Monday, November 2, 2015

ವಲಿ - ೨೨







ಮದೀನಕ್ಕೆ ಕ್ಷೇಮದಿಂದ ಹಿಂದಿರುಗಿದ ಮಹಮದ್ ಕೆಲ ಕಾಲ ಸುಖದಿಂದ ಕಾಲ ಕಳೆದ. ಆ ವೇಳೆಯಲ್ಲಿಯೆ ತನ್ನ ಅಂತಃಪುರಕ್ಕೆ ಇಬ್ಬರು ಹೆಂಡತಿಯರನ್ನ ಬರ ಮಾಡಿಕೊಂಡ. ಈ ಹಿಂದೆಯೆ ಆತನಿಗೆ ಮೂವರು ಹೆಂಡತಿಯರಿದ್ದರು. ಹಿರಿಯಳಾದ ನಾಲ್ಕನೆಯ ಹೆಂಡತಿ ಖತೀಜಾ ತೀರಿಕೊಂಡಿದ್ದಳು. ಈಗ ಯುದ್ಧದಲ್ಲಿ ಹೋರಾಡಿ ಮಡಿದ ಒಬೈದನ ವಿಧವೆ ಝೈನಬ್'ಳನ್ನು ಮಹಮದ್ ಮರು ವಿವಾಹವಾದ. ಅದರ ಬೆನ್ನಿಗೆ ಇನ್ನೊಂದು ತಿಂಗಳ ಅವಧಿಯೊಳಗೆ ಉಮ್ ಸಲ್ಮಾಳನ್ನು ಸಹ ಲಗ್ನವಾದ. ಆಕೆ ಅದಕ್ಕೂ ಮೊದಲು ಅಬು ಸಲ್ಮಾನನ ಹೆಂಡತಿಯಾಗಿದ್ದಳು. ದಂಪತಿಗಳಿಬ್ಬರೂ ಅಬಿಸೀನಿಯಾಕ್ಕೆ ಉತ್ತಮ ಬದುಕನ್ನ ಅರಸಿ ವಲಸೆ ಹೋಗಿದ್ದವರು ಮರಳಿ ಮದೀನಾ ಬಂದು ಮುಟ್ಟಿದ್ದರು. ಆದರೆ ಮಹಮದನ ಪರ ಓಹೋದ್ ಯುದ್ಧದಲ್ಲಿ ಕಾದಾಡಿ ಪ್ರಾಣಾಂತಿಕವಾಗಿ ಗಾಯಗೊಂಡಿದ್ದ ಅಬು ಅದೆಷ್ಟೆ ಉಪಚರಿಸಿದರೂ ಕೂಡಾ ಬದುಕುವ ಭಾಗ್ಯವಿಲ್ಲದೆ ಕೊನೆಯುಸಿರೆಳೆದಿದ್ದ. ಆತ ಸಾವಿನ ಅಂಚಿನಲ್ಲಿದ್ದಾಗ ಅವನನ್ನು ಕಾಣಲು ಮಹಮದ್ ಅವರ ಮನೆಗೆ ಹೋಗಿದ್ದಾಗ ಆತನ ಹೆಂಡತಿ ಹಾಗೂ ಮಕ್ಕಳು ಗೋಳುಗರೆಯುವ ದೃಶ್ಯ ನೋಡಿ ನೊಂದು ಸಾಂತ್ವಾನದ ನಾಲ್ಕಾರು ನುಡಿಗಳನ್ನ ಆಡಿ ಹಿಂದಿರುಗಿದ್ದ. ಅಂತಿಮ ಕ್ಷಣದಲ್ಲಿ ಆ ತನ್ನ ಗೆಳೆಯನ ತಾಪ ಇಂದಿಗೆ ಕೊನೆಯಾಗಲಿ ಎಂದು ಹಾರೈಸಿ, ಆತನಿಗೆ ಸ್ವರ್ಗಾರೋಹಣ ಮಾಡಿಸುವಂತೆ ದೇವರನ್ನು ಬೇಡಿಕೊಂಡು ತಾನೆ ತನ್ನ ಕೈಯಾರೆ ಮೃತನ ಕಣ್ಣು ಮುಚ್ಚಿ ಮರಳಿದ್ದನಾತ.


ಗೆಳೆಯ ಸತ್ತು ನಾಲ್ಕು ತಿಂಗಳು ಸತ್ತ ನಂತರ ವಿಧವೆ ಸುಂದರಿ ಸಲ್ಮಾಳನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿ ಆಕೆಯ ಸಮ್ಮತಿ ಕೇಳಿದ. ಆದರೆ ಆಕೆ ಅಸಮ್ಮತಿಸಿದಳು. ಮಹಮದ್ ಪಟ್ಟು ಬಿಡದೆ ತನಗೂ ಕೂಡಾ ವಯಸ್ಸಾಗುತ್ತಾ ಬಂದಿದ್ದು ತಾನು ಅವಳಿಗೂ ಅವಳ ಅನಾಥ ಮಕ್ಕಳಿಗೂ ಆಸರೆಯಾಗಿರುವೆ ಎಂದು ಪುಸಲಾಯಿಸಿ ಕಡೆಗೂ ಆಕೆಯನ್ನ ಒಲಿಸಿಕೊಂಡ. ಅದೆ ವರ್ಷದ ಜೂನಿನಲ್ಲಿ ಆತ ತನ್ನ ಸಾಕು ಮಗ ಝೈದ್'ನ ಹೆಂಡತಿ ಝೈನಬಳನ್ನೂ ಸಹ ಮದುವೆಯಾದ.


ತನ್ನ ಕೃತಿ "ಫೂಟ್ ನೋಟ್ಸ್ ಆಫ್ ಮಹಮದ್"ನ ಪುಟ ಸಂಖ್ಯೆ ೨೯೧ರಲ್ಲಿ ಇತಿಹಾಸಕಾರ ಸರ್ ವಿಲಿಯಂ ಮ್ಯೂರ್ ಈ ಪ್ರಕರಣವನ್ನ ಈ ಬಗೆಯಲ್ಲಿ ವರ್ಣಿಸಿದ್ದಾರೆ. ಒಮ್ಮೆ ಕೆಲಸವೊಂದರ ನಿಮಿತ್ತ ಮಹಮದ್ ತನ್ನ ಸಾಕು ಮಗ ಝೈದ್'ನ ಮನೆಗೆ ಬಂದು ಬಾಗಿಲು ಬಡಿದ. ಝೈದ್ ಹೊರಗೆ ಹೋಗಿದ್ದ ಕಾರಣ ಝೈನಬ್ ಬಂದು ಬಾಗಿಲು ತೆರೆದಳು. ಆಕೆಗೆ ಆಗ ಮೂವತ್ತು ವರ್ಷ ಪ್ರಾಯವಾಗಿದ್ದು ಆಕೆ ಅರೇಬಿಯಾದ ಸಮಕಾಲೀನ ಸುರ ಸುಂದರಿಯರಲ್ಲಿ ಒಬ್ಬಳಾಗಿದ್ದಳು. ಮನೆಯೊಳಗೆ ಮಾವನನ್ನವಳು ಆಹ್ವಾನಿಸಿದಳು. ಆಷ್ಟರಲ್ಲಿ ಆತ ಆಕೆಯ ದೈಹಿಕ ಚೆಲುವನ್ನ ನೋಡಿ ಅವಾಕ್ಕಾಗಿ "ದಯಾಪರನಾದ ದೇವರೆ! ಓ ನನ್ನ ದೇವರೆ!! ಮನುಷ್ಯನ ಹೃದಯಗಳನ್ನ ನೀನು ಬುಡಮೇಲು ಮಾಡುತ್ತೀಯಾ?!" ಎಂದು ಭಾವುಕನಾಗಿ ನುಡಿದು ಒಳಬಾರದೆ ಬಂದ ದಾರಿ ಹಿಡಿದು ಮರಳಿ ಹೋದ. ಆ ಭಾವಪೂರ್ಣ ಉದ್ಘಾರವನ್ನು ಝೈನಬ್ ಸರಿಯಾಗಿ ಆಲಿಸಿದ್ದಳು.



ಪತಿ ಮನೆಗೆ ಬಂದಾಗ ಮಾವ ಬಂದು ಹೋದ ವಿಷಯವನ್ನು ಅರುಹಿ ಜೊತೆಗೆ ಆತನ ಮೆಚ್ಚುಗೆಯ ಉದ್ಗಾರವನ್ನ ಹೆಮ್ಮೆಯಿಂದ ಹೇಳಿಕೊಂಡಳು. ಅದನ್ನ ಕೇಳಿದ್ದೆ ಝೈದ್ ಹಟಾತ್ತಾಗಿ ಮಹಮದನ ಮನೆಯತ್ತ ಧಾವಿಸಿದ. ಆತನ ಸೂಕ್ಷ್ಮ ಮನಸ್ಸಿಗೆ ಮಹಮದನಿಗೆ ತನ್ನ ಸೊಸೆಯ ಮೇಲೆ ಮನಸ್ಸಾಗಿರುವ ವಿಚಾರ ಖಚಿತವಾಗಿತ್ತು. ಹೀಗಾಗಿ ಆತ ತಾನು ಆಕೆಗೆ ವಿಚ್ಛೇದನ ನೀಡುವುದಾಗಿಯೂ, ದಯವಿಟ್ಟು ಮಹಮದ್ ಆಕೆಯನ್ನ ಮರುಮದುವೆ ಮಾಡಿಕೊಳ್ಳಬೇಕೆಂದೂ ವಿನಂತಿಸಿದ! ಮಹಮದ್ ಆರಂಭದಲ್ಲಿ ಇದನ್ನ ಒಪ್ಪಲಿಲ್ಲ. ಆದರೆ ಈ ಸಮ್ಮತಿಯನ್ನ ಪರಿಗಣಿಸದೆ ಝೈದ್ ನಿಂತ ನಿಲುವಿನಲ್ಲಿಯೆ ಝೈನಬಳಿಗೆ ತಲ್ಲಾಖ್ ಘೋಷಿಸಿದ. ತಡ ಮಾಡದೆ ಮಹಮದ್ ಆಕೆಯನ್ನ ಮಡದಿಯನ್ನಾಗಿಸಿ ಮನೆ ತುಂಬಿಸಿಕೊಂಡ! ಬಂಧು ಮಿತ್ರರಿಗೆಲ್ಲಾ ಭರ್ಜರಿ ಔತಣಕೂಟವನ್ನ ಮದುವೆ ಖುಷಿಗಾಗಿ ಏರ್ಪಡಿಸಲಾಯಿತು. ಝೈನಬ್ ಎನ್ನುವ ಹೆಸರಿನ ಇಬ್ಬಿಬ್ಬರು ಹೆಂಗಸರು ಏಕಕಾಲದಲ್ಲಿ ಅವನ ಮಡದಿಯರಾಗಿದ್ದುದು ಅಪರೂಪದ ಸಂಗತಿಯೆಂದು ಇತಿಹಾಸಕಾರ ಅಬ್ದುಲ್ ಹಮೀದ್ ಸಿದ್ಧಿಖಿ ತಮ್ಮ ಕೃತಿ "ಲೈಫ್ ಆಫ್ ಮಹಮದ್'ನ ಪುಟ ಸಂಖ್ಯೆ ೨೨೧ರಲ್ಲಿ ಗಮನ ಸೆಳೆಯುತ್ತಾರೆ.


ಆದರೆ ಮಹಮದನ ಈ ನಡುವಳಿಕೆಯನ್ನ ಮದೀನಾದ ಸಮಾಜ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಸ್ವಂತ ಸಾಕು ಮಗನ ಹೆಂಡತಿಯನ್ನ ಮಾವನೆ ಮದುವೆಯಾಗುವುದು ಅರಬ್ಬಿ ಸಂಸ್ಕೃತಿಗೆ ವಿರುದ್ಧ ಎನ್ನುವ ಗುಲ್ಲೆದ್ದಿತು. ಆದರೆ ತನ್ನ ಈ ಹೊಸ ನಡೆಗೆ ಅಧಿಕೃತತೆಯ ಮುದ್ರೆಯೊತ್ತಿ, ತಾನು ಸರಿ ಇದ್ದೇನೆ ಎಂದು ಸಾಧಿಸಲು ಮಹಮದ್ ದೈವವಾಣಿಯ ಮೊರೆ ಹೋದ! ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಆತನಿಗೆ ದೈವವಾಣಿ ಸುಲಭವಾಗಿ ಒದಗಿಯೂ ಬಂತು(?!). ಖುರ್ಹಾನಿನ ಸುರಾ ೩೩/೧-೭ರ ಮೂಲಕ ದೇವರು ಮಹಮದನ ಸಹಾಯಕ್ಕೆ ಧಾವಿಸಿಬಂದ! ದೇವರಿಗೆ ಸಾಕು ಮಗನ ಹೆಂಡತಿಯನ್ನೆ ತನ್ನ ಪ್ರವಾದಿ ಲಗ್ನವಾಗಿರುವುದು ತಪ್ಪು ಎಂದು ಅನ್ನಿಸಿರಲಿಲ್ಲ. ಅದಕ್ಕೆ ಯಾವುದೆ ವಿರೋಧ ಇರಕೂಡದು ಎಂದು ಈ ಸುರಾದ ಮೂಲಕ ಅಲ್ಲಾಹ ಸಾರಿದ. ಜೊತೆಗೆ ಪ್ರವಾದಿಯ ನಡೆ ನುಡಿಯ ವಿರುದ್ಧ ಯಾವುದೆ ಶಂಕೆ ಅಥವಾ ಅನುಮಾನಗಳನ್ನ ಏಳಿಸಕೂಡದು ಎನ್ನುವ ತಾಕೀತನ್ನೂ ಸಹ ಆ ಭಗವಂತ ಮಹಮದನ ಬಾಯಿಯ ಮೂಲಕವೆ ದೈವೋಕ್ತಿಯನ್ನ ದಾಟಿಸಿ ಮಾಡಿದ!


ಅವತ್ತೀರ್ಣ - ಮದೀನಾದಲ್ಲಿ ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ.


೧, ಓ ಪೈಗಂಬರರೆ ಅಲ್ಲಾಹನನ್ನು ಭಯ ಪಡಿರಿ ಹಾಗೂ ಸತ್ಯ ನಿಷೇಧಿಗಳ ಹಾಗೂ ಇನ್ಯಾರೆ ಕಪಟಿಗಳ ಅನುಸರಣೆಯನ್ನು ಮಾಡಬೇಡಿರಿ. ವಾಸ್ತವದಲ್ಲಿ ಸರ್ವಜ್ಞನೂ, ಯುಕ್ತಿ ಪೂರ್ಣನೂ ಅಲ್ಲಾಹನೆ ಆಗಿರುತ್ತಾನೆ.

೨, ನಿಮ್ಮ ಪ್ರಭುವಿನ ಕಡೆಯಿಂದ ನಿಮಗೆ ನೀಡಲಾಗುತ್ತಿರುವ ಬೋಧನೆಯನ್ನು ಅನುಸರಿಸಿ. ಅಲ್ಲಾಹನು ನೀವು ಮಾಡುತ್ತಿರುವ ಪ್ರತಿಯೊಂದು ಕಾರ್ಯದ ಕುರಿತೂ ಅರಿವುಳ್ಳವನಾಗಿರುತ್ತಾನೆ. ಅಲ್ಲಾಹನ ಮೇಲೆ ಮಾತ್ರ ಭರವಸೆಯನ್ನಿಡಿರಿ. ಕಾರ್ಯ ನಿರ್ವಾಹಕನಾಗಲು ಕೇವಲ ಅಲ್ಲಾಹನೆ ಸಾಕು.


೩, ಅಲ್ಲಾಹ ಯಾವ ಮನುಷ್ಯನ ಶರೀರದೊಳಗೂ ಎರಡೆರಡು ಹೃದಯಗಳನ್ನಿರಿಸಿಲ್ಲ. ನೀವೆ ಝಿಹಾರ್* ಮಾಡುವ ನಿಮ್ಮ ಪತ್ನಿಯರನ್ನು ಆತ ನಿಮ್ಮ ತಾಯಂದಿರನ್ನಾಗಿ ಮಾಡಲೂ ಇಲ್ಲ. ಅವನು ನಿಮ್ಮ ದತ್ತುಪುತ್ರರನ್ನು ಹೀಗಾಗಿಯೆ ನಿಮ್ಮ ಸ್ವಂತ ಪುತ್ರನನ್ನಾಗಿ ಮಾಡಿರುವುದಿಲ್ಲ. ಇವೆಲ್ಲಾ ಪ್ರಾಪಂಚಿಕರೆ ಆದ ನೀವು ನಿಮ್ಮ ಬಾಯಿಂದ ಹೊರಡಿಸುವ ಮಾತುಗಳು. ಆದರೆ ಅಲ್ಲಾಹನು ಕೇವಲ ಯಥಾರ್ಥವಾದುದನ್ನೆ ಹೇಳುತ್ತಾನೆ. ಅವನೆ ಸನ್ಮಾರ್ಗದ ಕಡೆಗೆ ಮಾರ್ಗದರ್ಶನವನ್ನೂ ಸಹ ನೀಡುತ್ತಾನೆ.

೪, ದತ್ತು ಮಕ್ಕಳನ್ನು ಅವರ ಜೈವಿಕ ತಂದೆಯ ಉಪನಾಮದಿಂದಲೆ ಕರೆಯಿರಿ, ಅಲ್ಲಾಹನ ಬಳಿ ಇದು ಹೆಚ್ಚು ನ್ಯಾಯೋಚಿತ ವಿಷಯವಾಗಿದೆ. ಒಂದು ವೇಳೆ ನಿಮಗೆ ಅವರ ತಂದೆ ಯಾರೆಂಬ ಅರಿವಿಲ್ಲದಿದ್ದರೆ ಆಗ ಅವರು ನಿಮ್ಮ ಧರ್ಮಬಂಧು ಹಾಗೂ ಮಿತ್ರ ಮಾತ್ರನಾಗಿರುತ್ತಾರೆ. ನೀವು ತಿಳಿಯದೆ ಇವ ನನ್ನ ಮಗ ಎಂದು ಹೇಳಿದ ಮಾತಿಗಾಗಿ ನಿಮ್ಮ ಮೇಲೆ ದೋಷವಿಲ್ಲ. ಆದರೂ ನೀವು ಉದ್ದೇಶಪೂರ್ವಕವಾಗಿ ಹೇಳಿದ ಆ ಮಾತಿನ ಬಗ್ಗೆ ಖಂಡಿತಾ ದೋಷವಿದ್ದೆ ಇದೆ. ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.

೫, ನಿಶ್ಚಯವಾಗಿಯೂ ಪ್ರವಾದಿಯು ಸತ್ಯವಿಶ್ವಾಸಿಗಳಿಗೆ ಅವರ ಸ್ವಂತ ಅಸ್ತಿತ್ವಕ್ಕಿಂತಲೂ ಪ್ರಧಾನರಾಗಿದ್ದಾರೆ! ಹಾಗೂ ಪ್ರವಾದಿಯ ಪತ್ನಿಯರು ಅವರ ಮಾತೆಯರಾಗಿದ್ದಾರೆ! ಆದರೆ ದೇವಗ್ರಂಥದ ದೃಷ್ಟಿಯಿಂದ ಸಾಮಾನ್ಯ ಸತ್ಯ ವಿಶ್ವಾಸಿಗಳು ಹಾಗೂ ಮುಹಾಝಿರರಿಗಿಂತಲೂ ಸಂಬಂಧಿಕರು ಪರಸ್ಪರರ ಪಾಲಿಗೆ ಅಧಿಕ ಹಕ್ಕುದಾರರಾಗಿರುತ್ತಾರೆ. ಆದರೆ ತಮ್ಮ ಮಿತ್ರರೊಂದಿಗೆ ತಾವೇನಾದರೂ ಒಳಿತು ಮಾಡಲಿಚ್ಛಿಸುವಿರಾದರೆ ಮಾಡಬಹುದು, ಆ ಆಜ್ಞೆಯೂ ದೇವಗ್ರಂಥದಲ್ಲಿ ಸ್ಪಷ್ಟವಾಗಿ ಬರೆದಿದೆ.


ಖುರ್ಹಾನ್ ಕನ್ನಡಾನುವಾದ ಸುರಾ ೩೩.


ಮದೀನಾದ ವಾಸಿಗಳು ಇದರ ನಂತರ ಅದೂವರೆಗೂ ಮಹಮದನ ಮಗನೆಂದು ಕರೆಯಲಾಗುತ್ತಿದ್ದ ಝೈದ್'ನನ್ನು ಮುಂದೆ ಹಾರಿಥ್'ನ ಮಗನೆಂದು ಕರೆಯ ತೊಡಗಿದರು. ಹಾರಿಥ್ ಅವನ ಹೆತ್ತ ಅಪ್ಪನಾಗಿದ್ದ. ಇದರೊಂದಿಗೆ ದತ್ತು ಸ್ವೀಕಾರ ಅಧಿಕೃತವಾಗಿ ಇಸ್ಲಾಮಿನಲ್ಲಿ ನಿಷೇಧಗೊಂಡಿತು ಎನ್ನುತ್ತಾರೆ ಇತಿಹಾಸಕಾರ ಸಲೀಮ್ ಫಾದ್ ತನ್ನ ಕೃತಿ 'ಲೈಫ್ ಆಫ್ ಪ್ರಾಪೆಟ್ ಮಹಮದ್'ನ ಪುಟಸಂಖ್ಯೆ ೧೮೧ರಲ್ಲಿ.


ಈಗ ಮಹಮದನ ಅಂತಃಪುರದಲ್ಲಿ ಒಟ್ಟು ಆರು ಪತ್ನಿಯರಿದ್ದು ಅವರಲ್ಲಿ ಎಳೆಯ ಚೆಲುವೆ ಆಯೆಷಾಳೂ ಸೇರಿ ಇನ್ನಿತರ ಸುಂದರಿಯರೂ ಸೇರಿದ್ದರು. ತನ್ನ ಮನೆಗೆ ಬಂದು ಹೋಗುವವರ ಸಂಖ್ಯೆ ವೃದ್ಧಿಸಿದ ಹಾಗೆ ಅವರನ್ನ ಹೊರಗಿನವರು ನೋಡದ ವ್ಯವಸ್ಥೆಯನ್ನು ಮಾಡುವ ಅಗತ್ಯದ ಬಗ್ಗೆ ಮಹಮದ್ ಮನಗಂಡ. ಅವರು ಹೊರಗಿನವರ ಕಣ್ಣಿಗೆ ಬೀಳುವುದನ್ನ ತಪ್ಪಿಸುವ ವ್ಯವಸ್ಥೆ ಮಾಡಿದ. ಯಾರೂ ತನ್ನ ಅನುಮತಿ ಇಲ್ಲದೆ ಅಂತಃಪುರದ ಒಳಗೆ ಹೋಗುವಂತಿಲ್ಲ ಎಂದು ಆಜ್ಞಾಪಿಸಿದ. ತುರ್ತು ಸಂದರ್ಭಗಳಲ್ಲಿ ಹಾಗೊಮ್ಮೆ ಮಾತನಾಡಿಸಲೇ ಬೇಕಾಗಿ ಬಂದರೆ ಅಡ್ಡ ಪರದೆಯಿಂದಾಚೆ ನಿಂತು ಮೆಲು ಮಾತುಗಳಿಂದಷ್ಟೆ ಪರರ ನುಡಿಗಳನ್ನ ಆಲಿಸುವ ಏರ್ಪಾಡನ್ನು ಸಹ ಮಾಡಿಟ್ಟ. ಅವರು ಯಾವುದೆ ಕಾರಣಕ್ಕೂ ತನಗೆ ವಿಚ್ಛೇಧನ ಕೊಡುವುದನ್ನ ಹಾಗೂ ತಾನು ಸತ್ತ ಮೇಲೆ ಮರು ಮದುವೆಯಾಗುವುದನ್ನು ಸಹ ದೈವವಾಣಿಯ ಮೊಹರೊತ್ತಿ ಅಧಿಕೃತವಾಗಿಯೆ ನಿರ್ಬಂಧಿಸಿದ. ಸುರಾ ೩೩/೧-೪ರಲ್ಲಿ ಸ್ಪಷ್ಟವಾಗಿ ಇದನ್ನ ನೋಡಬಹುದು. ಹೀಗಾಗಿ ಅನಿವಾರ್ಯವಾಗಿ ಅವರನ್ನೆಲ್ಲಾ ಮುಸ್ಲೀಮರು 'ಇಸ್ಲಾಮಿನ ಮಾತೆಯರು' ಎಂದು ಕರೆದರು!


ಮಹಮದ್ ತನ್ನ ಮತಬಾಂಧವರ ಮಹಿಳೆಯರಿಗೆ ದೈವವಾಣಿಯ ಮುಖಾಂತರ ತಮ್ಮ ಮಾನ ಮರ್ಯಾದೆ ಹಾಗೂ ಸತ್ ಚರಿತ್ರೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಮ್ಮ ದೇಹ ಸೌಂದರ್ಯವನ್ನು ಸಂಪೂರ್ಣವಾಗಿ ಅನಾಕರ್ಷಕ ಬಣ್ಣದ ಉದ್ದ ನಿಲುವಂಗಿಗಳಿಂದ ಮುಚ್ಚಿಕೊಳ್ಳುವಂತೆ ಕಟ್ಟಳೆ ಹೊರಡಿಸಿದ. ಮಹಿಳೆಯರು ತಾವು ಧರಿಸುವ ಉಡುಪು ಹಾಗೂ ಆಭರಣಗಳನ್ನು ಇನ್ನಿತರರಿಂದ ಮುಚ್ಚಿಕೊಳ್ಳುವ ಸಲುವಾಗಿ ಈ ನಿಯಮವನ್ನು ರೂಪಿಸಲಾಯಿತು ಎನ್ನಲಾಗುತ್ತದೆಯಾದರೂ ಕೇವಲ ಪತಿ, ತಂದೆ ಹಾಗೂ ತಾಯಿಯ ಮುಂದೆ ಮಾತ್ರ ಈ ನಿರ್ಬಂಧಕ್ಕೆ ಸಡಿಲಿಕೆ ಕೊಡಲಾಯಿತು. ಸುರಾ ೨೪/೩೩ರಲ್ಲಿ ಇದರ ವಿವರಣೆಯನ್ನು ಕಾಣಬಹುದು.



ಆರು ಜನ ಹೆಂಡತಿಯರನ್ನು ಹೊಂದಿದ್ದು, ಅವರಿಗೆ ಆರು ಪ್ರತ್ಯೇಕ ವಸತಿಯನ್ನೂ ಸಹ ಕೊಟ್ಟು, ಅವರ್ಯಾರರ ನಡುವೆಯೂ ತಾರತಮ್ಯ ಮಾಡದೆ ಪ್ರತಿ ರಾತ್ರಿ ಒಬ್ಬೊಬ್ಬ ಹೆಂಡತಿಯೊಂದಿಗೆ ಕಳೆಯುವ ಏರ್ಪಾಡನ್ನ ಮಾಡಿಕೊಂಡಿದ್ದರೂ ಮಹಮದ್ ತನ್ನ ಪತ್ನಿಯರ ಹೊಟ್ಟೆಕಿಚ್ಚಿನ ಉರಿಯನ್ನ ಎದುರಿಸಬೇಕಾಯಿತು. ಅದಕ್ಕೆ ಕಾರಣಳಾದದ್ದು ಎಳೆಯ ಪತ್ನಿ ಆಯೆಷಾ ಹಾಗೂ ಆತ ಆಕೆಯೊಂದಿಗೆ ಅತಿ ಹೆಚ್ಚು ಕಾಲವನ್ನು ಅನ್ಯೋನ್ಯತೆಯಿಂದ ಕಳೆಯುತ್ತಿದ್ದುದು. ಅದಕ್ಕೂ ಮಹಮದ್ ದೈವವಾಣಿಯ ಮೊರೆ ಹೋದ! ಕೇಳಿದ ಕೂಡಲೆ ಆ ದೈವವಾಣಿ ಸುಲಭದಲ್ಲಿ ಸಿಕ್ಕಿತು ಸಹ. ಅದರ ಅನುಸಾರ ದೇವರು ಆತನಿಗೆ ತನ್ನ ಇಚ್ಛೆಯನುಸಾರ ಯಾವ ಪತ್ನಿಯೊಂದಿಗೆ ಎಷ್ಟು ಸಮಯ ಬೇಕಾದರೂ ಕಳೆಯುವ ಸಮ್ಮತಿ ದೊರಕಿತು. ಇದನ್ನ ಖುರ್ಹಾನಿನ ಸುರಾ ಸಂಖ್ಯೆ ೩೩/೫೦-೫೧ರಲ್ಲಿ ಗಮನಿಸಬಹುದು.


ಕ್ರಿಸ್ತಶಕ ೬೨೬ರ ಡಿಸೆಂಬರ್ ತಿಂಗಳಿನಲ್ಲಿ ಮಹಮದನಿಗೆ ಬೆನ್ ಮುಸ್ತಲಿಕ್ ಬುಡಕಟ್ಟಿನವರು ಮದೀನಾದ ಮೇಲೆ ಧಾಳಿ ಮಾಡಲಿರುವ ವಿಚಾರ ತನ್ನ ಗೂಢಚರರ ಮೂಲಕ ಅರಿವಾಯಿತು. ಅವರು ಮೆಕ್ಕಾದ ಖುರೈಷಿಗಳ ಆಪ್ತ ವಲಯದಲ್ಲಿದ್ದು ಸಹಜವಾಗಿ ಮಹಮದನ ಪಡೆಯ ವಿರೋಧಿಗಳಾಗಿದ್ದರು. ಖುರೈಷಿಗಳೊಂದಿಗೆ ಸ್ನೇಹ ಸಂಬಂಧ ಇರಿಸಿಕೊಂಡಿದ್ದ ಅವರು  ಖುರೈಷಿ ಪಡೆಗಳೊಂದಿಗೆ ಜಂಟಿಯಾಗಿ ಮದೀನಾದ ಮೇಲೆ ಮುಗಿಬೀಳುವ ಸನ್ನಹದಲ್ಲಿದ್ದರು. ಅದಕ್ಕಾಗಿ ಅವರು ಯುದ್ಧ ಸನ್ನಾಹದಲ್ಲಿರುವ ವಿಚಾರ ತಿಳಿದೊಡನೆ ತಾನೆ ಅವರನ್ನ ಎದುರಿಸಿ ನಿಲ್ಲಲು ಮಹಮದ್ ತೀರ್ಮಾನಿಸಿದ. ಶತ್ರುಗಳಿಗೆ ಬಲಿತು ಬೆಳೆಯಲು ಬಿಟ್ಟು ಆಮೇಲೆ ಅಪಾಯವನ್ನ ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ತಾನೆ ಮುಂದಾಗಿ ಅವರ ಹುಟ್ಟಡಗಿಸುವುದು ಜಾಣತನ ಎನ್ನುವುದು ಹಿಂದಿನ ಅನುಭವಗಳಿಂದ ಆತ ಕಲಿತ ಪಾಠವಾಗಿತ್ತು.



ಸಿಹಿ ನೀರಿನ ಒರತೆಗಳು ಹಾಗೂ ಬಾವಿಗಳಿದ್ದ ಸಮುದ್ರ ತೀರ ಸಮೀಪದ ಅಲ್ ಮೊರೈಸ್ ಎನ್ನುವ ಜಾಗದ ಬಳಿ ಮುಸಲ್ಮಾನ ಪಡೆ ಹೋಗಿ ಬೀಡುಬಿಟ್ಟಿತು. ಮಹಮದನೆ ಸೈನ್ಯದ ಮುಖಂಡತ್ವ ವಹಿಸಿದ್ದು ಆತನೊಂದಿಗೆ ಮಡದಿಯರಾದ ಉಮ್ ಸಲ್ಮಾ ಹಾಗೂ ಆಯೇಷಾ ಸಹ ಇದ್ದರು. ಮಹಮದನ ಪಡೆ ಬೆನ್ ಮುಸ್ತಾಲಿಕರನ್ನು ಅಟ್ಟಿಸಿಕೊಂಡು ಹೋಗಿ ಅನಿರೀಕ್ಷಿತವಾದ ಧಾಳಿ ನಡೆಸಿದರು. ಯುದ್ಧದ ನಿರೀಕ್ಷೆ ಇದ್ದಿರದಿದ್ದ ಅವರೆಲ್ಲಾ ದಿಕ್ಕಾ ಪಾಲಾಗಿ ಓಡಿ ಪಾರಾದರು. ಅವರು ಪಲಾಯನದ ನಂತರ ದೊಡ್ಡ ನಿಧಿಯೆ ಮಹಮದನಿಗೆ ದೊರಕಿತು. ಇನ್ನೂರು ಕುಟುಂಬಗಳು ಗುಲಾಮರಾಗಿ, ಎರಡು ಸಾವಿರ ಒಂಟೆಗಳು ಹಾಗೂ ಐದು ಸಾವಿರ ಕುರಿ ಮೇಕೆಗಳು ಅವನ ಪಾಲಿಗೆ ಅಲ್ಲಿ ನಸೀಬಾಗಿದ್ದವು. ಸೆರೆ ಹಿಡಿದ ಮಂದಿಯಲ್ಲಿ ಬೆನ್ ಮುಸ್ತಾಲಿಕ್ ಬುಡಕಟ್ಟಿನ ನಾಯಕನ ಪತ್ನಿ ಝುವೈರಿಯಾ ಎನ್ನುವ ಸುಂದರ ಸ್ತ್ರೀ ಸಹ ಇದ್ದಳು.


ಅರೇಬಿಯಾದ ವಾಡಿಕೆಯಂತೆ ಸೆರೆಯಾದ ಮನುಷ್ಯರನ್ನ ಬಿಡಿಸಿಕೊಳ್ಳಲು ಬೆನ್ ಮುಸ್ತಾಲಿಕರು ನಿಯೋಗ ಹೊತ್ತು ಒತ್ತೆ ಹಣದ ಚೌಕಾಸಿ ನಡೆಸಲು ಬಂದರು. ಬಹುಪಾಲು ಎಲ್ಲಾ ಗುಲಾಮರಾಗಿದ್ದ ಮಂದಿಯನ್ನ ಬಿಡಿಸಿಕೊಳ್ಳಲಾಯಿತಾದರೂ ಸುಂದರಿ ಝುವೈರಿಯಾಳನ್ನು ಬಿಡಿಸಿಕೊಳ್ಳಲು ಯಾರೂ ಮುಂದಾಗಲಿಲ್ಲ. ಕಾರಣ ಸರಳ, ಅವಳ ಸೌಂದರ್ಯವೆ ಅವಳ ಬೆಲೆ ಏರಿಕೆಗೆ ಕಾರಣವಾಗಿ ಅಷ್ಟು ಹೆಚ್ಚು ಹಣ ತೆರುವ ಸಾಮರ್ಥ್ಯ ಬಂದ ಯಾರಿಗೂ ಇದ್ದಿರಲಿಲ್ಲ! ಇದರಿಂದ ಅವಳು ದುಃಖಿತಳಾಗಿದ್ದಳು. ಹೇಗಾದರೂ ಸರಿ ಬೇಡಿಯಾದರೂ ಬೆಲೆ ಇಳಿಕೆಗಾಗಿ ಪ್ರಯತ್ನಿಸಿ ನೋಡುವ ಎಂದಾಕೆ ಮಹಮದನ ಬಿಡಾರದತ್ತ ಹೊರಟಳು. ಅವಳ ಅಹವಾಲನ್ನು ಆಲಿಸಿದ ನಂತರ ಮಹಮದ್ ಆಕೆಯ ಮುಂದೆ ಒಂದು ಪ್ರಸ್ತಾವನೆಯನ್ನು ಇಟ್ಟ. ಇದಕ್ಕಿಂತ ಉತ್ತಮವಾದದ್ದನ್ನು ಕೊಡ ಮಾಡಿದರೆ ಒಪ್ಪಿಗೆಯೆ? ಎಂದಾತ ಆಕೆಯನ್ನ ಪ್ರಶ್ನಿಸಿದ. ಆಶ್ಚರ್ಯದಿಂದ ಅದೇನು! ಎಂಡಳವಳು. ನಿನ್ನ ಬಂಧುಗಳಿಗೆ ಸೂಕ್ತ ತೆರ ತೆತ್ತು ನಾನೆ ನಿನ್ನನ್ನ ಮದುವೆ ಆಗುವೆನೆಂದ ಮಹಮದ್. ಯೋಚಿಸಿ ಆಕೆಯೂ ಅದಕ್ಕೆ ಸಮ್ಮತಿ ಸೂಚಿಸಿದಳು. ಅದೆ ಪ್ರಕಾರ ಇಸ್ಲಾಮಿಗೆ ಮತಾಂತರ ಮಾಡಿ ಆಕೆಯನ್ನೂ ಸಹ ಕೈ ಹಿಡಿದ ಮಹಮದ್ ತನ್ನ ಅಂತಃಪುರದ ಏಳನೆ ಅರಸಿಯನ್ನಾಗಿಸಿಕೊಂಡ. ಸರ್ ವಿಲಿಯಂ ಮ್ಯೂರರ "ಲೈಫ್ ಆಫ್ ಮಹಮದ್" ಕೃತಿಯ ೨೯೮ರಲ್ಲಿ ಇದರ ವಿವರಣೆಯನ್ನು ಗಮನಿಸಬಹುದು.



ಅಲ್ ಮೊರೈಸ್'ನಲ್ಲಿ ಮುಸಲ್ಮಾನ ಯುವಕರು ಹೊಸತೊಂದು ನಿಲುವನ್ನ ರೂಢಿಸಿಕೊಳ್ಳಲಾರಂಭಿಸಿದ್ದರು. ಅದರ ಪ್ರಕಾರ ಬಲಿಷ್ಠರಾಗಿದ್ದವರು ದುರ್ಬಲರನ್ನು ಹೊಡೆದೋಡಿಸಬಹುದು ಎಂದವರು ನಂಬಿ ಕೂತಿದ್ದರು. ಅವರ ನಡೆನುಡಿಗಳಲ್ಲಿ ಅದು ಆಗಾಗ ವ್ಯಕ್ತವಾಗುತ್ತಿತ್ತು. ಆದರೆ ಎಲ್ಲರಲ್ಲೂ ಇದಕ್ಕೆ ಸಹ ಸಮ್ಮತಿ ಇರಲಿಲ್ಲ. ಪುಂಡಾಟಿಕೆ ಅತಿಯಾದಾಗ ಓಮರ್ ಕತ್ತಿ ಬಳಸಿ ಅದನ್ನ ಕೆಲವು ಸಲ ನಿಯಂತ್ರಿಸಲು ಮುಂದಾದ. ಆದರೆ ಮಹಮದ್ ಬೇರೆಯದೆ ಒಂದು ಪರಿಹಾರವನ್ನಿದಕ್ಕೆ ಹುಡುಕಿದ. ತತ್ ತಕ್ಷಣವೆ ಆತ ತನ್ನ ಪಡೆಯನ್ನ ಮದೀನಕ್ಕೆ ಹಿಂದಿರುಗುವಂತೆ ಆಜ್ಞಾಪಿಸಿದ. ಬೇಕಂತಲೆ ಸುಡು ಬಿಸಿಲ ಹಗಲಿನಲ್ಲಿ ಅವರನ್ನೆಲ್ಲಾ ನಡೆಸಿಕೊಂಡು ಮದೀನದತ್ತ ಚಲಿಸುವಂತೆ ಮಾಡಲಾಯಿತು. ಆ ಬಿಸಿಲ ಬೇಗೆಗೆ ಬಳಲಿ ಸುಸ್ತಾದ ಅವರು ತಮ್ಮ ಆಂತರಿಕ ಜಗಳ ಮರೆತು ಶೀಘ್ರ ಮನೆ ಸೇರಲು ಹಂಬಲಿಸಿಯಾರು ಎಂದಾದ ಹಂಚಿಕೆ ಹಾಕಿದ.


ಇದೆ ಸಮಯದಲ್ಲಿ ಮಹಮದನ ಕಟ್ಟರ್ ಬಂಟ ಓಮರ್ ತನ್ನ ಅವಿಶ್ವಾಸಿ ಮೂರ್ತಿಪೂಜಕ ತಂದೆಯ ತಲೆ ತೆಗೆಯಲು ಮಹಮದನ ಒಪ್ಪಿಗೆ ಯಾಚಿಸಿದ. ಧರ್ಮದ ಉಳಿವಿಗಾಗಿ ಅವಿಶ್ವಾಸಿಗಳ ಹತ್ಯೆ ಜರುಗಿಸಬಹುದು ಎನ್ನುವ ಮಹಮದನ ಅಣಿಮುತ್ತನೆ ಉದಹರಿಸಿ ಆತ ಅನುಮತಿ ಬಯಸಿದ. ಆದರೆ ಮಹಮದ್ ಹಾಗೆ ಮಾಡಬೇಕಿಲ್ಲ, ಆತನ ಮನಃ ಪರಿವರ್ತನೆಗೆ ಇನ್ನಷ್ಟು ಕಾಲ ಕೊಡಬಹುದು ಎಂದಾಗ, ತನ್ನ ತಂದೆಗೆ ಈ ವಿಷಯವನ್ನು ಅರುಹಿ ಅಕ್ಷರಶಃ ಮಹಮದನ ಕಾಲು ತೊಳೆದ ನೀರನ್ನು ಆತನಿಗೆ ಕುಡಿಸಿ ಆತನನ್ನೂ ಇಸ್ಲಾಮಿನತ್ತ ತಿರುಗುವಂತೆ ಮಾಡಿದ.



( ಇನ್ನೂ ಇದೆ.)



(* ಝಿಹಾರ್ ಎಂದರೆ ಹೆಂಡತಿಯನ್ನು ತಾಯಿಯಂತೆ ಕಾಣುವುದು.)

No comments:

Post a Comment