ಹೇಗಿದ್ದೆ? ಹೇಗಾದೆ? ಹೌದು ಹೀಗೇಕಾದೆ? ಉತ್ತರ ಹೊಳೆಯುತ್ತಿಲ್ಲ. ಬಹುಷಃ ಸರಿಯಾದ ಉತ್ತರವೂ ಇದಕ್ಕಿಲ್ಲ. ಸುಮ್ಮನಿದ್ದರೂ ಸರಿದು ಹೋಗುವ ಸಮಯದ ಕಿರು ಹಾದಿಯಂಚಿನಲ್ಲಿ ಎದ್ದು ಬಿದ್ದು ಎಡವಿ ನಡೆಯುತ್ತಲೆ ಮೂರು ದಶಕಗಳು ಮೀರಿ ಹೋಗಿವೆ.
ಬೇಕಾದದ್ದು ಸಿಕ್ಕಿರದಿದ್ದರೂ ಸಿಕ್ಕಿರೋದು ಅಲ್ಪವೇನಲ್ಲ, ಅಷ್ಟು ತಿರಸ್ಕಾರ ಯೋಗ್ಯವೂ ಅಲ್ಲ. ಆದರೂ ಮನ ಸದಾ ಉರಿಯುತ್ತಿರುವ ಅಗ್ನಿಕುಂಡವಾಗಿಯೆ ಉಳಿದಿದೆ. ಒಳಗಿನ ಅಗ್ಗಿಷ್ಟಕೆಯ ಉರಿ ಆರದಂತೆ ನಿದ್ರೆ ಮರೆತ ರಾತ್ರಿಗಳು ಕಾದಿದ್ದು ಕಾಡುತ್ತವೆ. ಊರೆಲ್ಲ ನಿಶ್ಚಲವಾಗಿ ಸ್ವಪ್ನ ಸಾಗರದಲ್ಲಿ ಮುಳುಗಿರುವಾಗ ನನ್ನೊಳಗಿನ ಒಡಕು ದೋಣಿಯ ಮುರುಕು ತುಂಡೊಂದು ದಡ ಮುಟ್ಟಲು ಕಾತರಿಸುತ್ತಾ ದಿಕ್ಕಿಲ್ಲದಂತೆ ತೇಲುತ್ತದೆ.
ತೀರ ಸೇರದಿದ್ದರೂನು ಕೊನೆವರೆಗೂ ಮಾತಿಲ್ಲದೆ ಮೌನವಾಗಿ ಹೀಗೆಯೆ ನಿಶಾರಾತ್ರಿಗಳಲ್ಲಿ ತೇಲಲೇಬೇಕಿದೆ. ವೇದನೆಯ ತಳವನ್ನೆಂದೂ ಮುಟ್ಟುವಷ್ಟು ಬತ್ತದಂತೆ ಬಾಳ ಕಡಲನ್ನ ಇನ್ನು ಮುಂದೆಯೂ ಕಂಬನಿಯಿಂದಲಾದರೂ ತುಂಬುತ್ತಲೆ ಇರಬೇಕಿದೆ. ಜೀವನ ನಿನ್ನ ಬಗ್ಗೆ ದೂರು ದುಮ್ಮಾನಗಳೇನೂ ಇಲ್ಲ.
ನೀನೊಪ್ಪದಿದ್ದರೂ ನಿನ್ನವ.
-ಹೆಸರೊಂದು ಇರಲೇಬೇಕ?
No comments:
Post a Comment