ತೊಳೆದಿಟ್ಟ ಮನೆಯಂತಹ ಮನ ಹೊತ್ತ ನನಗೆ
ನಿನ್ನ ಹೊರತು ಇನ್ಯಾರದೆ ಪಾದದ ಕೆಸರು.....
ಅಲ್ಲಿ ಚಿತ್ತಾರ ಮೂಡಿಸುವುದು ಬೇಕಿಲ್ಲ,
ಬೇರೆ ಇನ್ನೇನಿಲ್ಲ ನಿನ್ನ ನೆನಪಿನ ಪಸೆಯಷ್ಟೆ ಉಳಿದಿರೋದು
ಅದರಿಂದಲೆ ಸುದೀರ್ಘ ಇನ್ನೊಂದು ವರ್ಷವನ್ನ....
ನಾ ಸಂಯಮದಿಂದ ಕಳೆದಿರೋದು/
ಸರಿಯದ ಕ್ಷಣಗಳ ಹೊರತೂ ನಡೆಯದ ದಿನಗಳ ಮರೆತೂ....
ಸಂವತ್ಸರವೊಂದು ಮತ್ತೆಂದೂ ಸಿಗದಂತೆ ಕಳೆದೆ ಹೋಗಿದೆ,
ನೋವಿನ ಜಾರುಬಂಡಿಯ ಮೇಲೆ
ನಲಿವು ಸಲೀಸಾಗಿ ಜಾರಿದೆ.//
ಎಳೆಯ ಚಿಗುರ ಮಾವಿನೆಲೆಗಳನ್ನ
ಮನೆಯಂಗಳದಲ್ಲಿ ಕಾಣುವಾಗ.....
ನನಗದರಲ್ಲೂ ನಿನ್ನ ಮುಖವೆ
ಅದೇಕೆ ಕಂಡು ಕಾಡುತ್ತದೆಯೋ ಗೊತ್ತಾಗುತ್ತಿಲ್ಲ,
ತುಂಬಿದ ಮಾತುಗಳ ಗಲಭೆಯ ಸಭೆಯಲ್ಲಿ
ನನ್ನ ತಪ್ತ ಮನ ಮಾತ್ರ ಚಿರ ಮೌನ/
ಉಸುರಲಾಗದ ಕೆಲವು ಗುಟ್ಟುಗಳನ್ನ
ಗಾಳಿಯಲ್ಲಿ ತೇಲಿ ಬಿಟ್ಟಿದ್ದೇನೆ.....
ನಿನ್ನ ಹೆಸರ ವಿಳಾಸ ಅದಕ್ಕೂ ಗೊತ್ತು,
ಅದಕ್ಕೆ ನೋಡು ಅದು ನಿನಗೇನೆ ಹಾಕುತ್ತಿದೆ ಸುತ್ತು.//
ನೆಲವ ಸೋಕದ ನವಿರು ಕನಸುಗಳಿಗೆಲ್ಲ
ನಯವಾದ ಒಲವಿನ ತೋಳ್ತೆಕ್ಕೆಯಲ್ಲಿ.....
ಇರುಳೆಲ್ಲ ಅರೆಬಿರಿದ ಕಣ್ಗಳ ಸುಖದ ನಿದಿರೆ ಕಾದಿದೆ,
ಗಂಭೀರ ಒಲವಿನ ನಿಯತ್ತು ಸಂಶಯಕ್ಕೀಡಾದಾಗ
ಸ್ವ ಸಮರ್ಥನೆಯ ನೂರು ಮಾತುಗಳಿಗಿಂತ......
ಒಂದೆ ಒಂದು ದೀರ್ಘ ಮೌನವೆ ಉತ್ತಮ ಮನದೊಡವೆ/
ಮೊದಲ ಭೇಟಿಯ ನಲಿವು
ಕೊನೆಯ ವಿದಾಯ ಭೇಟಿಯ ಕಾಠಿಣ್ಯದ ನೋವು....
ನೆನಪಲ್ಲಿ ಲೀನವಾದ ನನ್ನ ಬಾಳು ಇಷ್ಟೆ,
ಅದೇನೆ ಆದರೂ ನಿನ್ನನೆ ನಾನಿಷ್ಟ ಪಟ್ಟೆ.//
ಮತ್ತೆ ನಿನ್ನ ನೆನಪು ಕಾಡುವಾಗ
ಅದರ ಹಿನ್ನೆಲೆಯಲ್ಲಿ ನನ್ನ ಮನಸು ಬಾಡುವಾಗ...
ನಾನು ನಿನ್ನ ಹೆಸರನೆ ಗುನುಗುತೀನಿ
ನೋವಲೂ ಸೊರಗಿದ ಕಣ್ಣನ್ನ ತುಸು ಮಿನುಗುತೀನಿ.
ಕತ್ತಲ ತೋಳ್ತೆಕ್ಕೆಯಲ್ಲಿ ಬೆತ್ತಲಾದ ಕನಸುಗಳ
ನರನರಗಳಲ್ಲೂ ಕಾತರದ ತಹತಹಿಕೆಯಿದೆ/
ಪಿಸುಪಿಸು ಮನದ ಮಾತುಗಳಿಗೆ
ತುಸುತುಸು ಕನಸ ಹನಿಗಳ ಬೆರಸಿ.....
ಹಸಿಬಿಸಿ ಕನವರಿಕೆಗಳನ್ನೆಲ್ಲ ನಸುನಸು ಕನವರಿಸುವುದೆ
ನಿಜವಾದ ನಿಷ್ಕಲ್ಮಶ ಪ್ರೀತಿ,
ಗುಣವಾಗದ ಖಾಯಿಲೆ ನನಗೆ
ಅದಕ್ಕೆ ಇಂಬುಕೊಡುವ ವಿರಹದ ಮದ್ದನ್ನ ಜೊತೆಯಲ್ಲೆ ಕಂಡಾಗ....
ಎಲ್ಲರಿಗೂ ಅದರ ಹೆಸರು
ಒಲವೆನ್ನೋದು ಖಚಿತವಾಯ್ತು.//
ಹೂಮನ ಅಕಾಲದಲ್ಲಿ ಬಿರಿದು
ನಗುವನೆಲ್ಲೂ ಕಾಣದೆ....
ಮತ್ತೆ ಮೊಗ್ಗಾಗಿ ಮುದುಡಿ ಹೋಯಿತು,
ಗತಿಸುವ ಪ್ರತಿಘಳಿಗೆಯೂ ನಾನಂದುಕೊಳ್ಳುತ್ತೇನೆ
ನಾವಿಬ್ಬರೂ ಒಬ್ಬರನ್ನೊಬ್ಬರು ಕ್ಷುಲ್ಲಕ ಕಾರಣಗಳಂದಾಗಿ ಕಳೆದುಕೊಂಡು......
ಅಸಲಿಗೆ ಬದುಕಿನಲ್ಲಿ, ಕಳೆದುಕೊಂಡದ್ದಾದರೂ ಏನನ್ನ?/
ಮತ್ತೆಂದೂ ಮೂಡದ ನಿರೀಕ್ಷೆಯ ರವಿ
ಮುಳುಗದ ನಿರಾಸೆಯ ಶಶಿ....
ಬಾಳೆಂದುಬು ಹುಸಿ ಭರವಸೆಗಳ ನಿತ್ಯ ದೊಂಬರಾಟ,
ಮಾಸಿದ ಹೆಜ್ಜೆಗುರುತುಗಳು
ಸೊರಗಿ ಕ್ಷೀಣವಾದ ನಿರೀಕ್ಷೆಯ ಹಸಿರು ಹಾದಿ....
ಕೊನೆಯುಸಿರಲ್ಲೂ ಕನವರಿಸುತಿರೋದು ಕೇವಲ ನಿನ್ನನೆ.//
ಘಳಿಗೆಗೊಮ್ಮೆ ಎದೆಯ ದಂಡೆ ಸೋಕುವ
ನೆನಪಿನ ಅಲೆಗಳಿಂದ ಮನದ ತೀರವೆಲ್ಲ ಒದ್ದೆ ಒದ್ದೆ.....
ಗಾಳಿ ಹೇಳಿದ ಪೋಲಿ ಗುಟ್ಟಿಗೆ
ಹೂವಿನೆದೆಯಲ್ಲಿ ಎದ್ದಿರೋದು ಲಜ್ಜೆಯ ಕಂಪನ,
ನಿನ್ನ ನಿರ್ಲಕ್ಷ್ಯದ ಅರಿವಿದ್ದರೂ
ನಿನ್ನನೆ ಕಾಯುವ ನನ್ನ ಮೊಂಡ ಮನಕ್ಕೆ.....
ವಿವೇಕದ ಮಾತುಗಳು ಖಂಡಿತ ಅರ್ಥವಾಗಲಾರವು/
ಗುಡಿಸಿ ಹಾಕಿದರೂ ಸವೆದು ಹೋಗದ
ನಿನ್ನ ನೆನಪಿನ ಧೂಳೆಲ್ಲ ಮನದ ನೆಲವನ್ನ ಗಾಢವಾಗಿ ಆವರಿಸಿವೆ.....
ನೀನಿಲ್ಲದ ನಿನ್ನ ಸ್ಥಾನದಲ್ಲಿ ಇನ್ಯಾರನ್ನೋ ಕಲ್ಪಿಸಿಕೊಳ್ಳೋದೂ
ನನಗೆ ಅಸಾಧ್ಯ,
ಇದ್ದರೂ ಇಲ್ಲದಿದ್ದರೂ
ಆ ಜಾಗ ನಿನಗಷ್ಟೆ ಮೀಸಲು.//
No comments:
Post a Comment