"ಅಗ್ಗದ ಬಿನ್ನೆರೆಗ್ ಗುಜ್ಜೆದ ಕಜಿಪ್!"
{ ತುಳುನಾಡಿನಲ್ಲಿ ವಿಫುಲವಾಗಿ ಬೆಳೆಯುವ ಬೆಳೆಗಳಲ್ಲಿ ಒಂದು ಹಲಸು. ತುಳುವ , ಬರ್ಕೆ ಹೀಗೆ ವಿಭಿನ್ನ ಜಾತಿಯ ಹಲಸುಗಳು ಕರುನಾಡ ಕರಾವಳಿ ಕಾರವಾರದಿಂದ ಆರಂಭಿಸಿ ನಡುವಿನ ತುಳುನಾಡು ಮಲೆನಾಡು ಸೇರಿ ಮಲಯಾಳದ ಮತ್ತೊಂದು ತುದಿಯಾದ ತಿರುವನಂತಪುರದವರೆಗೂ ನಾಯಿಸಂತೆಯಂತೆ ಬೆಳೆದೆ ಬೆಳೆಯುತ್ತದೆ. ಹೀಗಾಗಿ ಅದರ ಬಗ್ಗೆ ಇಲ್ಲಿನ ಜನರಿಗೆ ವಿಪರೀತ ತಾತ್ಸಾರ. ಬಡತನದಲ್ಲಿ ಬಾಳುವವರಿಗೆ ತರಕಾರಿಯಾಗಿ, ಕೆಲವೊಮ್ಮೆ ಉಪ್ಪು ಹಾಕಿ ಬೇಯಿಸಿದ ಒಂದು ಹೊತ್ತಿನ ಊಟವಾಗಿಯೂ ಚಲಾವಣೆಯಲ್ಲಿರುವ ಹಲಸು ಕಂಡರೆ ಹೊಲಸು ಮೆಟ್ಟಿದವರಂತೆ ಆಡುವ ಮಂದಿಯೂ ಒಂದಾನೊಂದು ಕಾಲದಲ್ಲಿ ಅಲ್ಲಿದ್ದರು. ಒಟ್ಟಿನಲ್ಲಿ ಹಲಸೆಂದರೆ ಬಡವರ ಆಹಾರ. ಮಾಡಲು ಏನೂ ಲಭ್ಯವಿಲ್ಲದಾಗ ಮಾತ್ರ ಬಳಸಬಹುದಾದ ಆಯ್ಕೆಯ ತರಕಾರಿಯಾಗಿ ಪರಿಗಣಿಸಲ್ಪಡುತ್ತಿತ್ತು. ಇದನ್ನ ಆದ್ಯತೆಯ ತಿನಿಸಾಗಿ ಪರಿಗಣಿಸಲಾಗುತ್ತಿರಲಿಲ್ಲ. ಕಾಡಿನಲ್ಲಿ ಹಣ್ಣಾಗಿ ಬಿದ್ದು ಅರ್ಧಂಬರ್ಧ ಕಾಡಿನ ಪ್ರಾಣಿಗಳು ತಿಂದು ಅನಂತರ ಕೊಳೆತು ಹಾಳಾದ ಹಲಸಿನ ಹಣ್ಣುಗಳನ್ನ ಮಳೆಗಾಲದುದ್ದ ಕರಾವಳಿಯು ಎಲ್ಲೆಡೆ ಕಾಣ ಬಹುದಾಗಿತ್ತು.
ಮನೆಗೆ ಬರುವ ಆರ್ಥಿಕವಾಗಿ ಸ್ಥಿತಿವಂತರಲ್ಲದ ನೆಂಟರಿಗೆ ಊತದ ಹೊತ್ತಿಗೆ ಅವರು ನಿಂತರೆಂದರೆ ವಿಶೇಷವಾದದ್ದೇನನ್ನೋ ಬೇಯಿಸಿ ಬಡಿಸುವಲ್ಲಿ ಲೆಕ್ಖಾಚಾರದ ಮಂದಿ ಅಸಡ್ಡೆ ವಹಿಸುತ್ತಾರೆ. ಇಂತಹ ಉಪಯೋಗಕ್ಕೆ ಬಾರದ ಲೆಕ್ಖ ಭರ್ತಿಯ ನೆಂಟರಿಗೆ ಶಾಸ್ತ್ರಕ್ಕೊಂದಷ್ಟು ಏನನ್ನಾದರೂ ಬಡಿಸಿ ಸಾಗ ಹಾಕಿದರೆ ಸಾಕು ಎನ್ನುವ ತಾತ್ಸಾರದ ಧೋರಣೆ ಅವರಲ್ಲಿರುತ್ತದೆ. ಮುಖ ನೋಡಿ ಮಣೆ ಹಾಕುವ ಮನೋಭಾವದ ಇಂತಹ ಮಂದಿಯನ್ನ, ಅವರ ಸಣ್ಣತನವನ್ನ, ಸಂಸ್ಕಾರ ಹೀನ ನಡುವಳಿಕೆಯನ್ನ ಆಡಿಕೊಳ್ಳುವ ಗಾದೆಯಿದು. ಅಗ್ಗದ ನೆಂಟರಿಗೆ ಹಲಸಿನ ಪಲ್ಯ ಎನ್ನುತ್ತದೆ ಈ ಗಾದೆಯ ವಾಚ್ಯಾರ್ಥ.
ಈಗ ಜಾಗತೀಕರಣದ ಸಂದರ್ಭದಲ್ಲಿ ಯಾರೂ ದೊಡ್ಡವರಿಲ್ಲ, ಯಾರೊಬ್ಬರೂ ಸಣ್ಣವರಾಗಿ ಉಳಿದಿಲ್ಲ. ಅನಂತ ಅವಕಾಶದ ಬಾಗಿಲು ಸದಾ ತೆರೆದಿರುವಾಗ ಯೋಗ್ಯರಿಗೆ ಬೆಳೆಯಲು ಸದಾವಕಾಶಗಳ ಕೊರತೆ ಖಂಡಿತ ಇರಲಾರದು. ಇರಬೇಕಾದುದು ವಿವೇಚನೆ ಅಷ್ಟೆ. ಅಂತೆಯೆ ಹಲಸು ಹಪ್ಪಳ, ನೀರುಪ್ಪಲ್ಲಿ ಹಾಕಿಟ್ಟ ತೊಳೆ, ಚಿಪ್ಸ್, ಬಾಳಕ, ಹಣ್ಣಿನ ತೊಳೆ ಹೀಗೆ ಮೌಲ್ಯವರ್ಧಿತವಾದ ಅದು ಕೆಟ್ಟು ಪಟ್ತಣ ಸೇರಿದ ಗ್ರಾಮೀಣರ ಜಿಹ್ವಾ ಚಾಪಲ್ಯವನ್ನ ತಣಿಸುತ್ತಾ ಅವರಿಗೆ ತಮ್ಮ ಪೂರ್ವಾಶ್ರಮದ ಮಧುರ ಸ್ಮೃತಿ ಮರುಕಳಿಸುವಂತೆ ಮಾಡುತ್ತಿದೆ. ಈಗ ಹಲಸು ಅಗ್ಗವಾಗಿ ಉಳಿದಿಲ್ಲ. ಅದನ್ನ ದುಬಾರಿ ಬೆಲೆಗೆ ನಗರದಲ್ಲಿ ವಿವಿಧ ರೂಪದ ಪದಾರ್ಥವಾಗಿ ಮಾರಲಾಗುತ್ತದೆ. ಹಳೆಯ ಗಾದೆಗೆ ಮರ್ಯಾದೆ ಕೊಡುವಂತೆ ವರ್ತಿಸುವ ಜನರು ಈಗೀಗ ಅಲ್ಪಸಂಖ್ಯಾತರಾಗುತ್ತಾ ಸಾಗುತ್ತಿದ್ದರೂ ಅವರ ಸಂತತಿಯಿನ್ನೂ ಪೂರ್ತಿ ಅಳಿದಿಲ್ಲ.}
( ಅಗ್ಗದ ಬಿನ್ನೆರೆಗ್ ಗುಜ್ಜೆದ ಕಜಿಪ್! = ಅಗ್ಗದ ನೆಂಟರಿಗೆ ಹಲಸಿನ ಪಲ್ಯ!.)
No comments:
Post a Comment