ಮಾತು ಸತ್ತು ಹೋದಾಗ
ಹುಟ್ಟುವ ಮೌನದ ಗರ್ಭದೊಳಗೆ....
ಅಪಾರ ಕರುಣೆಯ ಕೂಸಿನ ಭ್ರೂಣ ಮಿಡುಕುತ್ತಿದೆ,
ಕನಸು ಮೌನವಾಗಿ ಸೋಕುವಾಗ
ಮುಖದಲ್ಲಿಯೂ ಆರದ ಮಂದಹಾಸದ ಆರ್ದ್ರತೆಯಿರುತ್ತದೆ/
ಹಳೆಯ ಹೊಳೆವ ನೆನಪುಗಳು
ಮುಗ್ಧ ಮಗುವಿನ ಬೆರಗು ಹೊತ್ತ ನಯನಗಳಂತೆ....
ಚಿಮ್ಮುವ ಬೆಳಕಿನ ಒರತೆಗಳವು,
ನಟ್ಟಿರುಳ ಮೌನದುನ್ಮಾದಲ್ಲಿ
ಬೇಡದಿದ್ದರೂ ಬೀಸಿ ಸೋಕುವ....
ಗಾಳಿಯಬ್ಬಿಸುವ ಜರೋಕಾದ ಘಂಟೆಯ ನಾದದಲ್ಲಿ
ನೀನೇಕೋ ನೆನಪಾಗಿ ಕಾಡುತ್ತೀಯ.//
ನಲಿವಿಗೆ ತಂದಿದ್ದು ಸಂಚಕಾರ
ಮುಳ್ಳಿನಂತೆ ನಿತ್ಯ ಎದೆಯ ತಿವಿಯುವ ನೆನಪು
ನಿರಂತರ ಕಾಡುವ ಸಂಚುಕೋರ....
ನಗುವ ಸ್ವಾತಂತ್ರ್ಯವನ್ನು ಕೊಳ್ಳೆ ಹೊಡೆದ
ನೋವು ಬಗಲಲ್ಲೆ ಇರುವಾಗ....
ನಾನಿನ್ನೂ ಆಜೀವ ಬಂಧಿ,
ಬಿರಿದ ಕಣ್ಣುಗಳಲ್ಲಿ ಅಡಗಿರುವ
ಬೆರಗಿನ ಬೆಲೆ ಕಟ್ಟಲು....
ಯಾವ ಕಾಗದದ ದುಡ್ಡಿಗೂ ಸಾಧ್ಯವಿಲ್ಲ/
ಕಪಟವಿಲ್ಲ ಕೇವಲ ಸ್ಪಟಿಕ ಶುದ್ಧ
ಆರಾಧನೆಯ ಭಾವವಿದೆ....
ಎದೆಯ ಬಾವಿಯಾಳದಲ್ಲಿ
ಸುಶುಪ್ತವಾದ ಒಲವ ಲಾವವಿದೆ,
ಮೌನದ ಧ್ಯಾನದಲ್ಲಿ ಮತ್ತೆ ಸುಳಿವ
ನೆನಪುಗಳ ಸಾಂಗತ್ಯ....
ಸತ್ತ ಸ್ವಪ್ನಗಳನ್ನ ಕುಟುಕು ಜೀವ ಕೊಟ್ಟು
ಕಾಪಾಡುತ್ತದೆ ಜೊತೆಗೆ ಕಾಡುತ್ತದೆ!//
ನಾ ನಾನಲ್ಲ ನನ್ನದೇನೂ ನನ್ನಲಿಲ್ಲ
ನೀನಲ್ಲದ್ದು ಏನೂ ಇನ್ನುಳಿದಿಲ್ಲ....
ನಾನು ನಾನಲ್ಲವೇ ಅಲ್ಲ,
ಬೀಸುವ ಗಾಳಿಯ ಅಲೆಯಲ್ಲಿ ಕಿರು ಧೂಳಿನ ಕಣವಾಗಿ
ಹರಿಯುವ ನೀರಿನ ತೆರೆಯಲ್ಲಿ ಕರಗುವ ಕೆಸರಾಗಿ....
ಸುಮ್ಮನೆ ಸಾಗುತ್ತಲಿದ್ದೇನೆ
ವಿಧಿ ಕೈ ಹಿಡಿದು ನಡೆಸಿದೆಡೆ ಇದರಲ್ಲಿ ನನ್ನದೇನೂ ಇಲ್ಲ/
ಅದೆಲ್ಲ ಈಗ ಇತಿಹಾಸ
ಆದರೆ ನೆನಪಾಗಿ ಮನದ ದಂಡೆಯನ್ನ ಸೋಕಿದಾಗಲೆಲ್ಲ....
ಸಂಕಟದಲ್ಲೂ ಮೂಡಿಸುತ್ತದೆ
ತುಟಿಯಂಚಿನಲ್ಲಿ ಮಂದಹಾಸ,
ಕೇವಲ ಕನವರಿಕೆಯೆ ಬದುಕಾದಾಗ
ಕನಸುಗಳೆಲ್ಲ ಕಮರಿದರೂನು ಚಿಂತೆಯಿರದು....
ಹನಿಗಳು ಸ್ವಲ್ಪವೇ ಆಗಿದ್ದರೂ ಇದೂನು ಮಳೆಯೆ
ಮಿಡಿವ ಮನದ ಗಾನ ಅಲ್ಪವೆ ಆಗಿದ್ದರೂ....
ಆದೂನು ಒಲವ ಕಿರು ಕಳೆಯೆ.//
ಎಲ್ಲೋ ನಿಂತು ಕರೆಯುತ್ತೇನೆ
ಮನಸೊಳಗೆ ಮತ್ತೆ ಮತ್ತೆ ಮೊರೆಯುತ್ತೇನೆ....
ಮೌನ ಮಾತಾಗುತ್ತದೆ
ನಾನು ಮಾತ್ರ ಮತ್ತೆ ಮೌನದ ಚಿಪ್ಪಲ್ಲಿ ಹುದುಗುತ್ತೇನೆ,
ಮನದ ಸನಾದಿಯಲ್ಲಿ ನೀನಿಲ್ಲದ ಶೋಕದ
ಅಪಸ್ವರದ ಹೊರತು ಉಳಿದಂತೆ ನಾದವೇನೂ ಶೃತಿ ತಪ್ಪಿಲ್ಲ....
ಆದರೂ ನೀನೂ ಜೊತೆಗಿರಬೇಕಿತ್ತು
ನಾದಕ್ಕೆ ನಿಜವಾದ ಕಳೆ ತುಂಬಿಸಲಿಕ್ಕೆ/
ಬಿಸಿಲು ಬಿದ್ದರೂ ಮಳೆಯೆ ಕವಲಲ್ಲೆ ಇದ್ದರೂ
ನೋವಿದ್ದರೂ ನಲಿವಿದ್ದರೂ....
ನೆಲ ಯಾವುದಾದರೊಂದರಲ್ಲಿ ಸದಾ ತೊಯ್ಯುತ್ತಲೆ ಇರುತ್ತದೆ,
ನೀ ಹೋಗುವ ಮೊದಲು ಎಳೆದ ಗಡಿರೇಖೆಯನ್ನ
ನಾನಿನ್ನೂ ದಾಟಿಲ್ಲ ....
ನನ್ನ ಬಿಸಿಯುಸಿರು ಇನ್ಯಾರಿಗೂ ಇದುವರೆಗೂ ತಾಕಿಲ್ಲ.//
No comments:
Post a Comment