"ಆಳೆನ ನಾಲಾಯಿ ಪಂಡ ಸಮಗಾರೆನ ರಂಪಿಗೆ!"
{ ಗ್ರಾಮ್ಯ ಜೀವನದಲ್ಲಿ ಜಗಳ-ಕಚ್ಚಾಟ ಸರ್ವೆಸಾಮಾನ್ಯವಾಗಿರುವಂತೆ ತುಳುನಾಡಿನಲ್ಲೂ ಅದನ್ನ ದೈನಂದಿನ ಬದುಕಿನಲ್ಲಿ ಕಾಣಬಹುದು. ಇಲ್ಲೂ ಆ "ಜಗಳದ ಖಾತೆ" ಸಾಮಾನ್ಯವಾಗಿ ತುಳುವ ಗಟ್ಟಿಗಿತ್ತಿಯರಾದ ಹೆಂಗಸರಿಗೆ ಮೀಸಲಾಗಿದೆ. ಆದರೆ ಹೆಜ್ಜೆಗೊಂದು ಹೊಳೆ-ಹಳ್ಳ-ತೋಡಿನ ಸೆಲೆ ದಂಡಿಯಾಗಿ ಹರಿಯುವ ಇಲ್ಲಿ ನೀರಿನ ಸಮೃದ್ಧಿ ಇರುವುದರಿಂದ ಬರದ ಬಯಲುಸೀಮೆಯಂತೆ ಜಗಜಟ್ಟಿ ಹೆಂಗಸರು ನೀರಿನ ಕಟ್ಟೆಯ ಬಳಿ ಪರಸ್ಪರರ ಜುಟ್ಟು ಹಿಡಿದು ಕಚ್ಚಾಡುವ ಅನಿವಾರ್ಯತೆ ಇಲ್ಲವಾದರೂ ಇವರ ಜಗಳಗಳಿಗೆ ಅವಕಾಶ ಕಲ್ಪಿಸಿಕೊಡುವ ಎಡೆಗಳಿಗೆ ದಿನದ ಬಾಳಿನಲ್ಲಿ ಬರವಂತೂ ಇಲ್ಲ.
ತುಳುನಾಡಿನಲ್ಲಿ ಸಾಮಾನ್ಯವಾಗಿ ಹೆಂಗಸರು ಗಂಡಸರಿಗೆ ಸರಿಸಮವಾಗಿ ದುಡಿಯುತ್ತಾರೆ. ಅದು ಬ್ರಾಹ್ಮಣರೆ ಇರಲಿ ಶೂದ್ರರೆ ಇರಲಿ, ಬ್ಯಾರಿಗಳೆ ಇರಲಿ ಪರ್ಬುಗಳೆ ಇರಲಿ ದುಡಿಮೆಯ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಹೆಂಗಸರು ಗಂಡಸರೊಂದಿಗೆ ಹಂಚಿಕೊಂಡು ತಾವು ಯಾವುದರಲ್ಲೂ ಕಡಿಮೆಯಿಲ್ಲ ಎಂದು ಸಾಬೀತು ಪಡಿಸುತ್ತಿದ್ದಾರೆ. ಹಿಂದೂ ಜೈನ ಹೆಂಗಸರಂತೆ ಬೂಬಮ್ಮ ಬಾಯಮ್ಮಂದಿರು ಕೂಡ ಮೈಮುರಿದು ದುಡಿದು ಸಂಪಾದಿಸುತ್ತಾರೆ. ಕಡಲಿಗೆ ಹೋಗಿ ಮೀನು ಹಿಡಿದು ತರುವುದು ಮರಕ್ಕಲ ಗಂಡಸರಾದರೆ ಅದನ್ನ ಮನೆಮನೆಗೆ ಹೊತ್ತೊಯ್ದು ಮಾರುವುದು ಮರಕ್ಕಲ್ತಿಯರು. ಅಂಗಡಿಯಲ್ಲಿ ಕಚ್ಚಾ ಎಲೆ ಹಾಗೂ ತಂಬಾಕನ್ನ ಮಾರುವುದು ಗಂಡಸರಾದರೆ ಬೀಡಿಕಟ್ಟಿ ಅದನ್ನ ಮರಳಿ ಕೊಡುವುದು ಹೆಂಗಸರು. ಹಪ್ಪಳ-ಸಂಡಿಗೆ-ಉಪ್ಪಿನಕಾಯಿಯನ್ನು ಮಾರುವುದು ಬ್ರಾಹ್ಮಣ ಗಂಡಸರಾದರೆ ಅದನ್ನ ತಯಾರಿಸಿ ಕೊಡುವುದು ಮನೆಯ ಹೆಂಗಸರು. ಅಂಗಡಿಯಂಗಡಿ ಸುತ್ತಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನ ಮಾರುವುದು ಕೊಂಕಣಿ ಗಂಡಸರಾದರೆ ಅದನ್ನ ಒಲೆಯ ಮುಂದೆ ಕೂತು ಕರಿದು ಕೊಡುವುದು ಕೊಂಕಣಿ ಹೆಂಗಸರು. ಹೀಗೆ ಹೆಂಗಸರು ಯಾರಿಗೂ ಕಡಿಮೆಯಿಲ್ಲದವರಂತೆ ದುಡಿಯುತ್ತಾರೆ, ಹೀಗಾಗಿ ಆಗಾಗ ತಾಳ್ಮೆ ಕಳೆದು ಕೊಂಡು ಕೂಗಾಡುತ್ತಾರೆ, ತಾವು ಹೊತ್ತು ಮಾರುವ ಮೀನಿಗೆ ನ್ಯಾಯವಾದ ಬೆಲೆ ದಕ್ಕದಿದ್ದಲ್ಲಿ ಮರಕ್ಕಲ್ತಿಯರು ದೊಡ್ಡ ಗಂಟಲಿನಲ್ಲಿ ಬೀದಿಯಲ್ಲಿಯೆ ನೇರ ಜಗಳಕ್ಕಿಳಿಯುತ್ತಾರೆ! ತಮ್ಮ ಹೆಣ್ತನದ ಕೋಮಲತೆಯ ದುರುಪಯೋಗ ಪಡೆದು ವ್ಯಾಪಾರದಲ್ಲಿ ವಂಚಿಸುವ ಗ್ರಾಹಕರನ್ನ ಜಬರ್ದಸಿನಿಂದ ಎದುರಿಸಿ ನಾಲ್ಕು ಕಾಸು ಸಂಪಾದಿಸಿಕೊಳ್ಳಲು ಬಜಾರಿಯರಂತೆ ದೊಡ್ಡ ದೊಂಡೆಯಲ್ಲಿ ಅಬ್ಬರಿಸುತ್ತಾ ಮಾತನಾಡುವುದು ಕೆಲವೊಮ್ಮೆ ಅವರಿಗೆ ಅನಿವಾರ್ಯವೂ ಆಗಿರುತ್ತದೆ. ಇದು ವ್ಯಾಪಾರ ಒಂದೆ ಅಲ್ಲ ಗಂಡಸರಿಗೆ ಸರಿಸಮವಾಗಿ ಹೆಂಗಸರು ದುಡಿಮೆಗಿಳಿಯುವ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ.
ಅಂತಹ ದೊಡ್ಡ ದೊಂಡೆಯ ಒಡತಿಯರನ್ನ ಲೇವಡಿ ಮಾಡುವವರು ಬಳಸುವ ಉಪಮೆಯೆ ಈ ಗಾದೆ. ಸಮಗಾರರು ಒರಟು ಕಚ್ಚಾ ಚರ್ಮವನ್ನ ಚಪ್ಪಲಿ ಮತ್ತಿತರ ಸಾಮಾನನ್ನಾಗಿ ಪರಿವರ್ತಿಸುವಾಗ ಅದನ್ನ ಕತ್ತರಿಸಲು ಬಳಸುವ ಕತ್ತಿಯನ್ನ ತುಳುವಿನಲ್ಲಿ 'ರಂಪಿಗೆ'ಯೆಂದು ಕರೆಯಲಾಗುತ್ತದೆ. ಕೈಕತ್ತಿಗಳಲ್ಲೆ ಅತ್ಯಂತ ಹರಿತವಾಗಿರುವ ರಂಪಿಗೆ ಬಹಳ ಸುಲಭವಾಗಿ ಚರ್ಮವನ್ನ ಛೇದಿಸುತ್ತದೆ. ಹೀಗಾಗಿ ಇದು ದೊಡ್ಡ ದೊಂಡೆಯ ಹೆಂಗಸರ ಹರಿತ ನಾಲಗೆಗೆ ಸೂಕ್ತ ಹೋಲಿಕೆಯಾಗಿದೆ. ಕವಿ ಜಯಂತ ಕಾಯ್ಕಿಣಿ ತಾವು ಬರೆದ ಚಿತ್ರಗೀತೆಯೊಂದರಲ್ಲಿ ಹೆಣ್ಣಿನ ಕಣ್ಣೋಟವನ್ನ ಹರಿತವಾದ ಮುಳ್ಳುಮುಳ್ಳು ಕೇದಗೆಯ ಗರಿಗೆ ಹೋಲಿಸಿದ್ದಾರೆ, ಆದರೆ ಅದು ಪ್ರೇಮ ಜ್ವರ ಪೀಡಿತ ನಾಯಕನ ಅಲಾಪವಾಗಿತ್ತು. ಒಂದು ವೇಳೆ ಮದುವೆಯ ನಂತರದ ಅದೆ ನಾಯಕನ ಹಳಹಳಿಕೆಯನ್ನ ಹಾಡಿನ ಸಾಲಾಗಿ ಬರೆದಿದ್ದರೆ ಬಹುಷಃ ಅವರೂ ನಾಯಕಿಯ ನಾಲಗೆಯನ್ನ ಇನ್ನಷ್ಟು ಹರಿತವಾದ ರಂಪಿಗೆಗೆ ಹೋಲಿಸುತ್ತಿದ್ದರೇನೋ! ಅದೇನೆ ಇದ್ದರೂ ಈ ಹೋಲಿಕೆಯನ್ನ ಯಾವ ಗಯ್ಯಾಳಿ ಹೆಂಗಸರ ಮುಂದೆಯೂ ಮಾಡುವ ಧೈರ್ಯವನ್ನ ಯಾರೊಬ್ಬ ವೀರಾಧಿವೀರರೂ ಅಪ್ಪಿತಪ್ಪಿಯೂ ಪ್ರಕಟಿಸರು. ಹಾಗೆ ಮಾಡಿದಲ್ಲಿ ಅದೆ ರಂಪಿಗೆ ನಾಲಗೆಗೆ ಸಿಕ್ಕು ಸಾರ್ವಜನಿಕವಾಗಿ ಕೊಚ್ಚಿಸಿಕೊಳ್ಳಬೇಕಲ್ಲ! }
( ಆಳೆನ ನಾಲಾಯಿ ಪಂಡ ಸಮಗಾರೆನ ರಂಪಿಗೆ! = ಅವಳ ನಾಲಗೆಯೆಂದರೆ ಸಮಗಾರನ ರಂಪಿಗೆ!)
No comments:
Post a Comment