( ಕಾಫಿ ಖಚಿತ, ಖಾಯಿಲೆ ಉಚಿತ.)
ಕಂಡದ್ದೆಲ್ಲ ನಿಜವಾಗಿರಬೇಕಿಲ್ಲ ಹಾಗೂ ನಿಜವಾದದ್ದು ತಾನಿದ್ದಂತೆಯೆ ಹೊರಗೆ ಕಂಡು ಕಣ್ಣಿಗೆ ರಾಚಬೇಕಂತಲೂ ಇಲ್ಲ. ನೆನ್ನೆ ತೆರೆ ಕಂಡ ಹಿಂದಿ-ತಮಿಳ್ ಚಿತ್ರ "ಮದ್ರಾಸ್ ಕಫೆ"ಯನ್ನ ನೋಡಿದಾಗ ಅನ್ನಿಸಿದ್ದು ಇಷ್ಟು. ಚಿತ್ರದ ಕಥೆಯಾಗಿ ಆಯ್ದುಕೊಂಡಿರುವ ಕಥೆ ಮೇಲ್ನೋಟಕ್ಕೇನೋ ಅಸಕ್ತಿ ಕೆರಳಿಸುವಂತದ್ದೆ, ಆದರೆ ಅದನ್ನ ಆಯ್ದು ಕೊಂಡವರು ತೆರೆಯ ಮೇಲೆ ಎರಡೂವರೆ ಘಂಟೆಗಳ ಕಾಲ ಅದನ್ನ ಕಟ್ಟಿ ಕೊಡುವ ಪರಿ ಮಾತ್ರ ತೀರಾ ನಿರ್ಲಜ್ಜವಾಗಿ ಚಿತ್ರದ ಹಿಂದಿನ ಅಸಲು ಆಶಯವನ್ನ ಸಂಶಯಕ್ಕೆ ಎಡೆಯಿಲ್ಲದಂತೆ ಬಟಾಬಯಲು ಮಾಡುತ್ತದೆ. ಸಹಜವಾಗಿ ಅದೇ ಕಥೆ ಏಕೆ ಆಯ್ಕೆಯಾಯಿತು? ಅದನ್ನೇ ಆಯ್ದುಕೊಳ್ಳಲು ಯಾರ್ಯಾರು ಉದಾರವಾಗಿ(?) ಒತ್ತಾಸೆಯಾದರು? ಯಾವುದೆ ಸಮಯದಲ್ಲಿ ಮುಂದಿನ ಲೋಕಸಭಾ ಚುನಾವಣೆ ಘೋಷಣೆಯಾಗುವ ಸಂಭವವಿರುವ ( ಬಲ್ಲ ಮೂಲಗಳ ಪ್ರಕಾರ ಬಹುತೇಕ ಬರುವ ನವೆಂಬರಿನಲ್ಲಿ ಚುನಾವಣೆ ಅವಧಿಗೂ ಮೊದಲೇ ಘೋಷಣೆಯಾಗಲಿದೆ.) ಇಂತಹ ಹೊತ್ತಿನಲ್ಲಿಯೆ ಸಿನೆಮಾ ಅದೇಕೆ ತೆರೆ ಕಂಡಿದೆ? ಮುಂತಾದ ಉತ್ತರ ಖಚಿತವಿರುವ ಆದರೆ ಅದು ಗೊತ್ತಿರುವ ಎಲ್ಲರೂ ಅಮಾಯಕರ ಹಾಗೆ ನಟಿಸುವ ಸರಳ ಇಷಾರೆಗಳು ಸಹಜವಾಗಿ ಹೊಳೆಯುತ್ತವೆ
ನೀವು ಇತ್ತೀಚೆಗೆ ರೇಡಿಯೋ ಹಾಗೂ ಟಿವಿಗಳಲ್ಲಿ "ಶಾನ್ ಹಾಗೂ ಸುನಿಧಿ ಚೌಹಾಣ್ ಹಾಡಿರುವ" ಎನ್ನುವ ಉದ್ಘೋಷ ಸಹಿತದ "ಮೈಲೋ ಹಮ್ ಆ ಚುಕೆ.... ಮೈಲೋ ಹಮೆ ಜಾನ ಹೈ" ಎನ್ನುವ ಒಂದು ದಢೀರ್ ಉದ್ಭವ ಮೂರ್ತಿಯಂತಹ ಹಾಡನ್ನ ಕೇಳಿ/ ನೋಡಿ ಇರಬಹುದು. ಯಾವ ಜನಪ್ರಿಯ ಸಿನೆಮದ್ದೂ ಅಲ್ಲದ ಅಥವಾ ಯಾವುದೇ ಹೊಸ ಸಂಗೀತದ ಆಲ್ಬಂನದ್ದೂ ಅಲ್ಲದ ಈ ಒಂಟಿ ಹಾಡಿನ ಬಗ್ಗೆ ನಿಮಗೂ ಗುಮಾನಿ ಹುಟ್ಟಿರಬಹುದು. ಆ ಹಾಡಿನ ಜಾಡು ಇಂತಿದೆ, ಅದನ್ನ ಶ್ರದ್ಧೆಯಿಂದ ಬರೆದ ಕವಿ ಸದ್ಯದ ಯುಪಿಎ ೨ ರ ರಾಜ್ಯಸಭಾ ಸ್ಥಾನವೊಂದರ ಫ್ಲಲಾನುಭವಿ. ಅದಕ್ಕೂ ಮೊದಲು ಒಂದು ಅವಧಿಗೆ ಅವರ ಹಾಲಿ ಪತ್ನಿ ಆ ಸ್ಥಾನವನ್ನ ಅಲಂಕರಿಸಿದ್ದರು. ಅಂದಹಾಗೆ ಇದು ಆ ದಂಪತಿಗಳಿಗೆ ಸಂದಿದ್ದ ನಾಮಕರಣದ ಭಕ್ಷೀಸು. ಅದರ ಋಣ ತೀರಿಕೆಗೆ ಈಗಾಗಲೆ ಮೊನಚು ಕಳೆದು ಕೊಂಡಿರುವ ತಮ್ಮ ಹಳೆಯ ಪೆನ್ನಿಗೆ ಇನ್ನಷ್ಟು ಸಾಣೆ ಹಿಡಿದು ಸದರಿ ಕವಿ ಪುಂಗವರು ಇಂತಹದ್ದೆ ರಾಷ್ಟ್ರ ಪ್ರೇಮ (?!) ಉಕ್ಕಿಸುವ ಇನ್ನೂ ಹಲವಾರು ಗೀತರತ್ನಗಳ ರಚನೆಗೆ ನಿಶ್ಪಾಪಿ ಪದಗಳನ್ನ ನಿರ್ದಯವಾಗಿ ಬೇಟೆಯಾಡುತ್ತಿದ್ದಾರೆ ಅನ್ನುವ ಖಚಿತ ಮಾಹಿತಿಯಿದೆ! "ಜಂಜೀರ್" "ದೀವಾರ್" "ಶೋಲೆ" ತರಹದ ಆಂಗ್ರಿ ಯಂಗ್ ಮ್ಯಾನ್'ಸೃಷ್ಟಿಸುತ್ತಿದ್ದ, ಅತಿ ಸುಮಧುರ ಪ್ರಣಯೋನ್ಮಾದದ ಚಿತ್ರಗೀತೆಗಳನ್ನ ಬರೆಯುತ್ತಿದ್ದ ಪ್ರತಿಭಾವಂತ ಇವರೇನಾ ಅನ್ನುವ ಗುಮಾನಿ ನನ್ನಂತೆ ನಿಮಗೂ ಹುಟ್ಟಿರಬಹುದು.
ಅಂತಹದ್ದೆ ಇನ್ನೊಂದು ಖಡ್ಡಾಯವಾಗಿ ಭಾರತೀಯರೆಲ್ಲರೂ ಮಾಡಿಸಿಕೊಳ್ಳಲೇಬೇಕು ಎನ್ನುವ "ಆಧಾರ" ರಹಿತವಾಗಿ ಅಪಪ್ರಚಾರಗೊಳ್ಳುತ್ತಿರುವ ಕಾರ್ಡ್ ಒಂದರ ಸಂಬಂಧವಾಗಿ ಮಾಧ್ಯಮಗಳಲ್ಲಿ ಕೇಳಲಿಕ್ಕೆ/ ನೋಡಲಿಕ್ಕೆ ಸಿಗುತ್ತಿರುವ ಜಾಹಿರಾತಿನಲ್ಲಿಯೂ ಗಮನಿಸಿಯೇ ಇರುತ್ತೀರಿ. ಅಲ್ಲಿ ಅರ್ಜೆಂಟ್ 'ಚಿಕ್ಕಮ್ಮ'ಳೊಬ್ಬಳು ತನ್ನ ಫ್ಲಾಷ್'ಬ್ಯಾಕಿನಲ್ಲಿ "ಆತ"ನನ್ನ ಕಂಡರೆ, ಅಷ್ಟೆ ಅರ್ಜೆಂಟಾಗಿ 'ಒಹ್ ನಿಮಗೂ ಆ ಪರಮಾತ್ಮನ ಸಾಕ್ಷಾತ್ಕಾರವಾಯ್ತ!' ಎನ್ನುವ ಮುಖಭಾವದಲ್ಲಿ "ಅದು ಇನ್ಯಾರು ಅಲ್ಲ ಚಿಕ್ಕಮ್ಮ! ನಮ್ಮ ಪೂರ್ವ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರು!" ಎನ್ನುವ ವಿವರಣೆಯನ್ನ ಕೊಡುವ ಬ್ಯಾಂಕಿನ ಮೆನೆಜರ್ ಮಹಾಶಯ, ಆ ಪುಣ್ಯಾತ್ಮನ ಸಾಧನೆಯ ಕಥೆಯನ್ನ ಉದ್ದುದ್ದ ಹಾಡಿ ಹೊಗಳುತ್ತಾನೆ. ಎಷ್ಟೆಂದರೂ ಅದು ವಿನೀತ ತೆರಿಗೆದಾರರ ಹಣದಲ್ಲಿ ನಿಷ್ಣಾತ ತೆರಿಗೆಗಳ್ಳರು ನಿರ್ಮಿಸಿ ಪ್ರಚಾರ ಮಾಡುತ್ತಿರುವ ಅತಿ ಅಗ್ಗದ ಜಾಹಿರಾತು ಅಂತ ತಳ್ಳಿ ಹಾಕಬಹುದು. ಆದರೆ ಸಿನೆಮಾ ಪ್ರಪಂಚಕ್ಕೂ ಆ ಜಾಡ್ಯ ಹರಡಿ ಹಡಾಲೇಳಿಸಿರುವುದು ಮಾತ್ರ ಹೇಸಿಗೆ ಹುಟ್ಟಿಸುತ್ತದೆ.
ಮೇಲಿನ ಎರಡು ವರ್ಗದ ಪ್ರಚಾರಾಂದೋಲನದ ಮುಂದುವರೆದ ಅವತರಣಿಕೆಯೆ ಈ "ಮೆದ್ರಾಸ್ ಕಫೆ". ಹೇಳಿಕೊಳ್ಳಲಿಕ್ಕೊಂದು ಕಥೆ ಅಂತಿದೆಯಾದರೂ ಅಸಲಿಗೆ ಅದೇ ಅದರ ಕಥೆಯಲ್ಲ! ದೇಶದ ರಕ್ಷಣೆಯ ಹೊಣೆ ಹೊತ್ತ ಕಮಾಂಡೋ ದರ್ಜೆಯ ಸೈನಿಕನೊಬ್ಬ ಪವಾಡ ಸದೃಶವಾಗಿ ಗುಪ್ತಚರ ಇಲಾಖೆಯ ಉನ್ನತ ಹೊಣೆ ಹೊರುವ ಶಾಕಿಂಗ್ ಕಾಮಿಡಿ ಇಲ್ಲುಂಟು. ಇಂತಹ rough and tough ಮನುಷ್ಯ, ಅದರಲ್ಲೂ ತಾನು ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆಂಡತಿ ಇನ್ನಿಲ್ಲವಾದಾಗಲೂ ಕರ್ತವ್ಯದ ಕರೆಗೆ ಓಗೊಟ್ಟ ನಿಜವಾದ ದೇಶ ಸೇವಕ, after all ಒಬ್ಬ ರಾಜಕಾರಣಿ ಸತ್ತ ತಕ್ಷಣ ತೀರಾ ವಿರಾಗಕ್ಕೆ ತುತ್ತಾಗಿ ಇದ್ದ ನೌಕರಿಯಿಂದಲೂ ಸ್ವಯಂ ನಿವೃತ್ತಿ ಪಡೆದು ಹುಚ್ಚನಂತಾಗಿ ನೊಂದು ಬೆಂದು ಮನೆಮಠ ಬಿಟ್ಟು ಫಕೀರನಂತೆ ದೇಶಾಂತರ ಹೋಗುವ high time ತಮಾಷೆಯೂ ಇಲ್ಲುಂಟು. ಸತ್ತವ ಮಾಜಿ ಪ್ರಧಾನಿಯೆ ಅಗಿದ್ದರೂ ಅದರಿಂದ ಜರ್ಜರಿತನಾಗಿ ಗುಪ್ತಾಚರ ಇಲಾಖೆಯ ಮುಖ್ಯಸ್ಥ ರಾಜಿನಾಮೆ ಬಿಸಾಡಿ ಬರುವ ವಾಸ್ತವದ ಹಾಸ್ಯವೂ ಇಲ್ಲುಂಟು. ಮಾಜಿ ಪ್ರಧಾನಿಗಳು ಇನ್ನಿಲ್ಲವಾದ ಸುದ್ದಿ ಟಿವಿಯಲ್ಲಿ ಬರುತ್ತಿದ್ದಾಗಲೆ ಕರ್ತವ್ಯ ಮುಗಿಸಿ ಸುಸ್ತಾಗಿ ಮನೆಗೆ ಬಂದವನನ್ನ ಅವನ ಹೆಂಡತಿ ಉಪಚರಿಸುವುದುದನ್ನ ಬಿಟ್ಟು "ಅವರೆ ಏಕೆ? ಅವ್ರ್ಯಾರಿಗೆ ಅನ್ಯಾಯ ಮಾಡಿದ್ದರು?" ಅಂತ ಕಣ್ಣೀರಿಟ್ಟು ವ್ಯಥೆಯಿಂದ ಕೇಳುವ ದೃಶ್ಯವನ್ನು ನೀವು ಇಲ್ಲಷ್ಟೆ ನೋಡಿ ನಲಿಯಬಹುದು. ಬಹುಷಃ ಆ ಕಾರಣಕ್ಕೆ ರೋಸತ್ತು ಹೆಂಡತಿಗೆ ಸೋಡಾಚೀಟಿ ಕೊಡುವ ಧೈರ್ಯವಿಲ್ಲದ ಆತ ಇದಕ್ಕೆಲ್ಲ ಮೂಲ ಕಾರಣವಾದ ತನ್ನ ಕೆಲಸಕ್ಕೆನೆ ಎಳ್ಳುನೀರು ಬಿಡುವ ಧೃಡ ನಿರ್ಧಾರಕ್ಕೆ ಬಂದಿದ್ದಾನು ಎನ್ನುವ ದಟ್ಟ ಗುಮಾನಿ ನನಗಿದೆ! ಇದಕ್ಕೆಲ್ಲ ಕಳಶವಿಟ್ಟಂತೆ "ರಾ" ಮುಖ್ಯಸ್ಥರಿಂದ ಹಿಡಿದು ಏಜೆಂಟರವರೆಗೆ ಎಲ್ಲರೂ ಜೋಕರ್ಗಳಂತೆ ಬೇಕಬೇಕಾದಲ್ಲಿ ಸ್ವಚ್ಛಂದವಾಗಿ ಅಲೆಯುತ್ತಾರೆ! ನಾನು ಕಂಡ ಶ್ರೀಲಂಕೆಯಲ್ಲಿ ಅದು ಅಷ್ಟು ಸುಲಭ ಸಾಧ್ಯವಲ್ಲ ಅನ್ನುವುದು ನಿಮ್ಮ ಗಮನಕ್ಕೆ. ಒಂದುವೇಳೆ ಅದು ಸಾಧ್ಯವಾದರೂ ಗೂಢಾಚಾರರು ಹಾಗೆಲ್ಲ ಬಯಲಲ್ಲಿ ಕಾಣಿಸಿಕೊಳ್ಳರು ಅನ್ನುವುದು ಸಾಮಾನ್ಯ ಜ್ಞಾನ!
ಕಳೆದ ಎಂಟು ವರ್ಷಗಳಿಂದ ನಾನು ಶ್ರೀಲಂಕೆಯನ್ನ ಎರಡನೆ ಮನೆ ಮಾಡಿಕೊಂಡಿದ್ದೇನೆ. ನನಗೆ ತಿಳಿದಂತೆ ತಮಿಳು ಹುಲಿಗಳ ಹೋರಾಟ ಬರ್ಬರವಾಗಿದ್ದರೂ ಸಹ ಅಲ್ಲಿ ಪ್ರತಿಕಾರದ ಕಿಚ್ಚಿತ್ತೆ ವಿನಃ ಸ್ವಪ್ರೇರಿತ ರೊಚ್ಚಿರಲಿಲ್ಲ. ಒಂದು ದೇಶದಲ್ಲಿ ಅಲ್ಲಿ ಬಾಳಿ ಬದುಕುವ ಎಲ್ಲಾ ವರ್ಗದ ಪ್ರಜೆಗಳೂ ಸಮಾಜಿಕ ಹಾಗೂ ಆರ್ಥಿಕ ಸರಿಸಮಾನತೆಯ ಜೊತೆಗೆ ಅಧಿಕಾರದ ಗದ್ದುಗೆಯನ್ನೂ ಬಯಸುವುದು ತಪ್ಪು ಅಂತ ಯಾರಾದರು ಹೇಳೋದಾದರೆ ನಾನು ತಮಿಳರ ಅಲ್ಲಿನ ಹೋರಾಟ ತಪ್ಪು ಎಂದು ಒಪ್ಪಿಕೊಳ್ಳಲು ತಯಾರು. ಅದೆಲ್ಲಿಂದ ಲೆಕ್ಖ ಹಾಕಿದರೂ ಮೂರುಕೋಟಿ ಜನಸಂಖ್ಯೆ ಮೀರದ ಶ್ರೀಲಂಕದ ಎಪ್ಪತ್ತು ಪ್ರತಿಶತ ಬಹುಸಂಖ್ಯಾತರು ಜಮೀನ್ದಾರಿ ಮನಸ್ಥಿತಿಯ ಸಿಂಹಳಿ ಬಾಷೆ ಮಾತನಾಡುವ ಬೌದ್ಧರು. ಅವರೂ ಸಹ ಅಲ್ಲಿನ ಮೂಲ ನಿವಾಸಿಗಳೇನಲ್ಲ. ಭಾರತದ ಒರಿಸ್ಸದಿಂದ ಎಂಟುನೂರು ವರ್ಷಗಳ ಹಿಂದೆ ಅಲ್ಲಿಗೆ ವಲಸೆ ಹೋದವರು. ಇನ್ನು ಇಪ್ಪತ್ತು ಪ್ರತಿಶತ ತಮಿಳು ಮಾತನಾಡುವ ಹಿಂದೂಗಳಿದ್ದಾರೆ. ನಾಲ್ಕು ಪ್ರತಿಶತ ಮುಸಲ್ಮಾನರು ಹಾಗೂ ಆರು ಪ್ರತಿಶತ ಕ್ರೈಸ್ತರು ಮತ್ತು ಇನ್ನಿತರರು ಇರುವುದು ಹೌದಾದರೂ ಅವರ ಮಾತೃಭಾಷೆಯೂ ತಮಿಳೆ! ಹೀಗಿರುವ ಸುಂದರ ಹಸಿರು ದ್ವೀಪದಲ್ಲಿ ಕಳೆದ ಮೂರೂವರೆ ದಶಕಗಳಿಂದ ಸಮಾನತೆಗಾಗಿ ಸ್ವಾಭಿಮಾನದ ಹೋರಾಟವಾಗಿ ಪ್ರಾರಂಭಗೊಂಡ ತಮಿಳರು ಮತ್ತು ಸಿಂಹಳೀಯರ ನಡುವಿನ ಹೋರಾಟ ರಾಜಕೀಯ ಪರಿಹಾರದ ಆಶಾ ಭಾವನೆ ಕಮರಿದಾಗ ಸಶಸ್ತ್ರ ಹೋರಾಟವಾಗಿ ಪರಿವರ್ತಿತವಾಯಿತು. ಈ ಬಗ್ಗೆ ನಾನು ಕನ್ನಡದ ವಾರ ಪತ್ರಿಕೆಯೊಂದರಲ್ಲಿ ಎರಡು ಕಂತಿನ ಲೇಖನವನ್ನ ೨೦೦೬ರಲ್ಲಿ ಬರೆದಿದ್ದೆ.
ಆದರೆ ಚಿತ್ರದ ನಿರ್ದೇಶಕ ಸೂಜಿತ್ ಸರ್ಕಾರ್ ಈ ವಾಸ್ತವಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಂತಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ ಅನ್ನಿಸುತ್ತದೆ. ಅವರ ಕಾಮಾಲೆ ಕಣ್ಣಿಗೆ ಲಂಕೆಯ ತಮಿಳರೆಲ್ಲ ಕಳ್ಳರು ಹಾಗೂ ಹೊಸಕಿ ಹಾಕಲೇ ಬೇಕಾದ ಕ್ರಿಮಿಗಳಂತೆ ಕಂಡಿದ್ದಾರೆ. ನಮ್ಮ ಮಾಜಿ ಪ್ರಧಾನಿಯವರನ್ನ ಹೊರಗಿನಿಂದ ಬಂದು ಸಲೀಸಾಗಿ ಕೊಂದು ಹೋಗುವುದು ನಮ್ಮ ಭದ್ರತಾ ಸಂಸ್ಥೆಗಳಿಗೆ, ಸಾಮಾನ್ಯ ಭಾರತೀಯನೊಬ್ಬನ ಸ್ವಾಭಿಮಾನಕ್ಕೆ ಮಾಡಲಾದ ಕಪಾಳ ಮೋಕ್ಷವೆ ಅಂತಿಟ್ಟುಕೊಂಡರೂ, ಅದಕ್ಕೆ ಮೂಲ ಕಾಅರಣವಾದ ನಮ್ಮವರು ಅಲ್ಲೆಸಗಿದ ಅನ್ಯಾಯ ಅನಾಚಾರಗಳನ್ನ ಈ ವಿಷಯದ ಗುರಾಣಿಯಡಿ ಅಡಗಿಸಿಡಲು ಸಾಧ್ಯವೆ ಇಲ್ಲ. ಅಲ್ಲದೆ ನಿರ್ದೇಶಕರ ಪಾಲಿಗೆ ಭಾರತೀಯ ಪ್ರಧಾನಿ ರಾಜೀವ್ ಗಾಂಧಿಯ ಹತ್ಯೆಯಷ್ಟು ತೀವೃವಾಗಿ ಹೆಚ್ಚು ಕಡಿಮೆ ಅದೇ ಸಮಯಕ್ಕೆ ನಮ್ಮ ಮಾಜಿ ಪ್ರಧಾನಿಯವರಂತೆಯೆ ಮಾನವ ಬಾಂಬಿಗೆ ಬಲಿಯಾಗಿದ್ದ ಶ್ರೀಲಂಕಾ ಪ್ರಧಾನಿ ರಣಸಿಂಘೆ ಪ್ರೇಮದಾಸರ ಸಾವು ತಟ್ಟಿದಂತಿಲ್ಲ. ಬಹುಶಃ ಅವರ ಕಡೆಯವರ್ಯಾರಾದರೂ ಸೂಕ್ತ 'ಕಪ್ಪ" ಸಲ್ಲಿಸಿದಲ್ಲಿ ಆ ವಿಷಯವನ್ನೆ ಆಧರಿಸಿದ "ಮದ್ರಾಸ್ ಕಫೆ"ಯ ಎರಡನೆ ಭಾಗ ನಿರ್ಮಾಣವಾದೀತೇನೋ!
ಹೀಗಾಗಿ ಚಿತ್ರ ಕೇವಲ ಹಿರಿಯ ರಾಜಕೀಯ ನಾಯಕರೊಬ್ಬರ ಕೊಲೆಯ ಸಂಚು ಹಾಗೂ ಅದನ್ನ ತಪ್ಪಿಸುವಲ್ಲಿ ವಿಫಲನಾದ ನಾಯಕನ ಪಾಪಪ್ರಜ್ಞೆಯ ಸುಳಿ ಮಿಂಚಿನಲ್ಲಿಯೆ ಕರಗಿ ಮರೆಯಾಗುತ್ತದೆ. ಕೊನೆಗೆ ಸತ್ತ ನಾಯಕನ ಭೋಪರಾಕು ಬೇರೆ ಕೇಡು. ಕಾರ್ತಿಕೇಯನ್ ಪಾತ್ರ ಪೇಲವ, ಆತ ಗುಪ್ತಚರ ಇಲಾಖೆ ಮುಖ್ಯಸ್ಥ ಕಡಿಮೆ 'ಚಾ ವಾಲ' ಜಾಸ್ತಿ ಅನ್ನಿಸುವಷ್ಟರ ಮಟ್ಟಿಗೆ ಚಿತ್ರದುದ್ದಕ್ಕೂ ಚಾ ಮಾಡುತ್ತಿರುತ್ತಾನೆ! "ರಾ"ದ ಹುದ್ದೆಯಲ್ಲಿದ್ದೂ ಡಬಲ್ ಏಜೆಂಟ್ ಆಗಿರುವ ಗಟ್ಟಿ ಪಾತ್ರ ನಮ್ಮ ಪ್ರಕಾಶ್ ಬೆಳವಾಡಿಯವರಿಗೆ ಸಿಕ್ಕಿದ್ದರೂ ಅವರ ಅತಿರೇಕದ ನಟನೆ ಪಾತ್ರದ ಗಾಂಭೀರ್ಯವನ್ನೆ ಅಪೋಷನ ತೆಗೆದುಕೊಂಡು ಬಿಟ್ಟಿದೆ!
ಚಿತ್ರದ ದೃಶ್ಯವೊಂದರಲ್ಲಿ ಡಬಲ್ ಏಜೆಂಟ್ ಬಾಲಾನಿಗೆ ಸಂದಾಯವಾದ "ಕಪ್ಪ"ಗಳ ಬ್ಯಾಂಕ್ ವರದಿ ತೆರೆದು ನೋಡಿ "ರಾ" ಮುಖ್ಯಸ್ಥರು ಹೌಹಾರುವುದನ್ನ ತೋರಿಸಲಾಗಿದೆ. ಚಿತ್ರದ ನಿರ್ಮಾಪಕ ದ್ವಯರಾದ ರೋನಿ ಲಾಹಿರಿ ಹಾಗೂ ಜಾನ್ ಅಬ್ರಾಹಂ ಹೊಂದಿರುವ ಬೇನಾಮಿ ಬ್ಯಾಂಕ್ ಖಾತೆಗಳಿಗೆ ಕಿರೀಟವಿಲ್ಲದ ಆನಭಿಷಕ್ತೆ ಮೇಡಂ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲರು ಚಿತ್ರದ ನಿರ್ಮಾಣದ ವೆಚ್ಚಕ್ಕಾಗಿ ಹರಿಸಿದ ಹಣದ ಮೂಲವನ್ನೂ ದಾಖಲೆ ಸಹಿತ ತೋರಿಸಿದ್ದೆ ಹೌದಾದಲ್ಲಿ ಚಿತ್ರ ನೋಡಿ ಭ್ರಮಾಧೀನರಾಗಿ ಹೊರಬರುವ ಅಮಾಯಕ ಪ್ರೇಕ್ಷಕರೂ ಒಮ್ಮೆ ನಿಜವಾಗಿ ಹೌಹಾರಬಹುದೇನೋ!
ನನ್ನ ಊಹೆ ತಪ್ಪಾಗದಿದ್ದಲ್ಲಿ "ರಾಜೀವ್ ಹತ್ಯೆಯ ತುತ್ತೂರಿ" ಊದುವ 'ಮದ್ರಾಸ್ ಕಫೆ" ಮುಂಬರುವ ಲೋಕಸಭೆ ಚುನಾವಣೆ ಘೋಷಣೆಯಾಗುವ ಹೊತ್ತಿಗೆ ಕಿರುತೆರೆಯ ಮೂಲಕ ನಮ್ಮ ನಿಮ್ಮೆಲ್ಲರ ಮನೆಗೂ ಲಗ್ಗೆಯಿಡುತ್ತದೆ. ಕಡೆಗಾದರೂ ಅದಕ್ಕೆ ಹೂಡಿರುವ ಬಂ(ಭಂ)ಡವಾಳ ಮತದ ರೂಪಾಂತರವಾಗಿ ವಸೂಲಾಗಬೇಕಲ್ಲ! ಒಟ್ಟಿನಲ್ಲಿ ನನಗೆ ಚಿತ್ರ ಬಗ್ಗೆ ಇದ್ದ ನಿರೀಕ್ಷೆಗಳು ನೋಡಿದ ನಂತರ ಕರಗಿ ಹೋಗಿವೆ. ಕನ್ನಡದಲ್ಲಿ ಅದೆ ಘಟನೆಯ ಉತ್ತರಾರ್ಧವನ್ನು ಆಧರಿಸಿ ಬಂದಿದ್ದ "ಚಲನಚಿತ್ರ" ಎನ್ನುವ ಮುಸುಗಿನ ಸಾಕ್ಷ್ಯಚಿತ್ರದಂತೆ "ಮೆದ್ರಾಸ್ ಕಫೆ" ಇಲ್ಲ ಅನ್ನುವುದಷ್ಟೆ ಕಟ್ಟ ಕಡೆಗುಳಿದ ಕಳ್ಳ ಸಮಾಧಾನ. ಇಷ್ಟಾಗಿ ಜಾನ್ ಅಬ್ರಾಹಂ ಒಬ್ಬ ಸಿರಿಯನ್ ಕ್ರೈಸ್ತನಾಗಿರುವುದು ಹಾಗೂ ಸದ್ಯ ಸರಕಾರದ ಹೆಸರಿನಲ್ಲಿ ನ್ಯಾಯ ಸಮ್ಮತವಾಗಿಯೆ ದೇಶವನ್ನ ದೋಚುತ್ತಿರುವ ಮಾಫಿಯಾ ಮುಖ್ಯಸ್ಥೆ ಕಂ ಸದರಿ ಚಿತ್ರದ ಬೇನಾಮಿ ನಿರ್ಮಾಪಕಿ ಮೇಡಂ ಡಾನ್ ಕೂಡ ರೋಮನ್ ಕ್ಯಾಥೋಲಿಕ್ ಕ್ರೈಸ್ತೆಯೆ ಆಗಿರುವುದು ಮಾತ್ರ ಕೇವಲ ಕಾಕತಾಳೀಯ?!
No comments:
Post a Comment