"ಬೇಲೆ ದಾಂತಿನ ಆಚಾರಿ ಬಾಲೆದ ಪೀಂಕಾನ್ ಕೆತ್ಯೆ!"
{ ತುಳುನಾಡಿನ ಗ್ರಾಮೀಣರಲ್ಲಿ ಹಾಸ್ಯಪ್ರಜ್ಞೆ ವಿಪರೀತ.ಅವರ ಈ ಹಾಸ್ಯಾಸಕ್ತಿ ಅವರು ಸೃಷ್ಟಿಸಿ ಬಳಸುತ್ತಿರುವ ಗಾದೆಗಳಲ್ಲೂ ವಿಪರೀತವಾಗಿ ಬಳಕೆಯಾಗಿದೆ. ಅದಕ್ಕೊಂದು ಅತ್ಯುತ್ತಮ ಉದಾಹರಣೆ ಈ ತಮಾಷೆಯ ಗಾದೆ. ತಮಗೆ ನೈಪುಣ್ಯವಿಲ್ಲದ ವಿಷಯದಲ್ಲಿ ಅತ್ಯಾಸಕ್ತಿ ವಹಿಸಿ ತಮ್ಮ ಪರಿಣತ ಕ್ಷೇತ್ರವನ್ನ ಕಡೆಗಣಿಸುವ ಮಂದಿಯನ್ನ ಅಣಗಿಸಲು ಈ ಗಾದೆಮಾತನ್ನ ಬಳಸಲಾಗುತ್ತದೆ. ತಾವು ನಿಪುಣರಾಗಿರುವಲ್ಲಿ ಸಾಮರ್ಥ್ಯ ತೋರುವ ಅವ್ಕಾಶಕ್ಕೆ ಕೊರತೆಯಿರದಿದ್ದರೂ ಕೆಲವರಿಗೆ ಇನ್ಯಾವುದರಲ್ಲಾದರೂ ಅತಿ ನೈಪುಣ್ಯ ತೋರಿ ಲೋಕದ ಕಣ್ಣಲ್ಲಿ ಹೊಗಳಿಸಿಕೊಳ್ಳುವ ಉಮೇದಿರುತ್ತದಲ್ಲ ಅದೆ ಈ ಗಾದೆಗೆ ಮೂಲ ವಸ್ತು.
ಆಚಾರಿ ಅಂದರೆ ತುಳುನಾಡಿನ ಕರಕುಶಲಗಾರ. ಈ ಆಚಾರಿಗಳು ಮರದ ವಸ್ತುಗಳ, ಸ್ಮರಣಿಕೆಗಳ ಕುಸರಿ ಕೆತ್ತನೆ, ಮರದ ಪೀಠೋಪಕರಣಗಳ, ಗೃಹೋಪಯೋಗಿ ವಸ್ತುಗಳ ತಯಾರಿಕೆ ಹಾಗೂ ದುಬಾರಿ ಲೋಹಗಳಾದ ಚಿನ್ನ, ಬೆಳ್ಳಿ ಹಾಗೂ ಅಮೂಲ್ಯ ಕಲ್ಲುಗಳಾದ ವಜ್ರ, ಪಚ್ಚೆ, ಪುಷ್ಯರಾಗ, ನೀಲ, ಹವಳಗಂತಹ ರತ್ನಗಳ ಆಭರಣಗಳ ತಯಾರಿಯಲ್ಲಿ ಸಾಟಿಯಿಲ್ಲದವರಾಗಿ ಗುರುತಿಸಿಕೊಳ್ಳುತ್ತಾರೆ. ಒಟ್ಟಾರೆ ಈ ಎಲ್ಲರನ್ನೂ ಒಟ್ಟಾರೆಯಾಗಿ ತುಳುವರೆಂದೆ ಗುರುತಿಸುವುದು ಹೌದಾದರೂ ಇವರಲ್ಲಿ ಕರಕುಶಲತೆಯ ಸಮಾನ ಅಂಶಗಳ ಹೊರತೂ ಸಹ ವೃತ್ತಿ ಭೇದವಿದೆ. ಇಂತಹ ಆಚಾರಿಗಳಲ್ಲೊಬ್ಬನಾದ ಮರದ ಕೆಲಸದ ಆಚಾರಿಯನ್ನ ಈ ಗಾದೆ ಅವಲಂಬಿಸಿದೆ. ಕೊರಡಾದ ಒಣ ಮರವನ್ನ ಕೊಟ್ತರೆ ಅದರಿಂದ ಗುಣಮಟ್ತದ ಪೀಠೋಪಕರಣಗಳನ್ನ ತಯಾರಿಸುವ ಸಾಮರ್ಥ್ಯವುಳ್ಳ ಆಚಾರಿ ಅದನ್ನ ನಿಯತ್ತಾಗಿ ಮಾಡುವುದನ್ನ ಬಿಟ್ಟು ಆದ ಎಡವಟ್ತಿನ ಕತೆಯಿದು.
ಆಚಾರಿಯೊಬ್ಬ ಮೈತುರಿಸಿಕೊಳ್ಳುವಷ್ಟು ಬಿಡುವಿಲ್ಲದಿದ್ದರೂ ತನ್ನ ಮರಗೆಲಸ ಬಿಟ್ಟು ಹೊಸ ಅನ್ವೇಷಣೆಗೆ ಹೊರಟನಂತೆ. ಅವನ ಅನ್ವೇಷಕ ಕಣ್ಣಿಗೆ ಅಂಗಳದಲ್ಲಾಡುತ್ತಿದ್ದ ದುರಾದೃಷ್ಟಶಾಲಿ ಮಗು ಕಂಡಿದೆ! ಸರಿ ಇನ್ನೇಕೆ ತಡ? ಉರುಟುರುಟಾಗಿರುವ ಆ ಎಳೆ ಆಡುವ ಮಗುವಿನ ಅಂಡನ್ನು ತನ್ನ ಒರಟು ಮರವನ್ನ ಸಪಾಟಾಗಿಸಲು ಬಳಸುವ ಕಿಸೋಳಿಯನ್ನ ಬಳಸಿ ಅತ್ತಿಂದಿತ್ತ ಅದನ್ನ ಮಗುವಿನ ಕುಂಡೆಯ ಮೇಲೆ ಎಳೆದೆಳೆದು ಸಪಾಟಾಗಿಸಿ ನಯಗೊಳಿಸಿ ಎಲ್ಲರ ಮೆಚ್ಚುಗೆ ಗಳಿಸಿಯೆ ತೀರುವ ಅತ್ಯುತ್ಸಾಹದಿಂದ ಆ ಅಮಾಯಕ ಮಗುವಿನ ಮೇಲೆ ತನ್ನ ಪ್ರಯೋಗವನ್ನ ಜಾರಿಗೊಳಿಸಿಯೆ ಬಿಟ್ಟನಂತೆ! ಮುಂದೇನಾಗಿರಬಹುದು ಎನ್ನುವುದು ನಿಮ್ಮ ಊಹೆಗೆ ಬಿಟ್ಟದ್ದು! "ಮಾಡ ಬಾರದ್ದು ಮಾಡಿದರೆ ಆಗ ಬಾರದ್ದೆ ಆಗುತ್ತದೆ!" ಎನ್ನುವ ಸಿರಿಗನ್ನಡದ ಗಾದೆಯ ಆಶಯವೂ ಇದೇನೆ.}
( ಬೇಲೆ ದಾಂತಿನ ಆಚಾರಿ ಬಾಲೆದ ಪೀಂಕಾನ್ ಕೆತ್ಯೆ! = ಕೆಲಸಕ್ಕೆ ಅತೀತನಾದ ಆಚಾರಿ ಮಗುವಿನ ಅಂಡು ಕೆತ್ತಿದ!.)
No comments:
Post a Comment