ನೆನಪಿನ ನಾವೆಯಲ್ಲಿ ತೇಲುವ ಆಸೆ
ಅದಮ್ಯವಾಗಿ ನನ್ನೊಳಗೆ ಬೇರೂರಿರುವ ತನಕ...
ಕನಸೊಳಗೆ ಜೀವಂತ
ನಿನ್ನೆಡೆಗೆ ಸಾಗುವ ಮನಸಿನ ತವಕ,
ಗಾಳಿಯಲ್ಲಿ ಹೀಗೆ ಸುಮಗಳ ಗಂಧ ತೇಲುತ್ತಿರುತ್ತದೆ
ಹೂಗಳ ಮಡಿಲಲ್ಲಿ ಬೆಚ್ಚಗೆ ಹಕ್ಕಿಯಂತಹ ಕನಸುಗಳು ಮುದುಡಿ ಮಲಗಿರುತ್ತವೆ....
ನೀ ಮರಳಿ ಬರುವಾಗ ಬಹುಷಃ ನನ್ನುಸಿರು ನಿಂತಿರಲೂಬಹುದು
ನಿನ್ನ ಹಾದಿ ಕಾತರಿಸಿ ಕಾದಿರಲು ನಾನಿಲ್ಲಿ ಆಗ ಇಲ್ಲದಿರಲೂಬಹುದು....
ಆದರೆ ಸಾವಿಲ್ಲದ ನನ್ನ ಕನಸುಗಳಿಗೆ ಪ್ರತಿಘಳಿಗೆಯೂ ನಿನ್ನ ನಿರಂತರ ನಿರೀಕ್ಷೆ ಇದ್ದೆ ಇರುತ್ತದೆ!/
ಮನಸೊಳಗಿನ ಸಂಗ್ರಹಿತ ಭಾವ ಖಜಾನೆಯಿಂದ
ನಿನ್ನ ನೆನಪಿನ ಕಡತಗಳನ್ನೆಲ್ಲ....
ಆಗಾಗ ಕಡ ಪಡೆಯುವ ನನ್ನ ಕನಸುಗಳಿಗೆ,
ಅವನ್ನೆಲ್ಲ ಮತ್ತೆ ಹಿಂದಿರುಗಿಸೋದನ್ನ
ಬೇಕಂತಲೆ ಮರೆಯುವ ಚಟ!//
ಮನಸಿನ ಮೆಲು ರಾಗಗಳಲ್ಲಿ ದಟ್ಟವಾಗಿದೆ ನಿನ್ನ ನೆನಪಿನ ಸಹಿ
ಬತ್ತಿದ ಉತ್ಸಾಹದಲ್ಲೂ ನಿನ್ನ ನೆನಪಷ್ಟೆ ಉಕ್ಕಿಸಬಲ್ಲದು....
ಎದೆಯೊಳಗೆ ಒರತೆ ಸಿಹಿ/
ನೋವು ನೂರಿದ್ದರೂ
ನಲಿವು ಚೂರೆಚೂರು ಇದ್ದರು....
ನನಗದಷ್ಟೆ ಸಾಕು....
ನಿನ್ನ ನೆನಪಿನ ಹೊಳಪಿನ ಹೊರತು ಹೇಳು
ಇನ್ನೇನು ತಾನೆ ಈ ಬಾಳಿಗೆ ಬೇಕು?//
ಮನಸು ಹೊಸೆದ ಭಾವುಕ ರಾಗಕೆ
ನಿನ್ನ ಹೆಸರೆ ಸರಿ ಹೊಂದುವ ಪದ....
ಎದೆಯ ಹಾಡಾಗಿ ನೀನಿರುವೆ ಅಲ್ಲಿ ಸದಾ,
ನಲಿವಿನ ತಲಾಶಿನಲ್ಲಿ ನೋವಿನ ಕಡಲಿನಲ್ಲಿ
ಆಸೆಯ ಮುರುಕು ದೋಣಿಯೇರಿ ಹೊರಟ....
ದೂರ ಪಯಣದ ಕೊನೆ
ನಿನ್ನೆದೆಯ ದಡವೆ ಆಗಿರಲಿ ಅನ್ನೋದಷ್ಟೆ ನನ್ನೆದೆಯಾಳದ ಕ್ಷೀಣ ಆಸೆ!/
ಮುತ್ತು ಸುರಿದಿದ್ದು ಹೌದು!
ಆದರದು ನಿನ್ನ ತುಟಿ ನನ್ನ ಹಣೆಯ ಮೇಲೆ ತಂದು ಸುರಿದದ್ದೋ?,
ಇಲ್ಲಾ ನನ್ನ ಕೆನ್ನೆಯ ಮೇಲೆ ನೋವಿಗೆ ನಲುಗಿದ
ನನ್ನವೆ ಕಣ್ಣುಗಳು ಅವ್ಯಾಹತವಾಗಿ ಸುರಿಸಿದ್ದೋ?....
ಗೊಂದಲ ಬಗೆಹರಿಯುತ್ತಿಲ್ಲ//
No comments:
Post a Comment