ಅಸ್ತಂಗತವಾದ ಕೂಡಲೆ ಕನಸು ಕರಗುವುದಿಲ್ಲ
ಅದರ ಪಸೆಯಿನ್ನೂ ಕಣ್ಣಲ್ಲಿ ಹನಿಹನಿಯಾಗಿ ಉಳಿದೆ ಇರುತ್ತದೆ.....
ಹಳೆಯ ಹೊರಳು ಹಾದಿಯಲ್ಲಿ ಕೊಂಚ ವಿಶ್ರಮಿಸುವ ಮುನ್ನ,
ಮನ ಹುಡುಕಿದ್ದು ಮತ್ತದೆ
ಹಚ್ಚ ಹಳೆಯ ಕನಸುಗಳನ್ನೆ/
ಕತ್ತಲ ಕೂಪದಲ್ಲಳುವ ನಿತ್ಯದ ಭಗ್ನ ಸ್ವಪ್ನಗಳಿಗೆ
ಸಾಂತ್ವಾನ ನಿರೀಕ್ಷೆಯ ಕ್ಷೀಣ ಹಣತೆ,
ತಳ ಕಾಣದ ಆಳ
ತುದಿ ಸಿಗದ ಎತ್ತರ ಒಲವಿಗೆ ಸರಿಯಾದ ಹೋಲಿಕೆ//
ನೂರು ನುಡಿಗಳ ಹಂಗೇಕೆ?
ಒಂದೆ ಒಂದು ಮೌನದ ನೆನಹು ಮಿಗಿಲಲ್ಲವ
ಅದೇ ಸಾಕೆ?.....
ಕನಸ ಮುಸುಗಿನಲ್ಲಿ ಮನಸಲ್ಲರಳಿದ ಮುಂಜಾನೆಯ ಮೌನದಲ್ಲಿ
ನನ್ನ ಜೊತೆಗೆ ನೀನಿದ್ದಿ,
ದಿನದ ಪತ್ರಿಕೆಗಳಲ್ಲಿ ನನ್ನ ಕಣ್ಣೋಡುವಾಗಲೂ
ಅದರಲ್ಲದು ಅರಸೋದು ನಿನ್ನ ನಗುವಿನದೆ ಸುದ್ದಿ/
ಖಾಲಿ ಕನಸಿನ ಬೆನ್ನು ಹತ್ತಿದ ಮನಸಿಗೆ
ಸೋಲಿನ ಭೀತಿ ಇಲ್ಲದೆಯೇನೂ ಇರಲಿಲ್ಲ.....
ಸತ್ತ ನಿರೀಕ್ಷೆಗಳ ಸೂತಕದ ಛಾಯೆಯಡಿಯಲ್ಲಿ
ಕೂತ ಕನಸುಗಳದ್ದು ತೀರಲಾರದ ಸಂಕಟ,
ಹೆಜ್ಜೆಗಳು ಕುರುಹನ್ನುಳಿಸುತ್ತವೆ
ಹಾಗುಳಿದ ಒತ್ತಾಯದ ಗುರುತು
ನಿತ್ಯ ಮೌನದಲಳಿಸುತ್ತವೆ.//
ಹಗುರಾಗಿ ಹರಿದ ಸಾಲುಗಳನ್ನೆಲ್ಲ
ಹಾಡೆಂದೆ ಭ್ರಮಿಸುವ ನನಗೆ.....
ಇನ್ನೂ ನಿನಗೆ ನನ್ನೆಡೆಗೆ ಸಹಜ ಒಲವಿದ್ದ ಬಗ್ಗೆ
ಗಾಢ ಗುಮಾನಿಗಳಿವೆ!,
ಹಗಲ ನಿಸ್ವಾರ್ಥ ಪ್ರಾರ್ಥನೆ-ಇರುಳ ಆರ್ತನಾದ
ದಿನದುದ್ದ ಕಾಡುವ ಸ್ವಪ್ನ-ಇರುಳಲ್ಲಿ....
ಕಣ್ಣೊಂದಾಗಲು ಬಿಡದೆ ಕಾಡುವ ಸಂಕಟ
ಇವಕ್ಕೆಲ್ಲ ಒಟ್ಟಾಗಿ ಮುರಿದ ಒಲವೆನ್ನಬಹುದು./
ಎದೆಯಂಗಳದಲ್ಲಿ ಅರಳಿದ ಮೊಗ್ಗುಗಳಿಗೆ
ಸುಮವಾಗಿ ಘಮಘಮಿಸುವ ಅದೃಷ್ಟ ಸಿಗದಿದ್ದರೂ....
ನಿನ್ನ ನೀಳ ಕೈಬೆರಳು ಒಂದೊಮ್ಮೆ
ಅದ ಸೋಕಿದ ಗುರುತುಳಿದಿದೆಯಲ್ಲ ಅಷ್ಟೆ ಸಾಕು,
ಮರಳಿ ಮೂಡಿದ ಹಗಲ ನಿಚ್ಚಳ ಬೆಳಕಿನಲ್ಲಿ
ನಿನ್ನ ಮೊಗದ ನೆನಹಿನೊಂದಿಗೆ ಮುದದೊಂದಿಗಗೇನೆ ನಾ ಕಣ್ತೆರೆದೆ//
ಸುಂದರ ಕನಸಿನ ಬಲೆಯೊಳಗೆ ಸಿಕ್ಕಿ ನರಳುವ ಮನ
ಹೇಳಲಾಗದ ಕೆಲವು ಕಾರಣಗಳಿಗೆ.....
ಇತ್ತೀಚಿನ ಕೆಲ ದಿನಗಳಿಂದ ಚಿರಮೌನ,
ಇರುಳ ರಾಗಕೆ ಕನಸ ತಾಳ ಬಿದ್ದರೆ ಸಾಕು
ನಿನ್ನ ನನ್ನ ವಿರಹಗೀತೆ ತಯಾರ್!/
ಬರೆಯಲಾಗದ ನಾಲ್ಕು ಸಾಲುಗಳನ್ನ
ಹಾಡಿ ಹಗುರಾಗುವ ನನಗೆ....
ಅದ ನಿನ್ನ ಕಿವಿ ಕೇಳುತ್ತದಾ ಅನ್ನುವ ಕುತೂಹಲವಿದೆ,
ಮಲಗದ ಮನ-ಕರಗದ ಕ್ಷಣ....
ವಿರಹ ಭೀಕರ
ಸಂತಸ ಹುಟ್ಟಿಸೋದು ಕೇವಲ ನಿರೀಕ್ಷೆ ಕನಸ ಸಾಕಾರ//
No comments:
Post a Comment