ಮಾತಲ್ಲಿ ನೆನೆಸಿದ ಮೌನದಲ್ಲೆ ಹುದುಗಿದ್ದ
ಭಾವಗಳೆಲ್ಲವೂ....
ಮತ್ತಷ್ಟು ಮೃದುವಾಗಿ ಮನಸ ಮುತ್ತಿಕೊಂಡವು,
ಕನಸು ಕಣ್ಗಳಲ್ಲಿ ಕುಡಿಯೊಡೆದು ಮನಸಲ್ಲಿ
ಅರಳುತ್ತಿರುವ ಹೊತ್ತಿಗೆ.....
ಅನಿವಾರ್ಯವಾಗಿ ಅಕಾಲದಲ್ಲಿ ಮುದುಡಿ ಮರೆಯಾದವು ಸಿಗದೆ ನಿನ್ನೊಲವ ಒಪ್ಪಿಗೆ/
ಸಂತಸದಲ್ಲಿ ಆರಂಭವಾದ ಎಲ್ಲವೂ
ಸಂಕಟದಲ್ಲಿ ಕೊನೆಯಾಗಬಾರದು ಅಂತೇನಿಲ್ಲ....
ಹೊರಗೆ ಕಾಣುವ ನಲಿವಿನ ಲೇಪದ ಹಿಂದೆ,
ನೋವಿನ ಮಾಸಲು ಕಲೆಯೂ ಇರಬಹುದು//
ಹೊರಗಡೆ ಸಣ್ಣಗೆ ಹನಿಯುವ ಮಳೆಯಲ್ಲಿ
ತೋಯ್ದ ಪಾರಿಜಾತದ ಹೂಗಳನ್ನ ಕಿಟಕಿಯಾಚೆ ಕಾಣುವಾಗ...
ಅವು ನಿನ್ನ ನೆನಪಿನ ಹನಿಯಲ್ಲಿ ನಿತ್ಯ ತೋಯುವ
ನನ್ನ ಕನಸುಗಳೇನೊ ಎಂದೆನಿಸಿ ಮತ್ತೆ ಆರ್ದ್ರಗೊಳ್ಳುತ್ತೇನೆ,
ಹಳೆಯ ಪುಸ್ತಕವನ್ನು ತಿರುವಿ ಹಾಕುವಾಗ
ಹೊಮ್ಮುವ ಹಳೆ ನೆನಪುಕ್ಕಿಸುವ.....
ನವಿರು ಸುವಾಸನೆಯಂತೆ ನನ್ನೊಳಗಿನ ನೀನು/
ಖಾಲಿ ಮನಸಿನಲ್ಲೂ ನುಲಿವ ಪೋಲಿಭಾವಗಳು
ಆಗಾಗ ಅನಿರೀಕ್ಷಿತವಾಗಿ ಎದ್ದು.....
ಮತ್ತೆ ಮರೆಯಾಗಿ ಹೋಗುತ್ತವೆ,
ನಿನ್ನ ನೆನಪಿನಲ್ಲಿ ನಿದ್ರಾಹೀನ ರಾತ್ರಿಗಳ ಸರಣಿಯಲ್ಲೆ
ಕಳೆದುಹೋಗಿದ್ದ ನನಗೆ ನೆನ್ನಿನಿರುಳು ಗಡದ್ದು ನಿದ್ದೆ....
ನಿನ್ನನೂ ಮೀರಿ ಆವರಿಸಿತ್ತು!
ಕ್ಷಮಿಸು,ನಾನೇನೂ ಇರುಳಿಡೀ ನಿನ್ನ ಧ್ಯಾನದಲ್ಲೆ ಇರಬೇಕಂತಿದ್ದೆ...
ಆದರೆ ದಣಿದ ದೇಹ ಕೇಳಲೆ ಇಲ್ಲ ನೋಡು
ಹೀಗಾಗಿ ಇದು ನನ್ನ ತಪ್ಪಲ್ಲ?!//
ಸಾವಿರ ಅರ್ಥಗಳ ಸೂಸುವ ನಿನ್ನ ಒಂದು ಮೌನ
ನನ್ನ ಮನದಾಳದ ಮಾತಿನ ಬಾವಿಯನ್ನ ಪೂರ್ತಿ ಬತ್ತಿಸಿ.....
ನನ್ನನು ಶಾಶ್ವತ ಮೂಕನನ್ನಾಗಿಸಿದೆ,
ನಿನ್ನುಸಿರ ಕೊಳಲಲ್ಲಿ ಅವಿತ ಒಂದು ರಾಗವಾಗಿ.....
ನೀನುಸುರುವ ಮಾತುಗಳಲ್ಲಿ ಅಡಗಿದ
ಪದವೊಂದರಂತೆ ಸರಾಗವಾಗಿ
ನಿನ್ನೊಳಗೆ ಕಲೆತು ಲೀನವಾಗುವುದಷ್ಟೆ, ...
ನನ್ನ ಕಾತರದ ಕಂಗಳ ಅನುಗಾಲದ ಈಡೇರದ ಕನಸು/
ನಿನ್ನ ನೆನಪುಗಳು ನನ್ನೊಳಗೆ ಜೀವಂತವಾಗಿರುವ ತನಕ
ನಾನು ಬಾಳಹೊಳೆಯಲ್ಲಿ ನೋವಿನ ಸುಳಿಗೆ ಸಿಲುಕದೆ....
ಅದರ ಆಸರೆಯಲ್ಲಿ ತೇಲುತ್ತಲೆ ಇರಿತ್ತೇನೆ,
ಕನಸು ಕಂಗಳಲ್ಲಿ,ಮನಸು ಉಸುರುವ ಪಿಸುಮಾತುಗಳಲ್ಲಿ....
ನಿನ್ನನೆ ಆವಾಹಿಸಿಕೊಂಡಿರುವ ನಾನು
ನಿನ್ನಲ್ಲೆ ಲೀನವಾದರೂ ನನ್ನ ಅಡ್ಡಿಯೇನಿಲ್ಲ//
No comments:
Post a Comment