Thursday, November 8, 2012

ದಿಕ್ಕು ತಪ್ಪಿದ ಅನಾಮಿಕ ನಾವೆಗೆ....


ನಿನ್ನೆದೆಯ ಗಡಿಯಂಚಿನಲ್ಲಿಯೆ ನನ್ನೆಲ್ಲ ಕನಸುಗಳು ಅಹೋರಾತ್ರಿ ಕಾವಲಿಗಿವೆ.... ನನ್ನ ಕಣ್ಣಚಿಂದ ಜಾರಿದ ಕಿರು ಕನಸೊಂದು ನಿನ್ನ ನಗುವಲ್ಲಿ ಕರಗಿ ಕಣ್ಮರೆಯಾಗುವಾಗ ನಾನು ಪರಮ ಸುಖಿ, ಅಳಿಸಲಾಗದ ಗುರುತನ್ನ ಮನಸಲ್ಲಿ ಹಚ್ಚೆ ಹೊಯ್ದ ನೆನಪಿನ ಲೇಖನಿ ಇನ್ನೂ ಮನಸಿನಲ್ಲಿ.... ಬಾಣದಂತೆ ಚುಚ್ಚಿಕೊಂಡಿದೆ/ ಹೇಳದ ನೂರು ಮಾತುಗಳಿಗೆ ಒಂದು ಮೌನ ಸಮ ಕಣ್ಣ ಭಾಷೆಯದ್ದೆ ಅಸಮಾನ ಘಮ.... ನೀನಿಲ್ಲ ನಿನ್ನ ನೆನಪಿದೆ ಮರೆತಿಲ್ಲ ನಿನ್ನಲ್ಲೆ ನನ್ನ ಮನಸಿದೆ, ಕಣ್ಣ ಕನ್ನಡಿಯ ಪ್ರತಿ ಪ್ರತಿಫಲನವೂ ನಿನ್ನ ನೆನಪುಗಳಲ್ಲೆ ಹೊಳೆಯುವಾಗ.... ಇನ್ನು ನನ್ನದೇನು ಇಲ್ಲಿ ಹೇಳು?// ಕತ್ತಲಲ್ಲಿ ಕರಗಿದ್ದ ಕುರುಡು ಕನಸುಗಳಿಗೆ ನೀ ಜೊತೆಗಿದ್ದಾಗ ಕಡುಗಪ್ಪು ಹಾದಿಯೂ ನಿನ್ನ ಕಣ್ಬೆಳಕಲ್ಲಿ ಸಲೀಸು.... ಕಡೆಯವರೆಗೂ ಅಂತಹ ನೆನಪುಗಳ ನಿರಂತರ ಜೊತೆ ಮಾತ್ರ ನನಗೆ ಸಾಕು, ಪ್ರತಿ ಉಸಿರ ಆವರ್ತದ ಬಸಿರಿನಲ್ಲಿ ಬಿಸಿಯಾಗಿ ಹೊಮ್ಮುವ ನೀನಿತ್ತ ಬೆಚ್ಚನೆಯ ನೆನಪುಗಳ.... ಸಾಂಗತ್ಯ ಸದಾ ನನಗೆ ಬೇಕು/ ನೆಲದ ನಿರೀಕ್ಷೆಗೆ ಬಾನಿನ ಆರ್ದ್ರತೆಯ ಬಗ್ಗೆ ಆರ್ತ ನೋಟವಿದ್ದಾಗ ಮೋಡ ಮಳೆಯಾಗಿ ಇಳೆಯ ತಣಿಸುತ್ತಿದೆ.... ಧರೆಗೆ ತಂಪೆರೆವ ಇರುಳ ನಿಲಕ್ಕೆ ನೆಲವನ್ನ ಮುಟ್ಟುವ ಹಂಬಲ ನಿರಂತರ, ನೆನೆದಷ್ಟೂ ನಿನ್ನ ನೆನಪಲ್ಲಿ ನನ್ನ ಒಳ ಮನಕ್ಕೆ ಅದೇನೋ ಹಿತದ ಅಮಲೇರುತ್ತದೆ.... ಕೇವಲ ಕನಸಲ್ಲಿ ಹೀಗೆಯೆ ಕಾಡುತ್ತಿರು ಮನಸೊಳಗಿನ ನೆನಪುಗಳು ಬಾಡದಂತೆ ನೀ ಕಾಪಾಡುತ್ತಿರು.... ಹಗಲಿನ ಬೆಳಕ ಹಿನ್ನೆಲೆಯಲ್ಲಿ ಹೊಳೆವ ನಿನ್ನ ಕನಸುಗಳು ನನ್ನ ಹೀಗೆಯೆ ಆವರಿಸುತ್ತಿರಲಿ// ಖಚಿತ ಭರವಸೆಗಳ ಆಸರೆಯಿಲ್ಲದಿದ್ದರೂ ಕನಸುಗಳಿಗೆ ಬರವೆ ನನ್ನ ಕಣ್ಣುಗಳಲ್ಲಿ ಹೇಳು? ತಾವರೆ ಮೇಲಿಳಿವ ಹನಿ ನೀರು ಕೆಸುವಿನ ಪತ್ರೆ ಮೇಲಿರುವ ಹೊಳೆವ ಜಲದ ಬಿಂದುವಿನ ದನಿ ನಾನು.... ಜಾರುವುದು ಖಚಿತ ಆದರೂ ಅದು ನಿನ್ನ ಅಂಗೈ ಮೇಲೆ ಆಗಿರಲಿ ಅಂತನ್ನುವ ಕ್ಷೀಣ ಆಸೆ ನನ್ನದು, ಉಸಿರ ಕೊನೆಯ ಉಚ್ವಾಸದಲ್ಲೂ ನೋಡಿದೆಯ ನಿನ್ನದೆ ಅವಾಸ... ದಿನವಿಡಿ ಕಾದ ಮನ ಉಸಿರ ಕೊನೆ ಕ್ಷಣದವರೆಗೂ ನಿನ್ನ ಪ್ರತೀಕ್ಷೆಯಲ್ಲಿ ತಲ್ಲೀನ ನನ್ನೆಲ್ಲ ಮೌನ ನಿನ್ನ ಮಾತಲ್ಲಿ ಲೀನ/ ಕತ್ತಲ ಅಂತರಾಳದಲ್ಲಿ ಅಡಗಿರುವ ಕನಸುಗಳ ಕಣ್ಣುಗಳಲ್ಲಿ ಕಾತರದ ಕಡತಗಳ ದೊಡ್ಡ ದಾಸ್ತಾನಿದೆ..... ದೂರ ಇದ್ದಷ್ಟು ಬಾನಿಗೂ ನೆಲಕ್ಕೂ ತೀರದ ಸೆಳೆತ ಮೋಡದ ಮನದಲ್ಲಿ ನಿರಂತರ ಧರೆಯದೆ ನಾಮದ ಮಿಡಿತ, ಮನಕ್ಕೆ ಮುಸುಗಿರುವ ಮೋಡ ಮಳೆಯಾಗಿ ಮಣ್ಣು ಸೇರುವ ತನಕ ದುಗುಡದ ಕರಿಛಾಯೆ.... ಹೀಗೆಯೆ ಆವರಿಸಿರಲಿದೆ// ದೂರದ ದ್ವೀಪ ಮುಟ್ಟುವ ದಿಕ್ಕು ತಪ್ಪಿದ ಅನಾಮಿಕ ನಾವೆಗೆ.... ಕಡೆಗೂ ದಡ ಮುಟ್ಟಿದ್ದೊಂದೆ ಕಳ್ಳ ಸಮಾಧಾನ, ಸಾಗರದ ಎದೆಯ ಮೇಲೆ ಸಾಗುವ ದೋಣಿಗಳಿಗೆ ದಡ ಮುಟ್ಟಿಸುವ ಹೊಣೆ ಎಲ್ಲಾ ಅಲೆಗಳಿಗೂ ಇದ್ದೇ ಇದೆ/ ಕೇವಲ ನಿರೀಕ್ಶೆಯ ನೆಲೆಗಟ್ಟಿನ ಮೇಲೆಯೆ ಸಾಗಿಸ ಬೇಕಿದೆ ಬದುಕು.... ಅದರೊಂದಿಗೆ ಸಲ್ಲ ಬೇಕಿದೆ ಅದಕೂ-ಇದಕೂ, ಕಂಬನಿ ಹಿಡಿತ ಮೀರಿ ಉಕ್ಕುತ್ತಿರೋದು ಕನಸು ಕಮರಿ ಹೋಗಿದ್ದಕ್ಕೊ ಇಲ್ಲಾ ಮನಸು ಮುದುಡಿದ್ದಕ್ಕೋ ಗೊತ್ತಾಗುತ್ತಿಲ್ಲ.... ಕತ್ತಲ ಕೊನೆಯಂಚಿನಲ್ಲಿ ಅಡಗಿದ ಬೆಳಕಿನ ಭರವಸೆಯಲ್ಲಿಯೆ ಅಡಗಿದೆ ನಾಳಿನ ಬದುಕು//

No comments:

Post a Comment