"ತೋಜಂದಿನೈಡ್ದ್ ಕೋಸ್ ಕಣ್ ಎಡ್ಡೆಗೆ"
{ ನಾವು ನೂರು ಬಯಸಿದ್ದರೆ ಬಾಳಲ್ಲಿ ವಿಧಿ ಪ್ರತಿಶತ ಐವತ್ತರ ಸಮೀಪವಾದರೂ ಖಂಡಿತ ತಂದು ನಿಲ್ಲಿಸುತ್ತದೆ. ಗೆಲುವು ಯಾವಾಗಲೂ ಪರಿಪೂರ್ಣವಾಗಿಯೆ ಇರಬೇಕಂತಿಲ್ಲ. ಆದರೆ ಪ್ರಯತ್ನವಂತೂ ಪರಿಪೂರ್ಣತೆಯೆಡೆಗೆ ಇರಬೇಕು. ಆಗ ಸಿಗುವುದರಲ್ಲಿ ತೃಪ್ತಿ ಪಟ್ಟುಕೊಳ್ಳುವ ಗುಣವನ್ನ ನಾವು ಖಡ್ಡಾಯವಾಗಿ ಬೆಳೆಸಿಕೊಳ್ಳುವುದು ಲೇಸು. ಆಸೆಯೆ ದುಃಖಕ್ಕೆ ಮೂಲ ಅನ್ನುವುದು ಸುಳ್ಳಲ್ಲ, ಏನೂ ಇಲ್ಲದಿರುವುದಕ್ಕಿಂತ ಅಲ್ಪ ಸ್ವಲ್ಪವಾದರೂ ಇರುವುದು ಒಳ್ಳೆಯದಲ್ಲವ?
ಯಾರೋ ಒಬ್ಬನಿಗೆ ಹುಟ್ಟಿನಿಂದಲೆ ಮಳ್ಳೆಗಣ್ಣು. ಆ ಮರುಳ ತನ್ನ ಹಣೆಬರಹಕ್ಕೆ ನಿರಂತರ ವಿಧಿಯನ್ನ ಶಪಿಸುತ್ತಿದ್ದನಂತೆ. ಮಳ್ಳೆಗಣ್ಣು ಕೊಟ್ಟ ವಿಧಿ ತನ್ನನ್ನ ಕುರೂಪಿಯಾಗಿಸಿ ವಂಚಿಸಿದೆ ಅನ್ನುವುದು ಆತನ ಆರೋಪ. ಸದ್ಯ ದೃಷ್ಟಿಯಾದರೂ ಇದೆಯಲ್ಲ. ಕುರುಡನಾಗಿ ತಳಮಳಿಸುವ ದುರ್ವಿಧಿಯಂತೂ ತನ್ನದಲ್ಲವಲ್ಲ ಎಂದು ಆಲೋಚಿಸದೆ ನಿರಂತರ ಕೊರಗುತ್ತಾ ಹಳಹಳಿಸುತ್ತಿದ್ದ ಈ ಕೊರಗಪ್ಪನಂತವರಿಗೆ ಹೇಳಿ ಮಾಡಿಸಿದ ಗಾದೆಯದು. ಇರುವ ಭಾಗ್ಯಕ್ಕೆ ಸಂತೋಷ ಪಡದೆ ಇಲ್ಲದ ಸಂಭ್ರಮಕ್ಕೆ ಹಾತೊರೆದರೆ ಕೇವಲ ತಮಗೆ ಮಾತ್ರ ನಷ್ಟವೆ ಹೊರತು ಇನ್ಯಾರ ಕೂದಲೂ ಅದರಿಂದ ಕೊಂಕಲಾರದು ಅನ್ನುವ ವಿವೇಕವಿಲ್ಲದ ಅರಿವುಗೇಡಿಗಳಿಗೆ ಬುದ್ಧಿ ಹೇಳುತ್ತದೆ ಈ ಗಾದೆಯ ವಾಚ್ಯಾರ್ಥ.
ದುರಾಸೆಗಿಂತ ಅಲ್ಪತೃಪ್ತಿ ವಾಸಿ. ಅರ್ಧ ತುಂಬಿದ ಲೋಟದಲ್ಲಿರುವ ದ್ರವವನ್ನ ನೋಡಿ ಅರ್ಧ ಖಾಲಿಯಿದೆಯಿದೆಲ್ಲ ಅನ್ನುತ್ತಾ ಹಳಹಳಿಸುತ್ತಾ ಕೂರುವ ಬದಲು. ಅರ್ಧ ತುಂಬಿದೆಯಲ್ಲ! ಎಂದುಕೊಂಡು ಇನ್ನರ್ಧವನ್ನೂ ತುಂಬಿಸುವ ಸವಾಲನ್ನ ನಾವ್ಯಾಕೆ ಸ್ವೀಕರಿಸಬಾರದು? ಕನ್ನಡದಲ್ಲಿಯೂ "ಕುರುಡುಗಣ್ಣಿಗಿಂತ ಮಳ್ಳೆಗಣ್ಣು ವಾಸಿ!" ಎನ್ನುವ ಇದೆ ಅರ್ಥ ಸೂಸುವ ಸೊಗಸಾದ ಗಾದೆಯೊಂದು ಚಾಲ್ತಿಯಲ್ಲಿದೆ.}
( ತೋಜಂದಿನೈಡ್ದ್ ಕೋಸ್ ಕಣ್ ಎಡ್ಡೆಗೆ! = ಕಾಣದಿರುವುದಕ್ಕಿಂತ ಮಳ್ಳೆಗಣ್ಣು ಒಳ್ಳೆಯದಂತೆ!")
No comments:
Post a Comment