ಗಾಳಿ ಚುಂಬಿಸಿದ ಮೋಡದ ತುಟಿ ಕೆಂಪಾಗಿ
ಅದು ನಾಚಿ ನೀರಾಯ್ತು....
ಅದೇ ಮಳೆಯ ಕಳೆಯಾಯ್ತು
ಕುರುಡು ಬಾಳು/
ಕತ್ತಲ ಹಾದಿ...
ಕೈ ಹಿಡಿದು ನಡೆಸೋ ಒಲವಿಗಾಗಿ ಕಾಯುತಿದೆ
ಮನ ನುಡಿಸುತ್ತ ನೋವಿನ ಸನಾದಿ....
ಮನಸಿನಾಗಸದಲ್ಲಿ ಬೆಳ್ಳಿ ಮೂಡಲಿಲ್ಲ,
ನಿನ್ನ ಹೆಜ್ಜೆಯ ಸಪ್ಪಳ ಮರಳಿ ಕೇಳಲಿಲ್ಲ
ನೋವಿನ ನದಿಗೆ ದಾಟಲು ಪಾರವೆ ಇಲ್ಲ...
ಸಂಕಟದ ಹರಿವೆ ಅಪಾರವಾಯ್ತಲ್ಲ//
ನಿರಂತರ ನಿರೀಕ್ಷಿಸುತ್ತಲೆ ಇರೋದರಲ್ಲೂ
ನೋವು-ನಲಿವು ಎರಡೂ ಇವೆ....
ನೀನೆಂದೊ ಬಂದೆ ಬರುವಿ ಎಂಬ ಆಸೆ ಹುಟ್ಟಿಸುವ ನಲಿವು
ನೀ ಬಾರದ ವಾಸ್ತವದ ನಿಜವಾದ ನೋವು/
ಗಾಳಿಗೇನು ಗೊತ್ತು ನೀರಹೊತ್ತ ಮೋಡದ ಮಡಿಲ ಸಂಕಟ?
ತೇಲುತಲೆ ನೆಲವನ್ನ ತೋಯಿಸುವ ಅದರೊಡಲ ತಟವಟ....
ಕಳೆದುಕೊಳ್ಳುವ ಸಂಕಟದಲ್ಲಿದೆ ಪಾಪದ ಮುಗಿಲಲ್ಲವ?
ಮಿಕ್ಕೆಲ್ಲ ವೇದನೆಗಿಂತಲೂ ಅದು ಮಿಗಿಲಲ್ಲವ?,
ಮನದ ಗಣಿ ಅಗಿದಷ್ಟೂ ನೆನಪುಗಳ ಖನನ
ಅಲ್ಲಿ ನೀನಿದ್ದಿ...
ನೀನಿತ್ತ ನೆನಪುಗಳಿವೆ...ನೋವಿದೆ
ಮಾಸಿದ ಮುಗುಳ್ನಗೆಯೂ ಇದೆ//
ಕನಸಿನಾಚೆಗೆ ದಿಗಂತದಂಚಿಗೆ ಸೇರಿ....
ಲೀನವಾಗಿ ಹೋಗುವೊಂದಾಸೆ
ಮನದಲ್ಲಿ ಅರಳಿ ಅರಳಿ ಮತ್ತೆ ಮರೆಯಾಗುವ ಮುನ್ನ
ನೀನು ಬಾ,
ಭಾವದ ನಾಲೆಗಳೆಲ್ಲ ಎದೆಭಾರದ....
ಸಂಕಟಗಳಿಂದಲೆ ಭರ್ತಿಯಾಗಿ
ನೋವಿನ ಭರಪೂರ ನೆರೆ ಬಂದು ಕಣ್ಣ ಕೊಡಿ ಒಡೆದಿದೆ/
ನೆಮ್ಮದಿಯ ತಲಾಶಿನಲ್ಲಿರುವ ನನ್ನೆದೆಗೆ...
ನಿನ್ನ ಹೆಜ್ಜೆಗುರುತುಗಳದ್ದೆ ತೀರಲಾರದ ನಿರೀಕ್ಷೆ
ಎಳೆ ಬಿಸಿಲಿಗೆ ಬಾಡಿ ಹೋಗುವ ಪಾರಿಜಾತದಷ್ಟು ನಾಜೂಕು ನನ್ನ ಒಳಮನ,
ನೀ ಬರುವ ತನಕ ಅರಳಿಕೊಂಡೆ ಕಾಯುತ್ತಿರುತ್ತೇನ?
ನನಗೇನೂ ಅನುಮಾನ!//
ಮುಗಿಲಿನ ಕಂಗಳಿಂದ ಉದುರಿದ ಹನಿ....
ನೆಲದೆದೆಯ ತೋಯಿಸಿ ಅಲ್ಲೆ ಇಂಗುವಾಗ
ನನ್ನುಸಿರಿಗೂ ಕೂಡ ನಿನ್ನ ನೆನಪಾಯ್ತು
ಕಣ್ಣೀರುಕ್ಕಲು ಅದೇನೆ ನೆಪವಾಯ್ತು,
ಸಂತಸದ ಹೂವುಗಳು ಕನಿಷ್ಠ ಕನಸುಗಳಲ್ಲಾದರೂ....
ಆಗಾಗ ಅರಳಿ ಬಾಳನ್ನು ಆಹ್ಲಾದಕರವಾಗಿಸಿದೆಯಾದರೆ
ಅದು ಕೇವಲ ನಿನ್ನ ನೆನಪು ಮರುಕಳಿಸಿದ ಏಕೈಕ ಕಾರಣದಿಂದ/
ಮಳೆ ಮನವನ್ನೂ ಆವರಿಸಿ ಮನಸೊಳಗೂ ಸುರಿದು
ಎದೆಯ ತಂಪಾಗಿಸಿದಾಗ ನನಗೆ ನೆನಪಾದದ್ದು ಕೇವಲ ನೀನು...
ಎದೆಭಿತ್ತಿಯ ಆಸರೆಯಲ್ಲಿ ನೀನು ಬಿತ್ತಿದ ಕನಸುಗಳೆಲ್ಲ,
ಆಗಾಗ ಅಕಾಲದಲ್ಲಿ ಅರಳಿ.....
ಮನಸಿನ ಗಾಳಿಯಾಡದ ಮುಚ್ಚಿದ ಕೋಣೆಯಲ್ಲೂ ಕಂಪಿನ ಸಡಗರ ಸಂಚಯಿಸುತ್ತವೆ//
No comments:
Post a Comment