
ನನಗೆ ಗೌಣವಾದಾಗಿದ್ದಾಗ
ನಿನಗೆ ಮುಖ್ಯವಾಗಿದ್ದ ಸಾಂಗತ್ಯ.....
ಇಂದು ತಿರುವು ಮುರುವಾಗಿದೆ
ಕಾಲ ಬಹಳ ಕ್ರೂರಿ,
ಕನಸು ಕಮರಿದ ಹಾಗೆ ಮನಸೂ ಸಹ ಮುರಿದಿದೆ
ಮೌನ ಆಪ್ತ...
ಸಂಕಟವೆಲ್ಲ ಎದೆಯೊಳಗೆ ಸುಪ್ತ/
ಇನ್ನೇನೂ ಹೇಳಲಿಕ್ಕೆ ಉಳಿದಿಲ್ಲ ನನ್ನಲ್ಲಿ
ನಿನಗೆ ನಾ ದೂರ ನಿಜ
ನನಗಂತೂ ನಿನ್ನಷ್ಟು ಇನ್ಯಾರೂ ಇಲ್ಲ ಹತ್ತಿರ...
ಖಾತ್ರಿಯಿಲ್ಲದ ಕ್ಷಣಿಕ ಒಲವಿಗೆ ಇಡಿ ಬಾಳನ್ನೆ ಬಿಟ್ಟುಕೊಟ್ಟು
ತ್ಯಾಗಿಯ ವೇಷದಲ್ಲಿ ನಿಂತ ನನ್ನ ನೋಡಿ ನೀನೆ ಒಂದುವೇಳೆ ನಕ್ಕರೂ,
ಅದನ್ನ ಅಪಾರ್ಥ ಮಾಡಿಕೊಳ್ಳಲಾರದಷ್ಟು
ದೂರದ ಹಾದಿಯನ್ನ ಒಂಟಿಯಾಗಿ....
ಬರಿಗಾಲಿನಲ್ಲಿಯೆ ಸವೆಸಿ ನಾನು ಬಂದಿದ್ದೇನೆ//
ನೆನಪಿನೆಳೆಯ ಕೊನೆಯಂಚಿನಲ್ಲೂ
ನಿನ್ನೆದೆಯ ಮಿಡಿತವೆ ಹುದುಗಿದೆ ಬೆಚ್ಚಗೆ....
ಕುದಿವೆದೆಯ ಬೇಗುದಿಯ ಮೌನ
ನನ್ನ ನೋವಿನ ಪ್ರತಿ ಹನಿಗಳಲ್ಲೂ ನಿನ್ನದೆ ಧ್ವನಿಯಿದೆ,
ಕಾಯಲು ಮರೆಯದ ಹಾದಿಯಲ್ಲಿ
ಮೂಡಬಹುದಾದ ಹೆಜ್ಜೆ ಸಪ್ಪಳ ನಿನ್ನದೆ ಆಗಿರಲಿ ಅನ್ನುವ....
ನನ್ನ ಆಸೆ ವಾಸ್ತವಕ್ಕೆ ಬಹು ದೂರ/
ಕಳೆದು ಹೋದ ಕ್ಷಣಗಳ ಕನವರಿಕೆ
ಕೊನೆಯವರೆಗೂ ಕೈಬಿಡದೆ ಕಾಡಲಿದೆ....
ಕಾದಿರಿಸಿರುವ ಎದೆಯ ಜಾಗ ಎಂದೆಂದೂ ನಿನ್ನದೆ
ನೀನೊಂದು ವೇಳೆ ಮರಳಿ ಬಂದರೂ ಬಾರದಿದ್ದರೂ,
ಇಂದಿಲ್ಲದ ಒಲವನ್ನ ಅಂದಿನ ಆಕ್ಷಾಂಶೆಯಲ್ಲಿ ಹುಡುಕುವ
ನನ್ನದು ಹುಚ್ಚು ಪ್ರಾಮಾಣಿಕ ಪ್ರಯತ್ನ!//
ಮರಗೆ ಸರಿದ ಮರೆಯಲಾಗದ ನೆನಪುಗಳ ಛಾಯೆಯ ಕಪ್ಪಲ್ಲಿ
ನನ್ನ ಕಮರಿದ ಸ್ವಪ್ನಗಳ ಸಪ್ತ ರಂಗುಗಳ ಕಲೆ....
ಇನ್ನೂ ಉಳಿದಿವೆ,
ನನ್ನ ಅತಿ ಸಾಧಾರಣ ಕವಿತೆಗಳಲ್ಲಿ ಅವಿತ ನಿನ್ನ ಹುಡುಕಿ ಕೊಟ್ಟವರಿಗೆ
ಕೋಟಿ ವರಹದ ಬಹುಮಾನವಿದೆ ಈ ವಿರಹಿಯಿಂದ!/
ಮನಸಿನ ಪಡಸಾಲೆಯಲ್ಲಿ ತೊಟ್ಟಿಕ್ಕುವ ಭಾವನೆಗಳ ಹನಿಗಳೆಲ್ಲ
ಮೌನದ ತಂಪಲ್ಲಿ ಮಿಂದೆದ್ದಿವೆ...
ಕೂಡಿಡಲು ನನ್ನಲ್ಲಿ ನಿನ್ನವೆ ಕೋಟಿ ಕನಸುಗಳಿವೆ
ಇನ್ನುಳಿದಂತೆ ಮನದ ಗೋದಾಮಿನಲ್ಲಿ ಎಲ್ಲಕ್ಕೂ ಖಡ್ಡಾಯ ನಿಷೇಧ,
ಯಾತರದ ಚಿಂತೆ ನನಗೆ?
ಹೃದಯದ ಅನುಗಾಲದ ಬೇನೆ ನನ್ನದೆ ಆಯ್ಕೆಯಾಗಿರುವಾಗ....
ನೀನದಕ್ಕೆ ಹೇಗೆ ತಾನೆ ಹೊಣೆ?//
ಮಳೆ ಮೆಲ್ಲಗೆ ಉಸುರಿದ ಗುಟ್ಟನ್ನ
ಕೇಳಿಸಿಕೊಂಡ ನೆಲ ನಾಚಿ ನೀರಾಗಿದೆ....
ದೂರದಲ್ಲೆಲ್ಲೋ ಮಳೆಯಾದ ಸುದ್ದಿ ಹರಡುವ ಹರಕು ಬಾಯಿಯ ಗಾಳಿ
ಒಂದೆರಡು ಹನಿಗಳ ತಂಪನ್ನ ತಾನೂ ಕದ್ದು ತಂದಿದೆ,
ಮನಸು ಮೌನದ ನದಿ ತೀರದಲ್ಲಿ ಲಂಗರು ಹಾಕಿರುವಾಗ
ನೋವಿನ ಬಿರುಗಾಳಿ ಅದೆಷ್ಟಾದರೂ ಬೀಸಲಿ ಚಿಂತೆಯಿಲ್ಲ/
ಕವಲೊಡೆದ ದಾರಿಗಳು
ಮುಂದೆಲ್ಲೋ ಒಂದೆಡೆ ಸೇರಿಯಾವು.....
ಎನ್ನುವ ನಿರೀಕ್ಷೆಯ ಮೋಡ
ನನ್ನೊಲವಿನ ಮಳೆಗಿಂತಲೂ ನನಗಾಪ್ತ,
ನೆನಪಲ್ಲಿ ನೀನಿರುವ ತನಕ ಮನಸಲ್ಲಿ ನೋವು
ಕೇವಲ ಒಂದು ತತ್ಕಾಲಿಕ ಅತಿಥಿ.....
ಖಂಡಿತಾ ಸಂಕಟದ ಸಂಧ್ಯೆಯ ಸೆರಗಲ್ಲಿ ಅಡಗಿದ ಸೂರ್ಯನ ತುಂಟಾಟಕ್ಕೆ
ಪಡುವಣದ ಬಾನು ಎಂದಾದರೊಮ್ಮೆ ನಿಜಕ್ಕೂ ರಂಗೇರಲಿದೆ...
No comments:
Post a Comment