Monday, April 22, 2013

ತುಳುಗಾದೆ-೬೧










"ಬಂಗಾರ್‍‍‍‍‍‍‍‍‍‍‍‍‍ದ್ ಬಿಸತ್ತಿಂದ್ ಬಂಜಿಗ್ ಪಾಡೋನರೆಗಾಪುಂಡ?"


{ ಅತಿ ಮುದ್ದು ಮುಚ್ಚಟೆ ಮಕ್ಕಳನ್ನ ಕೆಡಿಸಬಲ್ಲದು, ಕರುಳಿನ ವಾಂಛಲ್ಯ ಹೆತ್ತವರಿಗೆ ಹೆಗ್ಗಣವನ್ನೂ ಮುದ್ದಗಿಸುವುದು ವಾಸ್ತವ. ಹಾಗಂತ ಅದೆಷ್ಟೆ ಮುದ್ದು ಉಕ್ಕಿ ಸುರಿಯುತ್ತಿದ್ದರೂ ಮಕ್ಕಳು ಮಾಡಿದ ತಪ್ಪನ್ನೆಲ್ಲ ಹೆತ್ತವರು ಕಡೆಗಣಿಸಿ ಮುದ್ದಾಡುವುದು ಮಕ್ಕಳ ಹಿತಚಿಂತನೆಗೆನೆ ಕುಂದು. ಅಂತೆಯೆ ಅದೆಷ್ಟೆ ಅಮೂಲ್ಯವಾಗಿದ್ದರೂ ಇನ್ನೊಬ್ಬರ ಗುಣದಲ್ಲಿನ ದೋಷಗಳನ್ನ ಅವರ ಅಂತಸ್ತಿನ ಮರೆಯಲ್ಲಿ ಮುಚ್ಚಿಕೊಳ್ಳಲಾಗದು. ಸಿರಿವಂತಿಕೆ-ಹಣದ ಮದ ಅನಾಚಾರಕ್ಕೆ ಮುಕ್ತ ಪರವಾನಗಿಯಾಗಲಾರದು. ಹಣದ ಬಲವಿದೆ-ರಾಜಕೀಯ ಪ್ರಭಾವವಿದೆ ಅಂದ ಮಾತ್ರಕ್ಕೆ ಅಂತವರ ದರ್ಪಗಳನ್ನೆಲ್ಲ ಇನ್ನಿತರ ಬಡಪಾಯಿಗಳು ಹಲ್ಲು ಕಚ್ಚಿ ಸಹಿಸಿಕೊಳ್ಳಬೇಕಿಲ್ಲ.


ಹಾಗೆಯೆ ಬಂಗಾರ, ನೈಸರ್ಗಿಕವಾಗಿ ಲಭ್ಯವಾಗುವ ಲೋಹಗಳಲ್ಲಿ ಪ್ಲಾಟಿನಂ ಹೊರತು ಪಡಿಸಿದರೆ ಅತ್ಯಂತ ದುಬಾರು ಮಾರುಕಟ್ಟೆ ದರ ಹೊಂದಿರುವುದು ಬಂಗಾರ. ಮೌಲ್ಯದಲ್ಲಿ ಹಾಗೂ ಆಡಂಬರದ ಪ್ರದರ್ಶನದಲ್ಲಿ ಲೋಹಗಳಿಗೆ ರಾಜನಾದ ಬಂಗಾರವನ್ನ ಹೊಂದುವುದು ಧರಿಸುವುದು ಸಾಮಾಜಿಕವಾಗಿ ಪ್ರತಿಷ್ಠಿತ ಸಂಗತಿಯಾಗಿ ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಆಭರಣ ಒಡವೆಗಳ ತಯಾರಿಕೆಯಲ್ಲಿ ಬಳಕೆಯಾಗುವ ಬಂಗಾರವನ್ನ ಕತ್ತಿ ತಯಾರಿಸಲು ಯಾರೂ ಬಳಸಲಾರರು. ದೇವಸ್ಥಾನಗಳಲ್ಲಿ ಅಪರೂಪಕ್ಕೆ ಪೂಜಾ ಮೂರ್ತಿಯ ಅಲಂಕಾರಕ್ಕೆ ಬಂಗಾರದ ಕತ್ತಿ ಮಾಡಿಸಿರುವುದುಂಟಾದರೂ ನಿತ್ಯದ ಬಳಕೆಗೆ ಬಂಗಾರದ ಕತ್ತಿ ಮಾಡಿಸಿರುವ ಉದಾಹರಣೆಗಳು ತುಳುನಾಡಿನ ಮಟ್ಟಿಗಂತೂ ಇಲ್ಲವೆ ಇಲ್ಲ.


ಲೋಹಗಳಲ್ಲಿ ಶ್ರೇಷ್ಠವೆಂದ ಮಾತ್ರಕ್ಕೆ ಬಂಗಾರದ ಕತ್ತಿ ಮಾಡಿಸಿದ್ದರೂ ಅದನ್ನ ಹೊಟ್ಟೆಗೆ ಚುಚ್ಚಿಕೊಳ್ಳಲು ಸಾಧ್ಯವಿಲ್ಲ. ಕಬ್ಬಿಣದ್ದೆ ಆಗಿರಲಿ, ಹಿತ್ತಾಳೆ ಅಥವಾ ಬಂಗಾರದ್ದೆ ಆಗಿರಲಿ ಕತ್ತಿಯಾದ ಮೇಲೆ ಅದರಿಂದ ಇರಿದು ಕೊಂಡರೆ ಕತ್ತರಿಸಿ ಹಾಕುವ ಅದರ ಗುಣದಲ್ಲೇನೂ ಬದಲಾವಣೆ ಕಾಣುವುದಿಲ್ಲ. ಬಂಗಾರದ ಕತ್ತಿಯಾದ ಮಾತ್ರಕ್ಕೆ ನೋವಿನ ಜಾಗದಲ್ಲಿ ಸಂತಸದ ಬುಗ್ಗೆಯೇಳುವುದೂ ಇಲ್ಲ. ಒಟ್ಟಿನಲ್ಲಿ ಅನುಭವಿಸುವ ನೋವಿನ ಪ್ರಮಾಣದಲ್ಲಿ ಗುಲಗಂಜಿಯಷ್ಟೂ ಕಡಿಮೆಯಾಗುವುದಿಲ್ಲ. ಈ ವಾಸ್ತವವನ್ನರಿತವರು ಮೂಲಗುಣಕ್ಕೆ ಮನ್ನಣೆ ಕೊಡುತ್ತಾರೆಯೆ ಹೊರತು ಗುಣವನ್ನ ಹೊಂದಿದ ವ್ಯಕ್ತಿಯ ಪ್ರಭಾವ ಹಾಗೂ ಅಂತಸ್ತಿನ ಹಿನ್ನೆಲೆಗಲ್ಲ ಎನ್ನುತ್ತದೆ ಈ ಗಾದೆ. ಕನ್ನಡದಲ್ಲಿಯೂ "ಚಿನ್ನದ ಸೂಜಿಯನ್ನ ಕಣ್ಣಿಗೆ ಚುಚ್ಚಿಕೊಳ್ಳಲಾಗದು" ಎನ್ನುವ ತದ್ರೂಪಿ ಗಾದೆಯಿದೆ.}



( ಬಂಗಾರ್‍‍‍‍‍‍‍‍‍‍‍‍‍ದ್ ಬಿಸತ್ತಿಂದ್ ಬಂಜಿಗ್ ಪಾಡೋನರೆಗಾಪುಂಡ? = ಬಂಗಾರದ ಕೈಕತ್ತಿಯೆಂದು ಹೊಟ್ಟೆಗೆ ಹಾಕಿಕೊಳ್ಳಲಾಗದು.)


No comments:

Post a Comment