Wednesday, March 6, 2013

ತುಳುಗಾದೆ-೩೬





"ಕುದುರೆಡ್ದ್ ದುಂಬು ಕುಡು ದೆತ್ತಿ ಲೆಕ್ಖೋ!"


{ ಇದು ಅವಸರಗೇಡಿಗಳಿಗೆ ಕಿವಿ ಹಿಂಡಲಿಕ್ಕೆ ಹುಟ್ಟಿಕೊಂಡ ಕುಚೋದ್ಯದ ಗಾದೆ. ಮಾಡುವ ಕೆಲಸಗಳಲ್ಲಿ ಆದ್ಯತೆಯ ಪ್ರಕಾರ ಸಾಗದೆ ಒಮ್ಮೆಲೆ ಕೊನೆಗೆ ಮಾಡಬೇಕಾದ ಕೆಲಸವನ್ನ ಬಹಲ ಅವಸರಕ್ಕೆ ಬಿದ್ದವರಂತೆ ಮೊದಲಗೆ ಮಾಡಿ ಮುಗಿಸಿ ನಿಸೂರಾಗಿ ಲೋಕದ ಕಣ್ಣಿನಲ್ಲಿ ಹಾಸ್ಯಾಸ್ಪದರೆನಿಸಿಕೊಳ್ಳುವ ಮಂದಿಗೆ ನಮ್ಮ ಸುತ್ತಮುತ್ತಲಲ್ಲೇನೂ ಬರವಿಲ್ಲ. ಅಂತವರಿಗೆ ವಿವೇಕ ಹೇಳಿದರೂ ಅಷ್ಟೆ, ಬಿಟ್ಟರೂ ಅಷ್ಟೆ. ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಕೇಳಿದ್ದನ್ನ ಹಾರ ಬಿಟ್ಟು ಮಾಡುವುದನ್ನೆ ಮಾಡುವ ಮೂರ್ಖರಿವರು. ಆದರೂ ಎಂದಾದರೊಮ್ಮೆ ಸರಿದಾರಿಗೆ ಬಂದು ವಿವೇಕವನ್ನ ಹೊಂದಿಯಾರು ಎನ್ನುವ ಆಶಾ ಭಾವನೆಯೊಂದಿಗೆ ಇತರರು ಅವರನ್ನ ತಿದ್ದುವ ತಮ್ಮ ಪ್ರಯತ್ನವನ್ನ ನಿರಂತರ ಚಾಲನೆಯಲ್ಲಿಟ್ಟೆ ಇರುತ್ತಾರೆ.


ಅದ್ಯಾವನೋ ಕುದುರೆ ತೆಗೆದು ಕೊಳ್ಳುವ ಮನಸು ಮಾಡಿದನಂತೆ. ಹಾಗೊಂದು ನಿರ್ಧಾರ ಮನಸಲ್ಲಿ ಮೂಡಿದ್ದೆ ತಡ ಕೊಂಚವೂ ಕಾಲ ವ್ಯರ್ಥ ಮಾಡದೆ ಮೊದಲು ಸಂತೆಗೆ ಹೋಗಿ ಕುದುರೆಗೆ ಆಹಾರವಾಗಿ ಹಾಕಬೇಕಾದ ಸೇರು ಹುರುಳಿಯನ್ನ ಕಟ್ಟಿಸಿಕೊಂಡು ಬಂದು ನಿಸೂರಾದನಂತೆ. ಅವನ ಬಳಿ ಸದ್ಯಕ್ಕೆ ಕೇವಲ ಹುರುಳಿ ಕೊಳ್ಳುವಷ್ಟು ಮಾತ್ರ ಕಾಸಿದ್ದಿರಲಿಕ್ಕೂ ಸಾಕು! ಕುದುರೆಯನ್ನ ಕೊಳ್ಳುವುದು ಇನ್ಯಾವಾಗಲೋ? ಅದನ್ನ ಕೊಳ್ಳುವ ಸಾಮರ್ಥ್ಯ ನನಗಿದೆಯೋ ಇದ್ಯಾವುದೂ ಖಚಿತವಿಲ್ಲದ ಈ ಉತ್ಸಾಹಿ ಊರಿಂದ ಮೊದಲು ಹುರಳಿಯನ್ನ ಕೊಂಡಿಟ್ಟ.

ಬಹುಷಃ ಈ ಗಾದೆ ಹುಟ್ಟುವಾಗ ಮೋಟಾರು ವಾಹನಗಳೆಂಬ ಜೀವ ಹೀನ ಕುದುರೆಗಳು ಹಾಗೂ ಅವುಗಳ ಆಹಾರವಾದ ಪೆಟ್ರೋಲೆಂಬ ಅಮೂಲ್ಯ ಎಣ್ಣೆಯ ಪರಿಚಯ ಪ್ರಪಂಚಕ್ಕಿರಲಿಲ್ಲವೆಂದು ಕಾಣುತ್ತದೆ. ಊರಿಂದೂರಿಗೆ ಸಾಗಲು, ಸ್ವಂತ ಪ್ರತಿಷ್ಠೆಯನ್ನ ಮೆರೆಯಲು ಕುದುರೆಯನ್ನ ಇಟ್ಟುಕೊಳ್ಳುವ ಕಾಲಮಾನದಲ್ಲಿ ಈ ಗಾದೆ ಚಾಲ್ತಿಗೆ ಬಂದಿರಬಹುದು. ನನ್ನ ಬಾಳಿನಲ್ಲೂ ಇಂತಹ ಅವಸರದ ಕಾಲವೊಂದು ಬಂದು ಹೋಗಿತ್ತು, ೨೦೦೩ರ ಫೆಬ್ರವರಿ ಮಾಸದಲ್ಲಿ ಮೊದಲ ಬಾರಿಗೆ ಆಗಷ್ಟೆ ಏರ್'ಟೆಲ್ ಸಂಸ್ಥೆಯ ಪಾಲಾಗಿದ್ದ ಆಗಿನ ಜೆಟಿಎಂ ಸಂಸ್ಥೆಯ ಸಿಮ್ ಬಿಲ್ಲೆಯನ್ನ ಊರಿಂದ ಮುಂದೆ ನಾನು ಖರೀದಿಸಿಟ್ಟುಕೊಂಡಿದ್ದೆ. ಅಸಲಿಗೆ ನನಗೆ ತೆಗೆದುಕೊಳ್ಲಲಿಕ್ಕಿದ್ದದ್ದು ಮೊಬೈಲ್ ಫೋನು! ಕೈಫೋನೊಂದು ನನ್ನ ಕೈಸೇರಿ ಆ ಸಿಮ್ಮಿಗೆ ನಿರಂತರ ಚಲನೆಯ ಭಾಗ್ಯ ಲಭ್ಯವಾಗಲಿಕ್ಕೆ ಬರೋಬ್ಬರಿ ವರ್ಷದ ಕಾಲ ಬೇಕಾಯ್ತು!!! ಯಾರಾದರೂ ಆಗ ಕರೆದು "ಮೊದಲು ಫೋನ್ ಹ್ಯಾಂಡ್'ಸೆಟ್ ಕೊಂಡು ಆಮೇಲೆ ಸಿಮ್ ಕೊಂಡುಕೋ ಮಾರಾಯಾ!" ಅಂತನ್ನುವ ಕಾರ್ಯಸಾಧು ವಿವೇಕ ಹೇಳಿದ್ದರೂ ಕೇಳುವ ಸ್ಥಿತಿಯಲ್ಲಂತೂ ನಾವತ್ತಿರಲಿಲ್ಲ. ನನಗೆ ಒಟ್ಟಿನಲ್ಲಿ ಸ್ವಂತಕ್ಕೊಂದು ದೂರವಾಣಿ ಸಂಖ್ಯೆಯನ್ನ ಹೊಂದಿಯೆ ತೀರ ಬೇಕಾಗಿತ್ತು. ಇದೆ ಅರ್ಥ ಸಾರುವ ಕನ್ನಡದ "ಕೂಸು ಹುಟ್ಟುವ ಮುಂಚೆಯೆ ಕುಲಾವಿ ಹೊಲೆಸಿದ ಹಾಗೆ" ನನ್ನ ಫಜೀತಿಯ ಕತೆಯಾಗಿತ್ತು.}



( ಕುದುರೆಡ್ದ್ ದುಂಬು ಕುಡು ದೆತ್ತಿ ಲೆಕ್ಖೋ! = ಕುದುರೆಗೆ ಮೊದಲು ಹುರುಳಿ ಕೊಂಡ ಹಾಗೆ!".)

No comments:

Post a Comment