ್ತ ಗೊಳಿಸಿಬಿಟ್ಟಿತು. ಆದು ನಡೆದದ್ದು ಹೀಗೆ. ಅಬ್ದುಲ್ ಬಶೀರ್ ಎಂಬ ಮೆಕ್ಕಾದ ನಿವಾಸಿಯೊಬ್ಬ ಮುಸಲ್ಮಾನನಾಗಿ ಮತ ಪರಿವರ್ತಿತನಾಗಿದ್ದ. ಈ ಪರಿವರ್ತನೆ ಆತನ ಸ್ವಂತ ಇಚ್ಛೆಯಿಂದಲೆ ಆಗಿತ್ತು. ಆದರೆ ಆತ ಊರು ಬಿಡುವ ಹಾಗಿರಲಿಲ್ಲ. ಶಾಂತಿ ಒಪ್ಪಂದದ ನಿಯಮಗಳನುಸಾರ ಯಾರೊಬ್ಬರೂ ತಮ್ಮ ಪೋಷಕರ ಒಪ್ಪಿಗೆಗೆ ವಿರುದ್ಧವಾಗಿ ಮತ ಪರಿವರ್ತಿತರಾದರೂ ಸಹ ಮದೀನಾಕ್ಕೆ ಹೋಗಿ ನೆಲೆಸುವಂತಿರಲಿಲ್ಲ. ಬೇಕಿದ್ದರೆ ಮೆಕ್ಕಾದಲ್ಲಿಯೆ ಮುಸಲ್ಮಾನಾಗಿ ಉಳಿಯಬಹುದಿತ್ತು. ಬಶೀರ್ ಈ ನಿಯಮವನ್ನು ಉಲ್ಲಂಘಿಸಿ ಪಾಲಕರ ಹಿಡಿತ ತಪ್ಪಿಸಿಕೊಂಡು ಮೆಕ್ಕಾದಿಂದ ಮದೀನಕ್ಕೆ ಕದ್ದು ಓಡಿ ಹೋದ. ಹಳೆಯ ಮತಾಚರಣೆಗಳ ನಡುವೆ ಬಾಳುವುದು ಅವನಿಗೆ ಅಸಹನೀಯವಾಗಿದ್ದರಿಂದ ಆತ ಈ ಪಲಾಯನವನ್ನ ಮಾಡಿದ್ದ. ಆದರೆ ಆತನ ಪಾಲಕರು ಇದನ್ನ ಪ್ರತಿಭಟಿಸಿ ನಿಂತರು. ಅವನನ್ನ ಮರಳಿ ಮನೆಗೆ ಕಳುಹಿಸಲು ಆಗ್ರಹಿಸಿ ಇಬ್ಬರು ಸೇವಕರನ್ನ ಮದೀನಕ್ಕೆ ಮಹಮದನ ಬಳಿ ಕಳುಹಿಸಿದರು.



ಇದು ಮಹಮದನ ಅರಿವಿಗೆ ಬರುತ್ತಲೆ ಆತ ಯಾವುದೆ ತಕರಾರನ್ನ ವ್ಯಕ್ತ ಪಡಿಸದೆ ಹಾಗೂ ಬಶೀರನನ್ನು ಯಾವುದೆ ರಿಯಯತಿ ತೋರದೆ ಶಾಂತಿ ಒಪ್ಪಂದದ ಅನುಸಾರವೆ ಮರಳಿ ಅವರೊಂದಿಗೆ ಮೆಕ್ಕಾಕ್ಕೆ ಕಳುಹಿಸಿಕೊಟ್ಟ. ವಾಸ್ತವವಾಗಿ ಬಶೀರ್ ಅನುಮತಿ ಇಲ್ಲದೆ ಓಡಿ ಬಂದಿರುವ ವಾಸ್ತವ ಸಂಗತಿ ಆತನಿಗೆ ಅರಿವಿರಲಿಲ್ಲ. ಆದರೆ ಕುಪಿತನಾಗಿದ್ದ ಬಶೀರ್ ಅವಮಾನವನ್ನ ಸಹಿಸಲಿಲ್ಲ. ಹಿಂದಿರುಗುವ ದಾರಿ ಮಧ್ಯದಲ್ಲಿ ಆತ ನೌಕರನೊಬ್ಬನ ಕತ್ತಿಯನ್ನ ಕಸಿದುಕೊಂಡು ಆತನ ಹತ್ಯೆಗೈದ. ಇನ್ನೊಬ್ಬ ಆತನ ಏಟುಗಳಿಂದ ಪಾರಾಗಿ ಮರಳಿ ಮದೀನಕ್ಕೆ ಓಡಿ ಬಂದು ಮಹಮದನಿಗೆ ಈ ಅಘಾತಕಾರಿ ಘಟನೆಯ ಮಾಹಿತಿ ಇತ್ತು ಬಶೀರನ ವಿರುದ್ಧ ದೂರು ಕೊಟ್ಟ. ಅವನ ಹಿಂದಿಯೆ ರಕ್ಸಸಿಕ್ತ ಕತ್ತಿ ಹಿಡಿದ ಬಶೀರ್ ಸಹ ಪ್ರತ್ಯಕ್ಷವಾದ. ಈಗ ತಾನು ಸ್ವತಂತ್ರ್ಯ ವ್ಯಕ್ತಿಯಾಗಿದ್ದು ಯಾರೊಬ್ಬರೂ ತನ್ನ ಮೇಲೆ ಅಭಿಪ್ರಾಯಗಳನ್ನು ಹೇರುವಂತಿಲ್ಲ. ಅದು ನನ್ನ ಪಾಲಕರಿಗೂ ಅನ್ವಯ ಎಂದಾತ ಚೀರಿ ಸಾರಿದ. ಇದೆಲ್ಲವನ್ನೂ ಮಹಮದ್ ಮೌನವಾಗಿ ನೋಡುತ್ತಾ ನಿಂತನೆ ಹೊರತು ತುಟಿ ಎರಡು ಮಾಡಲಿಲ್ಲ. ಬಶೀರನ ಉದ್ವೇಗ ಕೊಂಚ ಇಳಿದ ನಂತರ ಮೊಳಗಿತು "ಕದನದ ಕಿಚ್ಚನ್ನ ಹಚ್ಚುವ ಈತನಿಗೆ ಸರಿಯಾದ ಬೆಂಬಲಿಗರ ಪಡೆಯೊಂದು ದೊರಕಿದರೆ! ಆಹಾ ಅದೆಷ್ಟು ಸೊಗಸು?!" ಎನ್ನುವ ಮಹಮದನ ಮೆಚ್ಚುಗೆಯ ವಾಣಿ.


ಆದರೆ ಒಪ್ಪಂದ ಅಂತ ಒಂದಿದ್ದು ಅದನ್ನ ಯಾವುದೆ ಕಾರಣಕ್ಕೂ ಮುರಿಯುವ ಸ್ಥಿತಿಯಲ್ಲಿ ಮಹಮದ್ ಇರಲಿಲ್ಲ. ಹೀಗಾಗಿ ಒತ್ತಾಯಪೂರ್ವಕವಾಗಿಯಾದರೂ ಬಶೀರ್ ಮೆಕ್ಕಾಕ್ಕೆ ಮರಳಲೆಬೇಕಾಯಿತು ಅಲ್ಲಿ ಆತ ಮಹಮದನ ಮೆಚ್ಚುಗೆಯ ನುಡಿಯನ್ನ ಮರೆಯದೆ ತನ್ನದೆ ಆದ ಐದು ಕಟ್ಟುಮಸ್ತಾದ ಯುವಕರ ತಂಡವೊಂದನ್ನ ಕಟ್ಟಿಕೊಂಡ. ಸಿರಿಯಾದತ್ತ ಸಾಗುವ ಮೆಕ್ಕಾದ ಸಮುದ್ರ ತಟದ ಹೆದ್ದಾರಿಯಲ್ಲಿ ತನ್ನದೊಂದು ಠಾಣ್ಯವನ್ನ ಸ್ಥಾಪಿಸಿಕೊಂಡು ಆ ಮಾರ್ಗವಾಗಿ ಸಾಗುವ ಪಯಣಿಗರನ್ನ ಹಾಗೂ ಕ್ಯಾರವಾನನ್ನ ದೋಚುತ್ತಾ ಹಾವಳಿಯಿಡಲಾರಂಭಿಸಿದ. ಈ ನಾಯಕತ್ವಕ್ಕೆ ಮನಸೋತ ಹಾದಿ ತಪ್ಪಿದ ಅನೇಕ ಯುವಕರು ಅವನ ಪಡೆಯತ್ತ ಆಕರ್ಷಿತರಾದರು. ಅಲ್ಪ ಕಾಲದಲ್ಲಿಯೆ ಅವರ ಸಂಖ್ಯೆ ಎಪ್ಪತ್ತನ್ನ ಮೀರಿತು! ಲೂಟಿ, ಸುಲಿಗೆ ಹಾಗೂ ಹತ್ಯೆಗಳಲ್ಲಿ ನಿಷ್ಣಾತರಾಗಿ ತೊಡಗಿಕೊಂಡ ಅವರನ್ನ ತಡೆಯಲಾರದೆ ಕಂಗಾಲಾದ ಖುರೈಷಿಗಳು ಅವರ ಅರಾಜಕತೆಯ ವಿರುದ್ಧ ಅವರ ಧರ್ಮಾಧಿಕಾರಿ ಮಹಮದನಿಗೆ ದೂರನ್ನ ಒಯ್ದರು.



ಶಾಂತಿ ಒಪ್ಪಂದಕ್ಕೆ ಬೆಲೆ ಕೊಟ್ಟು ಆ ಕೂಡಲೆ ಈ ದುಂಡಾವತಿಯನ್ನ ನಿಲ್ಲಿಸಬೇಕೆಂದು ಅವನನ್ನು ಆಗ್ರಹಿಸಿದರು. ಮಹಮದ್ ಬಶೀರನಿಗೆ ತನ್ನ ಈ ಅಕೃತ್ಯವನ್ನು ನಿಲ್ಲಿಸಲು ಆಜ್ಞೆ ಕಳುಹಿಸಿದ. ಆ ಬಾತ್ಮಿ ಬಶೀರನಿಗೆ ತಲುಪುವ ಹೊತ್ತಿಗಾಗಲೆ ಆತ ಕ್ಷುಲ್ಲಕ ಮಾರಾಮಾರಿಯೊಂದರಲ್ಲಿ ತೀವೃವಾಗಿ ಗಾಯಗೊಂಡು ಸಾವಿನಂಚಿನಲ್ಲಿದ್ದ. ಆತನಿಗೆ ಈ ಸುದ್ದಿ ಮುಟ್ಟಿಸುವ ಮೊದಲೆ ಆತ ಅಸು ನೀಗಿದ. ಆತನ ಹಿಂಬಾಲಕರೆಲ್ಲಾ ಮೆಕ್ಕಾಕ್ಕೆ ಮರಳುವ ಸ್ಥಿತಿಯಲ್ಲಿ ಇರಲಿಲ್ಲವಾಗಿ ಅವರೆಲ್ಲಾ ಇಸ್ಲಾಮನ್ನ ಒಪ್ಪಿಕೊಂಡು ಮದೀನಾಕ್ಕೆ ಬಂದು ವಾಸಿಸಲಾರಂಭಿಸಿದರು. ಬಶೀರ್ ಎಂಬ ದರೋಡೆಕೋರನಾದ ಹಾದಿ ತಪ್ಪಿದ ಯುವಕನ ಕ್ರೂರ ಅಂತ್ಯ ಹೀಗಾಯಿತು. ತಪ್ಪು ಮಾಡಿದಾಗ ನಾಲ್ಕು ತಟ್ಟಿ ತಿದ್ದದೆ ಇನ್ನಷ್ಟು ಹೊಗಳಿಕೆಯ ಕುಮ್ಮಕ್ಕು ಕೊಟ್ಟು ದುರ್ಬೋಧನೆಯ ಮೂಲಕ ಆತನನ್ನ ಹಾದಿ ತಪ್ಪಿಸಿದ ಖ್ಯಾತಿ ಆತನ ಪ್ರವಾದಿಗೆ ಸಲ್ಲುತ್ತದೆ ಅನ್ನುವುದು ನಿಸ್ಸಂಶಯ.



ಈ ಪಾಲಕರ ಒಪ್ಪಿಗೆಯಿಲ್ಲದೆ ಮತಾಂತರಿತರು ಮದೀನಕ್ಕೆ ವಲಸೆ ಬರದಿರುವಂತಿಲ್ಲ ಎನ್ನುವ ನಿಯಮ ಪುರುಷರಂತೆ ಸ್ತ್ರೀಯರಿಗೂ ಸಹ ಸಮಾನವಾಗಿ ಅನ್ವಯವಾಗುತ್ತಿತ್ತು. ಯಾವ ಹೆಂಗಸೂ ಸಹ ಶಾಂತಿ ಒಪ್ಪಂದದ ಈ ನಿಯಮವನ್ನ ಮೀರಿ ಹೆಜ್ಜೆ ಇಡುವಂತಿರಲಿಲ್ಲ. ಹಾಗೆಯೆ ಒಬ್ಬ ಮತಾಂತರಿತ ಹೆಂಗಸು ಬಶೀರನ ಪ್ರಕರಣದಂತೆ ಮೆಕ್ಕಾದಿಂದ ಮದೀನಕ್ಕೆ ಓಡಿ ಬಂದಿದ್ದಳು. ಅವಳ ಬೆನ್ನು ಹತ್ತಿ ಖುರೈಷಿಗಳಾಗಿದ್ದ ಅವಳ ಅಣ್ಣಂದಿರು ಬಂದರು. ಆದರೆ ಈ ಬಾರಿ ಮಹಮದ್ ಅವಳನ್ನು ಮರಳಿಸಲು ನಿಧಾನಿಸಿದನಷ್ಟೇ ಅಲ್ಲ ತಕರಾರನ್ನೂ ಸಹ ಎಬ್ಬಿಸಿದ.



ಆತ ತನ್ನ ಎಂದಿನ ಚಾಳಿಯಂತೆ ಈ ಬಗ್ಗೆ ದೈವವಾಣಿಯ ಮೊರೆ ಹೋದ ಹಾಗೂ ದೈವ ನಿರೀಕ್ಷೆಯಂತೆ ಅವನ ಅಭಿಪ್ರಾಯದ ಪರವಾಗಿಯೆ ಸುರಾವನ್ನ ದಯಪಾಲಿಸಿತು! ಮೆಕ್ಕಾದಿಂದ ಸ್ವ ಇಚ್ಛೆಯಿಂದ ಯಾರಾದರೂ ಹೆಂಗಸು ಓಡಿ ಬಂದಿದ್ದರೆ ಅವಳನ್ನ  ಮೊದಲು ನ್ಯಾಯಕ್ಕೆ ಒಪ್ಪಿಸಬೇಕು. ಅನಂತರ ಆಕೆಗೆ ರಕ್ಷಣೆ ಒದಗಿಸಬೇಕಲ್ಲದೆ ಹಿಂದಿರುಗಿ ಹೋಗಲು ಬಿಡಬಾರದು ಎನ್ನುವ ಹೊಸ ನಿಯಮವನ್ನು ಆತ ಅಂದು ಸಾರಿದ. ಇದು ಆಲ್ಲಾಹನ ವಾಣಿಯಾಗಿದ್ದರಿಂದ ಮೀರಲು ಸಾಧ್ಯವಿಲ್ಲವೆಂದ. ಹಾಗೆ ಬಂದ ಸ್ತ್ರೀ ಮೊದಲೆ ವಿವಾಹಿತಳಾಗಿದ್ದರೆ ಆಕೆಯ ಪೂರ್ವ ಧರ್ಮದ ಮದುವೆಗೆ ಹೊಸ ನಿಯಮಾನುಸಾರ ಯಾವುದೆ ಮಾನ್ಯತೆ ಉಳಿಯುತ್ತಿರಲಿಲ್ಲ. ಸಾಲದ್ದಕ್ಕೆ ಆಕೆ ಪಡೆದಿದ್ದ ವಧು ದಕ್ಷಿಣೆಯನ್ನೂ ಸಹ ಅಗತ್ಯ ಬಿದ್ದರೆ ಮಾತ್ರ ಅಂದರೆ ಬಹುತೇಕ ಹಿಂದಿರುಗಿಸಬೇಕಾಗಿಲ್ಲ ಎನ್ನುವ ನಿರ್ಧಾರಕ್ಕೆ ಬರಲಾಯಿತು ಎನ್ನುತ್ತಾರೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ತಮ್ಮ 'ಲೈಫ್ ಆಫ್ ಮಹಮದ್' ಕೃತಿಯ ಪುಟ ಸಂಖ್ಯೆ ಮುನ್ನೂರಾ ಅರವತ್ತೈದರಲ್ಲಿ. ಖುರ್ಹಾನಿನ ಸುರಾ ಸಂಖ್ಯೆ ೬೦/೧೦-೧೨ರಲ್ಲಿ ಇದನ್ನ ಸ್ಪಷ್ಟವಾಗಿ ಹೇಳಲಾಗಿದೆ.


ಅಲ್ ಹುಬೈದಿಯಾದಲ್ಲಿ ಮೊಟಕುಗೊಂಡಿದ್ದ ಕಳೆದ ವರ್ಷದ ಹಝ್ಝ್ ಯಾತ್ರೆಯ ನಂತರ ಮಹಮದನ ಪ್ರಭಾವ ಹೊರಗಿನ ಎಲ್ಲಾ ಬುಡಕಟ್ಟಿನವರಲ್ಲಿ ಆದಂತೆಯೆ, ಆತನದೆ ಆಗಿದ್ದ ಸ್ವಂತ ಬುಡಕಟ್ಟು ಮೆಕ್ಕಾದ ಖುರೈಷಿಗಳಲ್ಲೂ ಸಹ ನಿಧಾನವಾಗಿ ಹಬ್ಬ ತೊಡಗಿತ್ತು. ತಮ್ಮವನೆ ಆದ ಒಬ್ಬ ಸಾಮಾನ್ಯ ವ್ಯಕ್ತಿ ಅದೂ ತಮ್ಮಿಂದ ಹೊರಗೆ ತಳ್ಳಿಸಿಕೊಂಡು ಅದೆಲ್ಲೋ ನಿರಾಶ್ರಿತನಾಗಿ ಬಾಳುವ ದುರ್ಗತಿಗೆ ಒಳಗಾದರೂ ಸಹ ಈಗ ದರ್ಪ, ದೌಲತ್ತು ಹಾಗೂ ಅಂತಸ್ತನ್ನ ಗಳಿಸಿಕೊಂಡು ಅರೇಬಿಯಾದ ಪ್ರಮುಖ ವ್ಯಕ್ತಿಳಲ್ಲೊಬ್ಬನಾಗಿ ಬದಲಾದ ಬಗ್ಗೆ ಒಳಗೊಳಗೆ ಅವರಲ್ಲಿ ಬಹುತೇಕರು ಹೆಮ್ಮೆ ಪಟ್ಟುಕೊಂಡು ಮಾತನಾಡಿಕೊಳ್ಳಲಾರಂಭಿಸಿದ್ದರು. ಯಾರ್ಯಾರೋ ಗೌರವಿಸುವ ಆತನನ್ನ ನಾವೂ ಗೌರವಿಸುವುದು ತಪ್ಪೇನಿಲ್ಲ ಎಂದು ಯುವಕರು ವಾದಿಸ ಹತ್ತಿದರು. ಇದು ಪುರುಷ ವರ್ಗದ ಆಲೋಚನಾ ಲಹರಿಯಾಗಿದ್ದರೆ, ಯವ್ವನಾವಸ್ಥೆಯ ಮಹಿಳೆಯರ ಆಲೋಚನೆಯೂ ಹೆಚ್ಚು ಕಡಿಮೆ ಇದೆ ಮಾರ್ಗದಲ್ಲಿ ಸಾಗತೊಡಗಿತು. ಮಹಮದ್ ಅವರ ಪಾಲಿನ ಕನಸಿನ ರಾಜನಂತೆ ಕಂಗೊಳಿಸತೊಡಗಿದ. ಆತನ ಬಗ್ಗೆ ಮಾತನಾಡುವಾಗ ಗೌರವ ಹಾಗೂ ಲಜ್ಜೆಯನ್ನ ತುಳುಕಿಸುವ ಒಂದು ಸ್ತ್ರೀಯರ ಹೊಸ ನಡತೆಯೆ ಹುಟ್ಟಿಕೊಂಡಿತು.




ಇದಕ್ಕೆ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ಸ್ವಾರಸ್ಯಕರವಾದ ಕೆಲವು ನಿದರ್ಶನಗಳನ್ನು ನೀಡುತ್ತಾರೆ. ಸ್ತ್ರೀಯರು ಮದುವೆಯ ಹೊತ್ತಿನಲ್ಲಿ ಪಡೆಯುವ ವಧುದಕ್ಷಿಣೆ ಹಾಗೂ ಉಡುಗೊರೆಯನ್ನ ಪಡೆಯುತ್ತಾರೆ. ಅದಕ್ಕೆ ಅರೇಬಿಯಾದಲ್ಲಿ ಸಾಮಾಜಿಕ ಸಮ್ಮತಿ ಇದ್ದೇ ಇತ್ತು. ಹಾಗೊಂದು ವೇಳೆ ಇಸ್ಲಾಮಿನತ್ತ ಆಕರ್ಷಿತಳಾದ ಹೆಂಗಸು ಮದುವೆ ಮುರಿದುಕೊಳ್ಳಲು ಈ ಉಡುಗೊರೆಗಳನ್ನ ಹಿಂದಿರುಗಿಸಿದರೆ ಅದನ್ನ ತಪ್ಪಾಗಿ ಭಾವಿಸುತ್ತಿರಲಿಲ್ಲ. ಅನಂತರ ಅವರು ಮದೀನಕ್ಕೆ ಓಡಿ ಬಂದು ಹೊಸ ಸಂಬಂಧಗಳನ್ನು ಏರ್ಪಡಿಸಿಕೊಳ್ಳಲು ಆಸಕ್ತರಾಗುತ್ತಿದ್ದರು. ಆಗ ಅವರ ನವ ಧರ್ಮ ನಿಷ್ಠೆಯನ್ನ ನಿಖರವಾಗಿ ಪರೀಕ್ಷಿಸಿ ಅನಂತರ ಮಾತ್ರ ಅಲ್ಲಿನ ಮುಸಲ್ಮಾನರು ಲಗ್ನವಾಗಿ ತಮ್ಮ ಜನಾನಕ್ಕೆ ಸೇರಿಸಿಕೊಳ್ಳುತ್ತಿದ್ದರು. ಅನೇಕ ಹೆಂಗಸರನ್ನ ಮೊದಲು ಮಹಮದನಿಗೆ ಅರ್ಪಿಸಲು ಅವಳ ಪೋಷಕರೆ ಆಸಕ್ತಿ ತೋರಿಸಲಾರಂಭಿಸಿದ್ದರು. ಯಾರಾದರೂ ಗಂಡ ಸತ್ತು ಮುಂಡೆಯಾದರೆ ಮಹಮದನಿಗೆ ಮೊದಲು ಮರು ವಿವಾಹದ ಮನವಿ ಮಾಡಿಕೊಳ್ಳಲಾಗುತ್ತಿತ್ತು. ಆತ ಒಂದೊಮ್ಮೆ ನಿರಾಕರಿಸಿದರೆ ಬೇರೆ ಆಯ್ಕೆಗಳನ್ನ ಪರಿಗಣಿಸಲಾರಂಭವಾಯಿತು. ಇದನ್ನ ಘನತೆಯ ಕಾರ್ಯವೆಂದೆ ಅರೇಬಿಯಾದ ಸಾಮಾಜಿಕ ವಲಯ ಮಾನ್ಯ ಮಾಡಲಾರಂಭಿಸಿತು.



ಅರೇಬಿಯಾ ಪ್ರಸ್ಥಭೂಮಿಯ ಅನೇಕ ಕಡೆ ತನ್ನ ಪ್ರಭಾವದ ವಲಯವನ್ನು ವಿಸ್ತರಿಸಿದ ನಂತರ ಮಹಮದ್ ತನ್ನ ಹಿಡಿತ ಹಾಗೂ ಆಡಳಿತವನ್ನು ಅಲ್ಲಿ ನೆಲೆಗೊಳಿಸಿಕೊಂಡ. ಈಗ ಭೌಗೋಳಿಕವಾಗಿ ತನಗೆ ತುಸು ದೂರದ ಪಶ್ಚಿಮದ ಪ್ರದೇಶಗಳಿಗೂ ತನ್ನ ಪ್ರಭಾವವನ್ನ ವಿಸ್ತರಿಸುವ ಕನಸುಕಾಣ ತೊಡಗಿದ. ಅದೃಷ್ಟಕ್ಕೆ ಆಗ ರೋಮನ್ ಸಾಮ್ರಾಜ್ಯ ಕ್ರಮೇಣ ಶಿಥಿಲವಾಗುತ್ತಾ ಅವನತಿಯ ಹಾದಿಯನ್ನ ಹಿಡಿದಿತ್ತು. ಇದನ್ನ ಬಳಸಿಕೊಳ್ಳಲು ಆತ ನಿರ್ಧರಿಸಿದ. ಕ್ರೈಸ್ತ ಇಗರ್ಜಿಗಳು ಪರಸ್ಪರ ಒಳ ಜಗಳ, ತಾತ್ವಿಕ ಭಿನ್ನಾಭಿಪ್ರಾಯ ಹಾಗೂ ಅಂತರಿಕ ಕಚ್ಚಾಟದ ಪರಿಣಾಮ ಅರೇಬಿಯಾದ ಕ್ರೈಸ್ತರು ಧಾರ್ಮಿಕವಾಗಿ ಬಹುತೇಕ ಅತಂತ್ರರಾಗಿದ್ದರು. ಇವೆಲ್ಲಾ ಮಹಮದನಿಗೆ ಹೇಳಿ ಮಾಡಿಸಿದ ವಾತಾವರಣದಂತೆ ಪೂರಕವಾದವು.



ಹೀಗಾಗಿ ಬಲಶಾಲಿಯಾಗಿರುವ ತಾನು ಸುತ್ತಲ ಸಿರಿಯಾ, ಈಜಿಪ್ಟ್ ಹಾಗೂ ರೋಮನ್ ಸಾಮ್ರಾಜ್ಯಗಳಿಗೆ ರಾಯಭಾರಿಗಳನ್ನ ನೇಮಿಸುವುದರಲ್ಲಿ ತಪ್ಪೇನೂ ಇಲ್ಲ ಎನ್ನುವ ನಿರ್ಧಾರಕ್ಕೆ ಆತ ಬಂದ. ಅವರೆಲ್ಲರಿಗೂ ತನ್ನ ವಿಜ್ಞಾಪನೆಯನ್ನ ಒಳಗೊಂಡ ಸಂಧಾನ ಪತ್ರಗಳನ್ನು ರವಾನಿಸಿಲು ನಿಶ್ಚಯಿಸಿದ. ಇದಕ್ಕಾಗಿ ತನ್ನದೆ ಆದ ರಾಜಮುದ್ರೆಯನ್ನ ಟಂಕಿಸಲು ಮನಸ್ಸು ಮಾಡಿದ. ಇತಿಹಾಸಕಾರ ಅಲ್ ಮುಬಾರಖಿ ತನ್ನ ಕೃತಿ 'ದ ಸೀಲ್ಡ್ ನೆಕ್ಟರ್'ದ ಪುಟ ಸಂಖ್ಯೆ ಆರುನೂರಾ ತೊಂಬತ್ತಮೂರರಲ್ಲಿ ಹೇಳುವಂತೆ ಆತ ಇದಕ್ಕಾಗಿಯೆ ಹೊಸತಾಗಿ ಬೆಳ್ಳಿಯ ಮುದ್ರೆಯುಂಗುರಗಳನ್ನ ತಯ್ಯಾರಿಸಿಸಿ ಅದರಲ್ಲಿ "ಮಹಮದ್, ದೇವರ ಪ್ರವಾದಿ!" ಎಂದು ಕೆತ್ತಿಸಿಕೊಂಡ.



ಕ್ರಿಸ್ತಶಕ ಆರುನೂರಾ ಇಪ್ಪತೆಂಟರಲ್ಲಿ ರೋಮನ್ ಚಕ್ರವರ್ತಿ ಹರಾಕ್ಲಿಯಾಸ್'ನಿಗೆ ಇಂತಹ ಒಂದು ರಾಯಭಾರವನ್ನ ಮಹಮದ್ ಕಳಿಸಿದ್ದ ಎನ್ನುತ್ತಾರೆ ಸರ್ ವಿಲಿಯಂ ಮ್ಯೂರ್. ಇದೆ ಸಮಯದಲ್ಲಿ ಪರ್ಷಿಯಾದ ರಾಜನಿಗೂ ತನ್ನ ಮುದ್ರೆಯುಂಗರವನ್ನು ಸಂದೇಶ ಸಹಿತ ಕಳುಹಿಸಲಾಯಿತು. ಎಮನ್ನಿನ್ನ ಪರ್ಷಿಯನ್ ರಾಜ್ಯಪಾಲ ಹಾಗೂ ಅರೇಬಿಯಾದಲ್ಲಿ ಪ್ರತಿಷ್ಠಿತನಾಗಿದ್ದ ಬಾದನ್'ನ ಆಸ್ಥಾನಕ್ಕೂ ಇಂತಹ ರಾಯಭಾರಿಯೊಬ್ಬನನ್ನು ಮುದ್ರೆಯುಂಗುರ ಸಹಿತ ಕಳುಹಿಸಲಾಯಿತು. ಆತ ಮಹಮದನ ಪ್ರಭಾವವನ್ನ ಅದಾಗಲೆ ಕೇಳಿ ಅರಿತಿದ್ದು ತನ್ನ ಪ್ರದೇಶದ ಹಿತದೃಷ್ಟಿಯಿಂದ ಆತನ ಮತವನ್ನ ಅಪ್ಪಿಕೊಳ್ಳುವುದೆ ಸೂಕ್ತ ಎಂದು ಮನಗಂಡು ಪರ್ಷಿಯಾದಿಂದ ನಿಷ್ಠೆ ಬದಲಿಸಿ ಮತಾಂತರಿತನಾಗಿ ಮಹಮದನನ್ನು ಹಿಂಬಾಲಿಸಿದ.


ಈಜಿಫ್ಟಿನ ರೋಮನ್ ರಾಜ್ಯಪಾಲ ಮೂಕಸಿಸ್ ಸಹ ಮಹಮದನ ರಾಯಭಾರಿಗಳನ್ನ ರಾಜ ಮರ್ಯಾದೆಯಿಂದಲೆ ಎದುರುಗೊಂಡ. ಆತನಿಗೆ ಕಳುಹಿಸಿದ್ದ ದೌತ್ಯದಲ್ಲಿ ತಾನು ಯಹೂದಿಗಳ ತೌರಾತಿನಲ್ಲಿ ಸಾರಿದಂತೆ ದೇವರ ಪ್ರವಾದಿಯೆಂದೂ, ತನ್ನನ್ನು ಹಿಂಬಾಲಿಸಿ ದೇವರ ಕೃಪೆಗೆ ಪಾತ್ರರಾಗುವಂತೆಯೂ ವಿನಂತಿಸಲಾಗಿತ್ತು. ಆದರೆ ಯಹೂದಿಗಳ ನಂಬಿಕೆಯ ಪ್ರಕಾರ ಅಂತಹ ಪ್ರವಾದಿ ಸಿರಿಯಾದಲ್ಲಿ ಹುಟ್ಟಬೇಕಲ್ಲದೆ ಅರೇಬಿಯಾದಲ್ಲಿ ಅಲ್ಲ ಎಂದು ಮೂಕಸಿಸ್ ಸರಾಸಗಟಾಗಿ ಈ ಆಗ್ರಹವನ್ನು ನಿರಾಕರಿಸಿದ. ಆದರೆ ಮಹಮದನ ದೂತರನ್ನ ಸಕಲ ರಾಜ ಮರ್ಯಾದೆಯಿಂದಲೆ ಸನ್ಮಾನಿಸಿ ನೋಡಿಕೊಳ್ಳಲಾಯಿತು. ಹಿಂದಿರುಗಲು ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಸಹ ಮಾಡಲಾಯಿತು. ಮಹಮದನಿಗೆ ಈಜಿಪ್ಟಿನ ನೆನಪಿನ ಕಾಣಿಕೆಯಾಗಿ ಇಬ್ಬರು ಕಾಪ್ಟ್ ಸುಂದರಿಯರನ್ನ ಸಹ ಅವರೊಂದಿಗೆ ಕಳಿಸಲಾಯಿತು.



ಇವರಲ್ಲಿ ಮೇರಿ ಎಂಬ ಅತಿ ಸುಂದರಿಯನ್ನ ತನ್ನ ಅಂತಃಪುರಕ್ಕೆ ಸೇರಿಸಿಕೊಂಡ ಮಹಮದ್ ಇನ್ನೊಬ್ಬಳನ್ನು ಅಯೇಷಾಳ ಮೇಲೆ ಅತಿ ಸುಂದರ ಕವಿತೆ ಕಟ್ಟಿ ಹೊಗಳಿದ ಖ್ಯಾತಿ ಹೊತ್ತಿದ್ದ ಕವಿ ಹಸ್ಸನ್'ನಿಗೆ ಕೊಡುಗೆಯಾಗಿ ಕೊಟ್ಟ. ಮೇರಿ ಮತಾಂತರವಾಗದೆ ಕಡೆಯವರೆಗೂ ಕ್ರೈಸ್ತಳಾಗಿಯೆ ಉಳಿದಳು. ಹೀಗಾಗಿ ಆಕೆಯನ್ನ ಮಹಮದ್ ಲಗ್ನವಾಗದೆ ತನ್ನ ಸೂಳೆಯಾಗಿ ಮಾತ್ರ ಇರಿಸಿಕೊಂಡ. ಹೆಸರಿಗೆ ಸೂಳೆಯಾದರೂ ಸಹ ಅವಳಿಗೆ ಸಿಕ್ಕ ಸೌಲಭ್ಯಗಳೆಲ್ಲ ಅಧಿಕೃತ ಪತ್ನಿಗೆ ಸಿಗುವಷ್ಟೆ ಸರಿಸಮ ಹಾಗೂ ಗುಣಮಟ್ಟದ್ದಾಗಿದ್ದವು.


ಇದೆ ಪ್ರಕಾರ ದೂರದ ಅಬಿಸೀನಿಯಾದ ರಾಜನಿಗೂ ಸಹ ಮಹಮದನ ಸಂದೇಶ ಹೋಗಿ ಮುಟ್ಟಿತು. ಅಲ್ಲಿನ ರಾಜ ಆದಕ್ಕೂ ಮೊದಲಿನಿಂದಲೆ ವ್ಯಾಪಾರಿ ಉದ್ದೇಶದಿಂದ ಅರೇಬಿಯಾ ಹಾಗೂ ಮದೀನಾದ ಮಹಮದನೊಂದಿಗೆ ಸ್ನೇಹಪೂರ್ಣ ಸಂಬಂಧವನ್ನೆ ಇರಿಸಿಕೊಂಡಿದ್ದ. ಮೆಕ್ಕಾದಿಂದ ಖುರೈಷಿಗಳ ಕಾಟ ತಾಳಲಾರದೆ ಓಡಿ ಹೋಗಿದ್ದ ಮೊದಲ ತಂಡದ ಮುಸಲ್ಮಾನರಿಗೆ ಆಸರೆ ನೀಡಿದ್ದ ಮೊತ್ತಮೊದಲ ರಾಜಯ ಅಬಿಸೀನಿಯ ಆಗಿತ್ತು. ಅಲ್ಲಿ ಆಶ್ರಯ ಪಡೆದವರಲ್ಲಿ ಅನೇಕರು ಕಾಲಾಂತರದಲ್ಲಿ ಕ್ರೈಸ್ತರಾಗಿಯೂ ಪರಿವರ್ತಿತರಾಗಿದ್ದರು. ಹೀಗೆ ಓಡಿ ಬಂದವರನ್ನೆಲ್ಲ ಮದೀನಕ್ಕೆ ಕಳಿಸಿಕೊಡಬೇಕೆಂದು ದೌತ್ಯದಲ್ಲಿ ಕೇಳಿಕೊಳ್ಳಲಾಗಿತ್ತು. ಹಾಗೆ ವಲಸೆ ಹೋದವರಲ್ಲಿ ಖುರೈಷಿ ಮುಖಂಡ ಅಬು ಸಫ್ಯಾನನ ಮಗಳಾದ ಉಮ್ ಹಲೀಮ್ ಸಹ ಒಬ್ಬಳಾಗಿದ್ದಳು.



ಅವಳ ಗಂಡ ಅಲ್ಲಿ ಹೋದ ನಂತರ ಕ್ರೈಸ್ತನಾಗಿ ಬದಲಾಗಿದ್ದ. ಬದಲಾದ ವಾತವರಣದಲ್ಲಿ ಹೊಂದಿಕೊಳ್ಳಲಾಗದೆ ತೀವೃ ಖಾಯಿಲೆ ಬಿದ್ದು ಆತ ಸತ್ತು ಸಹ ಹೋಗಿದ್ದ. ಆಕೆಯನ್ನ ತಾನೆ ಮದುವೆಯಾಗಲು ಮಹಮದ್ ನಿರ್ಧರಿಸಿ ಅದನ್ನೂ ಸಹ ತನ್ನ ಮನೋಭಿಲಾಶೆಯಾಗಿ ದೌತ್ಯದಲ್ಲಿ ಬರೆದು ಕಳಿಸಿದ್ದ. ಅಲ್ಲಿನ ರಾಜ ಅದನ್ನ ಸಮ್ಮತಿಸಿ ಕ್ಷೇಮದಿಂದ ಅವಳನ್ನೂ ಸೇರಿಸಿ ವಲಸೆಗಾರರನ್ನು ಸುರಕ್ಷಿತವಾಗಿ ಮದೀನಾಕ್ಕೆ ಕಳುಹಿಸಿದ. ಮೂವತ್ತೈದು ವರ್ಷದ ಉಮ್ ಹಲೀಮ್ ಹೀಗೆ ಈಗ ಮಹಮದನ ಮಡದಿಯಾದಳು. ಅಲ್ಲಿಗೆ ಅಬು ಸಫ್ಯಾನ್ ಈಗ ಮಹಮದನ ಮಾವನಾಗಿ ಬದಲಾದ. ಆದರೆ ಈ ವಿವಾಹದ ಉದ್ದೇಶ ಹಾಗೂ ಬಾತ್ಮಿ ಸ್ವತಃ ಅಬು ಸಫ್ಯಾನಿಗೆ ಗೊತ್ತಿರಲಿಲ್ಲ!



ಈ ವ್ಯಾಪ್ತಿ ವಿಸ್ತಾರಗಳಿಂದ ಉತ್ತೇಜಿತನಾದ ಮಹಮದ್ ತನ್ನ ಇನ್ನೊಬ್ಬ ದೂತನನ್ನು ಬೆನ್ ಹನೀಫ್ ಬುಡಕಟ್ಟಿಗೆ ಸೇರಿದ್ದ ಹೌಧಾ ಎನ್ನುವ ಸರದಾರನೊಬ್ಬನ ಬಳಿ ಸಹ ಕಳುಹಿಸಿದ. ಯಥಾಪ್ರಕಾರ ಆತನಿಗೂ ಇಸ್ಲಾಮಿಗೆ ಬರಲು ಆಹ್ವಾನವನ್ನು ಕೊಡಲಾಗಿತ್ತು. ಆದರೆ ತನ್ನದೊಂದು ಉತ್ತರವನ್ನು ಜಬರ್ದಸ್ತಾಗಿ ಬರೆಸಿದ ಹೌಧಾ ಮಹಮದನ ದೂತನನ್ನು ಯಥೋಚಿತವಾಗಿ ಸತ್ಕರಿಸಿ ಉಡುಗೊರೆಗಳೊಂದಿಗೆ ಮದೀನಕ್ಕೆ ಮರಳಿ ಕಳುಹಿಸಿಕೊಟ್ಟ.


ಆತ ಬರೆದ ಉತ್ತರ ಹೀಗಿತ್ತು. "ಹೌದು, ಇಸ್ಲಾಮ್ ಅತ್ಯಂತ ಸುಂದರವಾಗಿದೆ. ಮಹಮದನಿಗೆ ಒದಗಿ ಬಂದ ದೈವವಾಣಿ ಸರ್ವೋತ್ತಮವೂ ಆಗಿದೆ. ತಾನು ತನ್ನ ಬುಡಕಟ್ಟಿನ ಉತ್ತಮ ಕವಿಯಾಗಿದ್ದೇನೆ. ವಾಗ್ಮಿ ಎನ್ನುವ ಕಾರಣಕ್ಕೆ ನನಗೆ ಅರೇಬಿಯಾದ ಇನ್ನಿತರ ಮುಖಂಡರೂ ಸಹ ಅಪಾರವಾಗಿ ಗೌರವಿಸುತ್ತಾರೆ. ಹೀಗಾಗಿ ಮಹಮದ್ ತನ್ನ ಸಾಮ್ರಾಜ್ಯದಲ್ಲಿ ಒಂದು ಭಾಗವನ್ನ ನೀಡಿ ಸರಿಸಮನೆಂದು ತನಗೆ ಮನ್ನಣೆ ನೀಡಿದರೆ ಇಸ್ಲಾಮಿಗೆ ಬರಲು ತನಗೇನೂ ಅಭ್ಯಂತರವಿಲ್ಲ!." ಈ ಉತ್ತರವನ್ನು ದೂತ ಒಡೆದು ಓದುತ್ತಿದ್ದಂತೆಯೆ ಮಹಮದ್ ಕೆಂಡಾಮಂಡಲನಾದ. ಕೆರಳಿದ ಧ್ವನಿಯಲ್ಲಿ ರಾಜ್ಯವಲ್ಲ ಒಂದು ಕಚ್ಚಾ ಖರ್ಜೂರ ಬೇಡಿದ್ದರೂ ನಾನವನಿಗೆ ಖಂಡಿತವಾಗಿ ಕೊಡುತ್ತಿರಲಿಲ್ಲ. ಅವನ ಒಣ ಜಂಭ ಸುಡಲಿ!" ಎಂದು ಶಾಪವಿತ್ತ. ಕಾಕತಾಳೀಯವೆಂಬಂತೆ ಅದರ ಮಾರನೆ ವರ್ಷವೆ ಹೌಧಾ ಖಾಯಿಲೆಯಿಂದ ನರಳಿ ಸತ್ತ!.


( ಇನ್ನೂ ಇದೆ.)

No comments:

Post a Comment