ಕೇಡಿಗ ಮನಸು ಕಾಣುವ ಕನಸಿನಲ್ಲಿ
ನಿನ್ನ ನೆನಪುಗಳೆ ಭರಪೂರ ಉಕ್ಕಿ
ನನ್ನನ್ನ ಸಂತಸಕ್ಕಿಂತ ಸಂಕಟದಲ್ಲಿ......
ಬಿಕ್ಕಿಬಿಕ್ಕಿ ಅಳುವಂತೆ ಕಾಡುತ್ತದೆ,
ಎದೆಗೂಡಿನಲ್ಲಿ ಗೂಡು ಕಟ್ಟಿದ
ನಿನ್ನೊಲವಿನ ಹಕ್ಕಿ.....
ಅದೇಕೋ ನನ್ನೆದೆಯನ್ನೆ ಕುಕ್ಕಿಕುಕ್ಕಿ
ನೋವಿನ ನೆತ್ತರನ್ನ ಉಕ್ಕಿ ಹರಿವಂತೆ ಮಾಡುತ್ತದೆ/
ಕೇದಿಗೆಯ ಘಮವೂ ಮಂದ
ಸುರಗಿಯ ಪೋಣಿಸಿ ಸುರಿವ ಹೂಗಳ ಹಾರವೂ.....
ಕಳೆದುಕೊಂಡಂತೆ ತನ್ನ ಚಂದ
ನೀನನ್ನನ್ನಾವರಿಸಿದ್ದೀಯ,
ಅದೇನೆ ಇದ್ದರೂ ನನ್ನುಸಿರ ಪ್ರೇಷಕ ಹೊಮ್ಮಿಸುವ
ನೋವಿನ ಕಂಪನದ ಅಲೆಗಳು.....
ನಿನ್ನೊಳಗೆ ಅಂತರ್ಧನಾಗಿ ಹೋಗಲಿ
ಎಂದು ಸ್ವಪ್ನದಲ್ಲೂ ನಾನು ಶಪಿಸಲಾರೆ//
ನಿನ್ನೆದೆಯ ಬೆಚ್ಛನೆಯ ಸಂಚಿತ ಖಾತೆಯಲ್ಲಿ
ನಾನಿಟ್ಟಿದ್ದ ಒಲವ ದೀರ್ಘಾವಧಿ ಠೇವಣಿಗೆ....
ಒಂದೆ ಕಂತಿನಲ್ಲಿ ನೀನಿತ್ತಿರುವ ವಿರಹದ ಬಡ್ಡಿಯನ್ನ
ಕೂತುಂಡರೂ ಕರಗಿಸಲು ನನಗೆ ಇದೊಂದು ಜೀವಮಾನ ಸಾಲದು!,
ಕಾದು ಬಸವಳಿದ ಕಣ್ಣುಗಳದ್ದು ಖಂಡಿತಾ ತಪ್ಪಲ್ಲ
ಕಂಬನಿಯನ್ನ ಹಿಡಿದಿಟ್ಟುಕೊಳ್ಳುವುದು.....
ಈಗೀಗ ಅದರ ಕೈಯನ್ನೂ ಮೀರಿದ್ದು/
ಅಂಧಕಾರದೊಂದಿಗೆ ಹೊಂದಾಣಿಕೆಯೆ
ಬದುಕಾಗಿದೆ....
ಮೌನಮಾತ್ರ ಮನಸಿನ
ಮಾತಾಗಿದೆ,
ಬಾಳು ಬೋಳಾಗದಿರಲು ಕನಸಿನ
ಹಾದಿಯಂದು ತೆರೆದಿರಬೇಕು....
ಅಲ್ಲಿ ನಿರೀಕ್ಷೆಯ ಕಂದೀಲು ಹಿಡಿದು ಮನಸನ್ನಾವರಿಸಿದವರು
ಜೊತೆಯಲ್ಲಿ ಹೆಜ್ಜೆ ಹಾಕಲು ಕಾದಿರಬೇಕು//
ನೀನಿಲ್ಲದ ಒಂಟಿ ಬಾಳು ಭೀಕರ
ನಾನೆ ಸ್ವತಃ ಕಟ್ಟಿಕೊಂಡು ಹೊಕ್ಕಂತಾಗಿದೆ.....
ದುರ್ಭರ ದಟ್ಟ ಸಂಕಟದ ಕಾಡು,
ನನ್ನೆದೆಯ ಭಾವವೆಲ್ಲ
ಪದಗಳಾಗಿ ಹನಿದು.....
ಈ ಹಾಡಿನಲ್ಲಿ ಹರಿದು ಬಂದಿದೆ ನೋಡು/
ಕೆಲವೊಮ್ಮೆ ಅನ್ನಿಸುತ್ತೆ
ನಿನ್ನ ನಿರ್ಧಾರ ನಿಜವಾಗಲೂ ಸರಿಯಾಗಿಯೆ ಇತ್ತು.....
ನನ್ನ ಹೆಗಲೇರಿದ್ದ ಶನಿ ನಿನ್ನನೂ
ಆವರಿಸುವ ಮೊದಲೆ ನೀನಿಲ್ಲಿಂದ ಪಾರಾದೆ,
ಆದರೆ ಅದೇನೆ ಇದ್ದರೂ ನಾನಂತೂ
ಒಳಗೊಳಗೆ ಒಡೆದು ಚೂರಾದೆ....
ಮೌನದ ಚಿಪ್ಪಿನಲ್ಲಿ
ಅಡಗಿದ್ದರೂ ನುಚ್ಚುನೂರಾದೆ//
ಇಂಗಿ ಹೋದ ಕನಸಿನ ಪಸೆಯ
ಕೊನೆಯ ಆರ್ದ್ರತೆಯಲ್ಲೂ ನನಗೆ....
ನಿನ್ನದೆ ಸ್ಪರ್ಶದ ಹುಡುಕಾಟವಿದೆ,
ಬೆತ್ತಲೆ ಪಾದಗಳಲ್ಲಿ ನೋವಿನ ಸುಡು ಮರಳ ಮೇಲೆ
ಮರುಳನಂತೆ ಹೆಜ್ಜೆ ಹಾಕಲು ನನಗಿರೋದು......
ನಿನ್ನೊಲವಿನ ಓಯಸಿಸ್ನಲ್ಲಿ ದಾಹವಾರಿಸಿಕೊಳ್ಳುವ
ತೀರದ ಸುಂದರ ಸುಳ್ಳು ನಿರೀಕ್ಷೆಯ ಜೊತೆಯೊಂದೆ!/
ಮೋಹಕ ಸ್ವಪ್ನಗಳ ನಾವೆಯಲ್ಲಿ
ಹುಟ್ಟು ಹಾಕುವ ಹುಚ್ಚಿನಲ್ಲಿ....
ನೀನು ಮರೆತು ಹೋದ
ಚಂದದ ಗುಟ್ಟು ಬಹುಷಃ ನಾನೆ!,
ಸಾವಿರದ ಸಾವಿರ ಕನಸುಗಳು
ಕುಟುಕು ಜೀವ ಹಿಡಿದುಕೊಂಡಿರಲು.....
ನಿರೀಕ್ಷೆಯ ಆತ್ಮಬಲವೆ ಕಾರಣ.//
No comments:
Post a Comment