Friday, September 2, 2011

"ಕಣ್ಣೀರಧಾರೆ ಇದೇಕೆ? ಇದೇಕೆ?"



ಬೂಸಿಯ ಅಲಿಯಾಸ್ 'ಚಡ್ಡಿ" ಕಳಕೊಂಡ ಕಂಗಾಲು ಯೆಡ್ಡಿ "ರಾಜ್ಯದ ಸಮೃದ್ದಿಗಾಗಿ ತನು ( ಹಾಗೆಂದರೇನು ಅನ್ನೂ ಅನುಮಾನವಿರೋವವರು ಈ ಇಳಿ ವಯಸ್ಸಿನಲ್ಲೂ ಅವರಿಗೆ "ಇಂಧನ"ವಾಗಿರುವ 'ಸಚಿವ'ರನ್ನು ವಿಚಾರಿಸಿ ತಮ್ಮ ಅನು'ಮಾನ'ವನ್ನು ಪರಿಹರಿಸಿಕೊಳ್ಳಬಹುದು!)-ಮನ (ಇದು 'ಮಗನ' ಎಂದಾಗಿರಬೇಕಿದ್ದುದು ವ್ಯಾಕರಣ ದೋಷದಿಂದ 'ಮನ' ಎಂದಾಗಿರಬಹುದು ಎಂಬ ಅನುಮಾನ ನಿಮ್ಮಂತೆ ನನಗೂ ಇದೆ!) -ಧನ (ಯಾರ 'ಧನ' ಎಂಬ ರಾಜಕೀಯ ಪ್ರೇರಿತ ಅಡ್ಡಪ್ರಶ್ನೆಗೆ ಯಾರಿಗೂ ಇಲ್ಲಿ ಅವಕಾಶವಿಲ್ಲ! ಅಲ್ಲದೆ ಅದು"ಕಪ್ಪು"ಬಣ್ಣದ 'ಧನ'ವೂ ಇಲ್ಲ ಬಿಳಿಯದೊ ಎಂಬ ಗೊಂದಲ ಇದ್ದರೂ ಹಾಗೆಲ್ಲ ಕೇಳೋದು ತಪ್ಪು?!) ದಿಂದ ಬಿಡುವಿರದೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದೇನೆ! (ಆಗಿರುವ 'ಅಭಿವೃದ್ದಿ'ಯನ್ನು ಗಮನಿಸಿದಾಗ ಅವರ ರಾಜ್ಯದ ವ್ಯಾಖ್ಯೆ ಬಹುಷಃ ಅವರ 'ಸ್ವಂತ' ಕುಟುಂಬಕ್ಕಷ್ಟೆ ಸೀಮಿತವಾಗಿದ್ದಿರಲೂಬಹುದು ಅಂತ ನಿಮಗನಿಸೋದು ಸಹಜ!)

ರಾತ್ರಿ ಹನ್ನೆರಡರ ಮೊದಲು ಎಂದೂ ಮಲಗಿಲ್ಲ! (ಅಷ್ಟು ಹೊತ್ತು 'ಎಲ್ಲಿ' ಏನು ಮಾಡುತ್ತಿದ್ದಿರಿ 'ದಾಖಲೆ ಕೊಡಿ!' ಅಂತ ಕುಮಾರಣ್ಣನ ತರ ಕೇಳಿದ್ದೆ ಆದಲ್ಲಿ ರೌರವ ನರಕಕ್ಕೆ ಹೋಗುತ್ತೀರಿ,ಹುಷಾರ್!) ಬೆಳಗ್ಯೆ ಐದರ ನಂತರ ಹಾಸಿಗೆಯಲ್ಲಿದ್ದದೆ ಇಲ್ಲ! (ಎಲ್ಲಾದರೂ ಈ ನಿದ್ರಾಹೀನತೆಯೆ ಮಾರಕ ಈಗ ಅಮರಿಕೊಂಡಿರುವ 'ಎಡ್ಸ್'ಗೆ ಮುನ್ನುಡಿ ಬರೆದಿರಬಹುದ?) ಪ್ರಪಂಚದಲ್ಲೆ ಮೊತ್ತಮೊದಲನೆಯದಾಗಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ-ಅದಿರು ರಫ್ತು ನಿಷೇಧಕ್ಕೆ ದಿಟ್ಟಕ್ರಮ ಕೈಗೊಂಡ ಕ್ರಾಂತಿಕಾರಿಯೂ-ಧೀರನೂ ಆದ ನನಗೆ ಹಾಗೆ ನೋಡಿದರೆ 'ನೊಬೆಲ್' ಕೊಡಬೇಕಿತ್ತು ;ಈಗ ನೋಡಿದ್ರೆ 'ರಾಜಿನಾಮೆ' ಕೇಳ್ತಿದಾರೆ ಎಂದು ತಮಗೆ ಒದಗಿದ ದುಸ್ಥಿತಿಗೆ ತಾವೆ ಮರುಗಿ-ಕರಗಿ ಕನಿಕರದಿಂದ ಕಣ್ಣೀರಿಟ್ಟು (ಇನ್ಯಾರೂ ಆ ಕೆಲಸ ಮಾಡದಾಗ ಪಾಪ ಅವರಾದರೂ ಇನ್ನೇನು ತಾನೆ ಮಾಡಿಯಾರು ನೀವೆ ಹೇಳಿ!) ಹೀಗಂತ ಅದೆಲ್ಲೊ ತಮ್ಮಂತಹ ಖಜಾನೆ ಕಳ್ಳ-ಖದಿಮರಿಂದಲೆ ತುಂಬಿ ತುಳುಕುತ್ತಿದ್ದ ವೇದಿಕೆಯೊಂದರಿಂದ ಗದ್ಗದಿತರಾಗಿ ಹೇಳಿದ್ದು, ಒಮ್ಮೆ ನೋಡಿದ್ದನ್ನು ಮರೆಯಲಾಗದ ಅನುವಂಶಿಕ ಕಾಯಿಲೆ ಇರುವ ಕನ್ನಡಿಗರಲ್ಲಿ ಒಬ್ಬನಾದ ನನಗಿನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿದೆ!.ಅವರ ಈ ಘನಂದಾರಿ ಸಾಧನೆಗೆ ತಕ್ಷಣಕ್ಕೆ 'ಭಾರತರತ್ನ',ಇಲ್ಲದಿದ್ದರೆ ಕನಿಷ್ಟಪಕ್ಷ 'ಕರ್ನಾಟಕರತ್ನ'ವನ್ನಾದರೂ ಕೊಟ್ಟು ಕಂಬನಿಯೊರೆಸೋಕೆ "ಶೋಭಾ'ಯಮಾನರಾದ ಯಾರೊಬ್ಬರೂ ಅಲ್ಲಿರದಿದ್ದರಿಂದ ಅವರ ಕಣ್ಣುಗಳಿಂದ ಉಕ್ಕಿದ ನೀರು ಅನಿವಾರ್ಯವಾಗಿ ನೆಲ ಮುಟ್ಟಿಬಿಟ್ಟಿತ್ತು ಆವತ್ತು.

ಮೇಲಿನ ಭಾಷಣವನ್ನು ಅವರಷ್ಟೆ ಹನಿಗಣ್ಣಾಗಿ ಕೇಳಿ ನಂತರ ಮನೆಗೆ ಬಂದು 'ಲೋಕೊತ' ವರದಿಯಲ್ಲಿ (ಇದನ್ನ ನಿಮ್ಮ ಅನುಕೂಲಕ್ಕೆ ತಕ್ಕಂತೆ 'ಲೋಕಾಯುಕ್ತರು ಕೊಟ್ಟ ತನಿಖಾ ವರದಿ' ಅಂತಲೂ ಇಲ್ಲವೆ "ಲೋಫರ್'ಗಳನ್ನ ಕಾರಾಗೃಹದಲ್ಲಿ ಕೊಳೆಸಲು ತಯಾರು ಮಾಡಿದ ವರದಿ"ಅಂತಲೂ ವಿಸ್ತರಿಸಿಕೊಂಡು ಓದಬಹುದು..) ನಮೂದಾಗಿರುವಂತಹ ಬೂಸಿಯ ಸರಕಾರದ ಸಾಧನೆಯೊಂದರ ವಿವರಣೆ ಓದಿದರೆ ನಿಮಗೆ ದಿಗ್ಭ್ರಮೆಯಾಗೋದು ಖಂಡಿತ.ಕ್ರಾಂತಿಯ ಕೆಂಡ ತಣ್ಣಗಾದ 'ಢಂಬಾಯ'ದ ಕವಿ ಪುಂಗವರೊಬ್ಬರಿಂದ ಇತ್ತೀಚೆಗಷ್ಟೆ 'ಆಧುನಿಕ ಬಸವಣ್ಣ' ಅಂತ ಎಕ್ಕಮಕ್ಕ ಹೊಗಳಿಸಿಕೊಂಡ ಬೂಸಿಯ ಕೈಗೊಂಡಿದ್ದೇನೆ ಎಂದು ಹೇಳಿಕೊಂಡ ಎದೆಗಾರಿಕೆಯ ಕ್ರಮಗಳಿಗೂ-ಇಲ್ಲಿ ವಿವರಿಸಿದ್ದಕ್ಕೂ ಸೂತ್ರ-ಸಂಬಂಧವೆ ಕಾಣದೆ ಕಂಗಾಲಾಗುವ ಸರದಿಯೀಗ ನಿಮ್ಮದಾಗುತ್ತದೆ!

ತೋರಣಗಲ್'ನ ಅಂದಿನ ಎಂಎಲ್'ಸಿ ಕೆ ಎಸ್ ಎಲ್ ಸ್ವಾಮಿ-ಕೆ ಕುಮಾರಸ್ವಾಮಿ-ಎಂ ಮಾಬುಸಾಬ್ ಎಂಬ ಖದೀಮರಿಗೆ ರಾಮಘಡದ ಪಟ್ಟಾಭೂಮಿಯಾಗಿರೊ ಸರಕಾರಿ ಅರಣ್ಯ ಭೂಮಿ ಸರ್ವೇ ಸಂಖ್ಯೆ 28ರಲ್ಲಿ ಕಾನೂನಿನಲ್ಲಿ ಅವಕಾಶವೆ ಇಲ್ಲದಿದ್ದರೂ ಅಪಾರ ಉದಾರತೆಯಿಂದ ಗಣಿಗಾರಿಕೆಗೆ ಅವರು ಅನುಮತಿ ನೀಡಿಬಿಟ್ಟಿದ್ದಾರೆ! ಅದೇ ಎಪ್ರಿಲ್ 11 ಕ್ಕೆ ಅನುಮತಿ ಸಹಿತ ಅವರ ಅರ್ಜಿಯನ್ನ ಕೇಂದ್ರಕ್ಕೆ ರವಾನಿಸಲಾಗಿದೆ! ಅಧಿಕಾರಕ್ಕೆ ಬಂದ ನಾಲ್ಕನೆ ದಿನವೆ ಅವರಿಂದ ಈ ಇಂದ್ರಜಾಲ ಸಾಧ್ಯವಾಗಿದೆ.ಕೇವಲ ನಾಲ್ಕೇನಾಲ್ಕು ದಿನಗಳಲ್ಲಿ ಸದರಿ ಮರುಪರಿಶೀಲನಾ ಅರ್ಜಿಯನ್ನ ವಿಲೇವಾರಿ ಮಾಡಿ ಅನುಮತಿ ದಯಪಾಲಿಸಲಾಗಿದೆ.ಹೌದು ಇದರಲ್ಲೇನು ತಪ್ಪು ಅಂತ ನೀವು ಕೇಳಬಹುದು? ಅಸಲಿಗೆ ಮೊದಲಿಗೆ ಆ ಮೂವರೂ ಅರ್ಜಿ ಸಲ್ಲಿಸಿದ್ದು 11 ಎಪ್ರಿಲ್ 2001ಕ್ಕೆ.ಆಗ ಅರ್ಜಿ ಸಲ್ಲಿಸುವಾಗ ಸ್ವಾಮಿ&ಸ್ವಾಮಿ ಐದು ಎಕರೆ ತಮಗೆ ಸೇರಿದ್ದು-ಇನ್ನೈದೆಕರೆ ರತ್ನಮ್ಮ ಎನ್ನುವವರಿಗೆ ಸೇರಿದ್ದು ಎಂದು ವಿವರಿಸಿದ್ದರು,ಹಾಗೆಯೆ ತಮ್ಮದು ಐದು ಎಕರೆ ಇನ್ನೈದು ಎಕರೆ ಕರೀಂಸಾಬರದ್ದು ಎಂದು ಮಾಬುಸಾಬ್ ತಮ್ಮ ಅರ್ಜಿಯಲ್ಲಿ ನಮೂದಿಸಿದ್ದರು ಆದರೆ ಅವರು ಅಲ್ಲಿ ನಮೂದಿಸದಂತೆ ಅದು ಕಂದಾಯ ಭೂಮಿಯಾಗಿರದೆ ಪಟ್ಟಾಭೂಮಿಯಾಗಿತ್ತು.ಮರುಪರಿಶೀಲನಾ ಅರ್ಜಿ ಸಲ್ಲಿಸುವಾಗ ಮಾತ್ರ ಪವಾಡ ಸದೃಶವಾಗಿ ಹತ್ತೆಕರೆಯೂ ಒಬ್ಬರದೆ ಹೆಸರಲ್ಲಿರುವ ಹಾಗೆ ನಮೂದಾಗಿ ಎಲ್ಲವೂ ಕಂದಾಯ ಭೂಮಿಯೆಂದೆ ನಮೂದಾಗಿತ್ತು! ತಮ್ಮ ಅವಗಾಹನೆಗೆ 2008ರ ಜೂನ್ 6ರಂದು ಬಂದ ಮರುಪರಿಶೀಲನಾ ಅರ್ಜಿಗೆ ಯಡ್ಡಿ ಅಧಿಕಾರದ ಕುರ್ಚಿ ಸಿಕ್ಕಿದ ತಕ್ಷಣ ಬಲೆಗೆ ಬಿದ್ದ ಈ ಮೂರು ಮಿಕಗಳನ್ನ ಚನ್ನಾಗಿಯೇ ಬೋಳಿಸಿ ಬೂಸಿಯ ತಮ್ಮ 'ಆಟೋಗ್ರಾಫ್' ಹಾಕಿ ಅರ್ಜಿಗೆ ಅಸ್ತು ಎಂದಿದ್ದಾರೆ,ಥೇಟ್ ಕೇಳಿದಾಕ್ಷಣ ವರ ಕೊಡುವ ವಿಠಲಾಚಾರಿ ಸಿನೆಮಾದ ಅರ್ಜೆಂಟ್ ದೇವರ ತರಹ!

ರಾಜ್ಯದ ಅಭಿವೃದ್ದಿಗೆ ದಿಟ್ಟಕ್ರಮ ಕೈಗೊಳ್ಳೋದು ಅಭಿವೃದ್ದಿ ಪರ ಸರಕಾರದ ಕರ್ತವ್ಯ ತಾನೆ ಅಂತ ನೀವು ಕೇಳಲೂಬಹುದು.ಆದರೆ ಇಲ್ಲೇ ಇರೋದು ಅಸಲು ಸಂಗತಿ! ಹೀಗೆ ಅರ್ಜಿ 2001ಅಂದಿನ ಮುಖ್ಯಮಂತ್ರಿಗಳಿಂದ ಸಮ್ಮತಿ ಮುದ್ರೆ ಒತ್ತಿಸಿಕೊಳ್ಳುವ ಮುನ್ನ ತಿನ್ನಿಸಬೇಕಿದ್ದಲ್ಲಿ ಅದೇನನ್ನೋ ತಿನ್ನಿಸಿ ಬಳ್ಳಾರಿಯ ಅಂದಿನ ಜಿಲ್ಲಾಧಿಕಾರಿಗಳಿಂದ ನಿರಪೇಕ್ಷಣಾ ಪತ್ರ ಪಡೆದು ಬಂದಿತ್ತು.ಆದರೆ 2008ರಲ್ಲಿ ಸಲ್ಲಿಸಿದ ಮರುಪರಿಶೀಲನೆ ಅರ್ಜಿಯಲ್ಲಿ ಅನುಮತಿಯನ್ನ ಜಿಲ್ಲಾಧಿಕಾರಿ ನಿರಾಕರಿಸಿದ್ದರೂ ನುಂಗಾಟದಲ್ಲಿ ಪ್ರವೀಣರಾಗಿರೋ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿದ್ದ ಎಂ ವಿ ಶಿವಲಿಂಗಮೂರ್ತಿ ಇಂತಹ ಪವಿತ್ರ ಕಾರ್ಯಕ್ಕೆ ತಮ್ಮ ತಕರಾರೇನೂ ಇಲ್ಲವೆಂದು ಬೂಸಿಯಾರ ಘನಸನ್ನಿಧಾನಕ್ಕೆ ಸದರಿ ಕಡತವನ್ನು ಶ್ರದ್ಧಾ ಭಕ್ತಿಯಿಂದ ದಾಟಿಸಿದ್ದರು.ಆದರೆ ಪೋರ್ಜರಿ ಮಾಡಿ ದಾಖಲೆಗಳನ್ನೆ ತಿರುಚಿ ತಿದ್ದಿ ನಿಜದಲ್ಲಿ ಅರಣ್ಯ ಭೂಮಿಯನ್ನ ಕಾಗದದ ಮೇಲೆ ಬರಡು ಭೂಮಿಯೆಂದು ಸಾಬೀತು ಪಡಿಸಿದ್ದ ಅರ್ಜಿ ಅದಾಗಿದ್ದುದೆ ಈಗ ಎಡವಟ್ಟಾಗಿದೆ ಅಷ್ಟೆ.ಹಾಗಂತ ಲೋಕಾಯುಕ್ತದ ವರದಿಯಲ್ಲಿ ತನಿಖಾಧಿಕಾರಿ ಯು ವಿ ಸಿಂಗ್ ಸ್ಪಷ್ಟವಾಗಿ ನಮೂದಿಸಿದ್ದಾರೆ!

ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ 1) 2001ರಲ್ಲಿ ಇಬ್ಬಿಬ್ಬರ ಖಾತದಲ್ಲಿ ಕಂದಾಯ ಭೂಮಿ ಆಗಿದ್ದುದು ಯಡ್ಡಿ ಕುರ್ಚಿ ಏರುತ್ತಿದ್ದಂತೆ ಸಲ್ಲಿಕೆಯಾದ ಅರ್ಜಿಯಲ್ಲಿ ಪಟ್ಟಾಭೂಮಿಯಾಗಿ ಒಬ್ಬರದೆ ಮಾಲಕತ್ವಕ್ಕೆ ಒಳಪಟ್ಟಿದ್ದಾದರೂ ಹೇಗೆ? ಇನ್ನು 2) 2008ರ ಕರ್ನಾಟಕ ಖನಿಜ ನೀತಿಯ ಅನ್ವಯ ಆ ಬಗ್ಗೆ ಮೇಲೆತ್ತುವ ಕಚ್ಚಾ ಖನಿಜಕ್ಕೆ ಒಂದು ಉದ್ಯಮದ ಖರೀದಿ ಒಪ್ಪಿಗೆಯೂ ಅಗತ್ಯ.ತಮಾಷೆಯೇನೆಂದರೆ ಈ ಮೂವರ ಪರವಾಗಿ ತಾರಾಪಾದ ಮಹಾಪಾತ್ರ ಎಂಬ ಜೆಮ್'ಶೆಡ್'ಪುರದಲ್ಲಿರೊ ಟಾಟಾ ಸ್ಟೀಲ್ಸ್'ನ ಕಚ್ಚಾವಸ್ತು ವಿಭಾಗದ ಮುಖ್ಯಸ್ಥನೆ ಖುದ್ದು ಖರೀದಿ ಸಮ್ಮತಿ ಒಪ್ಪಿಗೆ ಪತ್ರ ಕೊಟ್ಟಿದ್ದಾನೆ! ಈ ಮೂರು ಮಂಗಗಳು ಅದನ್ನೂ ಎಳೆ ಮಕ್ಕಳು ಬರೆಯುವ ನೋಟುಬುಕ್ಕಿನಲ್ಲಿ ತಪ್ಪಾದಲ್ಲೆಲ್ಲ ಗೀಚಿ ಸರಿಪಡಿಸುವ ಹಾಗೆ ಬೇಕಾಬಿಟ್ಟಿ ಗೀಚಿ ಬೇಕುಬೇಕಾದನ್ನು ಮಾತ್ರ ಉಳಿಸಿಕೊಂಡು ತಂದಿದ್ದಾರೆ!

ಆದರೇನು ಮಾಡ್ತೀರ ಆಗಷ್ಟೆ ಏರಿದ್ದ ಅಧಿಕಾರದ ಅಮಲಿನಲ್ಲಿ ನಮ್ಮ ಬೂಸಿಯ ಸಾಹೇಬರಿಗೆ ಅಂತಹ ಕ್ಷುಲ್ಲಕ ಸಂಗತಿಗಳೆಲ್ಲ ಕಾಣದೆ ಹಸನ್ಮುಖದಿಂದಲೆ ಅವರು ತಮ್ಮ ಹಸ್ತಾಕ್ಷರ ಹಾಕಿ ರಾಜ್ಯದ ಅಭಿವೃದ್ದಿಗೆ ಒತ್ತು ಕೊಡುವ ಹೊಸ ಅಧ್ಯಾಯ ಬರೆದಿದ್ದಾರೆ! ಅಲ್ಲಿಂದೀಚೆಗೆ ಆದ ಸರಕಾರಿ ಕೃಪಾಪೋಷಿತ ಲೂಟಿಯನ್ನ ಲೆಕ್ಖವಿಟ್ಟವರಿಲ್ಲ.ಇದೂ ಅವರ ಪ್ರಗತಿಪರ ಸರಕಾರದ ಸಾಧನೆ ಅನ್ನೋದನ್ನ ನಾವು ಎಂದೆಂದೂ ಸೂರ್ಯ ಚಂದ್ರರಿರುವ ಮರೆಯಬಾರದು.ಶರವೇಗದ ಸರಕಾರಿ ಕಾರ್ಯವೈಖರಿಗೆ ಹೆಮ್ಮೆಪಟ್ಟು ಬೆನ್ನು ತಟ್ಟೋದು (ಬೆನ್ನನ್ನ ಮಾತ್ರ!) ಬಿಟ್ಟು ಇದ್ಯಾತರ ಕ್ಯಾತೆ ಸ್ವಾಮಿ!! ಈಗ ಹೇಳಿ ನೊಬೆಲ್ ಎಲ್ಲಾ ಒಂದು ಲೆಕ್ಕಾನ? ಅದರಿಂದಲೂ ದೊಡ್ಡ ಪ್ರಶಸ್ತಿ ಇವರಿಗೆ ನ್ಯಾಯವಾಗಿ ಸಲ್ಲಬೇಕ ಬೇಡವ?!

No comments:

Post a Comment