ಒಲವೂ, ವಿರಹವೂ, ಸಂತಸವೂ, ಸಂಕಟವೂ
ನೋವೂ, ನಲಿವೂ ನೀನೆ ತಾನೆ ನನಗಿತ್ತ ಗೋಳು....
ಎಲ್ಲವೂ ನಿನ್ನ ಭಿಕ್ಷೆ,
ಅತಿರೇಕದ ಅವಲಂಬನೆಗೆ ಮನಸು ತೆತ್ತ ದುಬಾರಿ ದಂಡ
ಎಕಾಂತದ ದೀರ್ಘ ಬಾಳು...
ಇದೊಂಥರಾ ಸ್ವಯಂ ಶಿಕ್ಷೆ./
ಬಲು ಬೇಸರದ ಸಂಜೆ ಅದೇಕೊ ಆವರಿಸಿ
ಮೆಲ್ಲನೆ ಮನಸ ಹಿಂಡುತ್ತಿದೆ....
ಕಣ್ಣ ಮರೆಯ ಕಡು ನೋವಲ್ಲೂ
ತುಟಿಯಂಚಲ್ಲಿ ನಸು ನಗು ಅರಳಿಸುವಲ್ಲಿ ಯಶಸ್ವಿಯಾದ
ನಿನ್ನ ನೆನಪುಗಳಿಗೆ ಎಂದೂ ಬೆಲೆ ಕಟ್ಟಲಾಗದು,
ನಗುವಿನ ಮೊಗವಾಡ ಹೊತ್ತು
ನಿನಗೆ ಶುಭ ಹಾರೈಸುವ ನನ್ನೊಳಗೆ...
ನೋವಿನ ಮಡು ತುಂಬಿ ನಿಂತಿದೆ//
ಮುರಿದ ಮನದ ಮೂಲೆಯಲ್ಲೂ
ನಿನ್ನ ನೆನಪುಗಳದೆ ಮಾರ್ದನಿ...
ಮನಸ ಪುಸ್ತಕದ ನಡು ಪುಟದಲ್ಲಿ
ಇಟ್ಟು ಮರೆತಿದ್ದ ಬಣ್ಣದ ನವಿಲುಗರಿ ನೀನು,
ಒಲವಲ್ಲಿ ನಲಿವಿಲ್ಲ ಬರಿದೆ ನೋವಿನ ಸುಳಿಯೆ ಈ ಮಡುವಲ್ಲಿ ತುಂಬಿದೆಯಲ್ಲ!
ಆದೇನೆ ಇದ್ದರೂ....
ಮಳ್ಳ ಮನಸಿಗೆ ಇದರಿಂದ ಪಾರಾಗುವ ಇರಾದೆಯೆ ಇಲ್ಲ?!/
ಗತ್ತಿನಿಂದ ಹೇಳುವ ನನ್ನ ನೆನಪುಗಳಲ್ಲೆಲ್ಲ
ನೀನೆ ಬಹುಪಾಲು ಆವರಿಸಿರುತ್ತೀಯಲ್ಲ....
ಇದೆಂಥಾ ವಿಸ್ಮಯ,
ಕಣ್ಣು ಕದ್ದು ಕಾಣುವ ಕನಸುಗಳಿಗೆ ಸುಂಕವಿಲ್ಲ
ಒಂದು ವೇಳೆ ಇದ್ದಿದ್ದರೆ....
ನಾನಿವತ್ತು ಪೂರ್ತಿ ದಿವಾಳಿಯಾಗಿರುತ್ತಿದ್ದೆ//
ಕೆಲವನ್ನು ಹೇಳದೆ ಕೆಲವನ್ನ ಕೇಳದೆ ಅರಿತುಕೊಳ್ಳ ಬೇಕಿತ್ತು ನೀನು
ನಾನಿನ್ನನರಿತಂತೆ....
ಸಂಜೆ ಅಚಾನಕ್ಕಾಗಿ ಕವಿಯುವ ಮೋಡ ಹನಿಯಾಗಿ ಧರೆಯ ಸೋಕುವಾಗ
ಮನಕ್ಕೀಯುವ ಮುದ ವರ್ಣನೆಗೆ ಹೊರತು,
ಕಳೆದ ಕೆಲವು ಕ್ಷಣಗಳ ಕದದ ಮರೆಯಲ್ಲಿ
ಕುತೂಹಲದ ಕಳ್ಳ ಕಣ್ಣುಗಳು ಕಾಯುತ್ತಿರುವುದು ನಿನ್ನನ್ನೆ/
ಕರೆಯದೆ ಬರುತ್ತಿದ್ದ ನೀನು ನಿನ್ನ ನೆನಪಿನಲ್ಲೂ
ಪೂರಾ ಹಾಗೆಯೆ ಹೋಲುತ್ತೀಯ....
ನೆನಪುಗಳೂ ಹೇಳದೆ ಕೇಳದೆ ದಾಳಿಯಿಡುತ್ತಿವೆಯಲ್ಲ !,
ಕಣ್ಣಾಡಿಸುತ್ತಾ ಕಾದಿರುವ ಹಾದಿಯಲ್ಲಿ
ನಿನ್ನ ಹಳೆಯ ಹೆಜ್ಜೆಗುರುತುಗಳು ಮಾಸುವ ಮುನ್ನ....
ಹೊಸತನ್ನ ಮತ್ತೆ ಮೂಡಿಸಲು
ನೀ ಬಂದರೆ ನನಗಷ್ಟೇ ಸಾಕು.//
ನೀರಲ್ಲಿ ಕರಗದ ಗಾಳಿ ಅಪಹರಿಸಲಾಗದ
ಬಾನಲ್ಲಿ ಲೀನವಾಗದ ನನ್ನ ಒಲವಿಗೆ....
ಅಪ್ಪಟ ಮಣ್ಣಿನ ವಾಸನೆಯಿದೆ,
ಇದೆಂದೂ ಮುಗಿಯದ ಕಥೆ
ನಿನ್ನ ನೆನಪು ಮಾಸುವ ಇರಾದೆ ಇಟ್ಟುಕೊಂಡಂತಿಲ್ಲ....
ನನ್ನದು ನಿರಂತರ ವ್ಯಥೆ/
ಕಳೆದು ಕೊಂಡ ನಷ್ಟ ನನಗೋ?
ಪಡೆಯದೆ ಹೋದ ಪಾಪಿ ನೀನೋ....
ಒಂದಂತೂ ನಿಜ ಎಲ್ಲೋ ಎನೋ ತಾಳತಪ್ಪಿದೆ,
ಸುರಿವ ಹನಿಮಳೆಯೂ
ಇಷ್ಟೊಂದು ಭೀಕರ ಶೀತಲ ಅನುಭವ ತರುವಾಗ...
ನಿನ್ನ ಬೆಚ್ಛನೆ ಅಪ್ಪುಗೆಯಿಲ್ಲದ
ಮುಂದಿನ ದೀರ್ಘ ಬಾಳು ದುರ್ಭರವೆನ್ನಿಸುತ್ತದೆ?!//
No comments:
Post a Comment