Monday, November 7, 2011

ನನ್ನೆದೆ ಗುನುಗುವ ಮೌನಗಾನ......

ನಾಭಿಯ ಆಳದಿಂದ ಏಳುವ ಮಧುರ
ನೋವಿನ ಚೀತ್ಕಾರ.....
ಮನಸು ಆಗಾಗ ಹೂಡುವ ಸಮಧುರ
ಹುನ್ನಾರ,
ನನ್ನೊಳಗೆ ನಿನ್ನ ಕಲರವ/
ಮನಸು ಹಾಡ ಬಯಿಸಿದ ಮೋಹಕರಾಗದಲ್ಲಿ
ನಿನ್ನ ಹೊರತು ಇನ್ಯಾರೂ ಇಲ್ಲ...
ನನ್ನೆದೆ ಗುನುಗುವ ಮೌನಗಾನ
ನಿನ್ನ ಹೊರತು ಇನ್ಯಾರಿಗೂ ಕೇಳೋಲ್ಲ,
ನನ್ನೆದೆಯ ಒಲವಿನ ನಾವೆ ನೀನದಲ್ಲದ
ಇನ್ನೊಂದು ಹೃದಯದ ದಡವನ್ನ ಎಂದೂ ಮುಟ್ಟೋದೆ ಇಲ್ಲ//


ನೋವಿನ ಎಳೆಗಳಿಂದ ನೇಯ್ದ
ನಲಿವಿನ ಚಾದರವ ಹೊದ್ದ ಮನಸು......
ಒಂಟಿತನಕ್ಕೆ ಒಗ್ಗಿ ಹೋಗಿದ್ದರೂ
ಆಗಾಗ ನಿನ್ನ ಸಾಂಗತ್ಯದ ಕನಸಿನ ನಾವೆಯಲ್ಲೂ ತೇಲುತ್ತದೆ....
ಗಾಳಿಯನ್ನ ತೆರೆದ ತೋಳುಗಳಿಂದ
ತುಂಬಿಕೊಳ್ಳುತ್ತಾ......ನಕ್ಷತ್ರಗಳ ಚಪ್ಪರದ ಕೆಳಗೆ
ಕನಸಿನ ಹಾಸಿನ ಮೇಲೆ ನೆಟ್ಟಿರುಳಲ್ಲಿ ನಿಂತಿದ್ದೇನೆ....
ಮನದೊಳಗೆ ಮೌನದ ಮರ್ಮರ/
ಮಾತಿಲ್ಲದೆ.... ತುಟಿ ಎರಡು ಮಾಡದೆ
ಮೌನವನ್ನಷ್ಟೆ ಹೊದ್ದುಕೊಂಡು ಚಳಿಯಲ್ಲಿ......
ನೆತ್ತಿಯ ಮೇಲೆ ಶಶಿಕಾಂತಿ ಚುಂಬಿತ ಬಾನಿನಡಿಗೆ ಸುಮ್ಮನೆ ನಿಂತಿದ್ದರೂ,
ಮನಸೊಳಗೆ ಅದೇನೂ
ನೆನಪುಗಳ ಕದಡುವ ಭಾವಗಳ ಕಲರವ//


ಕಣ್ಣೀರ ಹನಿಯಾದ ಕನಸಲ್ಲೂ.....ನಿನ್ನ ಕಂಡಿದ್ದೇನೆ
ಮೌನದ ದನಿಯಾದ ಮನಸಲ್ಲೂ.....ನಿನ್ನನೆ ತುಂಬಿಕೊಂಡಿದ್ದೇನೆ....
ಕರೆಯದೆಯೂ ನಾ ಬರುವ ದಾರಿ ನಿನ್ನ ಹೃದಯದೊಳಗೆ ಮಾತ್ರ,
ಅದೊಂತರಾ ಒಲವಿನ ಮಾನಸಸರೋವರ ಯಾತ್ರ
ಸಂಜೆಗಪ್ಪಲಿ ನಿನ್ನ ನೆನಪನ್ನು ಉಕ್ಕಿಸುವ ದೀಪಗಳ ಸಾಲು ಬೆಳಕು...
ನನ್ನ ಕೆನ್ನೆ ಮೇಲೆ ಹರಿಯುತ್ತಿರುವ ನೀರ ಪರದೆಯ ಮೇಲೂ ಪ್ರತಿಫಲಿಸುತ್ತಿದೆ/
ನೀನೆಲ್ಲದೆ ಜೊತೆ ಅದೆಂತಾ ಹಬ್ಬ?
ನೀ ದೂರವಿರುವಾಗ ನನ್ನ ಪಾಲಿನ ಬೆಳಕಿನ ಹಬ್ಬವೂ ತಬ್ಬಿದೆ ಮಬ್ಬ...
ನಿನ್ನ ನಿರೀಕ್ಷೆಯ ಪಟಾಕಿಗೆ ನನ್ನ ಪ್ರತೀಕ್ಷೆಯ ಕಿಡಿ ಸೋಕಿದೆ
ನಿನ್ನ ಕಣ್ದೀಪದ ನಿರೀಕ್ಷೆಯಿದೆ,ನಿನ್ನೊಲವ ಹಾವಳಿ ಬಾಳಲಿ ಮತ್ತೆ ಬೇಕಿದೆ//



ಹಗಲಿನ ಬೆಳಕಿಗಿಂತ ಆಪ್ತ
ಇರುಳಿನ ಮೋಹಕತೆಗೂ ಮೀರಿ ಹೆಚ್ಚಾಗಿ....
ನನ್ನೊಳಗೆ ಹರಿವ ನದಿ ನೀನು ಸುಶುಪ್ತ
ಹೆಸರೇಕೆ ಬೇಕು ನಿನಗೆ ಇರಲದು ಹೀಗೆ ನಮ್ಮಿಬ್ಬರ ನಡುವಿನ ರಹಸ್ಯವಾಗಿ ಗುಪ್ತ,
ಇಷ್ಟೆ ಸಾಕಲ್ಲ? ನಾನು ಕರಗಿ ನಿನ್ನೊಳಗೆ ಆದೆನಲ್ಲ ಲುಪ್ತ/
ನಿನ್ನೊಲವಿನ ನಾವೆಯಲ್ಲಿ
ಗುರಿ ಮುಟ್ಟಲಾಗದ ನನ್ನ ಪಯಣ ಹೀಗೆ ನಿರಂತರ ಸಾಗುತಿರಲಿ..
.ನಿನ್ನ ನೆನಪುಗಳಷ್ಟೆ ಮುಟ್ಟುವ ನಾಳೆಗಳಲ್ಲಿ,
ನನ್ನ ಮನಸು ಹೀಗೆ ಮಾಗುತಿರಲಿ//

No comments:

Post a Comment