ಸಂಜೆ ತಂದು ಸುರಿವ ಬೆಚ್ಚನೆ ನೆನಪುಗಳ
ಅಗ್ಗಿಷ್ಟಿಕೆಯ ಮುಂದೆ ನಿನ್ನನೆ ಕನವರಿಸುವ ಮನಸಿಗೆ....
ನೀನಿಲ್ಲಿಲ್ಲದ ನೋವಿನ ಚಳಿ ಸ್ವಲ್ಪವೂ ಸೋಕಲಾರದೇನೋ,
ನಿನ್ನೆದೆಯ ಬೆಚ್ಚನೆ ಗೂಡಿನಲ್ಲಿ ಅವಿತಿರುವ
ನನ್ನ ಒಲವಿನ ನವಿರು ಭಾವಗಳಿಗೆ....
ಸಾಲು ಸಾಲು ಸಂಕಟ ಶೀತದ ನಡುಕ ತಪ್ಪಿಯೂ ತಾಕಲಾರದೇನೋ/
ದೇಹಕ್ಕಷ್ಟೆ ಅಡರೋದು ಮುಪ್ಪು ಮನಸಿಗಲ್ಲ
ಕನಸುಗಳಷ್ಟೆ ಹಳತಾಗೋದು ನಳನಳಿಸುವ ನೆನಪುಗಳಲ್ಲ....
ಮನಸಿನ ತೀರದ ಶೋಕ ಗೊತ್ತಿರೋದು ಕಣ್ಣಿಗೆ ಮಾತ್ರ,
ಸೋತಾಗ ಹೃದಯಕ್ಕೆ ಸಾಂತ್ವಾನ ಹೇಳುತ್ತಾ
ಜೊತೆಗೆ ಕಣ್ಣೀರು ಸುರಿಸುವ ಅದೇನೆ ನಿಜವಾದ ಮಿತ್ರ//
ಸಲುಗೆಯ ಹಾದಿಯಲ್ಲಿ ಸರಿವ ಕ್ಷಣಗಳ
ಕೊನೆಯ ನಿಲ್ದಾಣ ಕೇವಲ ಮೌನ....
ಗುರಿ ಸೇರಿದ ಮೇಲೆ ನಿರಂತರ ಮನಸಿಗೆ ಪ್ರೀತಿಯದೆ ಧ್ಯಾನ,
ಸನ್ಮೋಹಗೊಳಿಸುವ ಪ್ರೀತಿಯ ಅಸಲು ಬೆಲೆ
ಕೇವಲ ಕಾಲಕ್ಕೆ ಮಾತ್ರ ಗೊತ್ತು....
ತಡವಾಗಿಯಾದರೂ ಅಸಲಿಯತ್ತು ಅರಿವ ಮನಸಿಗೆ ಅರಿವಾಗುತ್ತದೆ
ಅನ್ನೋದು ಅದನ್ನೆ ಅಮೂಲ್ಯ ಮುತ್ತು/
ಕಸ ಇಂದು ನಿನ್ನ ಕಣ್ಣಲ್ಲಿ ನನ್ನ ನಿರ್ಮಲ ಅಭಿಲಾಷೆ
ಬಯಸಿದರೂ ಬಿಡುಗಡೆಯಾಗುತ್ತಿಲ್ಲ ಆವರಿಸಿ....
ಕಾಡುವ ನನ್ನೊಳಗಿನ ಒಬ್ಬಂಟಿತನದ ಹತಾಶೆ,
ನಿನ್ನೆದೆಯ ಒಳಕೋಣೆಯಲ್ಲಿ
ಕರಗಿ ಹೋದ ಮೌನ ನಾನು....
.ನೀನಿಲ್ಲದೆ ಒಂಟಿಯಾದವ
ನೀರು ಮರೆತ ನತದೃಷ್ಟ ಮೀನು//
ಸಂತಸದ ಬಾವಿ ಬತ್ತಿ ಹೋದ ಮೇಲೆ
ಶುರುವಾಗಿರುವ ನಿಟ್ಟಿರುಳ ಬಿಕ್ಕಳಿಕೆಗಳನ್ನ ಅಡಗಿಸುವ ಶಕ್ತಿ....
ಕಣ್ಣೀರಿಗೂ ಇಲ್ಲವಾಗಿ ಅದೂ ನಿಸ್ಸಹಾಯಕವಾಗಿ ನೀಳ ಉಸಿರ್ಗರೆದಿದೆ,
ಕನಸ ಸಾಲ ಕೊಟ್ಟ ನೀನು ನನಸಿನಲ್ಲೂ ದುಃಖದ ಬಡ್ಡಿ ನಿರೀಕ್ಷಿಸುತ್ತಿದ್ದೀಯ...
ನನ್ನ ತಾಳ್ಮೆಯನ್ನ ಬೇಕಂತಲೆ ಪರೀಕ್ಷಿಸುತ್ತಿದ್ದೀಯ/
ನನ್ನ ಹಗಲುಗಳನ್ನೂ ಇರುಳಾಗಿಸಿ ನೀನು
ಸಂತಸಗಳನ್ನೆಲ್ಲ ದೋಚಿ ಭಿಕ್ಷುಕನಾಗಿಸಿದೆ....
ಮುಕ್ತಿಯಿಲ್ಲದ ಅಶಾಂತ ತಕ್ಷಕನನ್ನಾಗಿಸಿದೆ,
ಬಾನಿಗೂ ಬಹುಷಃ ಅದೇನೂ ದುಃಖದ ಕಾರ್ಮೋಡ ಆವರಿಸಿದೆಯೇನೊ
ಇರುಳೆಲ್ಲ ಮುಗಿಲು ಬಿಕ್ಕಿಬಿಕ್ಕಿ ಅಳುತ್ತಿತ್ತು....
ನನ್ನ ಹೃದಯದ ಪಡಿಯಚ್ಚಿನಂತೆ//
ಬಾಳೆಂಬ ಸಂಕಟದ ತಳ ಒಡೆದ ದೋಣಿ
ಅನಾಮಿಕ ತೀರವೊಂದರಲ್ಲಿ ಸೊಂಟ ಮುರಿದು ಬಿದ್ದಿದ್ದರೂ....
ಮತ್ತೆ ನಿನ್ನೆಡೆಗೆ ತೇಲಿ ನಿನ್ನೆದೆಯನ್ನೆ ಮುಟ್ಟುವ
ನನ್ನ ಹುಚ್ಚು ಹಂಬಲಕ್ಕೆ ಕೊನೆಯೆ ಇಲ್ಲವಲ್ಲ,
ಕನಸಿಗೂ ನನಸಿಗೂ ವ್ಯತ್ಯಾಸ ತಿಳಿಯದ ಹಾಗೆ
ಕಣ್ಣಲ್ಲೆ ಮನೆಮಾಡಿಕೊಂಡಿರುವ ನೀನಿತ್ತ ನೆನಪುಗಳಿಗೆ....
ಅಡಿಗಡಿಗೆ ನನ್ನ ಕಾಡುವುದರಲ್ಲಿಯೆ ಅದೇನೋ ಅತೀವ ಆಸಕ್ತಿ/
ಇಂದು ಮೋಡ ಕವಿದ ಬಾನಿನಂಚಿಂದ
ಹಣಕಿ ಮನಸ ಮುದಗೊಳಿಸಿದ ಮುಗಿಲ ಹನಿಯೊಂದರ ಹಾಗೆ....
ನೀನೂ ಒಂದು ಮಳೆಹನಿ ನನ್ನ ಕನಸ ಮುಗಿಲಿನಲ್ಲಿ,
ಕಣ್ಣರಳಿಸಿ ಮುಂಜಾವಲ್ಲಿ ರವಿ ಮೂಡಿದ್ದರೂ....
ನೀನಿಲ್ಲದ ಹಗಲಲ್ಲಿ ಇನ್ನೂ ನನ್ನೆದೆಯ ಕತ್ತಲು ಕಳೆದಿಲ್ಲ//
No comments:
Post a Comment