Friday, August 9, 2013

ಕದ್ದು ಕಾಣುವ ಕನಸುಗಳದ್ದು ಕದಲದ ಕಲರವ....

ನಾನು ಯಾರವನೂ ಆಗಲಿಲ್ಲ
ಯಾರೊಬ್ಬರೂ ನನ್ನವರೂ ಆಗಲೇ ಇಲ್ಲವಲ್ಲ....
ಮೌನದ ಲೆಖ್ಖಣಿ ಗೀಚಿದ ಮುರುಕು ಮಾತಾಗಿಯೆ
ಕಳೆಯಿತು ಈ ಬಾಳು.
ಸಂಕಟದ ಗಡಿಯಲ್ಲಿ ಕುಳಿತಾಗಲೂ
ಮನಸು ಅರಳೋದಕ್ಕೆ ಖಚಿತ ಕಾರಣ ಇರಬೇಕಿಲ್ಲ....
ನಟ್ಟಿರುಳು ಕವಿದಿದ್ದರೂ ಕಾಯುವ ಹುಚ್ಚಿರುವ ಮನಸಿಗೆ
ನಿದಿರೆಯ ಸುಳಿಗಾಳಿ ಸೋಕುತ್ತಿಲ್ಲ/
ಪ್ರಲೋಭನೆಗಳಿಗೆ ಸೋಲದಿರಲು
ನಾನೇನು ಸಂತನಲ್ಲ....
ಆದರೂ ಸಂಯಮದ ಗಡಿ ಮೀರದಂತೆ ಎಚ್ಚರಿಸಲು
ನಿನ್ನ ನೆನಪುಗಳು ಜೊತೆಯಲ್ಲಿದ್ದೇ ಇವೆಯಲ್ಲ,
ಬೇಡದ ಕನಸುಗಳೆಲ್ಲ ಎದುರಾಗುವಾಗ ಕ್ಷಣಕ್ಷಣ
ಲೋಲುಪ ಮನಸು ತುಸುಕಾಲ....
ಹಿಡಿತ ಮೀರುವುದಂತೂ ಹೌದು.//


ಏಗಲೆ ಬೇಕಲ್ಲ ಒಲವ ಕೆಂಡವನ್ನ
ಒಡಲಲ್ಲಿ ಕಟ್ಟಿಕೊಂಡಾದ ಮೇಲೆ....
ಸುಡುವ ಅದರ ಕಾವು ಕೊಂಚವೂ ಆರದು
ಸುರಿಯುತ್ತಲೆ ಇದ್ದರೂನು ನಿರಂತರ ಕಂಬನಿಯ ಮಳೆ,
ಹುಟ್ಟಿನಿಂದ ಕಿತ್ತು ತಿನ್ನುತ್ತಿದ್ದ
ಕರಾಳ ಒಂಟಿತನದ ಪ್ರಶ್ನೆಗೆ....
ನಿನ್ನಲ್ಲಾದರೂ ಜವಾಬು ಸಿಕ್ಕೀತು ಅನ್ನುವ ಆಸೆಯಿಂದ
ನಿನ್ನನ್ನೆ ನಿರಂತರ ಆತುಕೊಂಡಿದ್ದೆ....
ನೀನೂ ನಿರುತ್ತರವಾಗಿ
ದೂರವಾಗುವಾಗುವ ಕಲ್ಪನೆಯೆ ನನಗಿರಲಿಲ್ಲ/
ಕಾಡುವ ಚಳಿಯ ಸುಳಿವು
ಗಾಳಿಗೂ ಇರಲಿಲ್ಲ....
ಮಳೆಯ ಕುರುಹನ್ನ
ಬರಡು ಮೋಡಗಳೂ ಹೊತ್ತು ತರಲಿಲ್ಲ,
ಬಿರಿದಿದ್ದು ಬಾಡದೆ ಕಣ್ಣಿನ ಅನುಗಾಲ ನಿರೀಕ್ಷೆ
ಆಪ್ತ ಜೀವವೊಂದರ ಮರು ಆಗಮನದ....
ಕಿರು ನೋಟದ ಆಕ್ಷಾಂಶೆ ಮಾತ್ರ.//


ಕನಸ ಹಾದಿಯೂ ಕತ್ತಲಾವರಿಸಿದಾಗ
ನನಸ ಬಾಳು ಸಹ ಬರಿ ಬೆತ್ತಲೆ....
ಮನಸಿನಾಳದಲ್ಲಿ ನೆನಪಾಗಿ
ಹಚ್ಚೆಯಿಳಿದ ನಂತರ ಮತ್ತಿನ್ನೇನಿಲ್ಲ....
ಮೌನವೂ ಆಪ್ತ ಮಾತಾಗುತ್ತದೆ,
ಕಪೋಲವ ತೋಯಿಸಿ ಕಲೆಯುಳಿಸಿಯೆ ಹೋಗುವ
ಕಣ್ಣ ಕಡೆಯ ಹನಿಗೂ....
ಸಾಧ್ಯವಾದರೆ ನಿನ್ನನೊಮ್ಮೆ
ತನ್ನಲ್ಲಿ ಪ್ರತಿಫಲಿಸುವ ಕಾತರ/
ಸುರಿದ ಮರುಘಳಿಗೆ ಇಂಗಿ ಇಲ್ಲವಾಗುವ
ಹನಿಯೊಂದರಲ್ಲಿ ಅಡಗಿದ್ದುದ್ದು....
ನೆಲದೊಡಲನ್ನ ಆದಷ್ಟು ಬೇಗ
ಬೆರೆಯುವ ಆತುರ ಮಾತ್ರ,
ಇದನ್ನಿಲ್ಲಿ ಬರೆದ ಬೆರಳುಗಳಿಗೂ ಗೊತ್ತಿಲ್ಲದ ಸತ್ಯ ಏನೆಂದರೆ
ಕಣ್ಣಲ್ಲಿ ಹುಟ್ಟಿದ ಕನಸುಗಳೆಲ್ಲ....
ಕಣ್ಣಿನಾಳದಲ್ಲಿಯೆ ಬಿದ್ದು
ಹೇಳ ಹೆಸರಿಲ್ಲದಂತೆ ಜೀವ ಕಳೆದುಕೊಂಡಿವೆ.//


ಸಮಯದ ಪರಿವೆಯಿಲ್ಲದೆ
ಪರಿಪರಿಯಾಗಿ ಮನ ಮೌನದಲ್ಲೂ....
ಕನವರಿಸುವ ಕಾತರಗಳಲ್ಲೆಲ್ಲ
ಈಡೇರದ ಕಾಲಾತೀತ ಕನಸುಗಳ ಛಾಪು ಇದೆ,
ಹೊತ್ತು ಸರಿವ ಸಮಯದಲ್ಲಿ ನಲಿವನ್ನೆ
ಸುಂಕವಾಗಿ ವಸೂಲು ಮಾಡಿದರೆ....
ಬಾಳೆಲ್ಲ ಸುಮಧುರ ಸ್ವಪ್ನವಾಗುತ್ತಿತ್ತು/
ಸುರಿದ ಹನಿಹನಿಗಳ
ಸಾಂಗತ್ಯದಲ್ಲಿ ಸಾಗುವ ಭೂಮಿ....
ಎದೆಯೊಳಗೆ ವ್ಯಕ್ತಪಡಿಸಲಾಗದ ಒಲವು
ನಿರಂತರ ಅಂತರ್ಗಾಮಿ,
ತುಂಬಿದ ಮನದ ಅಣೆಕಟ್ಟೆಯ ಒಡಲಾಳವೆಲ್ಲ
ಕಂಬನಿಯ ಪ್ರವಾಹದ ನೆರೆ....
ಹಾಗಾಗಿಯೆ ಕಣ್ಣ ಕ್ರೆಸ್ಟ್ ಗೇಟುಗಳು
ಆಗಾಗ ತನ್ನಿಂದ ತಾನೆ ತೆರೆದುಕೊಳ್ಳುತ್ತವೆ.//

No comments:

Post a Comment